--Ads--

ವಚನ ಸಾಹಿತ್ಯವು ಮೌಲ್ಯದ ಕಣಜ, ವಚನಕಾರ್ತಿಯರ ಕೊಡುಗೆ ಅನನ್ಯವಾದುದು

On: June 29, 2026 8:14 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಚನ ಸಾಹಿತ್ಯವು ಮೌಲ್ಯದ ಕಣಜ, ವಚನಕಾರ್ತಿಯರ ಕೊಡುಗೆ ಅನನ್ಯವಾದುದು

ವಿಜಯಪುರ: “೧೨ನೇ ಶತಮಾನದ ವಚನ ಸಾಹಿತ್ಯ ಚಳವಳಿಯು ಕೇವಲ ಧಾರ್ಮಿಕ ಕ್ರಾಂತಿಯಲ್ಲ, ಅದು ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಜಗತ್ತಿನ ಮೊದಲ ಸಾಮಾಜಿಕ ಮತ್ತು ನೈತಿಕ ಆಂದೋಲನವಾಗಿದೆ,” ಎಂದು ಶಿಕ್ಷಕಿ ಎಂ.ಗಿರಿಜಾಂಬ ರುದ್ರೇಶಮೂರ್ತಿ ತಿಳಿಸಿದರು.

ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯ ಪ್ರಾರ್ಥನಾಮಂದಿರದಲ್ಲಿ ಶ್ರೀ ವೀರಭದ್ರಸ್ವಾಮಿಗೋಷ್ಟಿ ಅಕ್ಕನಬಳಗ ಸೇವಾಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ʼಉಪೇಕ್ಷಿತ ವಚನಕಾರ್ತಿಯರು ಮತ್ತು ಕೊಡುಗೆಗಳುʼ ಕುರಿತು ಅವರು ಉಪನ್ಯಾಸ ನೀಡಿದರು.

ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯಗಳ ವಿರುದ್ಧ ಶರಣರು ನಡೆಸಿದ ವಚನಕ್ರಾಂತಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ನೀಡಿತು. ಕಾಯಕ ಮತ್ತು ದಾಸೋಹ ಸಿದ್ಧಾಂತಗಳು ಸಮಾಜದಲ್ಲಿ ಶ್ರಮದ ಗೌರವವನ್ನು ಎತ್ತಿಹಿಡಿದವು. ವಚನಗಳಲ್ಲಿ ಅಡಕವಾಗಿರುವ ಸತ್ಯ, ಪ್ರಾಮಾಣಿಕತೆ, ಕರುಣೆ ಮತ್ತು ಸದಾಚಾರದಂತಹ ನೈತಿಕ ಮೌಲ್ಯಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತ ಹಾಗೂ ದಾರಿದೀಪವಾಗಿವೆ ಎಂದರು.

ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ: ಇತಿಹಾಸದ ಪುಟಗಳಲ್ಲಿ ಮತ್ತು ಮುಖ್ಯವಾಹಿನಿಯ ಚರ್ಚೆಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬಾರದೆ ಉಪೇಕ್ಷೆಗೆ ಒಳಗಾಗಿರುವ ಶಿವಶರಣೆಯರು, ವಚನಕಾರ್ತಿಯರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅಕ್ಕಮಹಾದೇವಿ, ನೀಲಾಂಬಿಕೆಯವರಷ್ಟೇ ಅಲ್ಲದೆ ಆಯ್ದಕ್ಕಿ ಲಕ್ಕಮ್ಮ, ಗೊಗ್ಗವ್ವೆ, ಸೂಳೆ ಸಂಕವ್ವೆ, ಕನ್ನದ ಮಾರಿತಂದೆಯ ಪತ್ನಿ ಕಾಳವ್ವೆ ಸೇರಿದಂತೆ ಅನೇಕ ಶರಣೆಯರು ತಮ್ಮ ವಚನಗಳ ಮೂಲಕ ಸಾಮಾಜಿಕ ಅನಿಷ್ಟಗಳು, ಮೂಢನಂಬಿಕೆಗಳನ್ನು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಉಪೇಕ್ಷಿತ ವಚನಕಾರ್ತಿಯರು ಕೇವಲ ಪುರುಷ ಪ್ರಧಾನ ವ್ಯವಸ್ಥೆಯನ್ನು ಮಾತ್ರವಲ್ಲದೆ, ಅಂದಿನ ಧಾರ್ಮಿಕ ಕಟ್ಟುಪಾಡುಗಳನ್ನು ಧೈರ್ಯವಾಗಿ ಎದುರಿಸಿದ್ದರು. ಶರಣೆಯರ ವಚನಗಳಲ್ಲಿ ಸ್ತ್ರೀವಾದಿ ಚಿಂತನೆಗಳು, ಆತ್ಮಾಭಿಮಾನ ಮತ್ತು ಸಾಮಾಜಿಕ ಸುಧಾರಣೆಯ ತೀವ್ರ ಹಂಬಲ ಎದ್ದು ಕಾಣುತ್ತಿತ್ತು. ತಮ್ಮ ದೈನಂದಿನ ಕಾಯಕದ ಹಿನ್ನೆಲೆಯಲ್ಲೇ ಆರ್ಥಿಕ ಸ್ವಾವಲಂಬನೆ, ಆಧ್ಯಾತ್ಮಿಕ ಉನ್ನತಿಯನ್ನು ಕಂಡುಕೊಂಡ ಈ ಮಹಿಳೆಯರ ವೈಚಾರಿಕ ಪ್ರಜ್ಞೆ ಇಂದಿನ ಸ್ತ್ರೀ ಕುಲಕ್ಕೆ ಪ್ರೇರಣಾದಾಯಕವಾಗಿದೆ ಎಂದು ಅವರು ಉದಾಹರಣೆಗಳೊಂದಿಗೆ ವಿವರಿಸಿದರು.

ಶ್ರೀ ವೀರಭದ್ರಸ್ವಾಮಿಗೋಷ್ಟಿ ಅಕ್ಕನಬಳಗ ಸೇವಾಟ್ರಸ್ಟ್‌ನ ಅಧ್ಯಕ್ಷ ವಿ.ಅನಿಲ್‌ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಸಾಹಿತ್ಯದ ಆಳವಾದ ಅಧ್ಯಯನ ಇಂದಿನ ಯುವ ಪೀಳಿಗೆಗೆ ಅತ್ಯಗತ್ಯವಾಗಿದೆ. ಸಂಸಾರ ಸಾಗರವನ್ನು ಸುಲಭವಾಗಿ ಈಜಲು, ಉತ್ತಮ ಬದುಕನ್ನು ಕಟ್ಟಿಕೊಳ್ಳಲು ವಚನಗಳ ಅಧ್ಯಯನವು ಸಹಕಾರಿಯಾಗಿದೆ. ಶರಣರ ಅನುಭಾವಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗೋಷ್ಟಿಬಳಗದ ಕಾರ್ಯದರ್ಶಿ ಮ.ಸುರೇಶ್‌ಬಾಬು, ಅನಿತಾ ಸುಮಂತ್‌, ಅರಿವಿನ ಮನೆಯ ಕೃಷ್ಣಾನಂದ್‌, ಅಂಬಾಭವಾನಿ, ಮಹದೇವಮ್ಮ, ವಿಮಲಾಂಬ, ಮೀನಾಸುರೇಶ್‌, ದಾಕ್ಷಾಯಿಣಮ್ಮ, ರಾಷ್ಟ್ರೀಯ ಬಸವದಳದ ಮ.ಜಯದೇವ್‌, ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್‌, ಮಾಜಿ ಅಧ್ಯಕ್ಷ ಎಚ್‌.ಎಸ್‌.ರುದ್ರೇಶಮೂರ್ತಿ, ಬಿ.ಪುಟ್ಟರಾಜಣ್ಣ, ವಿ.ಆರ್‌.ಮಹದೇವ್‌, ಮತ್ತಿತರರು ಇದ್ದರು. ವಚನಬಳಗದ ಭಾನು ಶಿವಕುಮಾರ್‌, ಮತ್ತಿತರರಿಂದ ವಚನಗಳ ಗಾಯನ ನಡೆಯಿತು. ದಿವಂಗತ ವಿ.ಅಕ್ಕಯ್ಯಮ್ಮ, ಕೆ.ಚಿಕ್ಕಗುಬ್ಬಣ್ಣ ಅವರ ಸ್ಮರಣೆ ನಡೆಯಿತು.

೨೮-೦೬-೨೦೨೬—೧,೨,೩: ವಿಜಯಪುರ ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಶ್ರೀ ವೀರಭದ್ರಸ್ವಾಮಿಗೋಷ್ಟಿ ಅಕ್ಕನಬಳಗ ಸೇವಾಟ್ರಸ್ಟ್‌ ವತಿಯಿಂದ ನಡೆದ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ಶಿಕ್ಷಕಿ ಎಂ.ಗಿರಿಜಾಂಬರುದ್ರೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು. ವಿ.ಅನಿಲ್‌ಕುಮಾರ್‌, ಮ.ಸುರೇಶ್‌ಬಾಬು, ಅನಿತಾಸುಮಂತ್‌, ಮತ್ತಿತರರು ಇದ್ದರು.

WhatsApp

Join Now

Telegram

Join Now

Instagram

Join Now