ವಿಜಯ ದರ್ಪಣ ನ್ಯೂಸ್….
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ : ಶಾಸಕ ಬಿ.ಎನ್.ರವಿಕುಮಾರ್.

ಶಿಡ್ಲಘಟ್ಟ : ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿರುವ ಸ್ವಾಭಿಮಾನಿ ಮತದಾರರ ನಂಬಿಕೆಯನ್ನು ಉಳಿಸುವಂತಹ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಮೇಲೂರಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಮೂಲಕ ಸುಮಾರು 40 ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿರುವವರೂ ಕೂಡಾ ಮಾಡಲಾಗದಂತಹ ಅಭಿವೃದ್ಧಿ ಕಾರ್ಯಗಳನ್ನು ಕಳೆದ 34 ತಿಂಗಳಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ಗ್ರಾಮೀಣ ಭಾಗದ ರಸ್ತೆಗಳು, ಶಾಲಾ ಕಟ್ಟಡಗಳು, ಸಾರ್ವಜನಿಕರಿಗೆ ತಲುಪಬೇಕಾಗಿರುವ ಆರೋಗ್ಯ ಸೇವೆಗಳು, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮವಾಗಿ ಕೆಲಸ ಮಾಡಲಾಗುತ್ತಿದೆ ,ಈಗಾಗಲೇ ಕ್ಷೇತ್ರದಲ್ಲಿನ 2636 ಮಂದಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿದ್ದಾರೆ ಅವರನ್ನು ಉತ್ತೇಜನ ಪಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ತಾಲೂಕಿನಿಂದ ಎಷ್ಟು ಮಂದಿ 625 ಕ್ಕೆ 625 ಅಂಕಗಳು ಗಳಿಸಿಕೊಳ್ಳುತ್ತಾರೋ ಅವರಿಗೆ 1 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದೇನೆ ನುಡಿದಂತೆ ನಡೆಯುತ್ತೇನೆ ನಾನು, ಸಂವಿಧಾನದಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026-27 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ, ವಸತಿ ಸಚಿವರು, ಸಮಾಜ ಕಲ್ಯಾಣ ಇಲಾಖೆ ಸಚಿವರು, ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರನ್ನು ಭೇಟಿ ಮಾಡಿ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿಕೊಡುವಂತೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಭೂ ಮಂಜೂರಾತಿ ಸಮಿತಿಯನ್ನು ಇದುವರೆಗೂ ರಚನೆ ಮಾಡದೇ ಕಂದಾಯ ಇಲಾಖೆಯ ಸಚಿವರು, ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದಾರೆ ಈ ಕುರಿತು, ಸದನದಲ್ಲಿಯೂ ಮಾತನಾಡುತ್ತೇನೆ ಎಂದರು.
ನಮ್ಮ ಭಾಗಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತರಬೇಕೆನ್ನುವ ಉದ್ದೇಶದಿಂದ ನಮ್ಮ ಸಂಸದ ಮಲ್ಲೇಶ್ ಬಾಬು ಅವರು, ಈಗಾಗಲೇ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕ ಮಾಡಿ, ಮನವಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹಾ, ಇದರ ಬಗ್ಗೆ ಉತ್ಸುಕರಾಗಿದ್ದಾರೆ, 2028 ರಲ್ಲಿ ನಮ್ಮ ಸರ್ಕಾರ ಬರುತ್ತದೆ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ನೀರು ತರುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ,
ಡಾ.ಧನಂಜಯರೆಡ್ಡಿ, ಜೆಡಿಎಸ್ ಮುಖಂಡ ತಾದೂರು ರಘು, ಮೇಲೂರು ಬ್ಯಾಂಕ್ ಮಂಜುನಾಥ್ ಮುಂತಾದವರು ಹಾಜರಿದ್ದರು.
&&&&&&&&&&&&&&&&
ಭಾವವಾಗಿ ಬಾ
ಭಾವನೆಗಳು ಇರದ ಬಾಳಿಗೆ ಭಾವವಾಗಿ ಬಾ ಕಮರಿದ ಆಸೆಗೆ ಒಲುಮೆಯ ವರ್ಷವ ಸುರಿಸು ನವ ಚೈತನ್ಯ ತುಂಬುವ ದಿವೌಷಧ ನೀನಾಗು..
ಕಳೆಗುಂದಿದ ವದನದಿ ನಸು ನಗುವ ಚಿಮ್ಮಿಸು ದಾರಿ ದೀರ್ಘವಿಹುದು ಊರುಗೋಲಾಗಿ ನಡೆಸು ಬಯಕೆಗಳು ನೂರಿಹುದು ಕಲ್ಪನೆಗೆ ಕನ್ನಡಿಯಾಗು
ಬಾಹ್ಯ ರೂಪಕೆ ಸೋಲದೆ ಅಂತರಂಗದಿ ನೆಲೆಸು ತೆರೆದಿರುವೆ ಮನದ ಕದವ ತಂಗಾಳಿಯಾಗಿ ಸುಳಿದಾಡು ಮತ್ತೇ ಚಿಗುರ ಬೇಕಿದೆ ಮನ ವಸಂತ ರಾಗವ ಹರಿಸು.

-ಜಯಂತಿ ರೈ ಮಡಿಕೇರಿ










