ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಲು ಬಂದಿದ್ದೇವೆ: ಡಾ. ಆರ್ ವಿಶಾಲ್

ವಿಜಯ ದರ್ಪಣ ನ್ಯೂಸ್…..

ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಲು ಬಂದಿದ್ದೇವೆ: ಡಾ. ಆರ್ ವಿಶಾಲ್

ಶಿಡ್ಲಘಟ್ಟ : ಶಿಡ್ಲಘಟ್ಟವು ಹಿಂದುಳಿದ ತಾಲ್ಲೂಕು ಆಗಿದೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇನ್ನೂ ಏನೇನು ಅಭಿವೃದ್ದಿ ಕಾರ್ಯಗಳು ಆಗಬೇಕಿದೆ ಮುಖ್ಯವಾಗಿ ಏನೇನು ಕೊರತೆಗಳಿವೆ ಕಳೆದ ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂಬುದರ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆದು ಖುದ್ದು ಪರಿಶೀಲಿಸಲು ಬಂದಿರುವುದಾಗಿ
ಪ್ರೊ.ಗೋವಿಂದರಾವ್ ಸಮಿತಿ(ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ)ಯ ಸದಸ್ಯ ಕಾರ್ಯದರ್ಶಿ ಡಾ.ಆ‌ರ್.ವಿಶಾಲ್ ತಿಳಿಸಿದರು.

ನಗರಕ್ಕೆ ಭೇಟಿ ನೀಡಿದ ಅವರು,ನೆಹರೂ ಕ್ರೀಡಾಂಗಣ ಸಾರ್ವಜನಿಕ ಆಸ್ಪತ್ರೆ, ಹಲವೆಡೆ ಜಲ ಜೀವನ್ ಮಿಷನ್ ನಡಿ ಕಾಮಗಾರಿಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಂಡಿದ್ದು, ನಾಯಿ ಕಡಿತ, ಹಾವು ಕಡಿತಕ್ಕೆ ಚುಚ್ಚು ಮದ್ದು ಸೇರಿದಂತೆ ಔಷಗಳು ಲಭ್ಯವಿವೆ. ವೈದ್ಯರು ಮತ್ತು ಸಿಬ್ಬಂದಿಯ ನೇಮಕಾತಿ ಇನ್ನಷ್ಟು ಆಗಬೇಕಿದೆ. ಸರ್ಕಾರವು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಎಂದು ಆದೇಶಿಸಿದ್ದರೂ ಆಗಿರಲಿಲ್ಲ. ಇತ್ತೀಚೆಗೆ ಆಗಿದೆ ಎಂದು ಹೇಳಿದರು.

ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಸುರಕ್ಷಾ
ವಿಮೆ ಯೋಜನೆ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜನ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಆರ್ಥಿಕ ಇಲಾಖೆಯಡಿಯಲ್ಲಿ ನಬಾರ್ಡ್ ಮೂಲಕ ನಡೆಯುತ್ತಿರುವ ಆ‌ರ್.ಐ.ಡಿ.ಎಫ್. ಯೋಜನೆಗಳು, ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ, ಪಶು ಚಿಕಿತ್ಸಾ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಂಗಮಕೋಟೆ ವ್ಯಾಪ್ತಿಯ ಹೊಸಪೇಟೆ ಪಂಚಾಯತಿಯಲ್ಲಿ ಓವರ್ ಹೆಡ್ ಟ್ಯಾಂಕ್ ನ್ನು ವೀಕ್ಷಿಸಿದೆ ,ಜನರಿಗೆ ಈ ಯೋಜನೆಗಳು ಎಷ್ಟು ಪ್ರಯೋಜನಕಾರಿಯಾಗಿವೆ ಎನ್ನುವುದನ್ನು ತಿಳಿಯಲು ಸ್ಥಳ ಪರಿಶೀಲನೆ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮತ್ತು ನಾಗರಿಕರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಹೇಳಿದರು.

ಮುಖ್ಯವಾಗಿ ಜನಜೀವನ ಮಟ್ಟ ಸುಧಾರಣೆಗಾಗಿ ಸರ್ಕಾರ ಹಾಗೂ ಆಡಳಿತದಿಂದ ಇನ್ನಷ್ಟು ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಭೀಮಾ ಹಾಗೂ ಆರೋಗ್ಯ ವಿಮೆ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಆಗಬೇಕಿದೆ ಎಂದರು.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಬ್ಯಾಂಕ್ ನವರಿಗೂ ಸೂಚಿಸಿದ್ದು ಮಾಧ್ಯಮದವರು ಕೂಡ ಸಾರ್ವಜನಿಕರ ಹಿತಾಸಕ್ತಿಯಡಿ ಈ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಮಾಡಬೇಕು, ಜನರಿಗೆ ಆರೋಗ್ಯ ವಿಮೆ ಯೋಜನೆ ಉಪಯೋಗ ಸಿಗಬೇಕು, ಇದರಿಂದ ಸಾರ್ವಜನಿಕರಿಗೂ, ವ್ಯವಸ್ಥೆಗೂ ಒಳ್ಳೆಯದು ಎಂದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಮತ್ತು ಅವರ ಜತೆಗಿದ್ದವರನ್ನು, ಕ್ರೀಡಾಂಗಣದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ, ಮೂಲ ಸೌಕರ್ಯಗಳ ಬಗ್ಗೆ ಅಲ್ಲಿದ್ದ ಕ್ರೀಡಾಪಟುಗಳು, ಸಾರ್ವಜನಿರ ಬಳಿ ಅಭಿಪ್ರಾಯ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ತಹಶೀಲ್ದಾರ್ ಗಗನ ಸಿಂಧು, ಪೌರಾಯುಕ್ತ ಜಿ.ಅಮೃತ, ತಾಲ್ಲೂಕು ಪಂಚಾಯಿತಿ ಇಒ ಆ‌ರ್.ಹೇಮಾವತಿ ಪಾಲ್ಗೊಂಡಿದ್ದರು.

&&&&&&&&&&&&&&&&&&&&&&&&&

ಅಪಘಾತದ ಸಂದರ್ಭಗಳಲ್ಲಿ  ಪ್ರಥಮ ಚಿಕಿತ್ಸೆ ನೀಡಲು ತರಬೇತಿ: ಸಿ.ಬಿ. ಪ್ರಕಾಶ್

ಶಿಡ್ಲಘಟ್ಟ : ಅಪಘಾತದ ಸಮಯದಲ್ಲಿ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸೆ ತರಬೇತಿ, ಸ್ಕೌಟಿಂಗ್‌ನ ಇತಿಹಾಸ, ಸಮಾಜದೊಂದಿಗೆ ವಿದ್ಯಾರ್ಥಿಗಳ ಸಂವಹನ, ಸ್ವಯಂಶಿಸ್ತು ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಈ ಅಂಶಗಳನ್ನು ಪರೀಕ್ಷಾ ಶಿಬಿರದಲ್ಲಿ ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ಎಂದು ತಿಳಿಸಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2 ದಿನಗಳ ಕಾಲ ಜಿಲ್ಲಾಮಟ್ಟದ ನಿಪುಣ, ತೃತೀಯ ಸೋಪಾನ ಪರೀಕ್ಷಾ ಶಿಬಿರ ಮತ್ತು ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಸೇವಾ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ ವಿದ್ಯಾರ್ಥಿಗಳ ಬೆಳವಣಿಗೆಗೆ ಹಾಗೂ ಕೌಶಲಯುಕ್ತ ಜೀವನ ನಡೆಸಲು ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಜಗತ್ತಿನ 216 ದೇಶಗಳಲ್ಲಿ ಒಂದೇ ನಿಯಮ ಮತ್ತು ತತ್ವಗಳ ಆಧಾರದಲ್ಲಿ ನಡೆಯುತ್ತಿರುವ ಏಕ ಮಾತ್ರ ಸಮವಸ್ತ್ರಧಾರಿ ಸಂಸ್ಥೆಯಾಗಿದ್ದು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಾಲಕರು ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಗೆ ಮಕ್ಕಳನ್ನು ಸೇರಿಸಬೇಕು ಎಂದರು.

ಈ ಸಾಲಿನಲ್ಲಿ ರಾಜ್ಯಪಾಲರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ಅವರಿಗಾಗಿ ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ಜಿಲ್ಲಾ ಪುರಸ್ಕಾರಕ್ಕಾಗಿ ತೃತೀಯ ಸೋಪಾನ ಪರೀಕ್ಷಾ ಶಿಬಿರ ನಡೆಸಲಾಯಿತು ತೃತೀಯ ಸೋಪಾನ ಶಿಬಿರದಲ್ಲಿ ಉತ್ತೀರ್ಣಗೊಳ್ಳುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮುಂದಿನ ಸಾಲಿಗೆ ರಾಜ್ಯಪಾಲರ ಪ್ರಮಾಣ ಪತ್ರಕ್ಕಾಗಿ ರಾಜ್ಯ ಪುರಸ್ಕಾರ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲಿದ್ದಾರೆ ಎಂದರು.

ಈ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 30 ರೋವರ್ಸ್ ಮತ್ತು ರೇಂಜರ್ಸ್‌ಗಳು, 140 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, 18 ಶಿಕ್ಷಕರು, ಎಲ್ಲಾ ತಾಲ್ಲೂಕು ಸಂಸ್ಥೆಗಳ ಕಾರ್ಯದರ್ಶಿಗಳು, ಪದಾಧಿಕಾರಿಗಳು ಸೇರಿ 200 ಜನ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಥಮದರ್ಜೆ ಕಾಲೇಜಿನ ರೋವರ್ ಲೀಡರ್ ರವಿಕುಮಾರ್, ಚಿಕ್ಕಬಳ್ಳಾಪುರ ತಾಲ್ಲೂಕು ಕಾರ್ಯದರ್ಶಿ ನಾರಾಯಣಸ್ವಾಮಿ, ಗೌರಿಬಿದನೂರು ತಾಲ್ಲೂಕು ಕಾರ್ಯದರ್ಶಿ ಗಿರಿಧ‌ರ್, ಶಿಡ್ಲಘಟ್ಟ ತಾಲ್ಲೂಕು ಕಾರ್ಯದರ್ಶಿ ಮುನಿರಾಜು, ಸಹಕಾರ್ಯದರ್ಶಿ ನಾಗರಾಜು, ಜಿಲ್ಲಾ ಸಮಿತಿ ಸದಸ್ಯ ನರಸಿಂಹಮೂರ್ತಿ, ಜಿಲ್ಲಾ ಸಮಿತಿ ಸದಸ್ಯೆ ಕೀರ್ತಿಬಸಪ್ಪಲಗಳಿ, ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿ ಉಮಾ, ಜಿಲ್ಲಾ ತರಬೇತಿ ಆಯುಕ್ತರುಗಳಾದ ಲಕ್ಷ್ಮೀಹೊನ್ನಪ್ಪ ನಾಯ್ಕ, ರಾಮಪ್ರಸಾದ್, ಶಿಕ್ಷಕರಾದ ರಾಕೇಶ್,ಗಂಗರತ್ಮಮ್ಮ, ಅಮಲಾ, ನರಸಿಂಹಮೂರ್ತಿ ಮುಂತಾದವರು ಹಾಜರಿದ್ದರು.