ಏಕಾಗ್ರತೆಯೆಂಬ ಮಾನಸಿಕ ವ್ಯಾಯಾಮ ಮುಖ್ಯ

ವಿಜಯ ದರ್ಪಣ ನ್ಯೂಸ್…..

ಏಕಾಗ್ರತೆಯೆಂಬ ಮಾನಸಿಕ ವ್ಯಾಯಾಮ ಮುಖ್ಯ

ವಿದ್ಯಾರ್ಥಿಗಳ ಅಭ್ಯಾಸ ಮಾಡಿದ ವಿಷಯ ಬೇಗನೇ ಮರೆತು ಹೋಗುತ್ತದೆ , ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿದರೂ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ ಏನು ಬರೆಯಬೇಕೆಂದು ತೋಚುವುದಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಕಡಿಮೆ ಅಂಕ ಪದೆದ ಮಕ್ಕಳ ಅಳುಮೋರೆಯ ಉತ್ತರ.

ಕೆಲವರಿಗೆ ಬೆಳಗ್ಗೆ ಓದಿದ ವಿಷಯ ಸಂಜೆಯೊಳಗೆ ಮರೆತರೆ, ಇನ್ನೂ ಕೆಲವರು ರಾತ್ರಿ ಓದಿದ ವಿಷಯ ಬೆಳಗ್ಗೆ ಏಳುವುದರೊಳಗೆ ಮರೆಯುತ್ತಾರೆ. ಇದು ವಿಧ್ಯಾರ್ಥಿಗಳ ಬಹು ದೊಡ್ಡ ಸಮಸ್ಯೆ ಇದರಿಂದ ನಿರೀಕ್ಷಿಸಿದ ಫಲಿತಾಂಶ ದೊರೆಯುವುದಿಲ್ಲ .

ಈ ರೀತಿ ಮರೆಯಲು ಕಾರಣಗಳು ಹಲವಾರು ಇದೆ.ಕೆಲವೊಂದು ಕಾರಣಗಳನ್ನು ನೋಡೋಣ.

1) ಪ್ರೇರಣೆ ಇಲ್ಲದಿರುವುದು

ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಇಲ್ಲದಿರುವುದು. ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಛಾಪು ಸಕಾರಾತ್ಮಕವಾಗಿ ಮೂಡಿಸಲು ಮನದಲ್ಲಿ ಕನಸುಗಳಿಲ್ಲದಿರುವುದು. ಸಮಾಜದಲ್ಲಿ ಉನ್ನತ ಹುದ್ದೆಯನ್ನು ಹೊಂದಬೇಕೇಂಬ ಹಂಬಲ ಇಲ್ಲದಿದ್ದಾಗ ಓದಿನೆಡೆಗೆ ಲಕ್ಷ್ಯ ವಹಿಸುವುದೇ ಇಲ್ಲ. ಇಂಥವರು ಎಷ್ಟು ಓದಿದರೂ ನಿರರ್ಥಕ.

2) ಟಿಪ್ಪಣಿ ಮಾಡದಿರುವುದು

ಪುಸ್ತಕದ ಹುಳುವಿನಂತೆ ನಿರಂತರ ಓದುವಿಕೆಯಿಂದ ಓದು ಅರ್ಥವಾಗುವುದಿಲ್ಲ.ಯಾವ ವಿಷಯವನ್ನು ಅಭ್ಯಾಸ ಮಾಡುತ್ತಿರುವ ಬಗೆ ಅರಿವಿರಬೇಕು. ನೇರವಾಗಿ ಪುಸ್ತಕ ಓದುವುದಕ್ಕಿಂತ ಟಿಪ್ಪಣಿ ಮಾಡಿಕೊಂಡು ಅಧ್ಯಯನ ಮಾಡಿದರೆ ಪುಸ್ತಕದೊಳಗಿರುವ ವಿಷಯಗಳು ಮಸ್ತಕದೊಳಗೆ ಸಂಗ್ರಹವಾಗುತ್ತದೆ. ಇದರಿಂದ ಸಮಯವು ಕೂಡ ಉಳಿತಾಯವಾಗುತ್ತದೆ.

3) ಪುನರ್ ಮನನ

ಓದಿದ ವಿಷಯವು ನೆನಪಿನಲ್ಲಿರಬೇಕಾದರೆ ಪುನರ್ ಮನ ಮಾಡುವುದು ಅವಶ್ಯಕ ಪುನರ್ ಮನಮ ಮಾಡದೇ ಇರುವುದರಿಂದ ಕೂಡ ಕಲಿತ ವಿಷಯಗಳು ಬಹು ಬೇಗ ಮರೆತು ಹೋಗುತ್ತದೆ. ನೆನಪಿನಲ್ಲಿ ಎರಡು ಪ್ರಕಾರ ಒಂದು ಅಲ್ಪಾವಧಿ ನೆನಪು, ಎರಡನೆಯದು ಧೀರ್ಘಾವಧಿ ನೆನಪು. ಯಾವುದೇ ವಿಷಯ ಓದಿದ ಕೂಡಲೇ ಅಲ್ಪಾವಧಿ ನೆನಪಿಗೆ ವರ್ಗಾವಣೆಯಾಗುತ್ತದೆ. ಇದರ ಗುಣ ಲಕ್ಷಣ ಬೇಗನೆ ಮರೆಯುವುದು. ಹಾಗೆ ಮರೆಯಬಾರದೆಂದಾದರೆ ಅದನ್ನು ಧೀರ್ಘಾವಧಿಗೆ ವರ್ಗಾಯಿಸಿಕೊಳ್ಳಬೇಕು.ಇದಕ್ಕಾಗಿ ಪುನರ್ ಮನನ ಕಡ್ಡಾಯವಾಗಿ ಮಾಡಬೇಕು.

4) ಶಾಂತ ವಾತಾವರಣ

ಓದುವಾಗ ಸುತ್ತಮುತ್ತಲಿನ ವಾತಾವರಣ ಶಾಂತವಾಗಿರಬೇಕು.ಗದ್ದಲ ಗಲಾಟೆ ಇದ್ದ ಸ್ಥಳಗಳಲ್ಲಿ ಅಧ್ಯಯನ ಮಾಡವುದು ಅಸಾಧ್ಯ. ಗದ್ದಲ ಇದ್ದ ಸ್ಥಳದಲ್ಲಿ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಇಂದ್ರಿಯಗಳನ್ನು ಹಿಡಿತದಲ್ಲಿರಿಸಿ ಓದುವುದರಿಂದ ಪಾಠ ಅರ್ಥವಾಗುವುದು.

5) ಕಹಿ ಘಟನೆಯನ್ನು ಮರೆಯದಿರುವುದು

ಚಿಕ್ಕ ಪುಟ್ಟ ಸಮಸ್ಯೆಗಳನ್ನು ನೆನಪಿಸಿಕೊಂಡು ಇಂದಿನ ಸಂತೋಷದ ಸಮಯವನ್ನು ಕಳೆದುಕೊಳ್ಳುವುದು. ಮನದಲ್ಲಿ ಸಕಾರಾತ್ಮಕ ಭಾವ ಇಲ್ಲದಿರುವುದರಿಂದ ಎಲ್ಲ ವಿಷಯಗಳನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಸಂತೋಷ ಇಲ್ಲದಿದ್ದಾಗ ನಿರಾಸೆ ಭಾವನೆ ಮೂಡುವುದು ವಿದ್ಯಾರ್ಥಿಗಳ ಬಹುದೊಡ್ಡ ಸಮಸ್ಯೆ.

6) ಪರಿಹಾರ

ಮನಸನ್ನು ಮುಖ್ಯವಾಗಿ ಏಕಾಗ್ರತೆಗೆ ಒಳಪಡಿಸಬೇಕು.ಮಕ್ಕಳ ಶೈಕ್ಷಣಿಕ ಯಶಸ್ಸಿಗೆ ಬೇರೆಲ್ಲಕ್ಕಿಂತ ಏಕಾಗ್ರತೆ ಬಹುಮುಖ್ಯ. ಏಕಾಗ್ರತೆಯ ವೃದ್ಧಿಗಾಗಿ ಕೆಲವೊಂದು ಮಾನಸಿಕ ವ್ಯಾಯಾಮ ಅತೀ ಅವಶ್ಯಕ. ನಸುನಗುತ್ತಾ ದೀರ್ಘವಾಗಿ ಮತ್ತು ಶಾಂತವಾಗಿ , ಸರಾಗವಾಗಿ ಉಸಿರಾಡುತ್ತಾ ತಮ್ಮ ನೋಟಕ್ಕೆ ನೇರವಾಗಿರುವ ಯಾವುದಾದರೂ ಒಂದು ವಸ್ತುವನ್ನು ದಿಟ್ಟಿಸಿ ನೋಡುತ್ತಾ, ಮನಸನ್ನು ಕೇಂದ್ರಿಕರಿಸುವಂತೆ ಮಾಡಬೇಕು. ದಿನನಿತ್ಯ ಸುಮಾರು ಮೂರು ನಿಮಿಷಗಳ ಕಾಲ ಈ ಮಾನಸಿಕ ವ್ಯಾಯಾಮವನ್ನು ಮಾಡಿದರೆ ಏಕಾಗ್ರತೆಯು ಹೆಚ್ಚಾಗುತ್ತದೆ. ಏಕಾಗ್ರತೆಯೊಂದಿಗೆ ಆತ್ಮವಿಶ್ವಾಸ ಕೂಡ ವಿದ್ಯಾರ್ಥಿಗಳಿಗೆ ಅವಶ್ಯಕ. ಶಿಕ್ಷಕರು ಮತ್ತು ಪೋಷಕರು ಮಗುವಿನ ಮನದಲ್ಲಿ ನಕಾರಾತ್ಮಕ ಪರಿಣಾಮ ಬೀರುವ ರೀತಿಯಲ್ಲಿ ಮಗುವಿನ ಫಲಿತಾಂಶದ ಬಗೆ ಮಾತಾನಾಡಬಾರದು. ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡಬಾರದು. ಆತ್ಮವಿಶ್ವಾಸವನ್ನು ತುಂಬುವಂತಹ ಮಾತುಗಳಿಂದ ಮಗುವಿಗೆ ಆತ್ಮಸ್ಥೈರ್ಯ ನೀಡಬೇಕು.
ಕಡಿಮೆ ಅಂಕ ಗಳಿಸುವ ವಿಧ್ಯಾರ್ಥಿಗಳ ಮೇಲೆ ಶಿಕ್ಷಕರು ಹೆಚ್ಚಿನ ಗಮನ ಹಾಗೂ ಉತ್ತೇಜನ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು.

ಜಯಂತಿ.ರೈ
ಮಡಿಕೇರಿ