ಕಣ್ಣೀರಿಟ್ಟ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ

ಬೆಂಗಳೂರು: ತೀವ್ರ ಕುತೂಹಲ ಮತ್ತು ಆತಂಕದ ಗೂಡಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ತಡ ರಾತ್ರಿ ಘೋಷಣೆ ಆಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ. ಕೆ. ರಾಮಮೂರ್ತಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದ್ದಾರೆ.

6ನೇ ಬಾರಿ ನಡೆದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೊನೆಗೂ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ರಾಮಮೂರ್ತಿ 57,797 ಮತ ಗಳಿಸಿದ್ರೆ, ಕಾಂಗ್ರೆಸ್ ನ ಸೌಮ್ಯಾರೆಡ್ಡಿ 57781 ಮತ ಪಡೆದಿದ್ದು, ಒಟ್ಟಾರೆ ಬಿಜೆಪಿ 16 ಮತಗಳ ಅಂತರದ ಗೆಲುವು ಸಾಧಿಸಿದೆ.

ಇನ್ನೊಂದೆಡೆ, ಈ ಫಲಿತಾಂಶದಿಂದ ಬೇಸರಗೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾಧಿಕಾರಿಗಳ ಘೋಷಣೆಗೆ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಹರ್ಷ ವ್ಯಕ್ತಪಡಿಸಿದ್ದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.

ಕಣ್ಣೀರು ಹಾಕಿಕೊಂಡೇ ಸೌಮ್ಯಾರೆಡ್ಡಿ ತೆರಳಿದ್ದರೆ, ಅವರ ಕಾರ್ಯಕರ್ತರು ಸೌಮ್ಯಾ ರೆಡ್ಡಿ ಅವರ ಕಾರನ್ನೇ ತಡೆದಿದ್ದಾರೆ. ಅಲ್ಲದೆ, ನ್ಯಾಯ ಬೇಕು ಎಂದು ಕೂಗಾಡಿದ್ದಾರೆ. ಹಾಗೆ, ಮೋಸ ಮೋಸ ಎಂದು ಮಾಧ್ಯಮಗಳ ಕ್ಯಾಮೆರಾ ಮುಂದೆಯೂ ಕೂಗಾಟ ನಡೆಸಿದರು.

ಮೊದಲ ಸುತ್ತಿನಲ್ಲಿ 116 ಮತಗಳಿಂದ ಗೆದ್ದುಬೀಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಆ ನಂತರ ಮರು ಮರು ಎಣಿಕೆಯಾದಾಗ ಫಲಿತಾಂಶ ಕಾಂಗ್ರೆಸ್ ನ ‘ಕೈ’ ಚೆಲ್ಲಿತ್ತು. ಮೊದಲ ಬಾರಿ ಮತ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತ ಕೇಂದ್ರದ ಬಳಿ ಕಣ್ಣೀರು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಇಂದು ಭಾನುವಾರವೇ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಸೌಮ್ಯಾರೆಡ್ಡಿ ಘೋಷಿಸಿದರು.

ಈ ಇಡೀ ಪ್ರಹಸನಕ್ಕೆ ಜಯನಗರದ ಪಕ್ಕದ ಅಸೆಂಬ್ಲಿ ಕ್ಷೇತ್ರ ಬಿ. ಟಿ. ಎಂ. ಲೇಔಟ್ ನಲ್ಲಿ ಗೆಲುವು ಸಾಧಿಸಿದ ಸೌಮ್ಯಾ ರೆಡ್ಡಿ ಅವರ ಅಪ್ಪ ರಾಮಲಿಂಗಾರೆಡ್ಡಿ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಸಾಕ್ಷಿಯಾದರು.

ಮೊದಲ ಬಾರಿ ಮತ ಎಣಿಕೆ ಫಲಿತಾಂಶದಲ್ಲಿ ನನಗೆ ಗೆಲುವಾಗಿತ್ತು. ತೇಜಸ್ವಿ ಸೂರ್ಯ,  ಆರ್ ಅಶೋಕ್ ಅಕ್ರಮವಾಗಿ ಮತ ಎಣಿಕೆ ಕೊಠಡಿಗೆ ಎಂಟ್ರಿ ಕೊಟ್ಟಿದ್ದರು. ಅಕ್ರಮವಾಗಿ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದಾರೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಜಯನಗರ ವಿಧಾನಸಭಾ ಏನು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.