ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
ವಿಜಯ ದರ್ಪಣ ನ್ಯೂಸ್….
ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೊಭವ, ಪಿತೃದೇವೋಭವ,ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಕೌಟುಂಬಿಕ ಮೌಲ್ಯಗಳು ವ್ಯಕ್ತಿಯ ಆದರ್ಶಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮಮತೆ, ಭ್ರಾತೃತ್ವ , ತ್ಯಾಗ, ದೇಶಪ್ರೇಮ, ಪಿತೃವಾಕ್ಯ ಪರಿಪಾಲನೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿರುವ ಮಹಾಕಾವ್ಯ ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿಯನ್ನು ಸ್ಮರಿಸುವ ಸುದಿನ ಈ ದಿನ.
ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಪೂರ್ತಿಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ಹಲವಾರು ಭಾಷೆಗಳಲ್ಲಿ ಕಾವ್ಯ ನಾಟಕ ಕಾದಂಬರಿಗಳನ್ನು ಅನೇಕ ಸಾಹಿತಿಗಳು ಬರೆದಿದ್ದಾರೆ. ಇಂದಿಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ.
ಭಗವಾನ್ ಶ್ರೀ ರಾಮನು ಜಗತ್ತಿನಾದ್ಯಂತ ಜನರಿಗೆ ಸ್ಪೂರ್ತಿಯಾಗಿದ್ದು ಮನಸ್ಸಿನಿಂದ ಪೂಜಿಸಲ್ಪಡುತ್ತಾನೆ
ಮತ್ತು ರಾಮನ ಜೀವನ ಕಥೆಯನ್ನು ಪ್ರತಿಯೊಬ್ಬರು ತಮ್ಮ ಬದುಕಿನ ಆದರ್ಶವಾಗಿ ಗೌರವಿಸುತ್ತಾರೆ. ವಾಲ್ಮೀಕಿ ಜಯಂತಿಯಂದು ಹಿಂದೂಗಳು ಶ್ರೀ ರಾಮನ ಕಥೆಯನ್ನು ಜಗತ್ತಿಗೆ ಸಾರಿದ ಮಹರ್ಷಿ ವಾಲ್ಮೀಕಿಯವರಿಗೆ ಗೌರವ ಸಲ್ಲಿಸುತ್ತಾರೆ. ಅಂತಹ ಧೀಮಂತ ಮೇರು ವ್ಯಕ್ತಿತ್ವದ ರಾಮನ ಜೀವನ ದರ್ಶನವನ್ನು ವಾಲ್ಮೀಕಿಯವರು ರಚಿಸಿದ್ದಾರೆ. ರಾಮಾಯಣವು ಎರಡು ಪ್ರಾಚೀನ ಗ್ರಂಥಗಳಲ್ಲಿ ಒಂದಾಗಿದೆ ಇನ್ನೊಂದು ಗ್ರಂಥ ಮಹಾಭಾರತವಾಗಿದೆ.
ರತ್ನಾಕರ ವಾಲ್ಮೀಕಿಯಾದ ಕಥೆ
ವಾಲ್ಮೀಕಿ ಜೀವನದ ಬಗೆ ದಂತಕಥೆಯೊಂದಿದೆ.
ವಾಲ್ಮೀಕಿ ಮಹರ್ಷಿಯು ಭಗವಾನ್ ಬ್ರಹ್ಮನ ಮಾನಸಪುತ್ರ ಋಷಿ ಪ್ರಚೇತರ ಮಗ. ಬಾಲ್ಯದಲ್ಲಿ ವಾಲ್ಮೀಕಿಯವರನ್ನು ಭೀಲ್ ಸಮಾಜದವರು ಅಪಹರಿಸಿದರು. ವಾಲ್ಮೀಕಿಯ ಹೆಸರು ರತ್ನಾಕರನಾಗಿತ್ತು. ಭೀಲ್ ಸಮಾಜದ ಜನರು ಜನರನ್ನು ಲೂಟಿ ದರೋಡೆ ಮಾಡಿ ಬದುಕುತ್ತಿದ್ದರು. ಇದರಿಂದಾಗಿ ಜನರು ಭಯಭೀತರಾಗಿ ಬದುಕು ನಡೆಸುತ್ತಿದ್ದರು. ಭೀಲ್ ಜನರ ಒಡನಾಟದಲ್ಲಿ ಬೆಳೆದ ರತ್ನಾಕರ ಅವರ ವರ್ತನೆಗೆ, ಬದುಕಿನ ರೀತಿಗೆ ಪ್ರಭಾವಿತನಾಗಿ ಬಾಲಕ ರತ್ನಾಕರ ಕೂಡ ದರೋಡೆ ಲೂಟಿ ಮಾಡತೊಡಗಿದ .
ಒಮ್ಮೆ ದೇವಾನುದೇವತೆಗಳು ರತ್ನಾಕರನನ್ನು ಸರಿದಾರಿಗೆ ತಂದು ಕಾಡಿನ ಜನರನ್ನು ರಕ್ಷಿಸಬೇಕೆಂದು ನಾರದ ಮುನಿಯನ್ನು ರತ್ನಾಕರನಿರುವಲ್ಲಿಗೆ ಕಳುಹಿಸಿದರು. ರತ್ನಾಕರನು ನಾರದ ಮುನಿಯನ್ನು ಸೆರೆಯಲ್ಲಿಟ್ಟನು. ಆಗ ನಾರದ ಮುನಿಗಳು ರತ್ನಾಕರನನ್ನು ಕುರಿತು ” ನೀವು ಮಾಡುತ್ತಿರುವುದು ಪಾಪದ ಕೆಲಸ ನಿಮ್ಮ ಪಾಪದ ಕೆಲಸದ ಪಾಲುದಾರಿಕೆಯಲ್ಲಿ ನಿಮ್ಮ ಕುಟುಂಬದ ಸದಸ್ಯರು ಕೂಡ ಸೇರಿಕೊಳ್ಳುತ್ತಾರೆ. ಸಿಕ್ಕ ಸಿಕ್ಕವರನ್ನು ಸೆರೆಯಲ್ಲಿಟ್ಟು ಹಿಂಸಿಸಿ ದೋಚುವ ಬದಲು ನಿಮ್ಮ ಕುಟುಂಬದ ಸದಸ್ಯರನ್ನು ಸೆರೆಯಲ್ಲಿಟ್ಚು ನೋಡಿ ಎಂದು ಹೇಳಿದರು. ಆಗ ರತ್ನಾಕರನು ತನ್ನ ಕುಟುಂಬದವರೊಡನೆ ನನ್ನ ಪಾಪದ ಕಾರ್ಯದಲ್ಲಿ ನನ್ನೊಂದಿಗೆ ಪಾಲದಾರರಾಗುವಿರಾ? ಎಂದು ಕೇಳಿದಾಗ ಕುಟುಂಬದವರು ನಿರಾಕರಿಸುತ್ತಾರೆ. ಇದರಿಂದ ರತ್ನಾಕರನ ಮನ ಪರಿವರ್ತನೆಯಾಗಿ ಪ್ರಪಂಚದ ಬಗೆ ತಿಳಿದುಕೊಳ್ಳಲು ಕಾರಣವಾಗುತ್ತದೆ. ನಾರದರ ಬಳಿ ತಾನು ಮಾಡಿದ ಪಾಪಕ್ಕೆ ಮೋಕ್ಷವನ್ನು ಕರುಣಿಸುವಂತೆ ಕೇಳಿಕೊಂಡಾಗ ನಾರದರು ಅವನಿಗೆ ರಾಮ ಎಂಬ ಮಂತ್ರವನ್ನು ಪಠಿಸುವಂತೆ ಸಲಹೆ ನೀಡುತ್ತಾರೆ. ನಾರದರ ಮಾತಿನಿಂದ ಪ್ರಭಾವಿತನಾದ ರತ್ನಾಕರನು ತಪಸ್ಸಿಗೆ ಕುಳಿತು ರಾಮ ನಾಮ ಜಪಿಸಲು ಪ್ರಾರಂಭಿಸಿದನು. ದೈವಿಕ ಶಕ್ತಿಯಿಂದ ಅವರ ತಪಸ್ಸು ಯಶಸ್ವಿಯಾಯಿತು. ಸುದೀರ್ಘ ತಪಸ್ಸಿನಿಂದಾಗಿ ರತ್ನಾಕರನ ಸುತ್ತ ಇರುವೆಗಳ ಹುತ್ತ ರೂಪುಗೊಂಡಿತು. ಹುತ್ತವನ್ನು ಭೇಧಿಸಿಕೊಂಡು ಹೊರಬಂದ ಕಾರಣ ರತ್ನಾಕರನನ್ನು ವಾಲ್ಮೀಕಿ ಎಂದು ಕರೆಯಲಾಯಿತು. ಅಂದಿನಿಂದ ರತ್ನಾಕರ ಎನ್ನುವ ಕ್ರೂರಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿದರು.
ಜಾನಪದ ನಂಬಿಕೆಗಳ ಪ್ರಕಾರ ಮಹರ್ಷಿ ವಾಲ್ಮೀಕಿ ಮುಂದಿನ ಜೀವನದಲ್ಲಿ ತುಳಸಿದಾಸರಾಗಿ ಜನಿಸಿ ರಾಮಾಯಣದಿಂದ ರಾಮಚರಿತ ಮಾನಸ ರಚಿಸಿದರೆಂಬ ಪ್ರತೀತಿ ಇದೆ. ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂಬ ಕಾರಣದಿಂದಾಗಿ ಅವರನ್ನು ಆದಿಕವಿ ಎಂದು ಗೌರವಿಸಲಾಯಿತು.
ಚೆನ್ನೈನ ತಿರುವನ್ಮಿಯೂರ್ ನಲ್ಲಿ ವಾಲ್ಮೀಕಿಯ ದೇವಾಲಯವಿದೆ ಅದು 1300 ವರ್ಷ ಹಳೆಯದೆಂದು ನಂಬಲಾಗಿದೆ. ಕರ್ನಾಟಕದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಮಹರ್ಷಿಯ ಮಹಾಸಂಸ್ಥಾನವಿದೆ. ವಾಲ್ಮೀಕಿ ಜಯಂತಿಯಂದು ಭಾರತದಲ್ಲಿ ವಾಲ್ಮೀಕಿ ಪಂಥದ ಜನರು ಶ್ರಧ್ಧಾಭಕ್ತಿಯಿಂದ ಆಚರಿಸುತ್ತಾರೆ .ಶೋಭಯಾತ್ರೆಯ ಮೂಲಕ ಪೂಜ್ಯಭಾವದಿಂದ ಶ್ರೀರಾಮನ ಹಾಡುಗಳನ್ನು ಹಾಡುತ್ತಾರೆ..
ಜಯಂತಿ. ರೈ
ಮಡಿಕೇರಿ