ಮೋದಿಯವರ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ

ವಿಜಯ ದರ್ಪಣ ನ್ಯೂಸ್

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ. ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ” ಎಂದರು.

2024ರಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ದೇಶವೀಗ ನಿರ್ಧರಿಸಿದೆ. ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ರಾಷ್ಟ್ರೀಯ ಸಮಾವೇಶದ ಗುರಿ, 2047ರ ವೇಳೆಗೆ ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಲಕ್ಷ್ಯಕ್ಕಾಗಿ ನಮ್ಮ ಬದ್ಧತೆಯನ್ನು ತೋರಿಸುವುದಕ್ಕಾಗಿ. ಈ ಸಂದೇಶದೊಂದಿಗೆ ನಮ್ಮ ಪಕ್ಷವು ದೇಶದ ಪ್ರತಿಯೊಂದು ಭಾಗವನ್ನು ತಲುಪಲಿದೆ. ಬಿಜೆಪಿ ಮೂರನೇ ಬಾರಿಗೆ ಗೆದ್ದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಪ್ರತಿಪಕ್ಷಗಳು ಸಾಕಷ್ಟು ಗದ್ದಲವೆಬ್ಬಿಸಿದ್ದವು. ಆದಾಗ್ಯೂ, ಇಂದು, ವಿಧಿ 370ನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರವು ಹೊಸ ಬದಲಾವಣೆಗಳೊಂದಿಗೆ ಪ್ರಗತಿಯ ಹಾದಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೇಶವು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದ್ದು, ದೇಶದ ಆರ್ಥಿಕತೆ 11 ನೇ ಶ್ರೇಣಿಯಿಂದ 5 ನೇ ಶ್ರೇಣಿಗೆ ಉನ್ನತಿ ಹೊಂದಿದೆ. ಈ 10 ವರ್ಷಗಳಲ್ಲಾದ ಬೆಳವಣಿಗೆಯು, ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದಕ್ಕೆ ಯಾವುದೇ ಶಂಕೆಗೆ ಆಸ್ಪದ ನೀಡುವುದಿಲ್ಲ.

75 ವರ್ಷಗಳಲ್ಲಿ , ಈ ದೇಶವು 17 ಲೋಕಸಭಾ ಚುನಾವಣೆಗಳು, 22 ಸರ್ಕಾರಗಳು ಮತ್ತು 15 ಪ್ರಧಾನ ಮಂತ್ರಿಗಳಿಗೆ ಸಾಕ್ಷಿಯಾಗಿದೆ ಎಂದು ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ದೇಶದ ಹಿಂದಿನ ಪ್ರತಿಯೊಂದು ಸರ್ಕಾರಗಳು ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಮಾಡಲು ಪ್ರಯತ್ನಿಸಿವೆ. ಆದರೆ ಇಂದು ಸಮಗ್ರ ಅಭಿವೃದ್ಧಿ, ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ, ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ನರೇಂದ್ರ ಮೋದಿಯವರ 10 ವರ್ಷಗಳಲ್ಲಿ ಮಾತ್ರ ನಡೆದಿದೆ ಎಂದು ಯಾವುದೇ ಗೊಂದಲವಿಲ್ಲದೆ ಹೇಳಬಹುದು. ಈ 10 ವರ್ಷಗಳಲ್ಲಿ ಮೋದಿಯವರು ಸ್ವಜನಪಕ್ಷಪಾತ, ಜಾತೀಯತೆ ಮತ್ತು ತುಷ್ಟೀಕರಣವನ್ನು ತೊಡೆದುಹಾಕಲು ಕೆಲಸ ಮಾಡಿದ್ದಾರೆ.

I.N.D.I ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಯಾವಾಗಲೂ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ಉತ್ತೇಜಿಸಿದೆ. ಆದರೆ, ಪ್ರಧಾನಿ ಮೋದಿಯವರು ಈ 10 ವರ್ಷಗಳಲ್ಲಿ ದೇಶದಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ತೊಡೆದುಹಾಕಲು ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲು ಶ್ರಮಿಸಿದ್ದಾರೆ.

ಮತ್ತಷ್ಟು ತೀಕ್ಷ್ಣತೆಯಿಂದ ವಾಗ್ದಾಳಿ ಮುಂದುವರೆಸಿದ ರಾಜಕೀಯ ಚಾಣಕ್ಯ ಷಾ , ‘I.N.D.I ಮೈತ್ರಿಕೂಟವು ಏಳು ಕುಟುಂಬ ಆಧಾರಿತ ಪಕ್ಷಗಳ ಒಕ್ಕೂಟವಾಗಿದೆ, ಇದು ದೇಶದಲ್ಲಿ 2G, 3G ಮತ್ತು 4G ರೂಪದಲ್ಲಿದೆ’ ಎಂದರು.

“ನಾನು ಯಾವುದೇ ಮೊಬೈಲ್ ನೆಟ್ವರ್ಕ್ಗಳ ಬಗ್ಗೆ ಹೇಳುತ್ತಿಲ್ಲ, ವಿರೋಧ ಪಕ್ಷದ ಕೌಟುಂಬಿಕ ರಾಜಕಾರಣದ ಬಗ್ಗೆ ಹೇಳುತ್ತಿದ್ದೇನೆ. 2G ಎಂದರೆ ಎರಡು ತಲೆಮಾರುಗಳು, 3G ಎಂದರೆ ಮೂರು ತಲೆಮಾರುಗಳು ಮತ್ತು 4G ಎಂದರೆ ನಾಲ್ಕು ತಲೆಮಾರುಗಳು. ಪ್ರತಿಪಕ್ಷದ ನಾಲ್ಕು ತಲೆಮಾರುಗಳು ಕೌಟುಂಬಿಕ ರಾಜಕೀಯವನ್ನು ಮಾಡುತ್ತಿವೆ. ಈ ದೇಶದ ರಾಷ್ಟ್ರಪತಿಗಳು ಬುಡಕಟ್ಟು ಕುಟುಂಬದಿಂದ ಬಂದವರು. ಬಡ ಬುಡಕಟ್ಟು ಜನಾಂಗದ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ಎಲ್ಲಾ ಬುಡಕಟ್ಟು ಜನಾಂಗದವರನ್ನು ಗೌರವಿಸಿದೆ. ಈ ದೇಶದ ಉಪರಾಷ್ಟ್ರಪತಿ ಒಬ್ಬ ರೈತನ ಮಗ. ಬಿಜೆಪಿಯಲ್ಲಿ ಬೂತ್ನಲ್ಲಿ ಕೆಲಸ ಮಾಡುವ ವ್ಯಕ್ತಿ ರಾಷ್ಟ್ರಪತಿಯಾಗಬಲ್ಲ ಮತ್ತು ಪ್ರಧಾನಿ ಕೂಡ ಆಗಬಹುದು. ನಾವು ನಮ್ಮ ಪಕ್ಷವನ್ನು ಪ್ರಜಾಸತ್ತಾತ್ಮಕ ಪಕ್ಷವಾಗಿ ಇಟ್ಟುಕೊಂಡಿರುವ ಕಾರಣ, ಬಿಜೆಪಿ ಪಕ್ಷದಲ್ಲಿ ಮಾತ್ರ ಈ ಸಾಧ್ಯತೆಯಿದೆ” ಎಂದರು.