ಸ್ವಸಹಾಯ ಸಂಘಗಳ ಉತ್ಪನ್ನಗಳ ವ್ಯಾಪಾರ ವಹಿವಾಟು ವ್ಯವಸ್ಥಿತವಾಗಿ ನಡೆಯುತ್ತಿಲ್ಲ : ಶಾಸಕ ಬಿಎನ್ ರವಿಕುಮಾರ್
ವಿಜಯ ದರ್ಪಣ ನ್ಯೂಸ್…
ಸ್ವಸಹಾಯ ಸಂಘಗಳ ಉತ್ಪನ್ನಗಳ ವ್ಯಾಪಾರ ವಹಿವಾಟು ವ್ಯವಸ್ಥಿತವಾಗಿ ನಡೆಯುತ್ತಿಲ್ಲ : ಶಾಸಕ ಬಿಎನ್ ರವಿಕುಮಾರ್
ಶಿಡ್ಲಘಟ್ಟ : ಸ್ವ-ಸಹಾಯ ಸಂಘಗಳು ಕರಕುಶಲ ವಸ್ತುಗಳು, ತಿಂಡಿ,ಇನಿಸು ಹಾಗು ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿವೆ ಆದರೆ ಮಾರುಕಟ್ಟೆ ಮತ್ತು ತಂತ್ರಗಾರಿಕೆ ನೈಪುಣ್ಯತೆ ಕೊರತೆಯಿಂದ ವ್ಯಾಪಾರ -ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಚಿಕ್ಕಬಳ್ಳಾಪುರದ ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಹಾಗೂ ಸಂಜೀವಿನಿ ಡೇನಲ್ಡ್ ಸಹಯೋಗದಲ್ಲಿ ನಗರದ ವಾಸವಿ ವಿದ್ಯಾಸಂಸ್ಥೆಯ ಹಮ್ಮಿಕೊಂಡಿದ್ದ ಸ್ವ-ಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಲು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸ್ವಸಹಾಯ ಸಂಘಗಳು ನೆರವಾಗಿವೆ ಆದರೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ವ್ಯಾಪಾರ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಇತ್ತೀಚಿನ ದಿನಗಳಲ್ಲಿ ಸಾವಯವ ಉತ್ಪನ್ನಗಳ ಬಳಕೆದಾರರ ಪ್ರತ್ಯೇಕ ವರ್ಗವೇ ಸೃಷ್ಟಿಯಾಗುತ್ತಿದೆ ಜತೆಗೆ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಗುಣಮಟ್ಟ, ಬ್ರಾಂಡ್, ಅಂದ ಚೆಂದದ ಪ್ಯಾಕಿಂಗ್ ಮೇಲೂ ಬೆಲೆ ನಿಗದಿ ಮತ್ತು ಖರೀದಿ ಅವಲಂಬಿಸಿದೆ ಎಂದರು. ಸಾವಯವ ಉತ್ಪನ್ನಗಳನ್ನು ಬಳಸುವ ವರ್ಗ ಅವುಗಳ ಬೆಲೆಗೆ ಪ್ರಾಧ್ಯಾನ್ಯತೆ ನೀಡುವುದಿಲ್ಲ ಬದಲಿಗೆ ಗುಣಮಟ್ಟ ಮತ್ತು ನೈಜತೆಯನ್ನಷ್ಟೆ ಪರಿಶೀಲಿಸುತ್ತದೆ ಹಾಗಾಗಿ ಗ್ರಾಮೀಣ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಪ್ರಯೋಗಾಲಯದ ಸಾವಯವ ಪ್ರಮಾಣಪತ್ರ ಇದ್ದರೆ ಮಾರುಕಟ್ಟೆಯಲ್ಲಿ ಅಂತಹ ಉತ್ಪನ್ನಗಳಿಗೆ ಬೇಡಿಕೆ ಮತ್ತು ಬೆಲೆಯೂ ಸಿಗುತ್ತದೆ ಆದ್ದರಿಂದ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಸಾವಯವದ ನೈಜತೆಯ ಪ್ರಮಾಣಪತ್ರ ಮತ್ತು ಸೂಕ್ತ ಮಾರುಕಟ್ಟೆ ಸವಲತ್ತುಗಳನ್ನು ಕಲ್ಪಿಸುವ ಕೆಲಸ ಆಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ 15 ಒಕ್ಕೂಟಗಳ, 28 ಸ್ವಸಹಾಯ – ಸಂಘಗಳ ಉತ್ಪನ್ನಗಳನ್ನು ವಸ್ತು ಪ್ರದರ್ಶನದಲ್ಲಿ ಮಾರಾಟಕ್ಕಿಡಲಾಗಿತ್ತು ಶಾಸಕರು ಎಲ್ಲಾ ವಸ್ತುಗಳನ್ನು ವೀಕ್ಷಿಸಿದರಲ್ಲದೆ ಖರೀದಿ ಕೂಡ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಪೌರಾಯುಕ್ತ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಮುಖಂಡರಾದ ತಾದೂರು ರಘು,ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್‌ನ ಸಿಇಒ ಕೆ.ರಾಜೇಂದ್ರ ಪ್ರಸಾದ್, ಕಾರ್ಯಕ್ರಮದ ಆಯೋಜಕಿ ಆರ್.ಲತಾ, ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಮಹೇಶ್,ಪ್ರದಾನ ಕಾರ್ಯದರ್ಶಿ ರೂಪಸಿರಮೇಶ್, ನಿರ್ದೇಶಕ ವಿ.ಎಸ್.ರಾಜೇಶ್, ಸಂಜೀವಿನಿ ಡೇ ಎನ್‌ಆರ್‌ಎಲ್ ಎಂನ ವಿಜಯ್ ಕುಮಾರ್, ನರಸಿಂಹ, ಬಾಲರಾಜು ಮತ್ತಿತರರು ಪಾಲ್ಗೊಂಡಿದ್ದರು.