ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಕರೆ

ವಿಜಯ ದರ್ಪಣ ನ್ಯೂಸ್

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2024 ಪ್ರಕಟ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 31:-ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಮತದಾರರ ಕರಡು ಪಟ್ಟಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಮತಗಟ್ಟೆಗಳಲ್ಲಿ, ಮತದಾರ

ನೋಂದಣಾಧಿಕಾರಿ ಕಚೇರಿಯಲ್ಲಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ, ಈ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಈ ಸಂಬಂಧ ಸಾರ್ವಜನಿಕರು ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು(ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರುಗಳ ಸೇರ್ಪಡೆ, ತಿದ್ದುಪಡಿ, ಬಿಡತಕ್ಕದ್ದು, ವರ್ಗಾವಣೆ) ಸಲ್ಲಿಸಲು ನವೆಂಬರ್ 30 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಹೇಳಿದರು.

 

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನೆನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ 2024ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್-2024ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಮತದಾರರಿಗೆ ನೇರವಾಗಿ ಅಂಚೆ ಮೂಲಕ ಕಳುಹಿಸಲಾಗುವುದು.

ಚುನಾವಣಾ ಆಯೋಗದಿಂದ ಇತ್ತೀಚಿನ ನಿರ್ದೇಶನದಂತೆ ಮತದಾರರ ನೋಂದಣಿಗಾಗಿ ಸರಳೀಕರಿಸಿದ ನಮೂನೆ-6 ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಒಂದೇ ತರಹದ ಹೆಸರು / ಭಾವಚಿತ್ರ ನಮೂದುಗಳನ್ನು ಹೊಂದಿರುವ ಮತದಾರರ ಪರಿಶೀಲನೆಗೆ ಮತ್ತು ಕೈಬಿಡಲು ಪರಿಷ್ಕೃತ ನಮೂನೆ-7ನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ನಮೂನೆ-8ರ ಅರ್ಜಿಯಲ್ಲಿ ಸಲ್ಲಿಸಬಹುದಾಗಿದೆ.

ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು, ಬೂತ್ ಲೆವೆಲ್ ಏಜೆಂಟ್ (BLA) ಗಳನ್ನು ನೇಮಿಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಬೂತ್ ಲೆವೆಲ್ ಏಜೆಂಟ್‌ಗಳು ಸಂಬಂಧಪಟ್ಟ ಮತಗಟ್ಟೆ ಹಂತದ ಅಧಿಕಾರಿ (BLO)ಗೆ ಪ್ರತಿ ದಿನ 10 ನಮೂನೆಗಳನ್ನು ನಿರಂತರ ಪರಿಷ್ಕರಣೆಯಲ್ಲಿ ಸಲ್ಲಿಸಲು ಅವಕಾಶವಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನಿಗಧಿಪಡಿಸಿರುವ ಅವಧಿಯಲ್ಲಿ ಒಬ್ಬ ಬೂತ್‌ ಲೆವೆಲ್ ಏಜೆಂಟ್, 30 ಕ್ಕಿಂತ ಹೆಚ್ಚು ನಮೂನೆಗಳನ್ನು ಸಲ್ಲಿಸಿದಲ್ಲಿ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿ ಸ್ವತಃ ಅಡ್ಡ ಪರಿಶೀಲನೆ ಮಾಡುವುದಾಗಿರುತ್ತದೆ. ಬೂತ್ ಲೆವೆಲ್ ಏಜೆಂಟ್ ರವರು ನಮೂನೆಗಳ ಅರ್ಜಿ ಸಹಿತ ತಾನು ನೀಡಿರುವ ಅರ್ಜಿಗಳನ್ನು ಸ್ವತಃಪರಿಶೀಲನೆ ಮಾಡಿರುವುದಾಗಿ ದೃಢೀಕರಣ ಸಲ್ಲಿಸಬೇಕು‌.

ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷವು ನಿರಂತರವಾಗಿ ನಡೆಯಲಿದೆ. ಇದರಂತೆ 2024ರ ಮತದಾರರ ಪಟ್ಟಿ ಪರಿಷ್ಕರಣೆಗೆ ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ. ಮತದಾರರ ಕರಡು ಪಟ್ಟಿಯ ಕುರಿತಂತೆ ಆಕ್ಷೇಪಣೆಗಳು ಇದ್ದರೆ ನಿಗದಿತ ನಮೂನೆಯಲ್ಲಿ ನವೆಂಬರ್ 30 ರ ಒಳಗೆ ಮತಗಟ್ಟೆ ಅಕಾರಿಗಳಿಗೆ ಸಲ್ಲಿಸಬೇಕು. ಮತದಾರರು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ಬಂದಿರುವ ಆಕ್ಷೇಪಣೆಗಳನ್ನು ಡಿಸೆಂಬರ್ 26ರ ಒಳಗೆ ಇತ್ಯರ್ಥಗೊಳಿಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು 2024ರ ಜನವರಿ 5 ರಂದು ಪ್ರಕಟಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 8.81 ಲಕ್ಷ ಮತದಾರರು

ಜಿಲ್ಲೆಯಲ್ಲಿ ಈಗ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,81,961 ಮತದಾರರು ಇದ್ದಾರೆ. ಇದರಲ್ಲಿ 4,37,579 ಪುರುಷರು, 4,44,237 ಮಹಿಳೆಯರು ಹಾಗೂ 145 ಜನ ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟ ಮತದಾರರು 20,144. ಅಗವಿಕಲ ಮತದಾರರು 12,624 ಹಾಗೂ ಸೇವಾ ಮತದಾರರು 128 ಇದ್ದಾರೆ ಎಂದರು.

ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ ಒಟ್ಟು 2,15,282 ಮತದಾರರಿದ್ದು, ಅದರಲ್ಲಿ 1,08,248 ಮಹಿಳಾ ಮತದಾರರು ಹಾಗೂ 1,07,033 ಪುರುಷ ಮತದಾರರಿದ್ದಾರೆ.

ಹೊಸಕೋಟೆಯಲ್ಲಿ ಒಟ್ಟು 2,34,936 ಮತದಾರರಿದ್ದು, ಅದರಲ್ಲಿ 1,18,224 ಮಹಿಳೆ ಹಾಗೂ 1,16, 681 ಪುರುಷ ಮತದಾರರು ಇದ್ದಾರೆ. ದೇವನಹಳ್ಳಿಯಲ್ಲಿ ಒಟ್ಟು 2,13,381 ಮತದಾರರಿದ್ದು, 1,07,345 ಮಹಿಳಾ ಹಾಗೂ 1,06,018 ಪುರುಷ ಮತದಾರರಿದ್ದಾರೆ. ನೆಲಮಂಗಲದಲ್ಲಿ 2,18,372 ಮತದಾರರ ಪೈಕಿ 1,10,420 ಮಹಿಳೆ ಹಾಗೂ 1,07,847 ಪುರುಷ ಮತದಾರರಿದ್ದಾರೆ.

ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ 1 ಸಾವಿರ ಪುರುಷರಿಗೆ 1016 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1011, ಹೊಸಕೋಟೆಯಲ್ಲಿ 1013, ದೇವನಹಳ್ಳಿ 1013 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1025 ಲಿಂಗಾನುಪಾತ ಕಂಡುಬಂದಿದೆ.
ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಟ್ಟಾಗಿ 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದೆ.
12,624 ವಿಶೇಷಚೇತನ ಮತದಾರರು,
ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ 3350, ಹೊಸಕೋಟೆ 3482, ದೇವನಹಳ್ಳಿ 3484 ಹಾಗೂ ನೆಲಮಂಗಲದಲ್ಲಿ 2308 ಸೇರಿದಂತೆ ಒಟ್ಟು 12,624 ಮಂದಿ ವಿಶೇಷಚೇತನ ಮತದಾರರಿದ್ದಾರೆ. ಜತೆಗೆ 20,144 ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. ಇನ್ನು ಸೇವಾ ಮತದಾರರು 128 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು.

ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರವರ ಸಾರ್ವಜನಿಕ ಪ್ರಕಟಣೆಯಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ-2023ರ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಸೆಪ್ಟೆಂಬರ್ 30 ರಂದು ಹೊರಡಿಸಲಾಗಿದೆ. ಅಕ್ಟೋಬರ್ 01 ರಿಂದ ನವೆಂಬರ್ 06 ರ ವರೆಗೆ ನಮೂನೆ-19 ಹಾಗೂ ನಮೂನೆ-18 ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗು ಜಿಲ್ಲಾ ಚುನಾವಣಾಧಿಕಾರಿ ಡಾ.ಶಿವಶಂಕರ ಎನ್ ಅವರು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್ ಉಪಸ್ಥಿತರಿದ್ದರು.