ಅಪರಾಧ ಶಾಸ್ತ್ರ – ಕ್ರಿಮಿನಾಲಜಿ ( Criminology )

ವಿಜಯ ದರ್ಪಣ ನ್ಯೂಸ್…….

ಅಪರಾಧ ಶಾಸ್ತ್ರ –
ಕ್ರಿಮಿನಾಲಜಿ ( Criminology )
…………………………………….

ನಾಗರಿಕತೆಯ ಪ್ರಾರಂಭದಲ್ಲಿ ಇದು ಮಾನವರಲ್ಲಿ ಸಹಜ ಗುಣವಾಗಿಯೇ ಅಸ್ತಿತ್ವದಲ್ಲಿತ್ತು. ಎಲ್ಲಾ ಪ್ರಾಣಿಗಳೊಂದಿಗೆ ಮನುಷ್ಯ ಸಹ ತನ್ನ ಅಗತ್ಯತೆಗಳ ಪೂರೈಕೆ ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ತನ್ನ ಇತರ ಬುದ್ಧಿ ಶಕ್ತಿಯೊಂದಿಗೆ ತನಗರಿವಿಲ್ಲದೆ ಸ್ವಾಭಾವಿಕವಾಗಿಯೇ ಅಪರಾಧ ಶಾಸ್ತ್ರ ಸಹ ಬಲ್ಲವನಾಗಿದ್ದ ಮತ್ತು ಅದನ್ನು ಬದುಕಿನ ಭಾಗವಾಗಿ ಅಳವಡಿಸಿಕೊಂಡಿದ್ದ. ಆದರೆ ನಂತರದ ರಾಜಪ್ರಭುತ್ವದಲ್ಲಿ ಅಪರಾಧ ಶಾಸ್ತ್ರ ಅಧೀಕೃತತೆ ಪಡೆಯಿತು. ಹೊಟ್ಟೆ ಪಾಡಿಗಾಗಿ ಕೆಲವರು, ಹಿಂಸಾ ವಿಕಾರ, ವಿನೋದಗಳಿಗಾಗಿ ಕೆಲವರು, ವಿಸ್ತರಣೆಗಾಗಿ ಕೆಲವರು, ಸ್ವ ರಕ್ಷಣೆಗಾಗಿ ಕೆಲವರು ಅಪರಾಧ ಶಾಸ್ತ್ರಗಳ ಅರಿವಿನಡಿಯಲ್ಲಿ ಬದುಕುತ್ತಿದ್ದರು.

ಪ್ರಜಾಪ್ರಭುತ್ವ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಒಂದು ಕ್ರಮಬದ್ಧತೆ ಪಡೆದ ಮೇಲೆ ಅಪರಾಧ ಶಾಸ್ತ್ರ ಮಹತ್ವವನ್ನು ಪಡೆಯಿತು. ಸಾಮಾನ್ಯವಾಗಿ ಅಪರಾಧ ಶಾಸ್ತ್ರವನ್ನು ಪೊಲೀಸರು ಮತ್ತು ಅದಕ್ಕೆ ಸಂಬಂಧಪಟ್ಟವರು ಮಾತ್ರ ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಅದರ ಮುಖಾಂತರವೇ ಸಮಾಜದಲ್ಲಿ ಅಪರಾಧಿಗಳನ್ನು ಹಿಡಿಯುವ ಪ್ರಕ್ರಿಯೆ ಚಾಲನೆಯಲ್ಲಿತ್ತು . ಹಾಗೆಯೇ ಅಪರಾಧಿಗಳು ಕೂಡ ವಿವಿಧ ವಿವಿಧ ವಿವಿಧ ತಂತ್ರಗಾರಿಕೆಯ ಮೂಲಕ ಅಪರಾಧಗಳನ್ನು ಮಾಡುತ್ತಾ ಹೋಗುತ್ತಿದ್ದರು.

ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಪರಾಧ ಶಾಸ್ತ್ರವೆಂಬುದು ಸಾಮಾನ್ಯ ಜನರ ಬದುಕಿನ ಭಾಗವಾಗಿದೆ. ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಪ್ರತಿಯೊಬ್ಬರೂ ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅದರಲ್ಲೂ ಮುಖ್ಯವಾಗಿ ಮಾಧ್ಯಮಗಳು ಮತ್ತು ಸಮೂಹ ಸಂಪರ್ಕ ಜಾಲತಾಣಗಳ ಬೆಳವಣಿಗೆಯಿಂದ ಅಪರಾಧ ಶಾಸ್ತ್ರವೆಂಬುದು ವ್ಯಾಪಕವಾಗಿ ಭಿನ್ನ-ಭಿನ್ನ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಪರಾಧಗಳ ರೀತಿಯು ಬದಲಾಗುತ್ತಿದೆ. ಒಂದು ರೀತಿಯಲ್ಲಿ ಚದುರಂಗದಾಟದಂತೆ ಕೋಟಿ ಕೋಟಿ ನಡೆಗಳನ್ನು, ತಂತ್ರಗಳನ್ನು ಅನುಸರಿಸುತ್ತಿದೆ

ಇಂತಹ ಅಪರಾಧ ಶಾಸ್ತ್ರ ಅಷ್ಟು ಸುಲಭವಾಗಿ ಯಾರ ಕೈಗೂ ನಿಲುಕುವುದಿಲ್ಲ. ವಿಶ್ವದಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಈ ವಿಷಯದಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ‌. ಆದರೆ ಅದಕ್ಕೂ ಮಿತಿ ಇದೆ. ಭಾರತದಲ್ಲಿ ಪೊಲೀಸ್, ಎಸ್ಐಟಿ, ಸಿಬಿಐ, ರಾ, ಇಂಟೆಲಿಜೆನ್ಸ್, ಬೇಹುಗಾರಿಕೆ, ಫೋರೆನ್ಸಿಕ್ ಹೀಗೆ ನಾನಾ ರೀತಿಯ ವಿಭಾಗಗಳನ್ನು ಹೊಂದಿದ್ದರು ಅಪರಾಧಗಳನ್ನು ತಡೆಗಟ್ಟಲು ಅಥವಾ ಪತ್ತೆಹಚ್ಚಲು ಸಂಪೂರ್ಣವಾಗಿ ಯಶಸ್ವಿಯಾಗುತ್ತಿಲ್ಲ. ಮುಂದೆ ಆಗುವುದೂ ಇಲ್ಲ.

ಏಕೆಂದರೆ ಎಷ್ಟೇ ಸಿಸಿಟಿವಿ ಅಥವಾ ಇನ್ಯಾವುದೇ ತಂತ್ರಜ್ಞಾನ ಉಪಯೋಗಿಸಿದರು ಅಪರಾಧಿಗಳು ಸಹ ಅದಕ್ಕೆ ತಕ್ಕಂತೆ ತಂತ್ರಗಾರಿಕೆ ರೂಪಿಸುತ್ತಾ ಹೋಗುತ್ತಾರೆ. ಇದು ಮಾನವ ಸಹಜ ಗುಣ. ಆದರೆ ಆಶ್ಚರ್ಯವಾಗುವುದು ಸಾಮಾನ್ಯ ಜನರು ಸಹ ಈ ಅಪರಾಧ ಶಾಸ್ತ್ರದ ಬಗ್ಗೆ ತಮಗರಿವಿಲ್ಲದೆ ತಲೆಕೆಡಿಸಿಕೊಂಡು ಬಾಯಿಗೆ ಬಂದಂತೆ ಮಾತನಾಡುವುದು. ತಮಗೆ ತೋಚಿದ ಸಾಕ್ಷ್ಯಾಧಾರಗಳ ಮೇಲೆ ಅಭಿಪ್ರಾಯ ಹೇಳುವುದು. ಉದಾಹರಣೆಗೆ ಧರ್ಮಸ್ಥಳದ ತಲೆ ಬುರುಡೆಗಳ ಘಟನೆಗಳೇ ಇರಬಹುದು, ಇನ್ಯಾವುದೋ ಕೊಲೆ, ಅತ್ಯಾಚಾರ ಕಿಡ್ನಾಪ್ಗಳೇ ಇರಬಹುದು ಅಥವಾ ಇತ್ತೀಚೆಗೆ ಹೆಚ್ಚಾಗಿರುವ ಸೈಬರ್ ಕ್ರೈಮೇ ಇರಬಹುದು. ಇದೆಲ್ಲವೂ ಕೂಡ ತುಂಬಾ ಸಂಕೀರ್ಣವಾದದ್ದು ಅಥವಾ ಅವು ಸರಳವಾಗಿದ್ದರೂ ನಮ್ಮ ನಿಲುವಿಗೆ ಸಿಗದಿರಬಹುದು ಅಥವಾ ನಮ್ಮ ತಿಳಿವಳಿಕೆ ಅದನ್ನು ಗ್ರಹಿಸುವಲ್ಲಿ ವಿಫಲವಾಗಿರಬಹುದು ಜನ ಮಾತ್ರ ಈ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.

ನಿಜಕ್ಕೂ ಅಪರಾಧ ಶಾಸ್ತ್ರದ ಬಗ್ಗೆ ಮಾತನಾಡುವ ಅರ್ಹತೆಯನ್ನು ಎಲ್ಲರೂ ಪಡೆದಿರುವುದಿಲ್ಲ. ಪತ್ರಕರ್ತರಾಗಿರಲಿ, ಸಾಮಾನ್ಯರೇ ಆಗಿರಲಿ, ರಾಜಕಾರಣಿಗಳೇ ಆಗಿರಲಿ ತಮಗಿರುವ ಅಪರಾಧಗಳ ಶಾಸ್ತ್ರದ ಬಗೆಗಿನ ಅಜ್ಞಾನದ ಬಗ್ಗೆ ಅರಿವಿರಬೇಕು. ದುರಾದೃಷ್ಟವಶಾತ್ ಅದರ ಪ್ರಜ್ಞೆ ಇಲ್ಲದೆ ಅದು ಹಾಗಿರಬಹುದು, ಇದು ಹೀಗಿರಬಹುದು ಎಂಬ ಊಹೆಗಳಲ್ಲೇ ಸಾಕಷ್ಟು ಜನ ಕಳೆದು ಹೋಗುತ್ತಿದ್ದಾರೆ.

ಮಾಧ್ಯಮಗಳಲ್ಲಿ, ಯೂಟ್ಯೂಬ್ ಗಳಲ್ಲಿ ಅಪರಾಧಗಳ ಬಗ್ಗೆ ನಿರಂತರವಾಗಿ ಚರ್ಚೆ, ವಾದ ವಿವಾದಗಳು ನಡೆಯುತ್ತಲೇ ಇವೆ. ತಲೆ ಬುಡ ಇಲ್ಲದಿದ್ದರೂ ಮಾತುಗಳಿಗೆ ಏನು ಕಡಿಮೆ ಇಲ್ಲ. ಇದನ್ನು ಕೇಳಿಸಿಕೊಂಡ ಯುವ ಜನಾಂಗ ಅಪರಾಧ ಶಾಸ್ತ್ರದ ಬಗ್ಗೆ ಮತ್ತೇನೋ ಅಭಿಪ್ರಾಯವನ್ನು ಹೊಂದುತ್ತಿರುವಂತಿದೆ. ಉದಾಹರಣೆಗೆ ಇತ್ತೀಚೆಗೆ 13 ವರ್ಷದ ಶಾಲಾ ಬಾಲಕನನ್ನು ಅಪಹರಿಸಿ ಕೊಲ್ಲಲಾಯಿತು. 5 ಲಕ್ಷದ ಹಣಕ್ಕಾಗಿ ಈ ಕೃತ್ಯ ಮಾಡಿದರು.

ಸಾಮಾನ್ಯ ಜ್ಞಾನ ಇರುವ ಯಾರು ಸಹ ಈ ಅಪರಾಧ ಮಾಡಲು ಸಾಧ್ಯವಿಲ್ಲ. ಏಕೆಂದರೆ ಯಾರನ್ನಾದರೂ ಅಪಹರಿಸಿ ಅವರಿಂದ ಅಥವಾ ಅವರ ಪೋಷಕರಿಂದ ಹಣ ಪಡೆಯುವುದು ಇತ್ತೀಚಿನ ಕಾಲದಲ್ಲಿ ತುಂಬಾ ಕಷ್ಟ. ಯಶಸ್ವಿಯೂ ಆಗುವುದಿಲ್ಲ. ಜೊತೆಗೆ ಬಂಧನವಾಗುವ ಸಾಧ್ಯತೆಯೇ ಹೆಚ್ಚು. ಹಾಗಿದ್ದರೂ ಈ ಕೆಲಸಕ್ಕೆ ಕೈ ಹಾಕುತ್ತಾರೆ. ಏಕೆಂದರೆ ಅವರಿಗೆ ಅಪರಾಧ ಶಾಸ್ತ್ರದ ಬಗ್ಗೆ ಅವರಿಗೆ ಯಾವ ತಿಳುವಳಿಕೆಯು ಇರುವುದಿಲ್ಲ .

ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೋ ಕೆಟ್ಟ ಪದಗಳಿಂದ ಅಶ್ಲೀಲವಾಗಿ ನಿಂದಿಸಿ ಜೈಲು ಪಾಲಾಗುವ ಸಾಮಾನ್ಯ ಜನರನ್ನು ನೋಡುತ್ತಿದ್ದೇವೆ. ಅವರಿಗೂ ಸಹ ಅಪರಾಧ ಶಾಸ್ತ್ರದ ಬಗ್ಗೆ ಸಣ್ಣ ತಿಳುವಳಿಕೆಯು ಇರುವುದಿಲ್ಲ. ಕೇವಲ ಭಂಡತನ ಮಾತ್ರ ಇರುತ್ತದೆ. ಎಲ್ಲರಿಗೂ ಅಪರಾಧ ಶಾಸ್ತ್ರದ ಬಗ್ಗೆ ಅರಿವಿರಬೇಕೆಂದೇನೂ ಇಲ್ಲ ಅಥವಾ ಯಾವುದೇ ಕಾನೂನಿನ ಅರಿವಿರಬೇಕು ಎಂಬುದು ಇಲ್ಲ. ಸಹಜವಾಗಿಯೇ ಸಾಮಾನ್ಯ ಜ್ಞಾನವಿದ್ದರೆ ಸಾಕು ,

ಯಾವುದೇ ಶಾಸ್ತ್ರಗಳಾಗಲಿ, ಕಾನೂನುಗಳಾಗಲಿ, ಧರ್ಮಗಳಾಗಲಿ, ಸಾಂಪ್ರದಾಯಗಳಾಗಲಿ ಇನ್ನೊಬ್ಬರಿಗೆ ತೊಂದರೆ ಕೊಡುವುದಾಗಲಿ ಹಿಂಸಿಸುವುದಾಗಲಿ ವಂಚಿಸುವುದಾಗಲಿ, ಅಸಹ್ಯ ಪಡೆಯುವುದಾಗಲಿ ಮಾಡದಿದ್ದರೆ ಅದು ಯಾವ ಅಪರಾಧ ಶಾಸ್ತ್ರಕ್ಕೂ, ಕಾನೂನಿಗೂ ಒಳಪಡುವುದಿಲ್ಲ. ಸಾಮಾನ್ಯ ತಿಳುವಳಿಕೆ ಮುಖಾಂತರವೇ ನಾವು ಸಹಜವಾಗಿ ಬದುಕಬಹುದು.

ತೀರಾ ಗೊಂದಲವಾದಾಗ ಈ ಆಧುನಿಕ ಕಾಲದಲ್ಲಿ ಎಲ್ಲರ ಕೈಗೆ ನಿಲಕುವ ವಿಷಯ ತಜ್ಞರಿದ್ದಾರೆ. ಅವರೊಂದಿಗೆ ಚರ್ಚಿಸಬಹುದು. ಇಷ್ಟು ಸರಳ ವ್ಯವಸ್ಥೆ ಇದ್ದಾಗಲೂ ಅಪರಾಧವೆಂಬುದು ವ್ಯಾಪಕವಾಗುತ್ತಿದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲ ದೊಡ್ಡ ದೊಡ್ಡ ನಾಯಕರುಗಳು ಎಲ್ಲಾ ಕ್ಷೇತ್ರಗಳಲ್ಲೂ ಅಪರಾಧ ಮಾಡುತ್ತಲೇ ಇರುತ್ತಾರೆ. ಸಿನಿಮಾ ನಟನೊಬ್ಬ ಕೊಲೆ ಮಾಡುತ್ತಾನೆ, ಸ್ವಾಮೀಜಿಯೊಬ್ಬ ಅತ್ಯಾಚಾರ ಮಾಡುತ್ತಾನೆ, ನಟಿಯೊಬ್ಬಳು ವಂಚನೆ ಮಾಡುತ್ತಾಳೆ, ಪತ್ರಕರ್ತನೊಬ್ಬ ಬ್ಲಾಕ್ ಮೇಲ್ ಮಾಡುತ್ತಾನೆ, ಅಧಿಕಾರಿಯೊಬ್ಬ ಭ್ರಷ್ಟಾಚಾರ ಮಾಡುತ್ತಾನೆ, ರಾಜಕಾರಣಿಯೊಬ್ಬ ವಂಚನೆ ಮಾಡುತ್ತಾನೆ. ಹೀಗೆ ಬುದ್ದಿವಂತರೇ ತಪ್ಪು ದಾರಿ ಹಿಡಿಯುತ್ತಿದ್ದಾರೆ.

ಏಕೆಂದರೆ ಅಪರಾಧ ಶಾಸ್ತ್ರದ ಸಾಮಾನ್ಯ ಪ್ರಜ್ಞೆ ಅವರಿಗೆ ಇರುವುದೇ ಇಲ್ಲ. ಆದ್ದರಿಂದ ದಯವಿಟ್ಟು ನೀವು ಎಷ್ಟೇ ಒಳ್ಳೆಯವರಾಗಿರಿ, ಹೇಗೇ ಸರಳವಾಗಿ ಬದುಕುತ್ತಿರಿ, ಅಪರಾಧ ಶಾಸ್ತ್ರ ಎಂಬುದು ಸಮಾಜದಲ್ಲಿ ಅಸ್ತಿತ್ವದಲ್ಲಿದೆ. ಅದರ ಅರ್ಥ ನಮ್ಮ ತಿಳುವಳಿಕೆಗೆ ನಿಲುಕಿದ ಸಾಂಪ್ರದಾಯಿಕ, ಕಾನೂನಾತ್ಮಕ, ನೈತಿಕತೆಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಮತ್ತು ಇತರರು ನಮ್ಮ ಮೇಲೆ ಆ ವಿಷಯದಲ್ಲಿ ಒತ್ತಡ ಹೇರಿದಾಗ ನಾವು ಪೊಲೀಸ್ ಅಥವಾ ಕಾನೂನಿನ ಸಹಾಯ ಪಡೆಯಬೇಕು.

ಇದರ ನಂತರವೂ ನಮಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಈ ಸಮಾಜದಲ್ಲಿ ಅದನ್ನು ಸಹಿಸದೆ ಬೇರೆ ದಾರಿ ಇಲ್ಲ. ದೀರ್ಘಕಾಲದಲ್ಲಿ ನ್ಯಾಯ ದೊರೆಯಬಹುದು, ಕೆಲವೊಮ್ಮೆ ಶಾಶ್ವತ ಅನ್ಯಾಯವೂ ಆಗಬಹುದು. ಆದರೆ ನಾವು ಅಪರಾಧದಲ್ಲಿ ಭಾಗಿಯಾದರೆ ನಮ್ಮ ಬದುಕು ನಾಶವಾಗುವುದು ಖಚಿತ‌.

ಹಾಗೆಯೇ ನಮ್ಮ ಸುತ್ತಮುತ್ತಲು ನಡೆಯುವ ಅಪರಾಧಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದ್ದರೆ ಸ್ವಲ್ಪಮಟ್ಟಿಗೆ ಅನಿಸಿಕೆ ವ್ಯಕ್ತಪಡಿಸಬಹುದು. ಇಲ್ಲದಿದ್ದರೆ ಕುತೂಹಲಕ್ಕಾಗಿ ವಿಷಯ ತಿಳಿದುಕೊಳ್ಳಬಹುದೇ ಹೊರತು ಅದರ ಬಗ್ಗೆ ಖಚಿತ ನಿರ್ಧಾರ ಮಾಡುವ ಯಾವ ಅರ್ಹತೆಯೂ ನಮಗಿರುವುದಿಲ್ಲ. ಈ ಸಮಯಾವಕಾಶವನ್ನು ನಾವು ಇತರ ಅರ್ಥಪೂರ್ಣ ವಿಷಯಗಳ ಬಗ್ಗೆ ಯೋಚಿಸಿದರೆ ನಮ್ಮ ಮಾನಸಿಕ ಜೀವನಮಟ್ಟ ಖಂಡಿತವಾಗಲೂ ಉತ್ತಮಗೊಳ್ಳುತ್ತದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451..Watsapp)
9844013068……