ಯಾರು ಮೊದಲು….
ವಿಜಯ ದರ್ಪಣ ನ್ಯೂಸ್…..
ಯಾರು ಮೊದಲು….

ಜಾಗತೀಕರಣ, ಮುಕ್ತ ಮಾರುಕಟ್ಟೆ ಅಂತ್ಯವಾಗುವತ್ತಾ ವಿಶ್ವ. ಸಂಕುಚಿತ ನಾಯಕರ ಕೈಯಲ್ಲಿ ಬಲಿಷ್ಠ ದೇಶಗಳ ಆಡಳಿತ ವ್ಯವಸ್ಥೆ……
ಸಹಜ ಬುದ್ದಿಮತ್ತೆ ನಾಶವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವು….
ಅಮೆರಿಕ ಮೊದಲು ಡೊನಾಲ್ಡ್ ಟ್ರಂಪ್,
ಇಲ್ಲ, ಇಲ್ಲಾ ಚೀನಾ ಮೊದಲು ಷಿ ಜಿನ್ ಪಿಂಗ್,
ಇಲ್ಲ, ಇಲ್ಲಾ ರಷ್ಯಾ ಮೊದಲು ವ್ಲಾದಿಮಿರ್ ಪುಟಿನ್,
ಇಲ್ಲ, ಇಲ್ಲಾ ಭಾರತ ಮೊದಲು ನರೇಂದ್ರ ಮೋದಿ,
ಇಲ್ಲ, ಇಲ್ಲಾ ಇಸ್ರೇಲ್ ಮೊದಲು, ಬೆಂಜಮಿನ್ ನೆತನ್ಯಾಹು,
ಇಲ್ಲ, ಇಲ್ಲಾ ಪಾಕಿಸ್ತಾನ ಮೊದಲು, ಶಹಬಾಜ್ ಶರೀಫ್,
ಇಲ್ಲ, ಇಲ್ಲಾ ಇರಾನ್ ಮೊದಲು ದಿವಂಗತ ಅಯಾತುಲ್ಲಾ ಆಲಿ ಖಮೇನಿ,
ಇಲ್ಲ, ಇಲ್ಲಾ ಜರ್ಮನಿ ಮೊದಲು ಫ್ರೆಡ್ರಿಕ್ ಮರ್ಜ್,
ಇಲ್ಲ, ಇಲ್ಲಾ ಇಂಗ್ಲೆಂಡ್ ಮೊದಲು ಕೀರ್ ಸ್ಟಾರ್ಮರ್,
ಇಲ್ಲ, ಇಲ್ಲಾ ಕೆನಡಾ ಮೊದಲು ಮಾರ್ಕ್ ಕಾರ್ನಿ….
ಯಾವುದು ಮೊದಲು, ಯಾರು ಮೊದಲು, ಯಾವುದು ಆತ್ಮನಿರ್ಭರ, ಯಾವುದು ಸ್ವಾಭಿಮಾನ, ಯಾವುದು ಧರ್ಮ, ಯಾವುದು ದೇವರು……
ಹುಸಿ ರಾಷ್ಟ್ರೀಯತೆ,
ವಿನಾಶದ ಅಭಿವೃದ್ಧಿ,
ದಯೆ ಇಲ್ಲದ ಧರ್ಮ,
ಕಣ್ಣಿಗೆ ಕಾಣದ ದೇವರು,
ಇವುಗಳ ನಡುವೆ ನಾಯಕರಲ್ಲಿನ ರಾಕ್ಷಸತ್ವದಿಂದ ವಿಶ್ವ ನರಳುತ್ತಿದೆ…..
ಈ ಕ್ಷಣದಲ್ಲಿ ನಮ್ಮ ಕಣ್ಣ ಮುಂದೆಯೇ ವಿವಿಧ ದೇಶಗಳ ನಡುವೆ ಎಷ್ಟೊಂದು ಯುದ್ಧ ನಡೆಯುತ್ತಿದೆ, ಎಷ್ಟೊಂದು ಹಿಂಸೆ, ಎಷ್ಟೊಂದು ಜನರ ಸಾವು. ಇದು ಸಾಮೂಹಿಕ ವಿನಾಶವಾದರೆ, ಕೌಟುಂಬಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ವ್ಯಾವಹಾರಿಕವಾಗಿ, ವೈಯಕ್ತಿಕವಾಗಿ ಎಷ್ಟೊಂದು ಕೊಲೆ, ಸುಲಿಗೆ, ಅತ್ಯಾಚಾರ, ಅಪಘಾತ, ಆತ್ಮಹತ್ಯೆ ನಡೆಯುತ್ತಿದೆ.
ತಿನ್ನಲು, ಉಣ್ಣಲು, ಹಾಸಿ ಹೊದ್ದಿಕೊಳ್ಳಲು, ವಾಸಿಸಲು, ಅನುಭವಿಸಲು ಎಷ್ಟೊಂದು ಸೌಕರ್ಯಗಳು, ಸುಖಮಯ ಜೀವನಕ್ಕಾಗಿ ಎಷ್ಟೊಂದು ಆದರ್ಶ ಚಿಂತನೆಗಳು, ಸೌಕರ್ಯಗಳು.
ಎಲ್ಲವೂ ಸಿಕ್ಕ ನಂತರ ಮನುಷ್ಯನಿಗೆ ಕೊಬ್ಬು ಹೆಚ್ಚಾಗಿದೆ. ಆ ಕೊಬ್ಬಿನಿಂದಲೇ ಆತ ನಾಶವಾಗುತ್ತಿದ್ದಾನೆ.
ದೇಶಗಳ ನಡುವೆ ಉಂಟಾಗುವ ಅಥವಾ ಇನ್ಯಾವುದೇ ಭಿನ್ನಾಭಿಪ್ರಾಯ ಬಗೆಹರಿಸಲು ಸಾಧ್ಯವೇ ಇಲ್ಲದಂತ ಸಮಸ್ಯೆಗಳೇನು ಇಲ್ಲ. ಹಸಿವಿನಿಂದ ಸಾಯುತ್ತಾ, ಪ್ರಾಣಿಗಳಿಗೆ ಆಹಾರವಾಗುತ್ತಾ, ರೋಗಗಳಿಗೆ ತುತ್ತಾಗುತ್ತಾ, ಪ್ರಾಕೃತಿಕ ವಿಕೋಪಗಳಿಗೆ ಬಲಿಯಾಗುತ್ತಾ, ಯುದ್ಧಗಳಿಂದ ನಾಶವಾಗುತ್ತಾ ಬದುಕುತ್ತಿದ್ದ ಮನುಷ್ಯ, ಇಂದು ಎಲ್ಲಾ ಸುಖಭೋಗಗಳ ನಡುವೆ ಬದುಕಲೇ ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕಿಂತ ವಿಚಿತ್ರ ಇನ್ನೊಂದಿದೆಯೇ ? ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಕೊಟ್ಟು ಪಡೆದುಕೊಳ್ಳುವಿಕೆಯ ಮೂಲಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದಲ್ಲವೇ…
ಕೃತಕ ಬುದ್ಧಿಮತ್ತೆಯ ಕಾಲದಲ್ಲಿ, ಸಹಜ ಬುದ್ಧಿಮತ್ತೆ ಹಳ್ಳ ಹಿಡಿದು ಕೊಚ್ಚೆ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಾ, ತನ್ನನ್ನೇ ತಾನು ನಾಶ ಪಡಿಸಿಕೊಳ್ಳುವ ಹಂತಕ್ಕೆ ಹೋಗುತ್ತಿರುವುದು ನಿಜಕ್ಕೂ ಯುಗಾಂತ್ಯಾದ ಸಂಭವನೀಯತೆಯನ್ನು ಹೆಚ್ಚಿಸುತ್ತಿದೆ.
ಹೀಗೆ ಹೊಡೆದಾಡಿ ಸಾಯುವುದೇ ಸಹಜವಾದಲ್ಲಿ ನಮಗೆ ಈ ತಂತ್ರಜ್ಞಾನಗಳೇ ಬೇಡ, ಈ ಆಡಳಿತ ವ್ಯವಸ್ಥೆಯೇ ಬೇಡ. ಎಂದಿನಂತೆ ಕಾಡಿಗೆ ಹೋಗಿ, ಹೇಗೋ ಪ್ರಾಣಿಗಳೊಂದಿಗೆ ಸಂಘರ್ಷ ಮಾಡುತ್ತಾ, ಎಲ್ಲೋ ಬಿಲದೊಳಗೆ, ಮರದ ಪೊಟರೆ ಒಳಗೆ, ಗುಹೆಗಳಲ್ಲಿ, ಕಲ್ಲು ಬಂಡೆಗಳ ಸೊಂದಿನಲ್ಲಿ, ಹಣ್ಣು ಹಂಪಲು ತಿನ್ನುತ್ತಾ ಬದುಕುವುದೇ ಉತ್ತಮ ಅನಿಸುತ್ತದೆ.
ಏಕೆಂದರೆ ಎಲ್ಲೋ ಮಧ್ಯಪ್ರಾಚ್ಯದ ದೇಶಗಳಲ್ಲಿ, ಇನ್ನೆಲ್ಲೋ ಪಾಕಿಸ್ತಾನ – ಅಫ್ಘಾನಿಸ್ತಾನದ ಗಡಿಗಳಲ್ಲಿ, ಮತ್ತೆಲ್ಲೂ ಆಫ್ರಿಕಾದ ಆ ಗಲಭೆ ಪೀಡಿತ ದೇಶದಲ್ಲಿ, ಬದುಕಿ, ನರಳುತ್ತಾ, ಯಾರದೋ ಬಾಂಬು ಬಂದೂಕುಗಳಿಗೆ ಸಿಕ್ಕಿ ಸಾಯುವುದಕ್ಕಿಂತ ಕಾಡಿನಲ್ಲಿ ವಾಸಿಸುವುದೇ ಉತ್ತಮವಲ್ಲವೇ….
ಇಲ್ಲಿ ಈ ದೇಶಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುವುದೇ ಕಷ್ಟವಾಗಿರುವಾಗ, ಈ ಅಣುಬಾಂಬುಗಳ ಸುತ್ತ, ಈ ಆತ್ಮಹತ್ಯಾ ಬಾಂಬುಗಳ ಸುತ್ತ, ಈ ನರ ರಾಕ್ಷಸರ ಸುತ್ತ, ಈ ತೆರಿಗೆ ಭಯೋತ್ಪಾದಕರ ಸುತ್ತ ಬದುಕುವುದಕ್ಕಿಂತ ಕಾಡೇ ಎಷ್ಟೋ ಉತ್ತಮ ಎನಿಸುತ್ತದೆ.
ಜನಗಳಿಗೆ ನಾವೇ ಮೊದಲು, ನಮ್ಮದೇ ಮೊದಲು ಎನ್ನುವ ಭ್ರಮೆ ಸೃಷ್ಟಿಸಿ, ಆ ಕಡೆ ವಿಶ್ವಗುರುವಾಗಲು, ವಿಶ್ವವನ್ನು ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸುವ ದೇಶಗಳ ಮುಖ್ಯಸ್ಥರ ಮುಖವಾಡಗಳು ಕಳಚಿ ಬೀಳುತ್ತಿದೆ. ಇಡೀ ವಿಶ್ವದ ಮಾನವ ಸಮುದಾಯ ಒಂದೇ ಎಂದು ಭಾವಿಸಿ ಬದುಕುವ ವಾತಾವರಣ ನಿರ್ಮಾಣವಾಗದೆ, ವ್ಯಾವಹಾರಿಕ ದೃಷ್ಟಿಯಿಂದ ದೇಶಗಳಾಗಿ, ಧರ್ಮಗಳಾಗಿ, ಭಾಷೆಗಳಾಗಿ ವಿಭಜನೆ ಹೊಂದಿ, ಈಗ ಅದರ ಆಧಾರದ ಮೇಲೆಯೇ ಒಬ್ಬರಿಗೊಬ್ಬರು ಕೊಂದುಕೊಳ್ಳುತ್ತಿರುವುದು, ಅದನ್ನು ನೋಡುತ್ತಾ ಅನುಭವಿಸುವುದು ತುಂಬಾ ಕಷ್ಟ. ಅದಕ್ಕಿಂತ ಅರಣ್ಯ ವಾಸವೇ ಉತ್ತಮ.
ಯಾರೋ ಹಾಕಿದ ಬಾಂಬಿಗೆ ಇನ್ಯಾರೋ ಸಾಯುತ್ತಾ, ಮತ್ಯಾರೋ ನರಳುತ್ತಾ, ಅಣುಬಾಂಬ್ ಯಾವಾಗ ಸ್ಪೋಟಿಸುತ್ತದೆ ಎಂಬ ಆತಂಕದಲ್ಲಿ ಬದುಕುವ ಈ ಜೀವನ ಬೇಕೆ. ಯಾರದೋ ತೆವಲಿಗೆ, ಮತ್ಯಾರೋ ಬಲಿಯಾಗುವ ಈ ಸಮಾಜ ಯಥಾಸ್ಥಿತಿಯಲ್ಲಿ ಮುಂದುವರಿಯ ಬೇಕೆ. ನಾವುಗಳೇನು ಈ ರಾಜಕೀಯ ನಾಯಕರಾ ಹುಚ್ಚಿಗೆ ಬಲಿಯಾಗುವ ಬಿಟ್ಟಿ ಜೀವಗಳೇ….
ಯುದ್ಧಗಳ ವರ್ಣನೆಯನ್ನು ಮಾಧ್ಯಮಗಳಲ್ಲಿ ಕೇಳಿ ಕೇಳಿ ಸಾಕಾಗಿದೆ. ಅವರ ಆ ಭಾಷೆ, ಅವರ ಆ ವರ್ಣನೆ, ಅವರ ಒಳಗಿನ ಕ್ರೌರ್ಯ, ಅವರ ಅಸೂಕ್ಷ್ಮತೆ ಎಲ್ಲವೂ ರಾಜಕಾರಣಿಗಳನ್ನು ಮೀರಿಸುವಂತಿದೆ. ಒಟ್ಟಿನಲ್ಲಿ ಮನುಷ್ಯನ ಈ ಕಾಲಘಟ್ಟದ ಯುಗಾಂತ್ಯ ಹತ್ತಿರವಾಗುತ್ತಿದೆ. ಸಹಜ ಬುದ್ಧಿ ಮತ್ತೆ ನಾಶವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವು…
ಮುಕ್ತ ಮಾರುಕಟ್ಟೆ, ಜಾಗತೀಕರಣ, ವಿಶ್ವವೇ ಒಂದು ಕುಟುಂಬ ಎನ್ನುವ ಪರಿಕಲ್ಪನೆ ನಾಶವಾಗಿ ಮತ್ತೆ ನಮ್ಮ ನಮ್ಮ ದೇಶವೇ ಶ್ರೇಷ್ಠ, ನಮ್ಮ ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ದೇವರೇ ಶ್ರೇಷ್ಠ ಎಂಬ ಸಂಕುಚಿತ ಕಾಲಘಟ್ಟಕ್ಕೆ ಮರಳುತ್ತಿದ್ದೇವೆ. ಹೇಳುವುದು ಮಾತ್ರ ಕೃತಕ ಬುದ್ಧಿಮತ್ತೆ ಎಂಬ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ ಎಂದು, ಆದರೆ ಸಾಗುತ್ತಿರುವುದು ಮಾತ್ರ ಅತ್ಯಂತ ಅಜ್ಞಾನದ ಸಮಾಜದತ್ತ, ಎಷ್ಟೊಂದು ವಿಚಿತ್ರವಲ್ಲವೇ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….
