ಸರ್ಕಾರಿ ನೌಕರರ ಕ್ರೀಡಾಕೂಟ: ಪೂರ್ವ ಸಿದ್ಧತೆಗೆ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಸೂಚನೆ

ವಿಜಯ ದರ್ಪಣ ನ್ಯೂಸ್…

ಸರ್ಕಾರಿ ನೌಕರರ ಕ್ರೀಡಾಕೂಟ: ಪೂರ್ವ ಸಿದ್ಧತೆಗೆ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಸೂಚನೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 16  : 2023-24 ನೇ ಸಾಲಿನ ತಾಲೂಕು ಮತ್ತು ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಜೂನ್. 21 ರಂದು ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಲು ನಿಗದಿಪಡಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ನಡೆದ 2023-24ನೇ ಸಾಲಿನ ತಾಲೂಕು ಮತ್ತು ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಜೂನ್. 21 ರಂದು ಹೊಸಕೋಟೆ ಟೌನ್ ನಲ್ಲಿರುವ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ, ಕ್ರೀಡಾಕೂಟದಲ್ಲಿ ಕ್ರೀಡಾ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕ್ರಮವಹಿಸಿ ಎಂದರು.

ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಸೇವೆ, ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಾಲ್ಲೂಕು ಮಟ್ಟದಲ್ಲಿ ಎಸಿ, ತಹಶೀಲ್ದಾರ್, ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಹಾಗೂ ಶಿಷ್ಟಾಚಾರದಂತೆ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಹೊಸಕೋಟೆ ತಹಶೀಲ್ದಾರ್ ವಿಜಯ್ ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಟಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ದೈಹಿಕ ಶಿಕ್ಷಣ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

&&&&&&&&&&&&&&&&&&&&&&&&&&

ವಿಶೇಷ ಡಿ.ಇಡಿ(D.ED) ತರಬೇತಿ ಕಾರ್ಯಕ್ರಮಕ್ಕೆ ಅರ್ಹ ವಿಶೇಷಚೇತನರಿಂದ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ16  : ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ತಿಲಕ್ ನಗರ ಮೈಸೂರು ಇಲ್ಲಿ 02 ವರ್ಷಗಳ ವಿಶೇಷ ಡಿ.ಇಡಿ(D.ED) ತರಬೇತಿ ಕಾರ್ಯಕ್ರಮಕ್ಕೆಅರ್ಹ ವಿಶೇಷಚೇತನರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ವಿಶೇಷ ಡಿ.ಇಡಿ(D.ED) ಕಾರ್ಯಕ್ರಮಗಳು ಸಾಮಾನ್ಯ ಡಿ.ಇಡಿ(D.ED)ಗೆ ಸಮಾನಾಂತರವಾಗಿವೆ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 50% (ಎಸ್.ಸಿ ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇಕಡಾ 45%) ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳು ಜೂನ್10ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ತರಬೇತಿಗೆ ಸಂಬಂಧಿಸಿದ ವಿವರವಾದ ಮಾಹಿತಿ ಹಾಗೂ ಅರ್ಜಿ ನಮೂನೆ ಮೈಸೂರು ಜಿಲ್ಲಾ ವೆಬ್ಸೈಟ್ https://mysore.nic.in/en/ ನಲ್ಲಿ ಲಭ್ಯವಿರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಶುಲ್ಕ ವಿವರ

ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಿಸುವ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಂಧ ಮಕ್ಕಳ ಭೋಧಕರ ತರಬೇತಿ ಕಾರ್ಯಕ್ರಮದಲ್ಲಿ SC,ST ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಯಾವುದೇ ಬೋಧನ ಶುಲ್ಕ ಇರುವುದಿಲ್ಲ.

ಉದ್ಯೋಗ ಅವಕಾಶಗಳು:
ತರಬೇತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಹಲವು ಉದ್ಯೋಗ ಅವಕಾಶಗಳಿರುತ್ತವೆ

1.ರಾಜ್ಯ ಸರ್ಕಾರದ ಸಾಮಾನ್ಯ ಶಾಲೆ ಮತ್ತು ವಿಶೇಷ ಶಾಲೆಗಳೆರಡರಲ್ಲೂ ಶಿಕ್ಷಕರಾಗಬಹುದು.
2.ವಿಕಲಚೇತನರ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಬಹುದು.
3.CBSC ಶಾಲೆಗಳಲ್ಲಿ ಶಿಕ್ಷಕರಾಗಬಹುದು.
4.ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಬಹುದು.
5.ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಬಹುದು.
6.ರಾಷ್ಟ್ರೀಯ ಸಂಸ್ಥೆಗಳು/ಪ್ರಾದೇಶಿಕ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಬಹುದು.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು

SSLC, 2nd PUC ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ವಿಕಲಚೇತನ ವ್ಯಕ್ತಿಯಾಗಿದ್ದಲ್ಲಿ UDID ಗುರುತಿನ ಪತ್ರ.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ- 080-29787441 ಗೆ ಸಂಪರ್ಕಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.