ಅವರ ಮೇಲೆ ಇವರು, ಇವರ ಮೇಲೆ ಅವರು……
ವಿಜಯ ದರ್ಪಣ ನ್ಯೂಸ್….
ಅವರ ಮೇಲೆ ಇವರು,
ಇವರ ಮೇಲೆ ಅವರು……
ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ.
ದಯವಿಟ್ಟು ತಿಳಿಸಿ……….
ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು ದೂರ ಹೋಗಿ ನಿಲ್ಲುತ್ತದೆ. ಬಸ್ಸು ಹತ್ತಲು ಓಡಿದ ಪ್ರಯಾಣಿಕ
ಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮುಂದೆ ಚಲಿಸುತ್ತದೆ. ಈತ ಬಸ್ಸಿನ ಬಾಗಿಲ ಕಂಬಿ ಹಿಡಿದವನು ಕೈ ಜಾರಿ ದೊಪ್ಪನೆ ಕೆಳಗೆ ಬೀಳುತ್ತಾನೆ. ಕಾಲಿಗೆ ಬಲವಾದ ಪೆಟ್ಟಾಗುತ್ತದೆ. ಡ್ರೈವರ್ ಅನ್ನು ಶಪಿಸುತ್ತಾ
ಮತ್ತೆ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾನೆ.
ಅದೇ ಬಸ್ಸಿನ ಡ್ರೈವರ್ ತನ್ನ ಮಗನನ್ನು ಸೇರಿಸಲು ಒಂದು ಖಾಸಗಿ ಶಾಲೆಗೆ ಹೋಗುತ್ತಾನೆ. ಅಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿ ಹಿಂಸಿಸಿದ ಪ್ರಿನ್ಸಿಪಾಲರು ಕೊನೆಗೆ ಹೆಚ್ಚಿನ ಡೊನೇಷನ್ ಕಟ್ಟಿಸಿಕೊಂಡು ಶಾಲೆಗೆ ಸೇರಿಸಿಕೊಳ್ಳುತ್ತಾರೆ. ಪ್ರವೇಶ ಮುಗಿಸಿ ಹೊರಬಂದ ಡ್ರೈವರ್ ಸುಲಿಗೆ ಮಾಡಿದ್ದಕ್ಕಾಗಿ ಶಾಲೆಯನ್ನು ಬಯ್ಯುತ್ತಾ ಮನೆ ಕಡೆ ಹೊರಡುತ್ತಾನೆ.
ಅದೇ ಶಾಲೆಯ ಪ್ರಿನ್ಸಿಪಾಲರು ಜ್ವರದ ಕಾರಣಕ್ಕಾಗಿ ಒಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ಅನೇಕ ಪರೀಕ್ಷೆ ಮಾಡಿ, Specialist Doctor consulting ಮಾಡಿಸಿ, ಏನೂ ತೊಂದರೆ ಇಲ್ಲ ಎಂದು ಹೇಳಿ ದೊಡ್ಡ ಮೊತ್ತದ ಹಣ ಕಟ್ಟಿಸಿಕೊಂಡು ಕಳಿಸುತ್ತಾರೆ . ಆ ಪ್ರಿನ್ಸಿಪಾಲರು ಅನಾವಶ್ಯಕವಾಗಿ ದುಬಾರಿ ಹಣ ತೆತ್ತಿದ್ದಕ್ಕಾಗಿ ಆಸ್ಪತ್ರೆಯನ್ನು ಶಪಿಸುತ್ತಾ ಶಾಲೆಯ ಕಡೆ ಹೊರಡುತ್ತಾನೆ.
ಅದೇ ಆಸ್ಪತ್ರೆಯ ಡಾಕ್ಟರ್ ತಮ್ಮ ಒಂದು ಹೊಸ ಮನೆಯ ರಿಜಿಸ್ಟ್ರೇಷನ್ ಗಾಗಿ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಬರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಕಾದು ಸಾವಿರಾರು ರೂಪಾಯಿ ಲಂಚ, ಕಮೀಷನ್ ಕೊಟ್ಟು, ಇಡೀ ದಿನ ಸಮಯ ವ್ಯರ್ಥ ಮಾಡಿಕೊಂಡು ಕೊನೆಗೆ
Registration ಮುಗಿಸಿ ಆಚೆ ಬರುವಾಗ ಮನಸ್ಸಿನಲ್ಲಿ ಸಬ್ ರಿಜಿಸ್ಟ್ರಾರ್ ಗೆ ಬಾಯಿಗೆ ಬಂದತೆ ಟೀಕಿಸುತ್ತಾ ಆಸ್ಪತ್ರೆಯ ಕಡೆ ಹೊರಡುತ್ತಾನೆ.
ಅದೇ ಸಬ್ ರಿಜಿಸ್ಟ್ರಾರ್ ಒಂದು ಮನೆ ಕಟ್ಟಿಸುತ್ತಿರುತ್ತಾನೆ. ಆ ಜಾಗದ ಬಗ್ಗೆ ಗಲಾಟೆಯಾಗಿ ರೌಡಿಗಳ ಪ್ರವೇಶವಾಗಿ ತುಂಬಾ ತೊಂದರೆ ಆಗುತ್ತಿರುತ್ತದೆ. ಆ ಬಗ್ಗೆ ಪೋಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿ ಸಬ್ ರಿಜಿಸ್ಟ್ರಾರ್ ಆ ಜಾಗವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡು ರೌಡಿಗಳನ್ನು ಹೊರಹಾಕಿ ಸಮಸ್ಯೆ ಪರಿಹರಿಸಿಕೊಳ್ಳಲು ಪೋಲೀಸ್ ಅಧಿಕಾರಿಗೆ ಅಪಾರ ಲಂಚ ಕೊಟ್ಟು ಹೈರಾಣಾಗುತ್ತಾನೆ. ಕೊನೆಗೆ ಹೇಗೋ ಸಮಸ್ಯೆ ಬಗೆಹರಿಸಿಕೊಂಡು ತನ್ನ ಬಳಿಯೇ ಲಂಚ ತಿಂದಿದ್ದಕ್ಕೆ ಪೋಲೀಸರಿಗೆ ಶಾಪ ಹಾಕುತ್ತಾ ಕಚೇರಿ ಕಡೆ ಹೊರಡುತ್ತಾನೆ.
ಅದೇ ಪೋಲೀಸ್ ಅಧಿಕಾರಿಯ ಮಗ ಪೋಲಿ ಬಿದ್ದು ಯಾವುದೋ ಡ್ರಗ್ ಕೇಸಲ್ಲಿ ಸಿಕ್ಕಿ ಬೀಳುತ್ತಾನೆ. ಅವನನ್ನು ಬಿಡಿಸಿಕೊಳ್ಳಲು ಪ್ರಖ್ಯಾತ ಕ್ರಿಮಿನಲ್ ಲಾಯರ್ ಸಂಪರ್ಕ ಮಾಡುವ ಅಧಿಕಾರಿ ಅಪಾರ ದುಡ್ಡು, ತನ್ನ ಪ್ರಭಾವ ಉಪಯೋಗ ಮಾಡಿ ಕೊನೆಗೆ ಹೇಗೋ ಜಾಮೀನಿನ ಮೇಲೆ ಮಗನನ್ನು ಬಿಡಿಸಿಕೊಳ್ಳುತ್ತಾನೆ. ಈ ಅಧಿಕಾರಿಯ ಬಗ್ಗೆ ಗೊತ್ತಿದ್ದ ಲಾಯರ್ ದೊಡ್ಡ ಮೊತ್ತದ ಹಣ ಕೀಳುತ್ತಾನೆ. ಮಗನನ್ನು ಕೋರ್ಟಿನಿಂದ ಕರೆದುಕೊಂಡು ಸ್ಟೇಷನ್ ಕಡೆ ಹೊರಡುವ ಅಧಿಕಾರಿ ತನ್ನ ಬಳಿಯೇ ಅಪಾರ ಹಣ ಕಿತ್ತ ಲಾಯರ್ ಅನ್ನು ಶಪಿಸುತ್ತಾನೆ.
ಇದೇ ಲಾಯರ್ ಸರ್ಕಾರದ ಯಾವುದೋ ಬೋರ್ಡ್ ಗೆ ಛೇರ್ಮನ್ ಆಗಲು ಪರಿಚಿತ ರಾಜಕಾರಣಿಯ ಬಳಿ ಬರುತ್ತಾನೆ. ಆತ ದೆಹಲಿ, ಹೈಕಮಾಂಡ್, ಅದು ಇದು ಎಂದು ಸುತ್ತಾಡಿಸಿ ಚೆನ್ನಾಗಿ ದುಡ್ಡು ಕಿತ್ತು ಕೊನೆಗೆ ಒಂದು ಕೆಲಸಕ್ಕೆ ಬಾರದ ಬೋರ್ಡ್ ಸದಸ್ಯತ್ವ ಕೊಡಿಸುತ್ತಾನೆ. ಅಧಿಕಾರ ಸಿಕ್ಕರೂ ಅಪಾರ ಹಣ ತೆತ್ತಿದ್ದಕ್ಕಾಗಿ ಲಾಯರ್ ರಾಜಕಾರಣಿಯನ್ನು ಶಪಿಸುತ್ತಲೇ ಇರುತ್ತಾನೆ.
ಇದೇ ರಾಜಕಾರಣಿ ಅಪಾರ ಹಣ ಖರ್ಚು ಮಾಡಿ ಪಕ್ಷದ ಟಿಕೆಟ್ ಗಿಟ್ಟಿಸಲು ಹೈರಾಣಾಗುತ್ತಾನೆ. ಕೊನೆಗೆ ಒಂದು ಕ್ಷೇತ್ರದ ಟಿಕೆಟ್ ಗಿಟ್ಟಿಸಿ ಚುನಾವಣೆಗೆ ನಿಲ್ಲುತ್ತಾನೆ. ಜನರ ಬಳಿ ಮತಯಾಚನೆಗೆ ಹೋಗುತ್ತಾನೆ. ಆಗ ಮತದಾರರು ಸಹಜವಾಗಿ ಎಂದಿನಂತೆ ಯಾವ ಪಕ್ಷದವರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ನಮ್ಮ ಓಟು ಎನ್ನುತ್ತಾರೆ. ಕೊನೆಗೆ ಈ ರಾಜಕಾರಣಿ ಅಪಾರ ಹಣ ಮತದಾರರಿಗೆ ಕೊಡುತ್ತಾನೆ. ಮನಸ್ಸಿನಲ್ಲಿ ಮತದಾರರನ್ನು ಶಪಿಸುತ್ತಾನೆ.
ಅದೇ ಮತದಾರ ಅದೇ ರಾಜಕಾರಣಿಯಿಂದ ಪಡೆದ ಹಣದೊಂದಿಗೆ ತಾನು ಬ್ಯಾಂಕ್ ನಿಂದ ಪಡೆದ ಸಾಲದ ಕಂತು ತುಂಬಲು ಬಸ್ ನಿಲ್ದಾಣದಲ್ಲಿ ಕಾಯುತ್ತಾ ಈಗ ಗಾಯಗೊಂಡು ನಿಂತಿರುವ ಪ್ರಯಾಣಿಕ. ಆ ಪ್ರಯಾಣಿಕ ಬೇರೆ ಯಾರೂ ಅಲ್ಲ……
ಆ ಮೂರ್ಖ ನಾನೇ………
ಬದಲಾವಣೆ ಎಲ್ಲಿಂದ ಪ್ರಾರಂಭಿಸುವುದು ಎಂದು
ಯೋಚಿಸುತ್ತಲೇ ಇದ್ದೇನೆ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451..Watsapp)
9844013068……