ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್

ವಿಜಯ ದರ್ಪಣ ನ್ಯೂಸ್…..

ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಭೇಟಿ

ಜಿಲ್ಲೆಯಲ್ಲಿ 202 ಕುಷ್ಠರೋಗ ಸಕ್ರಿಯ ಪ್ರಕರಣಗಳು

ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಆ.22 :ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಡಾ.ಪ್ರದೀಪ್ತಾ ಕುಮಾರ ನಾಯಕ್ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಷ್ಠರೋಗ ಪ್ರಕರಣಗಳ ಸಮೀಕ್ಷೆ ಹಾಗೂ ಸರ್ಕಾರದ ಸೌಲಭ್ಯಗಳ ಬಗೆಗಿನ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೋಗದ ಆರಂಭಿಕ ಲಕ್ಷಣಗಳ ಪತ್ತೆಯಿಂದ ಕುಷ್ಠರೋಗವನ್ನು ನಿಯಂತ್ರಿಸಬಹುದು. ರೋಗದ ಲಕ್ಷಣಗಳು ಕಂಡುಬಂದ ತಕ್ಷಣವೇ ಅದನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ, ಪ್ರಾಥಮಿಕ ಹಂತದಲ್ಲಿಯೇ ವೈದ್ಯಕೀಯ ಸೇವೆಗಳನ್ನು ನೀಡುವುದರಿಂದ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಆರೋಗ್ಯ ಇಲಾಖೆ ಜೊತೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಿ. ಎಲ್ಲಾ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆ ಇಂದ ಕುಷ್ಠರೋಗ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ 202 ಸಕ್ರಿಯ ಪ್ರಕರಣಗಳು
ಕುಷ್ಠರೋಗ ಹೊಂದಿರುವ ಮತ್ತು ಕುಷ್ಠರೋಗದಿಂದ ಅಂಗವಿಕಲತೆಗೆ ಬಾಧಿತರಾದ ಐವರು ಮಕ್ಕಳು ಸೇರಿದಂತೆ ಒಟ್ಟು 202 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈ ರೋಗದಿಂದ ಬಳಲುವವರಿಗೆ ಇಲಾಖೆಯಿಂದ ದೃಢೀಕರಣ ಪತ್ರಗಳನ್ನು ನೀಡಿ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಅವರಿಗೆ ಪೂರೈಸುವಂತೆ ಮಾಡಬೇಕು.

ಸಂಬಂಧಪಟ್ಟ ಇಲಾಖೆಗಳು ಸರ್ಕಾರದಿಂದ ಸಿಗುವ ಆರೋಗ್ಯ ಸೇವೆ, ಪಿಂಚಣಿ ಸೌಲಭ್ಯ, ಮನೆ ಸೌಲಭ್ಯ, ರೇಷನ್, ಶಿಕ್ಷಣ ಹಾಗೂ ಇತರೆ ಸವಲತ್ತುಗಳು ಎಲ್ಲಾ ಸಂತ್ರಸ್ತರಿಗೆ ಸಿಗಬೇಕು. ಸಮಾಜದ ಮುನ್ನೆಲೆಗೆ ಅವರನ್ನು ತಂದು ಸಾಮಾನತೆಯಿಂದ ಕಾಣುವುದು ಮಾನವವೀಯತೆ ಗುಣ. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆಎನ್ ಅನುರಾಧ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ಉಮಾ ಎಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗರಾಜ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

@@@@@@@@@@@@@@@@@@@@

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗದಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾಂ.ಜಿಲ್ಲೆ. ಆಗಸ್ಟ್,22: ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗದಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಕುರಿ ಸಾಕಾಣಿಕೆ ಯೋಜನೆ (ಕಿರು ಆರ್ಥಿಕ ಚಟುವಟಿಕೆಗಳಿಗೆ)ಮತ್ತು ನೇರ ಸಾಲ ಯೋಜನೆ (ಸಹಾಯಧನ ಗರಿಷ್ಠ ರೂ,2 ಲಕ್ಷ). ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ಹೈನುಗಾರಿಕೆ (ಸಹಾಯಧನ ಗರಿಷ್ಠ ರೂ, 1.25 ಲಕ್ಷ), ಫಾಸ್ಟ್ ಫುಡ್ ಟ್ರಕ್, ಟ್ರೈಲರ್/ ಮೊಬೈಲ್ ಕಿಚನ್ ಫುಡ್ ಕಿಯೋಸ್ಟ್ (ಸಹಾಯಧನ ಗರಿಷ್ಠ ರೂ, 4 ಲಕ್ಷ), ಸ್ವಾವಲಂಭಿ ಸಾರಥಿ ಯೋಜನೆ (ಸರಕು ವಾಹನ/ಟ್ಯಾಕ್ಸಿ ಹಳದಿ ಬೋರ್ಡ್, ಸಹಾಯಧನ ಗರಿಷ್ಠ ರೂ,4 ಲಕ್ಷ). ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ. ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕಾರ್ಮಿಕರಿಗೆ ಭೂಮಿಯನ್ನು ಖರೀದಿಸಲು ಸಹಾಯಧನ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸುವ ಸೌಲಭ್ಯ.

ಅರ್ಹ ಫಲಾನುಭವಿಗಳು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯದವರು ಅರ್ಜಿಗಳನ್ನು ನೇರವಾಗಿ ಅನ್ ಲೈನ್ ಮೂಲಕ ಅಧಿಕೃತ ಜಾಲತಾಣವಾದ https://sevasindhu.karnataka.gov.in ನಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಗಳಲ್ಲಿ ಅರ್ಜಿಯನ್ನು ಸೆಪ್ಟೆಂಬರ್ 10 ರೊಳಗೆ ಸಲ್ಲಿಸಬೇಕು.

2023-24 ಮತ್ತು 2024-25ನೇ ಸಾಲಿನಲ್ಲಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ ಅಥವಾ ಆಯಾ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳನ್ನು ದೇವನಹಳ್ಳಿ – 8050854019, ದೊಡ್ಡಬಳ್ಳಾಪುರ – 8050854020, ಹೊಸಕೋಟೆ – 8050854021, ನೆಲಮಂಗಲ – 8050854022 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.