ಹಾಗೇ ಸುಮ್ಮನೆ ದಸರಾ ಉದ್ಘಾಟಿಸುವ ಕನಸು ಬಿದ್ದಾಗ……

ವಿಜಯ ದರ್ಪಣ ನ್ಯೂಸ್…..

ಹಾಗೇ ಸುಮ್ಮನೆ ದಸರಾ ಉದ್ಘಾಟಿಸುವ ಕನಸು ಬಿದ್ದಾಗ……

ಒಂದು ವೇಳೆ ಶ್ರೀಮತಿ ಭಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸಿದರೆ ಏನಾಗಬಹುದು ಅಥವಾ ಅವರು ಉದ್ಘಾಟಿಸದಿದ್ದರೆ ಏನಾಗಬಹುದು……..

ತುಂಬಾ ತುಂಬಾ ತಲೆಕೆಡಿಸಿಕೊಂಡು ವಾದ ವಿವಾದ ಮಾಡುತ್ತಿರುವವರಿಗಾಗಿ….

ಉದ್ಘಾಟಿಸಿದರೆ ವೈಯಕ್ತಿಕ ಮಟ್ಟದಲ್ಲಿ ಭಾನು ಮುಷ್ತಾಕ್ ಅವರಿಗೆ ಪ್ರಖ್ಯಾತಿಯ ಸಂತೋಷ ಮತ್ತು ಬದುಕಿನ ಸಾರ್ಥಕತೆಯ ಭಾವ ಉಂಟಾಗಬಹುದು. ಹಾಗೆಯೇ ರಾಜಕೀಯ ಪಕ್ಷಗಳಿಗೆ ಒಂದಷ್ಟು ಜನಾಭಿಪ್ರಾಯದ ಲಾಭ – ನಷ್ಟ ಆಗಬಹುದು. ಅದನ್ನು ಹೊರತುಪಡಿಸಿ ಯಾವುದೇ ರೀತಿಯ ಸಾಮಾನ್ಯ ವ್ಯಕ್ತಿಯ ಬದುಕಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಏಕೆಂದರೆ ಭಾನು ಮುಷ್ತಾಕ್ ಎನ್ನುವ ಮಹಿಳೆ ನಿಸರ್ಗದ ಒಂದು ಜೀವಿ. ನಿಸರ್ಗಕ್ಕೆ ಆಕೆ ಹಿಂದು, ಮುಸ್ಲಿಮ, ಹೆಣ್ಣು, ಗಂಡು ಎಂಬ ಯಾವ ಅರಿವೂ ಇರುವುದಿಲ್ಲ.

ಉದ್ಘಾಟನೆಯ ವಿಧಾನ ಮತ್ತು ಅದಕ್ಕೆ ಬಳಸಬಹುದಾದ ಹೂವು, ಹಣ್ಣು, ಅರಿಶಿನ, ಕುಂಕುಮ, ಪೂಜೆ, ಮಂತ್ರ, ಅಜಾನ್, ಖುರಾನ್ ಪಠಣ, ಪ್ರಾರ್ಥನೆ ಎಲ್ಲವೂ ನಿರ್ಜೀವ. ಅವುಗಳಿಗೆ ಏನು ನಡೆಯುತ್ತಿದೆ ಎಂಬುದರ ಅರಿವೇ ಇರುವುದಿಲ್ಲ. ಕ್ರಿಶ್ಚಿಯನ್ ಪ್ರಾರ್ಥನೆ ಮಾಡಿದರೂ, ಹಿಂದೂ ಭಜನೆ ಮಾಡಿದರೂ, ಇಸ್ಲಾಂ ತತ್ವ ಹೇಳಿದರೂ, ಬೌದ್ಧ, ಸಿಖ್, ಜೈನ, ಪಾರ್ಸಿ, ಲಿಂಗಾಯಿತ ವಚನ ಯಾವುದೇ ಹೇಳಿದರು ಅದಕ್ಕೆ ತಿಳಿಯುವುದೇ ಇಲ್ಲ.

ಆದರೆ ಮನುಷ್ಯರೆಂಬ ನಾವುಗಳು ಮಾತ್ರ ಇದೊಂದು ಭಯಂಕರ ವಿದ್ಯಮಾನ ಎನ್ನುವಂತೆ ತುಂಬಾ ತುಂಬಾ ಚರ್ಚೆ ಮಾಡುತ್ತಿದ್ದೇವೆ. ಟೋಪಿ, ಗಡ್ಡ, ಕುಂಕುಮ, ನಾಮ, ಕ್ರಾಸು, ಪ್ರಾರ್ಥನೆ ಇತ್ಯಾದಿ ಇತ್ಯಾದಿಗಳನ್ನು ನಾವೇ ನಿರ್ಮಿಸಿಕೊಂಡು ನಾವು ಪ್ರಕೃತಿಯ ಶಿಶುಗಳು ಎನ್ನುವ ಮೂಲ ವಿಷಯವನ್ನೇ ಮರೆತು ಉಳಿದ ಎಲ್ಲ ಭಿನ್ನತೆಯನ್ನು ಚರ್ಚಿಸುತಿದ್ದೇವೆ‌.

ಅಲ್ಲಿನ ಆನೆ, ಕುದುರೆಗಳಿಗೂ ಸಹ ರಾಜ ಯಾರು, ರಾಣಿ ಯಾರು, ಮುಖ್ಯಮಂತ್ರಿ ಯಾರು, ಭಾನು ಮುಷ್ತಾಕ್ ಯಾರು, ಸಿದ್ದರಾಮಯ್ಯ ಯಾರು, ಜಿಲ್ಲಾ ಉಸ್ತುವಾರಿ ಸಚಿವ ಯಾರು ಮುಂತಾದ ಏನೊಂದೂ ತಿಳಿದಿಲ್ಲ.

ನಾವು ಮಾತ್ರ ಎಲ್ಲವೂ ತಿಳಿದಂತೆ ಏನೇನೋ ಮಾತನಾಡುತ್ತೇವೆ. ವಾಸ್ತವವಾಗಿ ಆನೆ, ಕುದುರೆಗಳಂತೆ ನಾವು ಸಹ ಜೀವವಿರುವ ಪ್ರಾಣಿಗಳು ಮಾತ್ರ.

ಮನುಷ್ಯ ಎಂಬ ನಾಗರಿಕ ಪ್ರಾಣಿಗೆ ಅಕ್ಷರ ಜ್ಞಾನವೇ ಶಾಪವಾಗುತ್ತಿರುವಂತಿದೆ. ಈ ವಿದ್ಯೆಯಿಂದ ಆತನ ಅರಿವಿನ ಗುಣಮಟ್ಟ ಯಾವ ದಿಕ್ಕಿನತ್ತ ಸಾಗುತ್ತಿದೆಯೋ ಅರ್ಥವಾಗುತ್ತಿಲ್ಲ. ತೀರ ಸಂಕುಚಿತವಾಗಿ, ವಿಭಜಕ ಮನಸ್ಥಿತಿಯಲ್ಲಿ ಯೋಚಿಸುವಂತಾಗಿದ್ದಾನೆ. ಒಂದು ಮನುಷ್ಯ ಪ್ರಾಣಿಯನ್ನು ಗಂಡು-ಹೆಣ್ಣು ಎಂತಲೋ, ಹಿಂದೂ-ಮುಸ್ಲಿಂ ಎಂತಲೋ, ಶ್ರೀಮಂತ ಬಡವ ಎಂತಲೋ ತಾನೇ ವಿಭಜಿಸಿಕೊಂಡು ಈಗ ಆ ವಿಷ ಚಕ್ರದಲ್ಲಿ ತಾನೇ ಸಿಲುಕಿ ಹುಚ್ಚುಚ್ಚಾಗಿ ಮಾತನಾಡುತ್ತಾನೆ .

ಕೆಲವು ಮಹಾನ್ ಬುದ್ಧಿವಂತರೆಂದುಕೊಂಡಿರುವವರು ಅದರ ಬಗ್ಗೆ ಚರ್ಚಿಸುತ್ತಾರೆ. ಇದು ಸರಿಯೇ, ಇದು ತಪ್ಪೇ, ಉದ್ಘಾಟನೆ ಮಾಡಿದರೆ ಹೇಗೆ, ಮಾಡದಿದ್ದರೆ ಹೇಗೆ, ಏಕೆ ಮಾಡಬೇಕು, ಯಾರು ಮಾಡಬೇಕು. ವಾಸ್ತವವಾಗಿ ಅದೊಂದು ಉತ್ಸವ. ಉದ್ಘಾಟನೆಯ ಅವಶ್ಯಕತೆಯೇ ಇಲ್ಲ. ಸರ್ಕಾರದ ಒಂದು ಕಾರ್ಯಕ್ರಮ. ಯಾರೋ ಒಬ್ಬರಿಗೆ ಒಂದು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮುಖ್ಯ ಅತಿಥಿಯನ್ನು ಕರೆಯುತ್ತಾರೆ. ಒಂದು ಅರ್ಧ ಮುಕ್ಕಾಲು ಗಂಟೆಯಲ್ಲಿ ಕಾರ್ಯಕ್ರಮ ಮುಗಿಯುತ್ತದೆ. ಅದರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಇದಕ್ಕಾಗಿ ಇಷ್ಟೆಲ್ಲ ಗೊಂದಲಗಳು.

ಬಹುಶಃ ಮನುಷ್ಯನಿಗೆ ನೆಮ್ಮದಿಯೇ ಬೇಡವೆನಿಸುತ್ತಿದೆ. ದಿನವೂ ಏನಾದರೂ ಒಂದು ಈ ರೀತಿಯ ವಿಚಿತ್ರಗಳನ್ನು ತನ್ನ ಮನಸ್ಸಿನೊಳಗಿನ ಮೆದುಳಿಗೆ ಹಾಕಿಕೊಂಡು ಚಡಪಡಿಸುತ್ತಾ ಕೊರಗುತ್ತಲೇ ಇರಬೇಕೆಂಬ ಶಾಪ ಇರಬೇಕೇನೋ.

ಇದನ್ನೆಲ್ಲಾ ಮರೆತು ಒಮ್ಮೆ ಈ ದೃಷ್ಟಿಯಿಂದ ಯೋಚಿಸಿ ನೋಡಿ…..

ಬೆಳಗ್ಗೆ ಮಧ್ಯಾಹ್ನ ಸಂಜೆ ಜೋರಾಗಿ ಅಜಾನ್ ಕೂಗಿದ್ದೇ ಕೂಗಿದ್ದು, ಶತಶತಮಾನಗಳಿಂದ,
ಆದರೆ,
ಈಗಲೂ ಮಸೀದಿಗಳ ಮುಂದೆ ಚಳಿಯಲ್ಲಿ ನಡುಗುತ್ತಾ, ಕೈಯಲ್ಲಿ ತಟ್ಟೆ ಹಿಡಿದ ಭಿಕ್ಷೆ ಬೇಡುವ ನನ್ನಜ್ಜ, ಬಿಸಿಲಲ್ಲಿ ಬೇಯುತ್ತಾ ಬುರ್ಖಾ ತೊಟ್ಟು, ಕಂಕುಳಲ್ಲಿ ಮಗು ಹೊತ್ತು ಭಿಕ್ಷೆಯ ಕಾಸಿಗಾಗಿ ಸೆರಗೊಡ್ಡುವ ನನ್ನವ್ವ,
ಮಳೆಯಲ್ಲಿ ನೆನೆಯುತ್ತಾ ಲೋಟ ಹಿಡಿದು ಭಿಕ್ಷೆ ಬೇಡುವ ನನ್ನ ಮಗನಿಗೆ ಹೊಟ್ಟೆ ತುಂಬಾ ಊಟವೇ ಸಿಗಲಿಲ್ಲ.
ಯಾಕೋ ? ಅದಕ್ಕೆ ಯಾರು ಕಾರಣವೋ ?……

ತುಂಬಿದ ಹೊಟ್ಟೆಯ ಗಣೇಶನನ್ನು ಸಹಸ್ರಾರು ವರ್ಷಗಳಿಂದ ಭಕ್ತಿ ಭಾವನೆಗಳಿಂದ ಅಲಂಕರಿಸಿ ವಿಧವಿಧವಾದ ಹಾಡುಗಳಿಂದ ವರ್ಣಿಸಿ ಅವನನ್ನು ಮೈಕು ಡೋಲು ಡಂಗೂರಗಳಿಂದ ಹೊಗಳಿದರೂ….

ನನ್ನ ರೈತ ಚಿಕ್ಕಪ್ಪ ಹಳ್ಳಿಯಲ್ಲಿ ಯಾರದೋ ಕಷ್ಟಕ್ಕೆ ಜಾಮೀನಾಗಿ ಕೊನೆಗೆ ಮೋಸ ಹೋಗಿ ಜೈಲುಪಾಲಾದದ್ದು ಯಾಕೋ,
ತುಂಬಾ ಪ್ರೀತಿಯಿಂದ ಸಾಕಿದ ನನ್ನ ಅಕ್ಕ ಮದುವೆಯಾದ ಒಂದೇ ವರ್ಷದಲ್ಲಿ ಹೊಟ್ಟೆಯಲ್ಲಿದ್ದ ಮಗುವಿನೊಂದಿಗೆ ಮಹಾ ದೈವಭಕ್ತ ಅತ್ತೆ ಮಾವನವರ ವರದಕ್ಷಿಣೆ ದುರಾಸೆಗೆ ಸುಟ್ಟು ಕರಕಲಾದದ್ದು
ಯಾಕೋ ? ಅದಕ್ಕೆ ಯಾರು ಕಾರಣವೋ ?

ಅನಾದಿ ದಿನಗಳಿಂದಲೂ ಮೌನವಾಗಿ ಮನೆಗಳಲ್ಲಿ, ಚರ್ಚುಗಳಲ್ಲಿ ಯೇಸುಕ್ರಿಸ್ತನ ಶಿಲುಬೆಯ ಮುಂದೆ ನಿಂತು ತದೇಕ ಚಿತ್ತದಿಂದ ಆತನ ಮೂರ್ತಿ ನೋಡಿಕೊಂಡು ಪ್ರಾರ್ಥಿಸುತ್ತಿದ್ದರೂ…..

ಆಸ್ಪತ್ರೆಯ ದಾದಿಯಾಗಿ ತನ್ನ ಸೇವೆ ಮಾಡುತ್ತಿದ್ದ ನನ್ನ ತಂಗಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿ ಕೊಂದು ಹಾಕಿದಾಗ,
ಚರ್ಚಿನ ಮುಂಭಾಗದಲ್ಲೇ ಇನ್ನೂ ಸಾವಿರಾರು ನಿಸ್ಸಹಾಯಕ ನನ್ನ ರಕ್ತ ಸಂಬಂಧಿಗಳು ತುತ್ತು ಅನ್ನಕ್ಕಾಗಿ ಹಲಬುತ್ತಾ ಕುಳಿತಿರುವಾಗ ಆ ಪ್ರಾರ್ಥನೆಗಳು ತಲುಪಿದ್ದಾದರೂ ಯಾರಿಗೋ ? ಅದಕ್ಕೆ ಯಾರು ಕಾರಣವೋ ?

ಈಗಲೂ ಪ್ರತಿನಿತ್ಯ …..
ಬೈಬಲ್ ಅನ್ನು ಓದುತ್ತೇನೆ,
ಖುರಾನ್ ಅನ್ನು ಪಠಿಸುತ್ತೇನೆ ….
ಗೀತೆಯನ್ನು ಜಪಿಸುತ್ತೇನೆ….
ಈ ನನ್ನ ಜನಗಳ ಒಳಿತಿಗಾಗಿ….
ಯಾರೂ ಬರಲಿಲ್ಲ, ಏನೂ ಆಗಲಿಲ್ಲ ಯಾಕೋ ?

ಮಂದಿರ – ಮಸೀದಿ – ಚರ್ಚುಗಳು ಬೇಕೋ ?
ಪೋಲೀಸು – ಕಾನೂನು – ನ್ಯಾಯಾಂಗ ಬೇಕೋ ?
ಪೂಜಾರಿ – ಮೌಲ್ವಿ – ಪಾದ್ರಿಗಳು ಬೇಕೋ ?
ರಾಜಕಾರಣಿಗಳು – ಆಡಳಿತಗಾರರು -ನ್ಯಾಯಾಧೀಶರು ಬೇಕೋ ?

ಯಾರಿಂದ ಯಾರೋ – ಯಾರಿಗೆ ಯಾರೋ ಅರ್ಥವಾಗುತ್ತಿಲ್ಲ……

ಯಾರ ಭಾವನೆಗಳನ್ನೂ ಕೆರಳಿಸುವ ಉದ್ದೇಶ ಇದಲ್ಲ…
ನನ್ನ ಅಸಹಾಯಕ, ಅಮಾಯಕ ಜನಗಳ ನೋವಿನ ಭಾವನೆಗಳ ಧ್ವನಿ ಅಷ್ಟೇ. ಇದು ಸ್ಪಷ್ಟವಾದಲ್ಲಿ ನಮ್ಮ ಸಮಸ್ಯೆಗಳು ಕಡಿಮೆಯಾಗಬಹುದು…

ನಿಮ್ಮ ನಿಮ್ಮ ದೇವರುಗಳನ್ನು ಹಾಡಿ, ಮುದ್ದಿಸಿ, ಅಲಂಕರಿಸಿ, ಪ್ರಾರ್ಥಿಸಿ ಸಂಭ್ರಮಿಸುವ ಸ್ವಾತಂತ್ರ್ಯ ನಿಮಗಿದ್ದೇ ಇದೆ. ಅದನ್ನು ಕೇಳಲು ಈ ಹುಲುಮಾನವನಾರು ?

ಆದರೆ,
ಕಣ್ಣ ಮುಂದಿನ, ಈ ಸಮಸ್ಯೆಗಳನ್ನು ಹೋಗಲಾಡಿಸುವ ಸಾಧ್ಯತೆ ಇರುವ ಶಕ್ತಿ, ಜನಗಳು, ಅಧಿಕಾರ ಎಲ್ಲವೂ ಇರುವಾಗ ವಿವೇಚನೆ ಬಳಸಿ ಅದನ್ನು ಉಪಯೋಗಿಸಿಕೊಳ್ಳದೆ,
ಇಲ್ಲದ – ಕಾಣದ – ಎಂದೂ ಬಾರದ ಭ್ರಮೆಯೊಂದರ ಸುತ್ತ ಗಮನ ಕೇಂದ್ರೀಕರಿಸಿದರೆ…….

ಪೆಟ್ರೋಲ್, ಡೀಸೆಲ್, ಡಾಲರ್, ನಿರುದ್ಯೋಗ ಏರಿಕೆಯಾಗುತ್ತಲೇ ಇರುತ್ತದೆ,
ಅಪಘಾತಗಳು, ಆತ್ಮಹತ್ಯೆಗಳು, ಅಪರಾಧಿಗಳು, ಅತ್ಯಾಚಾರಗಳು ಸಂಭವಿಸುತ್ತಲೇ ಇರುತ್ತವೆ.
ಮಂತ್ರಗಳು, ಭಜನೆಗಳು, ಪ್ರಾರ್ಥನೆಗಳು, ನಡೆಯುತ್ತಲೇ ಇರುತ್ತದೆ,
ಹುಚ್ಚರ ಸಂತೆ ನೆನಪಾಗುತ್ತಲೇ ಇರುತ್ತದೆ, ನಾನೇನು ಮಾಡಲಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……