KUJW NEWS
ಗಡಿಯಷ್ಟೆ ಅಲ್ಲ, ಗಡಿಯಾಚೆಗೂ ಇರುವ ಕನ್ನಡಿಗರ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಹೇಳಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕನ್ನಡ ಸಂಘ ಕೊಚ್ಚಿನ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೇರಳದ ಎರ್ನಾಕುಲಂ ಟೌನ್ ಹಾಲ್ ನಲ್ಲಿ ಏರ್ಪಡಿಸಿದ್ದ “ಕೊಚ್ಚಿನ್ ಕನ್ನಡ ಸಂಸ್ಕ್ರತಿ ಉತ್ಸವ 2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರ ಗಡಿನಾಡಲ್ಲಿ ಕನ್ನಡದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಬಂದಿದೆ. ತಮ್ಮ ಅವಧಿಯಲ್ಲಿ 500 ಕನ್ನಡ ಸಂಘಟನೆಗಳಿಗೆ ತಲಾ ಒಂದು ಲಕ್ಷ ರೂ. ಅನುದಾನ ನೀಡಿರುವುದಾಗಿ ಅವರು ತಿಳಿಸಿದರು.
ಗಡಿಭಾಗದಲ್ಲಿ ಮತ್ತು ಹೊರ ನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಕನ್ನಡ ಅಸ್ಮಿತೆಯನ್ನು ಕಾಪಾಡುವ ಕೆಲಸ ಮಾಡುತ್ತಲೇ ಬಂದಿದೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತನ್ನ ಕೊನೆ ಉಸಿರು ಇರುವವರೆಗೂ ಶತಾಯುಷಿ ಸಾಹಿತಿ ಕಯ್ಯಾರ ಕಿಯ್ಯಾಣ್ಣ ರೈ ಹೋರಾಡಿದರು ಎಂದು ನೆನೆದರು.
ಬೆಂಕಿ ಬಿದ್ದಿದೆ ಮನೆಗೆ ಓ ಬನ್ನಿ ಸೋದರರೇ…ಬೇಗ ಬನ್ನಿ, ನುಡಿ ಕಾಯಿ ಕಾಯೇ…ಗುಡಿ ಕಾಯೇ ಎಂದು ಅವರ ಕವನದ ವಾಚಿಸಿ, ಕನ್ನಡ ಜಾಗೃತಿ ಮೂಡಿಸುವ ಆ ಮಹಾನುಭಾವರ ಹೆಸರಲ್ಲಿ ಗಡಿನಾಡ ಚೇತನ ಎಂದು ಮೂರು ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಡಾ. ಸೋಮಶೇಖರ್ ಮಾಹಿತಿ ನೀಡಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೊಚ್ಚಿಯಲ್ಲಿ ಕನ್ನಡದ ಕಂಪನ್ನು ಹಬ್ಬಿಸುವ ಕೆಲಸವನ್ನು ಮಾಡಿದ್ದೀರಿ. ಕನ್ನಡ ಭವನ ನಿರ್ಮಾಣ ಮೂಲಕ ಕನ್ನಡಿಗರ ಇರುವಿಕೆ ಗುರುತಿಸಲು ಮಾದರಿಯ ಹೆಜ್ಜೆ ಇಟ್ಟಿದ್ದೀರಿ ಎಂದು ಪ್ರಶಂಸಿಸಿದರು .
ಕನ್ನಡದ ಕಂಪನ್ನು ಈ ಭಾಗದಲ್ಲಿ ಹಬ್ಬಿಸುವ ಕೆಲಸವನ್ನು ಕನ್ನಡಾಭಿಮಾನಿಗಳಾದ ತಾವೆಲ್ಲ ಮಾಡಿದ್ದೀರಿ ಅದಕ್ಕಾಗಿ ಪತ್ರಕರ್ತರ ಸಂಘದಿಂದ ತಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಇಲ್ಲಿ ಕನ್ನಡ ಸಂಘಕ್ಕಾಗಿ ದುಡಿದವರು ಇತರೆಡೆ ನೆಲೆಸಿದರೂ ಕನ್ನಡ ಕಾರ್ಯಕ್ರಮವಾದಾಗ ಇಲ್ಲಿ ಬಂದು ಪಾಲ್ಗೊಳ್ಳುವ ನಿಮ್ಮ ಕನ್ನಡಾಭಿಮಾನ ಶ್ಲಾಘನೀಯವಾದುದು ಎಂದರು.