ವಿಜಯ ದರ್ಪಣ ನ್ಯೂಸ್……
ಗೃಹ ಅನಿಲ ಸೀಮಿತ ಬಳಕೆಗೆ ಡಿಸಿ ಸಲಹೆ
ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕೆ ಎನ್ ಅನುರಾಧ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾ.13:
ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಮುಂದಿಟ್ಟುಕೊಂಡು ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿದರೆ ಅಂತಹ ಗ್ಯಾಸ್ ಏಜೆನ್ಸಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಕಾಯ್ದೆಯಡಿ ನಿಗದಿತ ಬೆಲೆಗೆ ಮಾರಾಟ ಮಾಡಬೇಕು, ಸಿಲಿಂಡರ್ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಏಜೆನ್ಸಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಐ.ಓ.ಸಿ.ಎಲ್, ಎಚ್.ಪಿ.ಸಿ.ಎಲ್ ಮತ್ತು ಬಿಪಿಸಿಎಲ್ ಕಂಪನಿಗಳ ಅಡಿಯಲ್ಲಿ 24 ಗ್ಯಾಸ್ ಏಜೆನ್ಸಿ ಕಾರ್ಯ ನಿರ್ವಹಿಸುತ್ತಿದೆ. ಗೃಹ ಉಪಯೋಗಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಗೃಹ ಉಪಯೋಗಿ ಅನಿಲ ಸಿಲಿಂಡರ್ ಬುಕ್ ಮಾಡಲು 25 ದಿನ ಆಗಿರಬೇಕು. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.
ಗೃಹ ಬಳಕೆಯ ಸಿಲಿಂಡರ್ಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಾದ ಶಾಲೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳಲ್ಲಿ ಅಡುಗೆ ಅನಿಲದ ಕೊರತೆಯಾಗದಂತೆ ವಿತರಕರು ಸರಬರಾಜು ಮಾಡಲು ಕ್ರಮ ವಹಿಸಿ.
ಪ್ರಸ್ತುತ ಪದವಿ ಪೂರ್ವ ಪರೀಕ್ಷೆಗಳು ನಡೆಯುತ್ತಿದ್ದು, ನಂತರ ಎಸ್.ಎಸ್.ಎಲ್.ಸಿ ಮತ್ತು ಪದವಿ ಪರೀಕ್ಷೆಗಳು ನಡೆಯುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟದಲ್ಲಿ ತೊಂದರೆಯಾಗದಂತೆ ನಿರಂತರ ಅನಿಲ ಪೂರೈಕೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗೆ ಆಸ್ಪದ ಬೇಡ
ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯ ಗ್ರಾಮಗಳು ಹಾಗೂ ನಗರಗಳಲ್ಲಿ ಯಾವುದೇ ಕುಡಿಯುವ ನೀರಿನ ಅಭಾವ ಎದುರಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು. ನೀರಿನ ಸಮಸ್ಯೆ ಉಂಟಾಗುವ ಪ್ರದೇಶಗಳಲ್ಲಿ ಬತ್ತಿದ ಬೋರ್ವೆಲ್ ಗಳ ಮರು ಭರ್ತಿ ಮಾಡಿ ಹಾಗೂ ಅಗತ್ಯವಿದ್ದಲ್ಲಿ ಹೊಸ ಬೋರ್ವೆಲ್ ಕೊರೆಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಉಪವಿಭಾಗಾಧಿಕಾರಿ ದುರ್ಗಾ ಶ್ರೀ, ಜಿ.ಪಂ ಯೋಜನಾಧಿಕಾರಿ ರಾಮಕೃಷ್ಣ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗ್ಯಾಸ್ ಏಜೆನ್ಸಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವಚನ ಕಲ್ಯಾಣ 9 ಗಂಟೆಗಳ ನಾಟಕ ಅಹೋರಾತ್ರಿ ರಂಗ ಪ್ರಯೋಗಕ್ಕೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ
ಬೆಂಗಳೂರು ಮಾ.13:
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವತಿಯಿಂದ ‘ ವಚನ ಕಲ್ಯಾಣ ‘ಎಂಬ ಅಹೋರಾತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿದೆ. ಆ ಸಂಬಂಧ ನುರಿತ ಹಾಗೂ ಆಸಕ್ತ ಯುವಕ ಯುವತಿಯರು ಹಾಗೂ ಅನುಭವಿ ರಂಗಕಲಾವಿದರು/ಗಾಯಕರುಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ (ಅರ್ಜಿ ಲಗತ್ತಿಸಿದೆ), ವಯೋಮಿತಿ 18 ರಿಂದ 40 ವರ್ಷಗಳು ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಅದ್ಯತೆಯನ್ನು ನೀಡಲಾಗುವುದು. ತುಂಬಿದ ಅರ್ಜಿಗಳನ್ನು ದಿನಾಂಕ 20ಮಾರ್ಚ್2026ರ ಒಳಗೆ ಸದಸ್ಯ ಕಾರ್ಯದರ್ಶಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ತಲುಪುವಂತೆ ಅಥವಾ ಮೇಲ್ ವಿಳಾಸ: kanakaresearchcentre@gmail.com ದ ಮೂಲಕ ಸಲ್ಲಿಸಲು ಕೋರಿದೆ.
ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ-ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವಧನ ಮತ್ತು ಊಟ -ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಅರ್ಜಿಯ ನಮೂನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ ಸೈಟ್ kannadasiri.karnataka.gov.inನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿ ವಿವರಗಳಿಗಾಗಿ ಶ್ರೀ ಸಿ. ಬಸವಲಿಂಗಯ್ಯ(ವಚನ ಕಲ್ಯಾಣ ನಾಟಕದ ನಿರ್ದೇಶಕರು) ಇವರಲ್ಲಿ ಮಾಹಿತಿ ಪಡೆಯಬಹುದು ಮೊಬೈಲ್ ಸಂಪರ್ಕ ಸಂಖ್ಯೆ- 94485 38620. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು’ ಯಾವುದೇ ಭತ್ಯೆ ನೀಡಲಾಗುವುದಿಲ್ಲ.








