ಮಾಧ್ಯಮ ಶಿಶುಗಳು…..

ವಿಜಯ ದರ್ಪಣ ನ್ಯೂಸ್ 

ಬೆಂಗಳೂರು ಅಕ್ಟೋಬರ್ 20

ಮಾಧ್ಯಮ ಶಿಶುಗಳು…..

ಪ್ರೊಫೆಸರ್ ಕೆ ಎಸ್ ಭಗವಾನ್, ಸಂಸದ ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ, ಅಬ್ದುಲ್ ರಜಾಕ್, ಚೈತ್ರ ಕುಂದಾಪುರ…… ಹೀಗೆ ಕೆಲವು ಮಾಧ್ಯಮ ಶಿಶುಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ನೇರವಾಗಿ ಹೇಳಿದರೆ ತಪ್ಪಾಗುತ್ತದೆಯೇ ಅಥವಾ ವೈಯಕ್ತಿಕ ನಿಂದನೆಯಾಗುತ್ತದೆಯೇ ಅಥವಾ ಕುಚೋದ್ಯವಾಗುತ್ತದೆಯೇ….

ಕ್ಷಮಿಸಿ, ಈ‌ ಹೆಸರುಗಳು ಕೇವಲ ಸಾಂಕೇತಿಕ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಕಾರಣ ಈ ಕ್ಷಣದ ಉದಾಹರಣೆ ಮಾತ್ರ. ಈ ರೀತಿಯ ಬೇರೆ ಬೇರೆ ಸೈದ್ದಾಂತಿಕ ಹಿನ್ನಲೆಯ ಅನೇಕ ಮಾಧ್ಯಮ ಶಿಶುಗಳು ಸೃಷ್ಟಿಯಾಗಿ ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಪ್ರೌಢಾವಸ್ಥೆಯನ್ನು ತಲುಪಿವೆ. ಈ ಸಂತತಿ ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗುವ ಸಾಧ್ಯತೆ ಇದ್ದರೂ ಅದು ಶಾಪವಾಗಿ ಪರಿಣಮಿಸಿದೆ…..

ಬುದ್ದ ಮಹಾವೀರ ಪೈಗಂಬರ್ ಜೀಸಸ್ ಗುರುನಾನಕ್ ಬಸವಣ್ಣ ವಿವೇಕಾನಂದ ಗಾಂಧಿ ಅಂಬೇಡ್ಕರ್ ಕುವೆಂಪು ಹಾದಿಯಾಗಿ ಯಾವುದೇ ವ್ಯಕ್ತಿಯು ಅತಿಮಾನುಷರಲ್ಲ. ಮೂಳೆ ಮಾಂಸ ಮೆದುಳಿನ ಸಹಜ ಜೀವಿಗಳು. ಎಲ್ಲಾ ವಿಷಯಗಳಲ್ಲಿ ಅವರು ಪರಿಪೂರ್ಣರೇನಲ್ಲ. ಆಯಾ ಕಾಲಘಟ್ಟದಲ್ಲಿ ಒಂದಷ್ಟು ಮಾನವೀಯ ಚಿಂತನೆಗಳನ್ನು ಸಮಾಜದ ಜೊತೆ ಹಂಚಿಕೊಂಡಿದ್ದಾರೆ. ಕೆಲವು ಈಗಲೂ ಸಾರ್ವತ್ರಿಕ ಸತ್ಯವಾಗಿಯೇ ಉಳಿದಿದ್ದರೆ, ಮತ್ತೆ ಕೆಲವು ಪರಿವರ್ತನೆಗೆ ಒಳಗಾಗಿವೆ. ಒಂದಷ್ಟು ಶಿಥಿಲಾವಸ್ತೆ ತಲುಪಿ ಅಪಾಯಕಾರಿಯೂ ಆಗಿರಬಹುದು. ಹಾಗೆಯೇ ಇವರುಗಳು ವೈಯಕ್ತಿಕ ಬದುಕಿನಲ್ಲಿ ತಮ್ಮ ಇಷ್ಟದಂತೆ ಅಥವಾ ತಮಗೆ ಒದಗಿದ ಅವಕಾಶದಲ್ಲಿ ಜೀವಿಸಿದ್ದರು. ಅದು ಅವರ ಸ್ವಾತಂತ್ರ್ಯ. ಅದನ್ನು ನಾವು ನಮ್ಮ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ವಿಮರ್ಶೆ ಮಾಡಿಕೊಳ್ಳಬಹುದು.

ಆದರೆ ಈ ಮಾಧ್ಯಮ ಶಿಶುಗಳು ಆ ಮಿತಿಯನ್ನು ಮೀರಿ ಮಾಧ್ಯಮಗಳಿಗಾಗಿಯೇ ಕೆಲವು ತಮಗೆ ಅನುಕೂಲಕರ ವಿಷಯಗಳನ್ನು ತೆಗೆದುಕೊಂಡು ( Pick and Choose ) ಮಾಧ್ಯಮಗಳಿಗೆ ಆಹಾರ ಒದಗಿಸುತ್ತಾರೆ. ಅದು ಬಹುಬೇಗ ಸಮಾಜದ ತಟಸ್ಥ ಅಥವಾ ಅತಿರೇಕದ ಮನೋಭಾವದ ವ್ಯಕ್ತಿಗಳಿಗೆ ಪ್ರಚೋದನೆ ನೀಡಿ ಒಂದಷ್ಟು ಗೊಂದಲ ಸೃಷ್ಟಿ ಮಾಡುತ್ತದೆ. ಅದನ್ನು ರಾಜಕೀಯ ಮತ್ತು ಧಾರ್ಮಿಕ ಮೂಲಭೂತವಾದಿಗಳು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುತ್ತಾರೆ…..

ತಾಳ್ಮೆ, ಸಮಗ್ರ ಚಿಂತನೆ, ಆಳ ಅಧ್ಯಯನ, ದೂರದೃಷ್ಟಿ, ಸಮಷ್ಟಿ ಪ್ರಜ್ಞೆ, ವಿಶಾಲ ಮನೋಭಾವ, ಸಮಯ ಪ್ರಜ್ಞೆ ಇಲ್ಲದ ಮತ್ತು ಅದರ ಅವಶ್ಯಕತೆಯೂ ಇಲ್ಲದ ಸಾಮಾನ್ಯ ಜನರೇ ಇವರ ಟಾರ್ಗೆಟ್. ಅವರನ್ನು ಸುಲಭವಾಗಿ ಒಡೆಯುವ ಕೆಲಸ ಮಾಡುತ್ತಾರೆ.

ಹಾಗೆಂದು ಇವರುಗಳು ಹೇಳುವುದು ಸಂಪೂರ್ಣ ಸುಳ್ಳು ಎಂದಾಗಲಿ ಅಥವಾ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದಾಗಲಿ ಅರ್ಥವಲ್ಲ. ಅವರಿಗೆ ಎಲ್ಲದರ ಅರಿವು ಸ್ವಲ್ಪಮಟ್ಟಿಗೆ ಇರುತ್ತದೆ. ಆದರೆ ಮಾಧ್ಯಮ ಶಿಶುಗಳು ಬೇರೆಯದೇ ಕಾರಣಕ್ಕಾಗಿ ಇವುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ…

ಈ ರೀತಿಯ ವ್ಯಕ್ತಿಗಳು ಜನರನ್ನು ಒಳ್ಳೆಯ ಚಿಂತನೆಗಳಿಗೆ ಪ್ರೇರೇಪಿಸುವುದಾಗಲಿ ಅಥವಾ ಅವರಲ್ಲಿ ಪ್ರಗತಿಪರವಾಗಿ ಪರಿವರ್ತಿಸುವ ಕಡೆಗಾಗಲಿ ಕೆಲಸ ಮಾಡುವುದಿಲ್ಲ. ಅದಕ್ಕೆ ಬದಲಾಗಿ ತಮ್ಮ ಅಸಂಬದ್ಧ ಪಾಂಡಿತ್ಯವನ್ನು ಪ್ರದರ್ಶಿಸುವ ಮೂಲಕ ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಂಡು ಆ ಮೂಲಕ ಪ್ರಚಾರ ಪಡೆದು ಪ್ರಶಸ್ತಿ, ಅಧಿಕಾರ ಅಥವಾ ಜನಪ್ರಿಯತೆ ಪಡೆಯಲು ಉಪಯೋಗಿಸಿಕೊಳ್ಳುತ್ತಾರೆ. ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುವುದು ಇವತ್ತಿನ ಟ್ರೆಂಡ್. ಆದ್ದರಿಂದಲೇ ಇವರನ್ನು ಮಾಧ್ಯಮಗಳ ಶಿಶು ಎಂದು ಕರೆಯುವುದು……

ಒಂದನ್ನು ದಯವಿಟ್ಟು ಎಲ್ಲರೂ ಗಮನಿಸಿ. ಎಲ್ಲಾ ಮಹಾ ವ್ಯಕ್ತಿಗಳು ತಮ್ಮ ಸೈದ್ದಾಂತಿಕ ಭಿನ್ನ ಮತ್ತು ವಿರುದ್ಧ ಚಿಂತನೆಗಳ ಬಗ್ಗೆ ಮಾತನಾಡುವಾಗ ಅತ್ಯಂತ ಕಠಿಣ ಶಬ್ದಗಳನ್ನು ಉಪಯೋಗಿಸಿರುತ್ತಾರೆ ಮತ್ತು ಆಂತರ್ಯದ ತುಮಲಗಳನ್ನು ಬೆಂಕಿಯಂತೆ ಹೊರಹಾಕುತ್ತಾರೆ. ಅದಕ್ಕೆ ಹೋಲಿಸಿದಾಗ ಈಗಿನ ಮಾಧ್ಯಮಗಳ ಟೀಕೆ ಅಂತಹ ತೀಕ್ಷ್ಣವೇನು ಅಲ್ಲ. ಆದರೆ ಈಗ ಸಮಾಜದಲ್ಲಿ ಉಡಾಫೆ ವ್ಯಕ್ತಿತ್ವದ ಜನರೇ ಹೆಚ್ಚು ಮತ್ತು ಬದುಕಿನ ಒತ್ತಡದಿಂದ ಅಸಹಿಷ್ಣುತೆ ಹೆಚ್ಚಾಗಿದೆ. ಅದನ್ನು ವ್ಯಕ್ತಪಡಿಸುವ ವೇದಿಕೆಗಳು ಹೆಚ್ಚಾಗಿವೆ. ಅನೇಕರು ತಾವು ತಿಳಿದಿರುವುದು ಸರಿಯೋ ತಪ್ಪೋ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಾಗಿದೆ. ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳುವ ದೊಡ್ಡತನವೂ ಕಾಣೆಯಾಗಿದೆ…..

ಮಾಧ್ಯಮ ಶಿಶುಗಳು ಮತ್ತೊಂದು ವಿಶೇಷ ಗುಣವೆಂದರೆ ಇವರು ಸಾಕಷ್ಟು ಪುಸ್ತಕಗಳನ್ನು ಓದುತ್ತಾರೆ. ಸಾಮಾನ್ಯವಾಗಿ ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ ಅಕ್ಷರಸ್ಥರು ಶಾಲಾ ಪುಸ್ತಕ ಹೊರತುಪಡಿಸಿ ಇತರ ಪಠ್ಯೇತರ ಪುಸ್ತಕಗಳನ್ನು ಓದುವುದು ತುಂಬಾ ಕಡಿಮೆ. ಮಹಿಳೆಯರು ಇನ್ನೂ ಕಡಿಮೆ. ಈ ಅವಕಾಶವನ್ನು ಉಪಯೋಗಿಸಿಕೊಳ್ಳುವ ಇವರು ತಾವು ಓದಿರುವುದನ್ನು ಪುಂಖಾನುಪುಂಖವಾಗಿ ವರ್ಣಿಸುತ್ತಾರೆ…..

ಬಹುತೇಕ ಸಿನಿಮೀಯ ಶೈಲಿಯಲ್ಲಿ ಹಾವ ಭಾವ ಭಾಷೆಯ ಏರಿಳಿತ ಭಾವುಕತೆ ಎಲ್ಲವನ್ನೂ ಬೆರೆಸಿ ನಾಟಕದ ಪಾತ್ರದಂತೆ ಹೇಳುತ್ತಾರೆ. ಸಾಮಾನ್ಯ ಜನ ಈ ಕೃತಕತೆಯನ್ನು ಗುರುತಿಸಲು ವಿಫಲರಾಗುತ್ತಾರೆ ಮತ್ತು ಮಾಧ್ಯಮಗಳು ಇವರಿಗೆ ಮತ್ತಷ್ಟು ಪ್ರೋತ್ಸಾಹ ಕೊಡುತ್ತಾರೆ….

ಕುವೆಂಪು ಅವರು ಒಕ್ಕಲಿಗ ಸಮುದಾಯದ ಬಗ್ಗೆ ಹೇಳಿರುವ ಮಾತಾಗಲಿ, ಟಿಪ್ಪು ಸುಲ್ತಾನ್ ವಿಷಯವಾಗಲಿ, ಸಾರ್ವಕರ್ ಇತಿಹಾಸವಾಗಲಿ, ಭಾರತ ಪಾಕಿಸ್ತಾನದ ವಿಭಜನೆಯಾಗಲಿ ಯಾವುದೇ ವಿಷಯವನ್ನು ಯಾರೋ ಬರೆದ ಯಾವುದೋ ಪುಸ್ತಕದ ಯಾವುದೋ ಸನ್ನಿವೇಶವನ್ನು ಅದರ ಮೂಲ ಆಶಯಕ್ಕೆ ವಿರುದ್ಧವಾಗಿ ವರ್ಣಿಸಿ ದಾಖಲೆಯ ಸಮೇತ ಎಂದು ನಂಬಿಸುತ್ತಾರೆ…..

ಆದ್ದರಿಂದ ನಾವುಗಳು ಮಾಧ್ಯಮ ಶಿಶುಗಳಿಗೆ ತುಂಬಾ ಪ್ರಾಮುಖ್ಯತೆ ಕೊಡುವುದು ಬೇಡ. ನಮ್ಮ ನಮ್ಮ ವಿವೇಚನೆ ಬೆಳೆಸಿಕೊಂಡು ಅವಶ್ಯಕ ಮತ್ತು ಅನಾವಶ್ಯಕ ವಿಷಯಗಳನ್ನು ಬೇರ್ಪಡಿಸಿಕೊಂಡು ( ಹಸಿ ಕಸ – ಒಣ ಕಸದ ರೀತಿಯಲ್ಲಿ ಅಥವಾ ಕಳೆ ಮತ್ತು ಬೆಳೆಯ ರೀತಿಯಲ್ಲಿ ) ಅವಶ್ಯಕತೆ ಇರು ವಿಷಯಗಳನ್ನು ಹೆಚ್ಚು ಚರ್ಚಿಸೋಣ. ಚರ್ಚೆಗೆ ಯಾವ ವಸ್ತು ಮತ್ತು ಬದುಕಿಗೆ ಯಾವ ವಿಷಯ ಮುಖ್ಯ ಎಂಬುದು ನಮ್ಮ ಆದ್ಯತೆಯಾದರೆ ಜೀವನಮಟ್ಟ ಬಹಳಮಟ್ಟಿಗೆ ಸುಧಾರಿಸುತ್ತದೆ.

ನಾವೆಲ್ಲರೂ ನಮ್ಮ ದೀರ್ಘ ಬದುಕಿನಲ್ಲಿ ಸಾಕಷ್ಟು ಮಾತನಾಡುತ್ತೇವೆ. ಸಮಯ ಸಂದರ್ಭಕ್ಕೆ ತಕ್ಕಂತೆ ಏನೇನೋ ಹೇಳಿರುತ್ತೇವೆ. ಅದರಲ್ಲಿ ವಿರುದ್ಧ ಅಭಿಪ್ರಾಯಗಳು ಇರುತ್ತವೆ. ಆದರೆ ಅದು‌ ದಾಖಲಾಗಿರುವುದಿಲ್ಲ. ಆದರೆ ವಿವೇಕಾನಂದ ಗಾಂಧಿ ಅಂಬೇಡ್ಕರ್ ಕುವೆಂಪು ಮುಂತಾದವರ ಲಕ್ಷಾಂತರ ಭಾಷಣ ಮತ್ತು ಲೇಖನ ದಾಖಲಾಗಿರುತ್ತದೆ. ಸಂದರ್ಶನಗಳು ಪ್ರಸಾರವಾಗಿರುತ್ತವೆ. ಅದರಲ್ಲಿ ಒಂದೋ ಎರಡೋ ಸಾಲುಗಳನ್ನು ಉಲ್ಲೇಖಿಸಿ ಅದನ್ನು ಅನಾವಶ್ಯಕವಾಗಿ ಎತ್ತಿ ತೋರಿಸುವುದು ಉತ್ತಮ ನಡೆಯಲ್ಲ. ಒಬ್ಬ ವ್ಯಕ್ತಿಯ ಒಟ್ಟು ವ್ಯಕ್ತಿತ್ವ ಮುಖ್ಯವಾಗಬೇಕೇ ಹೊರತು ಬಿಡಿಬಿಡಿಯಾದ ಹೇಳಿಕೆಗಳಲ್ಲ…..

ಇಡೀ ಸಮಾಜ ಎಲ್ಲಾ ವಿಷಯಗಳಲ್ಲಿ ಪ್ರಬುದ್ದತೆಯತ್ತ ಸಾಗಲಿ, ಈ ಮಾಧ್ಯಮ ಶಿಶುಗಳಿಗೆ ಪರ್ಯಾಯವಾಗಿ ಜ಼್ಞಾನದ ಶಿಶುಗಳು ಸೃಷ್ಟಿಯಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್ ಕೆ,
9844013068………