ಭಕ್ತಿ ಭಾವದಿಂದ ನಡೆದ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ
ವಿಜಯ ದರ್ಪಣ ನ್ಯೂಸ್….
ಭಕ್ತಿ ಭಾವದಿಂದ ನಡೆದ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ
ಚಿಕ್ಕಬಳ್ಳಾಪುರ : ತಾಲ್ಲೂಕಿನ ಕಸಬಾ ಹೋಬಳಿ ಪಟ್ರೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಣಕನೂರು ಗ್ರಾಮದಲ್ಲಿ ನೆಲೆಸಿರುವ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ ಪುನಃಪ್ರತಿಷ್ಠಾಪನೆ, ನಾಗದೇವತಾ ನೂತನ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಸಂಪ್ರದಾಯದಂತೆ ಭಕ್ತಿಭಾವದಿಂದ ಆಚರಿಸಲಾಯಿತು.
ದೇವಾಲಯದ ವಕ್ಕಲು ಕುಟುಂಬದ ನಗರ ಹಾಗು ಗ್ರಾಮಗಳಾದ ಚಿಕ್ಕಬಳ್ಳಾಪುರ ತಾಲ್ಲೂಕಿನ,ಚಿಕ್ಕಬಳ್ಳಾಪುರ ನಗರ, ಅಣಕನೂರು ,ಮರಸನಹಳ್ಳಿ ,ಇನಪನಹಳ್ಳಿ, ರಾಮಚಂದ್ರಹೊಸೂರು,ಅರಿಕೆರೆ ,ಕತ್ತರಿಗುಪ್ಪೆ, ,ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ,ಮಳಮಾಚನಹಳ್ಳಿ,
ದೇವರಮಳ್ಳೂರು, ಚೀಮಂಗಲ,ಅಕ್ಕಿಮಂಗಲ,ಶೀಗೆಹಳ್ಳಿ, ದೇವನಹಳ್ಳಿ ತಾಲ್ಲೂಕಿನ ಬಾಲೇಪುರ,ವೆಂಕಟಗಿರಿಕೋಟೆ,
ಹೊಸಹುಡ್ಯ ಹಾಗು ಚಿಂತಾಮಣಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ವಕ್ಕಲು ಕುಟುಂಬದ
ಸಾವಿರಾರು ಭಾಂದವರು ಹಾಗು ಭಕ್ತಾದಿಗಳು ಭಾಗವಹಿಸಿ ವಿಶೇಷ ಪೂಜೆಗಳಲ್ಲಿ ತೊಡಗಿಸಿಕೊಂಡು ದೇವರ ಕೃಪೆಗೆ ಪಾತ್ರರಾಗಿದ್ದರು.
ಈ ಮಹೋತ್ಸವದ ಅಂಗವಾಗಿ ಅಕ್ಷಯ ತೃತೀಯ ಬುಧವಾರದಿಂದ ಆರಂಭವಾಗಿ ,ಶುಕ್ರವಾರದ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರಮುಖ ಪೂಜಾ ವಿಧಿ ವಿಧಾನಗಳನ್ನು ಮಂತ್ರ ಘೋಷಣೆಗಳೊಂದಿಗೆ ನೆರವೇರಿಸಲಾಯಿತು.
ಈ ವೇಳೆ ದೇವಾಲಯದ ವಕ್ಕಲು ಕುಟುಂಬದ ಮಹಿಳೆಯರು ಕಳಶಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯು ದೇವಾಲಯದಿಂದ ಪ್ರಾರಭವಾಗಿ ಗ್ರಾಮದ ಗೇಟ್ ಬಳಿಯ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ವಕ್ಕಲು ಕುಟುಂಬದ ಹಿರಿಯರಿಂದ ಜಲ ಪೂಜೆ ಸಲ್ಲಿಸಿ ನಂತರ ಗ್ರಾಮ ಪ್ರದಕ್ಷಿಣೆ ಹೊರಡುವಾಗ ಗ್ರಾಮ ದೇವತೆಗಳಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ಸಾಗಿತು.
ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಪೀಠ ಸಂಸ್ಕಾರ, ಅಷ್ಟಬಂಧನ, ವಿಗ್ರಹ ಪ್ರತಿಷ್ಠೆ, ಮಹಾರುದ್ರಾಭಿಷೇಕ, ವಸ್ತ್ರ ಹಾಗೂ ಹೂವಿನ ವಿಶೇಷ ಅಲಂಕಾರ, ನೂತನ ಶಿಖರ ಕಳಶಾರೋಹಣ, ಕುಂಭಾಭಿಷೇಕ ಮತ್ತು ದ್ವಜಸ್ತಂಭ ಲೋಕಾರ್ಪಣೆ ಪೂಜಾ ಕಾರ್ಯಗಳು ಸಾಂಗ್ವಿಕವಾಗಿ ನೆರವೇರಿದವು, ಹೋಮ ,ಹವನಗಳು, ಪೂರ್ಣಾಹುತಿ,
ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಭಕ್ತರಿಗಾಗಿ 3 ದಿನಗಳಿಂದ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಷ್ಮೀಪುರದ ಆಗಮೀಕರು
ಹಾಗು ವೇದ ಬ್ರಹ್ಮ ಶ್ರೀ ಅನಂತಶರ್ಮ ಮತ್ತು ಅವರ ತಂಡವು ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.