ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ

ವಿಜಯ ದರ್ಪಣ ನ್ಯೂಸ್…

ಇದು ಸಾಧ್ಯವೇ……..

ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ
( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು……

1) ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಅರೆ ಸರ್ಕಾರಿ ಅಧಿಕಾರಿಗಳು, ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಅಧಿಕೃತ ಕೆಲಸಕ್ಕೆ ಸರ್ಕಾರಿ ವಾಹನಗಳಲ್ಲಿಯೇ ಪ್ರಯಾಣಿಸಬೇಕು, ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇವರಿಗೆ ಬಹುತೇಕ ಉಚಿತ ಮತ್ತು ಕೆಲವರಿಗೆ ರಿಯಾಯಿತಿ ನೀಡಿ ಅತ್ಯಂತ ಕಡಿಮೆ ಬೆಲೆಗೆ ಈ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಈ ಮುಖಾಂತರ ಸರ್ಕಾರಿ ಶಾಲೆ, ಆಸ್ಪತ್ರೆ ಮತ್ತು ಸಾರಿಗೆಯ ಗುಣಮಟ್ಟವನ್ನು ಅಂತರಾಷ್ಟ್ರೀಯ ದರ್ಜೆಗೆ ಏರಿಸುವುದಲ್ಲದೆ, ಹೆಚ್ಚು ಜವಾಬ್ದಾರಿಯುತ ಮತ್ತು ಮೌಲ್ಯಯುತವಾಗಿ ಮಾಡುವ ಪ್ರಯತ್ನದ ಭಾಗವಾಗಿ ಈ ಯೋಜನೆ ಜಾರಿಯಾಗಿರುತ್ತದೆ. ಇದು ಇನ್ನು ಮುಂದೆ ಸರ್ಕಾರಿ ಕೆಲಸಕ್ಕೆ ಸೇರುವ ನೌಕರರಿಗೆ ಕಡ್ಡಾಯವಾಗಿರುತ್ತದೆ. ಈಗ ಇರುವವರಿಗೆ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ.

2) ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೆರಡು ವರ್ಷಗಳಲ್ಲಿ ಕಡ್ಡಾಯವಾಗಿ ಒಂದು ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ಹಾಗೂ ಅತ್ಯಂತ ಸುಸಜ್ಜಿತ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಹಣಕಾಸಿನ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಕಾರ್ಯ ಒತ್ತಡಗಳ ನಡುವೆಯೂ ಇದನ್ನು ಅತ್ಯಂತ ಪ್ರಮುಖ ಆದ್ಯತೆಯಾಗಿ ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು. ತಪ್ಪಿದಲ್ಲಿ ಆಯಾ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ.

3) ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸೇರಿದ ಜಾಗಗಳಲ್ಲಿ ಸಂಪೂರ್ಣವಾಗಿ ಗಿಡಮರಗಳನ್ನು ನೆಡಲಾಗುತ್ತದೆ. ರಾಜ್ಯದ ಶೇಕಡಾ 50% ಭೂ ಭಾಗವನ್ನು ಹಸಿರೀಕರಣ ಮಾಡುವ ಬೃಹತ್ ಯೋಜನೆಯನ್ನು ಸರ್ಕಾರ ಕೈಗೊಂಡಿದೆ. ಇದಕ್ಕಾಗಿ ಅರಣ್ಯ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಿ, ಇನ್ನು ಐದು ವರ್ಷಗಳಲ್ಲಿ ತನ್ನ ಗುರಿಯನ್ನು ಸಾಧಿಸಲು ಸೂಚಿಸಲಾಗಿದೆ. ಇದರಲ್ಲಿ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಾಯ ಪಡೆಯಲು ಯೋಜನೆ ರೂಪಿಸಲಾಗಿದೆ.

4) ರಾಜ್ಯದ ಎಲ್ಲಾ ಹಳ್ಳಿ, ಗ್ರಾಮ, ಊರು, ನಗರ, ಪಟ್ಟಣ ಮುಂತಾದ ಕಡೆ ವ್ಯವಸ್ಥಿತವಾಗಿ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಹೊಸ ಕೆರೆಗಳ ನಿರ್ಮಾಣ ಮಾಡುವುದು ಮುಂತಾದ ಸಣ್ಣ ನೀರಾವರಿ ಯೋಜನೆಗಳನ್ನು ಯುದ್ಧೋಪಾದಿಯಲ್ಲಿ ಪ್ರಾರಂಭಿಸಲಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 50,000ಕ್ಕೂ ಹೆಚ್ಚು ಕೆರೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಪಾನಿನ ಯಂತ್ರಗಳ ಆಧುನಿಕ ತಂತ್ರಜ್ಞಾನವನ್ನು, ವಿಶ್ವ ಬ್ಯಾಂಕ್ ನ ಹಣಕಾಸು ನೆರವನ್ನು ಪಡೆಯಲಾಗುವುದು. ಇಡೀ ರಾಜ್ಯದ ನೀರಿನ ಕೊರತೆಯನ್ನು ನಿವಾರಿಸಲು, ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.

5) ರಾಜ್ಯವನ್ನು ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ಮದ್ಯಪಾನ ಮುಕ್ತ ಮಾಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ರೂಪಿಸಿದೆ. ಅದರಂತೆ ವರ್ಷಕ್ಕೆ ಶೇಕಡ ಹತ್ತರಷ್ಟು ಬಾರ್ ಅನುಮತಿಯನ್ನು ರದ್ದು ಮಾಡುತ್ತಾ 10 ವರ್ಷಗಳಲ್ಲಿ ನೂರರಷ್ಟು ಗುರಿ ಸಾಧಿಸುವ ಉದ್ದೇಶ ಇದೆ. ಅಲ್ಲದೆ ಈಗ ಮದ್ಯಪಾನದ ಮೇಲೆ ಅವಲಂಬಿತವಾಗಿರುವ ಕುಟುಂಬಗಳಿಗೆ ಪರ್ಯಾಯ ಉದ್ಯೋಗ ಮತ್ತು ಆರ್ಥಿಕ ವ್ಯವಸ್ಥೆಯನ್ನು ಮಾಡಲಾಗುತ್ತದೆ.

6) ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ 6 ತಿಂಗಳಿಗೊಮ್ಮೆ ಉದ್ಯೋಗ ಮೇಳವನ್ನು ಕಡ್ಡಾಯಗೊಳಿಸಲಾಗುವುದು. ಆ ಮುಖಾಂತರ ಎಲ್ಲಾ ರೀತಿಯ ನಿರುದ್ಯೋಗಿಗಳಿಗೂ ಉದ್ಯೋಗ ಸೃಷ್ಟಿಸುವ ಮತ್ತು ಖಾತರಿ ಪಡಿಸುವ ಕೆಲಸವನ್ನು ಅಲ್ಲಿನ ತಹಸಿಲ್ದಾರ್ ಅವರಿಗೆ ವಹಿಸಲಾಗುತ್ತದೆ. ಈ ಮೂಲಕ ರಾಜ್ಯದ ನಿರುದ್ಯೋಗ ಪ್ರಮಾಣವನ್ನು ಮುಂದಿನ ಐದು ವರ್ಷದಲ್ಲಿ ಗಣನೀಯವಾಗಿ ಕಡಿಮೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

7) ರಾಜ್ಯದ ಸಂಪೂರ್ಣ ಕೃಷಿ ಭೂಮಿಯನ್ನು ಹೊಸದಾಗಿ ಸರ್ವೆ ಮಾಡಿಸಿ, ಎಲ್ಲವನ್ನು ಡಿಜಿಟಲೀಕರಣ ಮಾಡಿ, ಭೂಮಿಯ ಫಲವತ್ತತೆಯನ್ನು ಕಾಪಾಡಿ, ಯಾವ ಬೆಳೆ ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ ಸೂಕ್ತ ಮತ್ತು ಎಷ್ಟು ಬೆಳೆಯಬೇಕು, ಅದರ ಮಾರುಕಟ್ಟೆ, ಬೆಲೆ ನಿಯಂತ್ರಣ, ರಫ್ತು, ಹವಾನಿಯಂತ್ರಿತ ಸಂಗ್ರಹ ಕೊಠಡಿ ಮುಂತಾದ ಎಲ್ಲವನ್ನು ಕ್ರಮಬದ್ಧಗೊಳಿಸಿ, ರೈತರ ಹಿತಾಸಕ್ತಿ ಕಾಪಾಡಲು ವಿಶೇಷ ರೈತ ಬಜೆಟ್ ಮಂಡಿಸಿ, ರೈತರ ಆತ್ಮಹತ್ಯೆ ತಡೆಯುವ ಪ್ರಯತ್ನ ಮತ್ತು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಬೃಹತ್ ” ರೈತ ಋಣ ” ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಮಾಡಲಾಗುವುದು

8) ಎಲ್ಲ ರೀತಿಯ ಅಪರಾಧಗಳು, ಅಪಘಾತಗಳು, ಆತ್ಮಹತ್ಯೆಗಳು ತಡೆಯುವ ನಿಟ್ಟಿನಲ್ಲಿ ಇಡೀ ಪೊಲೀಸ್ ವ್ಯವಸ್ಥೆಯನ್ನು ಪುನರ್ ರಚಿಸಿ ಒಂದು ಸಾಮಾಜಿಕ ಪರಿವರ್ತನಾ ಆಂದೋಲನವನ್ನು ಮಾಡುವ ನಿಟ್ಟಿನಲ್ಲಿ ಅಧ್ಯಯನ ಸಮಿತಿಯನ್ನು ರಚಿಸಲಾಗುತ್ತದೆ. ಅದರಲ್ಲಿ ಸಮಾಜ ವಿಜ್ಞಾನಿಗಳು, ಮಾನವ ಶಾಸ್ತ್ರಜ್ಞರು , ಮನಃಶಾಸ್ತ್ರಜ್ಞರು, ಅಪರಾಧ ತಜ್ಞರು, ಆಡಳಿತದ ಅನುಭವಿಗಳು, ಕಾನೂನು ತಜ್ಞರನ್ನು ಒಳಗೊಂಡ ಸಮಿತಿಯನ್ನು ಈ ಕೂಡಲೇ ರಚಿಸಲು ನಿರ್ಧಾರ ಮಾಡಲಾಗಿದೆ.

9) ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ನಿರ್ವಹಿಸಲು ಲೋಕಾಯುಕ್ತಕ್ಕೆ ಸಂಪೂರ್ಣ ಪರಮಾಧಿಕಾರ ಕೊಡುವುದಲ್ಲದೆ, ಸಮಾಜದಲ್ಲಿ ಕೆಟ್ಟ ಹಣದ ಪ್ರಭಾವ ತಗ್ಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದಕ್ಕೆ ಪೂರಕವಾಗಿ ಶಿಕ್ಷಣ, ಆರೋಗ್ಯವನ್ನು ಅತ್ಯಂತ ಸರಳೀಕರಣಗೊಳಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡು ದಕ್ಷರು, ಪ್ರಾಮಾಣಿಕರು, ಸಾಮಾಜಿಕ ಕಳಕಳಿಯವರು ರಾಜಕೀಯಕ್ಕೆ ಪ್ರವೇಶಿಸಿ ಚುನಾವಣಾ ಅಭ್ಯರ್ಥಿಗಳಾಗಲು ಹೊಸ ರೀತಿಯ ಯೋಜನೆಗಳನ್ನು ಕೈಗೊಳ್ಳಲು ಸಂಪುಟ ಉಪ ಸಮಿತಿಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಚಿಸಲಾಗುತ್ತದೆ.

10) ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ತಕ್ಷಣದ, ಮಧ್ಯಾಮಾವಧಿಯ ಮತ್ತು ದೀರ್ಘಾವಧಿಯ ವಿಶೇಷವಾದ ಸಾಮಾಜಿಕ ಸ್ವಾಸ್ಥ್ಯ ಯೋಜನೆಗಳನ್ನು ಜಾರಿಗೊಳಿಸಲು ಮತ್ತೊಂದು ತಜ್ಞರ ಸಮಿತಿಯನ್ನು ರಚಿಸಲಾಗುತ್ತದೆ. ತಾಂತ್ರಿಕವಾಗಿ, ಸಾಮಾಜಿಕವಾಗಿ, ವೈಯಕ್ತಿಕವಾಗಿ, ಮಾನಸಿಕವಾಗಿ ಜಾತಿ ವ್ಯವಸ್ಥೆಯ ಸಂಕೋಲೆಗಳಿಂದ ಮುಂದಿನ ಜನಾಂಗ ಹೊರಬರಲು ರೂಪಿಸಬೇಕಾದ ಶಿಕ್ಷಣ, ಮಾನವೀಯ ಮೌಲ್ಯಗಳು, ನೈತಿಕತೆ, ಮುಂತಾದ ಸರ್ವಾಂಗೀಣ ಮನೋ ವಿಕಾಸಕ್ಕೆ ಬೇಕಾದ ಅಂಶಗಳ ಬಗ್ಗೆ ಈ ಸಮಿತಿ ವರದಿ ನೀಡುತ್ತದೆ. ಇದನ್ನು ಮುಂದಿನ 25 ವರ್ಷಗಳ ವರೆಗೆ ವಿಸ್ತರಿಸಿ ಯೋಜನೆ ಕಾರ್ಯರೂಪಕ್ಕೆ ತರಲು ಮತ್ತು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳೊಂದಿಗೆ ವಿಶೇಷ ಪ್ರಾಧಿಕಾರವನ್ನು ರಚಿಸಲಾಗುತ್ತದೆ.

ಹೀಗೊಂದು ಕಾರ್ಯಗತಗೊಳಿಸಬಹುದಾದ ಕಾಲ್ಪನಿಕ ಯೋಜನೆಗಳ ಪಟ್ಟಿ ಮನದಲ್ಲಿ ಮೂಡಿ ಅಕ್ಷರ ರೂಪ ಪಡೆಯಿತು. ಅದನ್ನು ನಿಮ್ಮ ಅವಗಾಹನೆಗಾಗಿ.

ಖಂಡಿತವಾಗಿಯೂ ಇದನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9663750451..Watsapp)
9844013068……