ಜೈನ ಮುನಿಗಳ ಹಂತಕರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಜೈನ ಸಮುದಾಯ ಮೌನ ಮೆರವಣಿಗೆ.
ವಿಜಯ ದರ್ಪಣ ನ್ಯೂಸ್, ನಾಗಮಂಗಲ, ಮಂಡ್ಯ ಜಿಲ್ಲೆ
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳ ಹತ್ಯೆ ಖಂಡಿಸಿ ಜೈನ ಸಮುದಾಯದವರು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಮೌನ ಮೆರವಣಿಗೆ ನಡೆಸಿದರು.
ಬೆಳ್ಳೂರು ಮತ್ತು ದಡಗ ಗ್ರಾಮದ ಜೈನ ಸಮುದಾಯದ ನೂರಾರು ಜನತೆ ಪ್ರಮುಖ ರಸ್ತೆಗಳಲ್ಲಿ ಮೌನ ಮೆರವಣಿಗೆ ನಡೆಸಿ ನಾಡಕಚೇರಿಗೆ ತೆರಳಿ ಉಪ ತಹಸಿಲ್ದಾರ್ ಸ್ವಾಮಿ ಗೌಡರಿಗೆ ಮನವಿ ಪತ್ರ ಸಲ್ಲಿಸಿದರು
ವಿಮಲನಾಥ ಟ್ರಸ್ಟ್ ಬೋರ್ಡ್ ಸಮಿತಿ ಅಧ್ಯಕ್ಷ ಬಿ ಪದ್ಮನಾಭ ಮಾತನಾಡಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದ ಆಚಾರ್ಯ ಮುನಿಶ್ರೀ ಕಾಮ ಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಜೈನ ಸಮಾಜಕ್ಕೆ ಆಘಾತ ಉಂಟು ಮಾಡಿದೆ ಎಂದು ದುಃಖ ಹಂಚಿಕೊಂಡರು.
ಮುನಿ ಮಹಾರಾಜರನ್ನು ಘೋರವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜದ ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ, ಶಾಂತಿ ಪ್ರಿಯರ ಹತ್ಯೆ ಮಾಡಿರುವ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು
ಕಂಬದಹಳ್ಳಿ ಜೈನ ಮಠದ ಭಾನು ಕೀರ್ತಿ ಭಟ್ಟಾಚಾರ್ಯ ಸ್ವಾಮಿಜಿ ಮಾತನಾಡಿ, ಅಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪ್ರಿಯರು ಆಗಿರುವ ಜೈನ ಮುನಿಗಳ ಮೇಲೆ ಇಂತಹ ಕೃತ್ಯಗಳು ಮರುಕಳಿಸದಂತೆ ರಕ್ಷಣೆ ನೀಡಬೇಕು.ಜೈನ ಬಸದಿಗಳು, ಮಠಗಳು, ಮುನಿಗಳು,ಸಾಧು ಸಂತರು, ಮಾತಾಜೀ ಯವರು ವಾಸ್ತವ್ಯವಿರುವ ಆಶ್ರಮ ಮತ್ತು ವಿಹಾರದ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕಕೆ ವಹಿಸಿ ಭದ್ರತೆ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೈನ ಸಮುದಾಯದ ಮಹಿಳೆಯರು ಸೇರಿ ನೂರಾರು ಜನತೆ ಶಾಂತಿಯುತವಾಗಿ ಮೌನ ಮೆರವಣಿಗೆಯಲ್ಲಿ ಸಾಗಿದರು.
ಗೌರವಾಧ್ಯಕ್ಷ ಡಾ.ರತ್ನರಾಜು ಕಾರ್ಯದರ್ಶಿ ಬಿ.ಎಸ್. ಸುನಿಲಕುಮಾರ,ಸದಸ್ಯರಾದ ಧರಣೇಂದ್ರ ಕುಮಾರ, ಧನ್ಯಕುಮಾರ, ಮಹಾವೀರ್, ಸುನಿಲ್ ಕುಮಾರ. ಸಂಜಯ. ರೋಹಿತ. ನರೇಶಕುಮಾರ್, ಅಜಿತ್ ಕುಮಾರ್, ಸಮರ್ಥ ನೇತೃತ್ವ ವಹಿಸಿದ್ದರು.