ನಿಮ್ಮ ಸುತ್ತ ಎಲ್ಲರೂ ಇದ್ದಾರೆಂಬುದು ಭ್ರಮೆ.., ಆದರೆ ಯಾರೂ ಇಲ್ಲವೆಂಬುದು ವಾಸ್ತವ..!

ವಿಜಯ ದರ್ಪಣ ನ್ಯೂಸ್ …

ನಿಮ್ಮ ಸುತ್ತ ಎಲ್ಲರೂ ಇದ್ದಾರೆಂಬುದು ಭ್ರಮೆ.., ಆದರೆ ಯಾರೂ ಇಲ್ಲವೆಂಬುದು ವಾಸ್ತವ..!

::::::::::::::::::::::::::::::::::::::::::::::;

ನಮ್ಮ‌ ಬದುಕಿನ‌ ಫ಼್ಲಾಷ್ ಬ್ಯಾಕ್ ಅಥವಾ ಪ್ರೆಸೆಂಟ್ ಡೇಸ್ ಗಳತ್ತ ಹಾಗೇ ಸುಮ್ಮನೇ ಒಮ್ಮೆ ಕಣ್ಣಾಡಿಸಿದಾಗ ನಾವು ಇಷ್ಟಪಡದಿದ್ದರೂ ಒಂದು ಸರಳ ಸತ್ಯ ನಮ್ಮಲ್ಲಿ ಬಹುತೇಕರ ಅನುಭವಕ್ಕೆ ಬರುತ್ತೆ. ಅದೆಂದರೆ “ಎಲ್ಲರೂ ಇದ್ದಾರೆ ಆದರೆ ಯಾರೂ ಇಲ್ಲ ” ಎಂಬ ಅನಾಥ ಭಾವ ಅಥವಾ “ಎಲ್ಲವೂ ಇದೆ ಆದರೆ ಏನೂ‌ ಇಲ್ಲ” ವೆಂಬ ವೈರಾಗ್ಯ ಪ್ರಜ್ಞೆ ! ಈ ಪ್ರಾಕ್ಟಿಕಲ್ ಭಾವನೆ ಒಮ್ಮೆ‌ ಮನದೊಳಗೆ ಇಂಜೆಕ್ಟ್ ಆಯ್ತು ಎಂದರೆ ಸಾಕು, ಆಗ ತನ್ನ ಸುತ್ತಲೂ ಇರುವ, ಎಲ್ಲರೂ ತನ್ನವರೆಂದು‌ ಭಾವಿಸಿದ್ದ ಭ್ರಮೆ, ಆವರಿಸಿದ್ದ ಅವಾಸ್ತವ ಅಮಲು ಹಾಗೆಯೇ ಮಂಜಿನಂತೆ ಕರಗಿ‌ನೀರಾಗಿ ಬಿಡುತ್ತದೆ.

ನಮ್ಮೆಲ್ಲರ ಬಾಲ್ಯದಿಂದ ಮುಪ್ಪಿನವರೆಗೂ ಅಸಂಖ್ಯಾತ ಮಂದಿ ಬಂಧ‌-ಸಂಬಂಧಗಳಿಂದ ಸುತ್ತುವರೆದಿರುತ್ತಾರೆ. ಜನ್ಮ ಕೊಟ್ಟ ತಂದೆ ತಾಯಿಯಿಂದ ಹಿಡಿದು ಕುಟುಂಬದ ಒಳಗೆ ಹಾಗೂ ಹೊರಗೆ ಎಷ್ಟೋ ಮಂದಿ ರಕ್ತ ಸಂಬಂಧಿಗಳು, ಸ್ನೇಹಿತರು, ಪರಿಚಿತರು, ಬಂಧುಗಳು, ನೆಂಟರಿಷ್ಟರು, ಜೊತೆಯಲ್ಲೇ ಅಂಟಿಕೊಂಡು ಇರುವ ಅತ್ಮೀಯ ವ್ಯಕ್ತಿಗಳು…..ಹೀಗೆ ನಾನಾ‌ ರೂಪದಲ್ಲಿ ಎಲ್ಲರೂ ನಮ್ಮ ಜ಼ಿಂದಗಿಯೊಳಕ್ಕೆ ಜೀಕುತ್ತಲೇ ಇರುತ್ತಾರೆ. ಹೀಗೆ ನಮ್ಮ ಬದುಕಿನ ಪರಿಧಿಯ ಸುತ್ತ ಹತ್ತಿರದಲ್ಲೇ ಸುತ್ತುತ್ತಲೇ ಇರುವ ಇವರು ಸದಾ ನಮ್ಮ‌ ಸನಿಹವೇ ಇದ್ದು ನಮ್ಮೆಲ್ಲಾ ಕಷ್ಟ- ನಷ್ಟ, ನೋವು- ನಲಿವಿಗೆ ಸ್ಪಂದಿಸಿ ಎಲ್ಲಾ ಹಂತಗಳಲ್ಲೂ ಸಾಥ್ ಕೊಡುತ್ತಾ ನಮ್ಮೊಡನೇ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಾರೆಂಬ‌ ಅದಮ್ಯ‌ ಭರವಸೆ ಅಂತರಂಗದ ಮೂಲೆಯಲ್ಲೆಲ್ಲೋ ಒಂದೆಡೆ ಭದ್ರವಾಗಿ ಗೂಡು ಕಟ್ಟಿಕೊಂಡಿರುತ್ತೆ .

ಒಂದು ವೇಳೆ ತಮ್ಮ ಸಂಬಂಧಗಳಲ್ಲಿ ಈ ತರಹದ ಅಭಿಪ್ರಾಯವಾಗಲೀ, ಭರವಸೆಯಾಗಲೀ ಇಲ್ಲದೇ ಹೋದರೂ ಕೊನೇಪಕ್ಷ ‌ಬಾಲ್ಯದಿಂದಲೂ ಒಟ್ಟಿಗೆ ಇದ್ದ ಸ್ನೇಹಿತರು ಜೀವನದ ನಿರೀಕ್ಷಿತ ನಿರೀಕ್ಷಿತ ವಿವಿಧ ಹಂತಗಳಲ್ಲಿ ಒಟ್ಟಿಗೆ ಇರಬಲ್ಲರೆಂಬ ಆಶಾಭಾವನೆ ಹಲವರಲ್ಲಿ‌ ಇದ್ದೇ ತೀರುತ್ತದೆ.

ಆದರೆ ಅಸಲಿ ಸತ್ಯ ಏನು ಗೊತ್ತಾ..? ತನಗೆ ನೂರಾರು ಮಂದಿ‌ ಬಂಧುಗಳು, ಸಾವಿರಾರು ಮಂದಿ ಸ್ನೇಹಿತರು, ಹಲವಾರು ಜನ ನೆಂಟರು ಇಷ್ಟರು.. ಇಷ್ಟೆಲ್ಲಾ ಇದ್ದರೂವೇ….. ಬದುಕಿನ ಕೆಲ ನಿರ್ಣಾಯಕ ಹಂತಗಳಲ್ಲಿ ಕೊನೇಪಕ್ಷ ತನ್ನ ಅಸಹಾಯಕ ಪರಿಸ್ಥಿತಿಯಲ್ಲಿ ಆಸರೆಯಾಗಲಿಕ್ಕಾಗಿಯಲ್ಲದೇ ಹೋದರೂ ಕೊನೇಪಕ್ಷ ಒಂದು ಶುಭ ಹಾರೈಕೆಗಾಗಿ, ಸಾಂತ್ವನಕ್ಕಾಗಿ ಅಥವಾ ನೋವು‌-ನಲಿವನ್ನು ಶೇರ್ ಮಾಡಿಕೊಳ್ಳಲಿಕ್ಕಾಗಿ ತನ್ನವರತ್ತ ನೋಟ ಹರಿಸಿದಾಗ ಅಷ್ಟೊಂದು ಜನರಲ್ಲಿ ಯಾರೊಬ್ಬರೂ ಕಾಣದೇ ಇಡೀ ಜಗತ್ತೇ ಶೂನ್ಯವೇನೋ ಎಂದು ಒಮ್ಮೊಮ್ಮೆ ಅನಿಸಿಬಿಡುತ್ತದೆ.

ಜೀವನದಲ್ಲಿ ತನ್ನ ಕುಟುಂಬ ಮಕ್ಕಳು- ಮೊಮ್ಮಕ್ಕಳು‌, ಸೊಸೆಯರು, ಅಣ್ಣ ತಮ್ಮ, ಬಂಧು ಬಳಗ, ನೆಂಟರು ಸ್ನೇಹಿತರು ಎಂದೆಲ್ಲಾ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾ ತನ್ನಲ್ಲಿರುವುದನ್ನು ಎಲ್ಲರಿಗೂ ಹಂಚುತ್ತಾ ಇತರರಿಗಾಗಿಯೇ ಜೀವಿಸುತ್ತಲೇ ತನ್ನೊಂದಿಗಿರುವ, ತನ್ನ‌ ಸುತ್ತಲಿರುವ ಎಲ್ಲರೂ ತನಗೆ ರಕ್ಷಾಕವಚವಾಗಿದ್ದಾರೆಂದು ಭ್ರಮಿಸಿದ್ದ ಹಿರಿಜೀವವೊಂದಕ್ಕೆ ಒಂದು ಹೊತ್ತಿನ‌ ತುತ್ತನ್ನು ತಾನೇ ಮಾಡಿಕೊಂಡು‌ ತಿನ್ನಬೇಕಾದ ಗತಿ, ಹಾಗೂ ಈ ಇಳಿ ವಯಸ್ಸಿನಲ್ಲಿ ತನ್ನೆಲ್ಲಾ ಆರೋಗ್ಯ ಯೋಗ- ಕ್ಷೇಮವನ್ನು ಸ್ವಯಂ ತಾನೇ ನೋಡಿಕೊಳ್ಳಬೇಕಾದ ದಯನೀಯ ಸ್ಥಿತಿ ಇರುವುದು…. ತನಗೆ ಎಲ್ಲರೂ ಇದ್ದು ಯಾರೂ ಇಲ್ಲದಂತಹ ಪರಿಸ್ಥಿತಿಯ ಲೈವ್ ಎಗ್ಸಾಂಪಲ್. !!

ಇನ್ನೂ‌ ಹಲವರಿಗೆ ಹಣ, ಅಂತಸ್ತು, ಅಧಿಕಾರ, ಒಡವೆ, ಭವ್ಯವಾದ ಮನೆ….ಎಲ್ಲವೂ ಇರುತ್ತದೆ , ಸುತ್ತ ಎಲ್ಲರೂ‌ ಇರುತ್ತಾರೆ. ಆದರೆ ಯಾವುದೂ ಇರಲಾರದಂತ ಅಥವಾ ಇವೆಲ್ಲವನ್ನೂ ಅನುಭವಿಸಲಾರದಂತಹ ದಾರುಣ ಪರಿಸ್ಥಿತಿ ನಿರ್ಮಿತವಾಗಿರಬಲ್ಲದು ಇಲ್ಲವೇ ತಾವೇ ಸ್ವತಃ ನಿರ್ಮಿಸಿಕೊಂಡಿರಲೂ ಬಹುದು.

ಇವೆರಡಕ್ಕಿಂತ ಭಿನ್ನವಾಗಿ ಸ್ವಲ್ಪ ಮಟ್ಟಿಗೆ ಸರಳವಾದ ಉದಾಹರಣೆ ಮೂಲಕ ಇದನ್ನು ಬಿಡಿಸಿ ಹೇಳುವುದಾದರೆ. ಈಗ ನಿಮ್ಮ ‌ಫ಼ೇಸ್‌ಬುಕ್ ಪ್ರೊಫ಼ೈಲ್ ನಲ್ಲಿ ಎಷ್ಟು ಜನ ಫ಼್ರೆಂಡ್ಸುಗಳು ಇದ್ದಾರೆಂದು ಗಮನಿಸಿದರೆ ಅದು ಸುಮಾರು ಮೂರು ಸಾವಿರ, ಐದು ಸಾವಿರ ಅಥವಾ ಇನ್ನೂ ಹೆಚ್ಚು ಅಂತಾನೇ ಇಟ್ಟುಕೊಳ್ಳಿ. ಆದರೆ ಅವರಲ್ಲಿ ನಿಮ್ಮ ವಾಲ್‌ನಲ್ಲಿನ ಯಾವುದೇ ಕ್ರಿಯೆಗೆ ಪ್ರತಿಕ್ರಿಯಿಸುವವರು ಹತ್ತಾರು ಮಂದಿ ಮಾತ್ರ. ಹಾಗೆಯೇ ಯಾವುದೇ ಒಂದು ಎಫ಼್.ಬಿ. ಗುಂಪಿನಲ್ಲಿ ಐವತ್ತು ಅರವತ್ತು ಸಾವಿರ ಸದಸ್ಯರಿದ್ದಾರೆ ಎಂದು ಡೋಲು ಹೊಡೆದು ಢಂಗೂರ ಸಾರಿ‌, ಕಾಲರ್ ಮೇಲೆತ್ತಿ ಬಿಲ್ಡಪ್ ಕೊಟ್ರೂ ಅಲ್ಲಿ ಕ್ರಿಯಾಶೀಲರಾಗಿರುವವರ ಸಂಖ್ಯೆ ಕೇವಲ ನೂರಾರು ಮಾತ್ರವೇ ! ಇನ್ನೂ ವಿಪರ್ಯಾಸವೆಂದರೆ ಒಮ್ಮೊಮ್ಮೆ ಆ‌ ಬೆರಳೆಣಿಕೆಯವರೂ ಸಹಾ ನಿಮ್ಮ ಪಾಲಿಗೆ ಇದ್ದೂ ಇಲ್ಲದಂತೆ ಆಗಿಬಿಡುತ್ತಾರೆ. ಅಲ್ಲಿ‌ ಸಹಾ ಎಲ್ರೂ‌ ಹೆಸರಿಗೆ ಇದ್ದಾರೆ.. ಆದರೆ ನೈಜವಾಗಿ ಯಾರೂ ಇಲ್ಲದಂತಹ ಶುಷ್ಕ ವಾತಾವರಣ.

ಜೀವನದ ಯಾವುದೋ ಒಂದು‌ ಹಂತದಲ್ಲಿ ಯಾವುದೋ ಒಂದು ರೀತಿಯ ಸಹಾಯ, ಸಹಕಾರ, ಆಶ್ರಯ ನಿಮಗೆ‌ ಅಗತ್ಯವಾಗಿ ಬೇಕಾದಾಗ, ಆ ಸಂಧರ್ಭಕ್ಕೆ ನಿಮ್ಮ ಸುತ್ತಲೂ ಸುತ್ತುತ್ತಿರುವ ಯಾವೊಂದು ಜೀವಾತ್ಮವೂ ನಿಮ್ಮತ್ತ ನೆರಳೂ ಚಾಚುವುದಿಲ್ಲ. ಬಂಧು , ಬಳಗ, ಸ್ನೇಹ, ಸಂಬಂಧ‌ ಹೀಗೆ ಎಲ್ಲಾ ರಕ್ಷಾಕವಚದೊಳಗೆ ನಾನು ಸೇಫ಼ಾಗಿದ್ದೀನಿ‌ ಎಂಬ‌ ನಿಮ್ಮೊಳಗಿನ‌ ಭಾವನೆ‌ ಠುಸ್‌ ಪಟಾಕಿಯಂತಾಗಲು ಬಹಳ ಸಮಯ ಬೇಕಾಗಿಲ್ಲ.‌ ನೀವು ಬದುಕಿನ ಅನುಕೂಲ ಸ್ಥಿತಿಯಲ್ಲಿದ್ದಾಗ ಸುತ್ತ ಮುತ್ತ ಎತ್ತ ತಿರುಗಿದರೂ ಕಾಣುತ್ತಿದ್ದ ಬಂಧುಗಳು ,ನಿಮ್ಮ ಅಗತ್ಯ ಸಮಯಕ್ಕೆ ಒಂದಲ್ಲಾ ಒಂದು ಕಾರಣಕ್ಕೆ ಪೂರಾ ಗಾಯಬ್ ಆಗಿ ಬಿಟ್ಟಿರುತ್ತಾರೆ.

ಈ ತೆರನಾದ ಅನುಭವ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲರಿಗೂ ಒಂದಲ್ಲಾ ಒಂದು ಹಂತದಲ್ಲಿ ಕದ ತಟ್ಟಿಯೇ ಇರುತ್ತೆ , ಇಲ್ಲವಾಗಿದ್ದಲ್ಲಿ ಇಂದಲ್ಲಾ ನಾಳೆ ನಮ್ಮೆಲ್ಲರ ಬಾಳಲ್ಲೂ ಸಂಭವಿಸಿಯೇ ತೀರುತ್ತದೆ. ನೋ ಡೌಟ್ !

ಮನುಷ್ಯನ ವಾಸ್ತವ ಬದುಕೇ ಹೀಗಿದ್ದಾಗ ” ನನಗೆ ಎಲ್ಲರೂ ಇದ್ದಾರೆ ಅಥವಾ ನನಗೆ ಎಲ್ಲವೂ ಇದೆ ” ಎಂಬ‌ ಭ್ರಮಾತ್ಮಕ ಭರವಸೆಯನ್ನು ಯಾವ ಆಧಾರದ ಮೇಲೆ ಇಟ್ಟುಕೊಳ್ಳುವುದು…… ?

ಏ ತೋ ಸೋಚ್ ನೇ‌ ಕೀ ಬಾತ್ ಹೈನಾ….!!

** ಮರೆಯುವ ಮುನ್ನ‌**

ಈ ಜೀವನ‌ ಅನ್ನೋದು ನಮಗೆ ಕಲಿಸಿಕೊಟ್ಟಿರೋ ಪಾಠಗಳಿವೆಯಲ್ಲಾ…, ಅವುಗಳನ್ನು ಜಗತ್ತಿನ ಬೇರಾವ ಯೂನಿವರ್ಸಿಟಿಯೂ ಕಲಿಸಲಾಗೋಲ್ಲ.

ರಕ್ತ ಸಂಬಂಧಿಗಳಲ್ಲಿ ಅಣ್ಣ -ತಮ್ಮ‌, ಅಕ್ಕ -ತಂಗಿ, ಕಸೀನ್ಸು, ರಿಲೇಷನ್ಸು…ಹೀಗೆ ಸಾಕಷ್ಟು ನಮಗೆ ಹತ್ತಿರದವರೆಂದು ಕೊಂಡವರೇ ಇರುತ್ತಾರೆ. ಆದರೆ ಕಾಲ ಕಳೆದಂತೆಲ್ಲಾ, ಎಲ್ಲರಿಗೂ ಅವರವರ ಸಂಸಾರ ತಾಪತ್ರಯ, ಜವಾಬ್ದಾರಿ, ಸ್ವಾರ್ಥ ಅನ್ನೋದು ಮನಗಳಲ್ಲಿ ಗೂಡು ಕಟ್ಟಿಕೊಂಡಾಗ, ಎಷ್ಟೆಲ್ಲಾ ಹತ್ತಿರವಿದ್ದರೂ ನಮ್ಮ‌ ಕಷ್ಟಕ್ಕೆ ಅಥವಾ ನೋವಿಗೆ ಸ್ಪಂದಿಸುವ ಪ್ರಾಮಾಣಿಕ ಜೀವಗಳು ಮಾತ್ರ ಯಾವುದೂ ನಮ್ಮ ಸಮೀಪವಿರೋಲ್ಲ , ಇದ್ದರೂ ನಮ್ಮೊಟ್ಟಿಗೆ ಬರೋಲ್ಲ, ಬಂದರೂ ಅವರ ಅವಶ್ಯಕತೆ ತೀರುವವರೆಗೆ ಮಾತ್ರವೇ ನಮ್ಮೊಡನಿರಬಲ್ಲರು.

ಎಲ್ಲರೂ ಅವರವರದ್ದೇ ಆದ ಪ್ರಪಂಚದಲ್ಲಿ ಅಥವಾ ವ್ಯಾವಹಾರಿಕ ಭವಬಂಧಗಳಲ್ಲಿ ತಲ್ಲೀನರಾಗಿದ್ದು ಮನುಷ್ಯ ಸಂಬಂಧಗಳು ಕೇವಲ ಪೇಪರ್ ಮೇಲಿನ‌ ಸಂಬಂಧಗಳಾಗಿ ಹೆಸರಿಗಷ್ಟೇ ಉಳಿದುಬಿಡುವುದೇ ಹೆಚ್ಚು..! ವಸ್ತುಸ್ಥಿತಿ ಹೀಗಿರುವಾಗ ಅಸಲಿಗೆ ಇಂತಹಾ ಸಂಬಂಧಗಳು ಅವು ರಕ್ತ ಸಂಬಂಧಗಳೇ ಆಗಲೀ, ಸ್ನೇಹ ಸಂಬಂಧಗಳೇ ಆಗಲೀ ಅವಕ್ಕೆ ಮಾನ್ಯತೆ, ಮೌಲ್ಯ , ಬೆಲೆ ಅಥವಾ ಅರ್ಥವೇನಾದರೂ ಇರಲಿಕ್ಕೆ ಉಂಟೇ ?

ಇವೆಲ್ಲದರಿಂದಾಚೆ ಉಳಿದು ಜೀವನದುದ್ದಕ್ಕೂ ಮನುಷ್ಯ ಸಂಬಂಧಗಳಿಗೆ ಬೆಲೆ ಕೊಟ್ಟು ನಿರ್ಮಲಂತಃಕರಣದಿಂದ ನಿಮ್ಮನ್ನು ಮನಸಾರೆ ಪ್ರೀತಿಸುವ ಹಾಗೂ‌ ನಿಮ್ಮಿಂದ ಪ್ರಾಮಾಣಿಕವಾಗಿ ಪ್ರೀತಿಸಲ್ಪಡುವ ಬಂಧ- ಸಂಬಂಧಗಳು‌ ಯಾರಿಗಾದರೂ ಈ ಜನ್ಮದಲ್ಲಿ ಪರಿಪೂರ್ಣವಾಗಿ ದಕ್ಕಿದ್ದಲ್ಲಿ ಬಹುಶಃ ಅವರೇ ಈ ಜಗತ್ತಿನ‌ ಅತ್ಯಂತ ಶ್ರೀಮಂತರು..!

ಅಂತಹದ್ದೊಂದು ಪರಿಪಕ್ವ ಶ್ರೀಮಂತಿಕೆ ಎಲ್ಲರಿಗೂ ದಕ್ಕುವಂತಾಗಲಿ..!

@ ಲಾಸ್ಟ್ ಪಂಚ್  @

ಬದುಕಿನ ಕಹಿಸತ್ಯ ಅಥವಾ ಕಟುವಾಸ್ತವಗಳು ನಕಾರಾತ್ಮಕ ಚಿಂತನೆಯೆಂಬಂತೆ ಬಿಂಬಿತವಾಗುವುದೂ ಸಹಾ ಈ ಜೀವನವೆಂಬ‌ ಮಾಯಾಬಜ಼ಾರು ರೂಪಿಸಿರೋ ಚಾಲಾಕಿತನದ ಎಫ಼ೆಕ್ಟೇ…. !!

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.