ವೇತನ ಪಾವತಿಗೆ ಆಗ್ರಹಿಸಿ ನರೇಗಾ ನೌಕರರಿಂದ ಜಿಲ್ಲಾ ಪಂಚಾಯಿತಿ ಎದುರು  ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್….

ವೇತನ ಪಾವತಿಗೆ ಆಗ್ರಹಿಸಿ ನರೇಗಾ ನೌಕರರಿಂದ ಜಿಲ್ಲಾ ಪಂಚಾಯಿತಿ ಎದುರು  ಪ್ರತಿಭಟನೆ

ತಾಂಡವಪುರ ಮೈಸೂರು  ಜೂನ್ : ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಏಳು ತಿಂಗಳ ವೇತನ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಎದುರು  ಶಾಂತಿಯುತ ಪ್ರತಿಭಟನೆ ನಡೆಸಿದರು.

ಉದ್ಯೋಗ ಖಾತ್ರಿಯ ಅನುಷ್ಠಾನಕ್ಕಾಗಿ ದುಡಿಯುತ್ತಿರುವ ನೌಕರರಿಗೆ ಕಳೆದ 2024ರ ನವೆಂಬರ್ ತಿಂಗಳಿಂದ ವೇತನ ಬಿಡುಗಡೆಯಾಗಿರುವುದಿಲ್ಲ. ಈ ಕಾರಣದಿಂದ ಜೀವನ ಹಾಗೂ ಕುಟುಂಬ ನಿರ್ವಹಣೆ ಅತ್ಯಂತ ಕಷ್ಟಕರವಾಗಿದ್ದು, ಕೂಡಲೇ ವೇತನ ಪಾವತಿಸುವಂತೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಜಿಲ್ಲಾ ಸಂಘದಿಂದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ನೀಡಿದರು.

ವೇತನ ಸ್ಥಗಿತಗೊಂಡಿರುವುದರಿಂದ ನೌಕರರು ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ವೇತನವಿಲ್ಲದೆ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಮಕ್ಕಳ ಶಾಲಾ ಪ್ರಾವೇಶಾತಿ ಶುಲ್ಕ, ವಯಸ್ಸಾದ ತಂದೆ-ತಾಯಿಗಳ ಆರೋಗ್ಯ ಸಮಸ್ಯೆಗೆ ಆಸ್ಪತ್ರೆ ವೆಚ್ಚ, ದಿನನಿತ್ಯ ಖರ್ಚುಗಳನ್ನು‌ ನಿಭಾಯಿಸುವುದು ಸವಾಲಾಗಿದೆ ಎಂದು ಸಿಇಒ ಮುಂದೆ ಅವಲತ್ತುಕೊಂಡರು.

ಇದೇ ವೇಳೆ  ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ಅವರಿಗೆ ಜಿಲ್ಲಾ ಮ  ನರೇಗಾ ನೌಕರರ ಸಂಘದಿಂದ ವೇತನ ಪಾವತಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮ-ನರೇಗಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಲೋಕೇಶ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಎಡಿಪಿಸಿ, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ಲೆಕ್ಕ ಸಹಾಯಕರು, ಬಿ.ಎಫ್.ಟಿ, ಗ್ರಾಮ ಕಾಯಕ ಮಿತ್ರರು, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಎಲ್ಲಾ ನರೇಗಾ ನೌಕರರು ಹಾಜರಿದ್ದರು.