--Ads--

ಸ್ವಸಹಾಯ ಗುಂಪುಗಳ ಉತ್ಪನ್ನಗಳು ರಾಜ್ಯಾದ್ಯಂತ ವ್ಯಾಪಿಸಲಿ: ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ

On: March 12, 2026 6:00 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಸ್ವಸಹಾಯ ಗುಂಪುಗಳ ಉತ್ಪನ್ನಗಳು ರಾಜ್ಯಾದ್ಯಂತ ವ್ಯಾಪಿಸಲಿ: ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಮಾ. 11:

ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳು ಜಿಲ್ಲಾ ಮಟ್ಟದ ಮಾರಾಟಕ್ಕೆ ಸಿಮೀತವಾಗದೆ, ಮುಂದಿನ ವರ್ಷದೊಳಗೆ ರಾಜ್ಯಾದ್ಯಂತ ಎಲ್ಲ ಮಾರುಕಟ್ಟೆಗಳಿಗೆ ಗುಣಮಟ್ಟದ ಉತ್ಪನ್ನಗಳು ತಲುಪಿಸುವ ಗುರಿಯೊಂದಿಗೆ ಸ್ವಸಹಾಯ ಗುಂಪುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಕರೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ (ಡೇ-ಎನ್.ಆರ್.ಎಲ್.ಎಂ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -2026” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಮಾಜದ ಎಲ್ಲ ಕ್ಷೇತ್ರದಲ್ಲೂ ಮಹಿಳಾ ಸಾಧಕಿಯರನ್ನು ಕಾಣಬಹುದು. ಮಹಿಳೆಯರು ಸ್ವಸಹಾಯ ಸಂಘ, ಗುಂಪುಗಳನ್ನು ಕಟ್ಟಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ಧಾರೆ. ಜಿಲ್ಲೆಯಲ್ಲಿ ಮಧ್ಯಮ ಹಾಗೂ ದೊಡ್ಡ ಉತ್ಪನ್ನಗಳನ್ನು ಉತ್ಪಾದಿಸುವ ಮಹಿಳಾ ಸ್ವಸಹಾಯ ಗುಂಪುಗಳು ಇನ್ನಷ್ಟು ತಮ್ಮ ಉತ್ಪಾದನಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಇದಕ್ಕೆ ಜಿಲ್ಲಾ ಎನ್.ಆರ್.ಎಲ್.ಎಂ ಇಲಾಖೆಯ ಸಹಕಾರ ಇರುತ್ತದೆ ಎಂದರು.

ಜಿಲ್ಲೆಯ 66 ಸಾವಿರ ಜನ ಮಹಿಳೆಯರು ಎನ್.ಆರ್.ಎಲ್.ಎಂ ಅಡಿ ಸ್ವಸಹಾಯ ಗುಂಪುಗಳ ಮೂಲಕ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಸಹಾಯ ಗುಂಪುಗಳಿಗೆ 33 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ. ಜತೆಗೆ ಮಾಸಿಕ ಸಂತೆ, ವನ್-ಧನ್ ವಿಕಾಸ್ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿ, ಮಹಿಳಾ ಸಬಲೀಕರಣಕ್ಕೆ ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ. ರಾಜಣ್ಣ ಅವರು ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ. ಹೆಣ್ಮಕ್ಕಳು ಸಮಾಜದ ಬೆಳಕಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾಗ ಮೋಟಮ್ಮ ಅವರು 2013ರಲ್ಲಿ ಸ್ತ್ರೀ ಶಕ್ತಿ ಸಂಘ ಕಟ್ಟಿ, ಸ್ತ್ರೀ ಶಕ್ತಿ ಸ್ಥಾಪನೆಗೆ ಅವಕಾಶ ಕಲ್ಪಿಸಿದರು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ಒಂದು ಊರಿನಲ್ಲಿ 10 ರಿಂದ 15 ಸ್ವಸಹಾಯ ಸಂಘ ಸ್ಥಾಪಿಸಲಾಗಿದೆ. ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ. 2000/-, ಶಕ್ತಿ ಯೋಜನೆ ಜಾರಿಗೆ ತಂದು ಉಚಿತ ಪ್ರಯಾಣದ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳಾ ಯಶಸ್ವಿ ಉದ್ಯಮಿಗಳಾಗಿ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.

ಜಿಲ್ಲೆಯಿಂದ ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಸಂಘಮಿತ್ರ ಅವರು ಮಾತನಾಡಿ, ನಾನು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯನಲ್ಲಿ ಓದಿ ಇಂದು ಸಿವಿಲ್ ಜಡ್ಜ್ ಆಗಿದ್ದೇನೆ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಮಹಿಳೆಯರು ಸಮಾನವಾದ ಹಕ್ಕುಗಳನ್ನು ಪಡೆಯುವಂತಾಗಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣ, ಕೌಶಲ್ಯವನ್ನು ಪಡೆದು ಮುಂದೆ ಬನ್ನಿ ಎಂದು ಮಹಿಳೆಯರಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ 2024-25 ಮತ್ತು 2025-26ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಮಹಿಳಾ ಸ್ವಸಹಾಯ ಗುಂಪುಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಶಿವಕುಮಾರ್, ಯೋಜನಾ ನಿರ್ದೇಶಕರಾದ ವಿಠಲ್ ಕಾವ್ಳೆ, ಯೋಜನಾ ಅಧಿಕಾರ ರಾಮಕೃಷ್ಣಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಮುದ್ದಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರೇಮಾ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ದೊಡ್ಡಬಳ್ಳಾಪುರ ತಾಲೂಕಿನ ಯಶಸ್ವಿ ಮಹಿಳಾ ಉದ್ಯಮಿ ಪದ್ಮಿನಿ ಗೌಡ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಉಪಸ್ಥಿತರಿದ್ದರು.

&&&&&&&&&&&&&&&&&&&&&&&&&&&&

ತೋಟಗಾರಿಕೆಯಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ ಮಾ.11:

2026-27ನೆ ಸಾಲಿಗೆ ತೋಟಗಾರಿಕೆ ಇಲಾಖಾ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಅಭ್ಯರ್ಥಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2026-27ನೇ ಸಾಲಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ 02-05-2026 ರಿಂದ 28-02-2027 ರವರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ದಿನಾಂಕ:15-04-2026 ರ ಸಂಜೆ 5.30 ಗಂಟೆಯವರೆಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ.

ದಿನಾಂಕ:23-04-2026 ರಂದು ಸಂದರ್ಶನ ಇರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ (ಜಿಪಂ), ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಕಛೇರಿಗೆ ನಿಗಧಿತ ದಿನಾಂಕದೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now