ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆಯೋಣ:ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್

ಕಾಯಕಯೋಗಿ ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆಯೋಣ:ಸಚಿವ ಕೆ.ಹೆಚ್ ಮುನಿಯಪ್ಪ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 17 : ಜಗದ್ಗುರು ಮಹಾ ಮಾನವತಾವಾದಿ ಬಸವಣ್ಣನವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹೇಳಿದರು.

ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ “ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವಣ್ಣ” ನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಮಹಾನ್ ಚೇತನ ಬಸವಣ್ಣನವರು, ಸಾಮಾಜಿಕ ಬದ್ಧತೆ, ಎಲ್ಲರನ್ನು ಸಮಾನತೆಯಿಂದ ಕಾಣುವುದು ಅವರ ಆಶಯವಾಗಿತ್ತು. 12 ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಸಂಸದೀಯ ವ್ಯವಸ್ಥೆ ಇತ್ತು. ಬಸವಣ್ಣನವರ ಆಚಾರ ವಿಚಾರಗಳು ವಿಶ್ವದಲ್ಲಿ ಹೆಸರು ಪಡೆದಿದೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಬಸವಣ್ಣನವರ ಒಬ್ಬರು ಎಂದರು.

ದೇಶದಲ್ಲಿ ಜನರ ಮಧ್ಯೆ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಶಾಂತಿ ವ್ಯವಸ್ಥೆ ವೃಧ್ಧಿಸುವುದು ಬಸವಣ್ಣನವರ ವಚನಗಳಲ್ಲಿ ಕಾಣಬಹುದು. ಬಸವಣ್ಣನವರ ಹಲವು ಚಿಂತನೆಗಳು ಈಗ ಕಾನೂನುಗಳಾಗಿವೆ. ಕಾಯಕವೇ ಕೈಲಾಸ, ದಾಸೋಹ ಅವರ ಪ್ರತಿಪಾದನೆ ಯಾಗಿತ್ತು. ಬಸವಣ್ಣನವರ ಮಾರ್ಗದಲ್ಲಿ ನಡೆಯೋಣ, ಸಾಮಾಜಿಕ ಸಮಾನತೆಯಿಂದ ಬಾಳೋಣ ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ.ಎನ್ ಅನುರಾಧ ಅವರು ಮಾತನಾಡಿ ವಚನ ಶ್ರೇಷ್ಠ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಮೋದನೆ ಆಗಿರುವ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಎಂದು ನಮೂದು ಆಗಿರುವ ಬಸವಣ್ಣನವರ ಭಾವಚಿತ್ರವನ್ನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು.

ಕರ್ನಾಟಕದ ಮೊದಲ ಮಹಾನ್ ಮಾನವತಾವಾದಿ, ಸಮಾಜವಾದಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.