ದುಸ್ಥಿತಿಯಲ್ಲಿ ಬದುಕುತ್ತಿದ್ದ ಸಮಾಜನ್ನು ಮೇಲೆತ್ತಿದ ಮಹಾನ್ ಶಕ್ತಿ ನಾರಾಯಣ ಗುರುಗಳು
ವಿಜಯ ದರ್ಪಣ ನ್ಯೂಸ್….
ದುಸ್ಥಿತಿಯಲ್ಲಿ ಬದುಕುತ್ತಿದ್ದ ಸಮಾಜನ್ನು ಮೇಲೆತ್ತಿದ ಮಹಾನ್ ಶಕ್ತಿ ನಾರಾಯಣ ಗುರುಗಳು
ಕೋಲಾರ: ಹೆಣ್ಣು ಮಕ್ಕಳು ಕುಪ್ಪಸ ತೊಡಬಾರದಿತ್ತು, ಸೀರೆ, ಮೊಣಕಾಲಿಗಿಂತ ಮೇಲೆ ಉಡಬೇಕಿತ್ತು , ಸ್ಥನಕರ ನೀಡಬೇಕಿತ್ತು ಇಂತಹ ದುಸ್ಥಿತಿಯಲ್ಲಿ ಬದುಕುತ್ತಿದ್ದ ಸಮಾಜನ್ನು ಮೇಲೆತ್ತಿದ ಮಹಾನ್ ಶಕ್ತಿ ನಾರಾಯಣ ಗುರುಗಳು ಎಂದು ಸಿಸಿಬಿಯ ನಿವೃತ್ತ ಪೊಲೀಸ್ ಸಹಾಯಕ ಕಮಿಷನರ್ ಆದ ಬಿಕೆ ಶಿವರಾಂ ನುಡಿದರು.
ಕೋಲಾರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಆರ್ಯ ಈಡಿಗ ಜನಾಂಗದ ಕೌಶಲ್ಯಾಭಿವೃದ್ಧಿ ಸಂಘ ,ಶ್ರೀ ನಾರಾಯಣಗುರು ಚಾರಿಟಬಲ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ಆಚರಿಸಲಾದ ಬ್ರಹ್ಮರ್ಷಿ ನಾರಾಯಣ ಗುರುಗಳ171ನೇ ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕೇವಲ 170 ವರ್ಷಗಳ ಹಿಂದೆ ಮಹಿಳೆಯರನ್ನು ಮನುಷ್ಯರೇ ಅಲ್ಲ ಎನ್ನುವ ರೀತಿ ನೋಡಲಾಗುತ್ತಿತ್ತು. ಪುರಾಹಿತಶಾಹಿ ಜನರು ಉಳಿದ ದಲಿತ ವರ್ಗವನ್ನು 20-30 ಹೆಜ್ಜೆಗಳ ದೂರದಲ್ಲಿ ನಿಂತು ಮಾತನಾಡುವಂತೆ ನೋಡುತ್ತಿತ್ತು. ದೇವಾಲಯ ಪ್ರವೇಶವಲ್ಲ ,ದೇವಾಲಯದ ರಸ್ತೆಗೂ ಪ್ರವೇಶವಿರಲಿಲ್ಲ ಅಂತಹ ಸಂದರ್ಭದಲ್ಲಿ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವದೊಂದಿಗೆ ಜಗತ್ತಿನ ಪ್ರತಿ ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾನ್ ಗುರುಗಳು ಬ್ರಹ್ಮಶ್ರೀ ನಾರಾಯಣ ಗುರುಗಳು ಅವರ ಹಾದಿ ಸುಗಮವಾಗಿರಲಿಲ್ಲ. ಬಹು ಕಷ್ಟಪಟ್ಟು ಸಮಾಜದ ಕೆಳವರ್ಗದ ಜನಕ್ಕೆ ಸಾಕಷ್ಟು ಶ್ರಮಿಸಿದ ಮಹಾನ್ ದರ್ಶನಿಕರು ಅವರು. ಅದಕ್ಕಾಗಿಯೇ ಅವರು ವಿದ್ಯೆ ಪ್ರತಿಯೊಬ್ಬರಿಗೂ ಲಭ್ಯ ವಾಗಬೇಕು ಎಂದು ಶ್ರಮಿಸಿದರು. ಕೇರಳ ಈಗ ಸಾಕ್ಷರತೆಯಲ್ಲಿ ಇಷ್ಟು ಮುಂದುವರೆದಿದೆ ಎಂದರೆ ಅದಕ್ಕೆ ಮೂಲ ಕಾರಣ ನಾರಾಯಣ ಗುರುಗಳು ಎಂದು ಅವರು ನುಡಿದರು.
ಶ್ರೀ ನಾರಾಯಣ ಗುರು ಮಹಾಸಂಸ್ಥಾನ ದ ಗುರುಗಳಾದ ರೇಣುಕಾನಂದ ಮಹಾಸ್ವಾಮಿಗಳು ಮಾತನಾಡುತ್ತಾ ವಿದ್ಯೆಯಿಂದ ಸ್ವತಂತ್ರರಾಗಿ ಹೋರಾಟದಿಂದ ಬಲಯುತರಾಗಿ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ ನಾರಾಯಣ ಗುರುಗಳ ಮಾರ್ಗದಲ್ಲಿ ನಡೆದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಅತ್ಯಂತ ಕೆಳ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ದಾರ್ಶನಿಕರಾದ ನಾರಾಯಣ ಗುರುಗಳು ಸೇವೆಯ ನಿಜವಾದ ಅರ್ಥವನ್ನು ನಮಗೆ ತಿಳಿಸಿ ಕೊಟ್ಟಿದ್ದಾರೆ. ಸೇವೆಯ ಮೂಲಕ ಬದುಕನ್ನು ಹೇಗೆ ಸಾರ್ಥಕ ಪಡಿಸಿಕೊಳ್ಳಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾವು ಸಾಗಿದರೆ ಸಾಕು ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅವರು ನುಡಿದರು.
ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿ.ಸಿ .ರಮೇಶ್ ರವರು ಮಾತನಾಡುತ್ತಾ ಒಂದು ಸಮುದಾಯದ ಜಿಲ್ಲಾ ಅಧ್ಯಕ್ಷನಾಗಿ ದುಡಿದಿರುವುದು ನನಗೆ ತೃಪ್ತಿ ಕೊಟ್ಟಿದೆ. ಆದರೂ ಅಧ್ಯಕ್ಷರ ಪದವಿ ಹೂವಿನ ಕಿರೀಟವಲ್ಲ, ಮುಳ್ಳಿನ ಕಿರೀಟವೆಂಬುದು ಅರ್ಥವಾಗಿದೆ. ಜೊತೆಗೆ ಸೇವೆ ಮಾಡುತ್ತಾ ಸಾಗಿದರೆ ಪ್ರತಿಯೊಬ್ಬರ ಮನ ಗೆಲ್ಲಲು ಸಾಧ್ಯವಾಗುತ್ತದೆ. ಆ ಕಾರಣದಿಂದ ಒಂದು ಟ್ರಸ್ಟ್ ಅನ್ನು ಆರಂಭಿಸಿದ್ದು ಆ ಟ್ರಸ್ಟ್ ನ ಮೂಲಕ ಅನೇಕ ಜನಪರ ಕಾರ್ಯಗಳು ಮಾಡುವ ಉದ್ದೇಶ ನನ್ನದಾಗಿದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಕೋಲಾರ ನಗರಸಭಾಧ್ಯಕ್ಷೆ ಮಹಾಲಕ್ಷ್ಮಿ ರಮೇಶ್ ತಹಸೀಲ್ದಾರ್ ಅಸ್ಮಿನ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ನಾರಾಯಣ ಗುರು ಮಹಾಸಂಸ್ಥಾನದ ಸಂಸ್ಥಾಪಕರಾದ ಅಂಬರೀಶ್ ಕರ್ನಾಟಕ ರಾಜ್ಯ ಈಡಿಗ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಹನುಮಂತಪ್ಪ ಮುನಿರಾಜು, ರಾಜೇಂದ್ರ, ನಾರಾಯಣಪ್ಪ , ಆದಿ ನಾರಾಯಣ, ಕೊಲದೇವಿ ಗಂಗಾಧರ, ವೆಂಕಟ ಪತಿ, ರತ್ನಮ್ಮ ಚಂದ್ರಪ್ಪ, ವಿದ್ಯಾನಂದನ್, ಶಿವದಾಸ್, ಮುಂತಾದವರು ಭಾಗವಹಿಸಿದ್ದರು