ಶ್ರೇಷ್ಠತೆಗೆ ಬೇಕು ಏಕಾಗ್ರತೆ
ವಿಜಯ ದರ್ಪಣ ನ್ಯೂಸ್….
ಶ್ರೇಷ್ಠತೆಗೆ ಬೇಕು ಏಕಾಗ್ರತೆ
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಮಹಾಭಾರತದಲ್ಲಿ ಒಂದು ಕಥೆ ಬರುತ್ತದೆ. ಭೀಮ ಮತ್ತು ಅರ್ಜುನ ಇಬ್ಬರೂ ಶಿವನ ದೊಡ್ಡ ಭಕ್ತರು. ಅರ್ಜುನ ದಿನವೂ ಶಿವನನ್ನು ಎರಡು ಗಂಟೆಗಳ ಕಾಲ ಪ್ರಾರ್ಥಿಸುತ್ತಿದ್ದ. ಆದರೆ ಭೀಮ ಕೇವಲ ಎರಡು ನಿಮಿಷ ಪ್ರಾರ್ಥಿಸುತ್ತಿದ್ದ. ಒಂದು ದಿನ ಪ್ರಾರ್ಥನೆ ಮಾಡುವಾಗ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಅರ್ಜುನ ತನ್ನ ಮತ್ತು ಭೀಮನ ನಡುವೆ ನಿಮ್ಮ ಉತ್ತಮ ಭಕ್ತ ಯಾರು ಎಂದು ಶಿವನನ್ನು ಕೇಳುತ್ತಾನೆ. ಹಾಗೆ ಕೇಳುವಾಗ ಅರ್ಜುನನಿಗೆ ಶಿವನ ಉತ್ತಮ ಭಕ್ತ ತಾನೆ ಎಂದು ಖಚಿತವಾಗಿ ಅನಿಸಿರುತ್ತದೆ. ಆದರೆ ಶಿವ ನನ್ನ ಉತ್ತಮ ಭಕ್ತ ಭೀಮ ಎಂದು ಹೇಳುತ್ತಾನೆ. ಆಗ ಅರ್ಜುನ ಅಚ್ಚರಿಯಿಂದ ಶಿವನನ್ನು ಕೇಳುತ್ತಾನೆ. ‘ನಾನು ಪ್ರತಿದಿನ ಎರಡು ಗಂಟೆ ಪ್ರಾರ್ಥನೆ ಮಾಡುತ್ತೇನೆ. ಆದರೆ ಭೀಮ ಕೇವಲ ಎರಡೇ ನಿಮಿಷ ಪ್ರಾರ್ಥನೆ ಮಾಡುತ್ತಾನೆ. ಹಾಗಾದರೆ ಭೀಮ ಹೇಗೆ ಉತ್ತಮ ಭಕ್ತ?’ ಆಗ ಏಕಾಗ್ರತೆಯ ಬಗ್ಗೆ ಶಿವ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ. ‘ನೀನು ಪ್ರಾರ್ಥನೆ ಮಾಡುವಾಗ ನಿನ್ನ ತಲೆಯಲ್ಲಿ ಸಾಕಷ್ಟು ಆಲೋಚನೆಗಳು ಹಾದು ಹೋಗುತ್ತವೆ. ಆದರೆ ಭೀಮ ಕೇವಲ ಎರಡೇ ನಿಮಿಷ ಪ್ರಾರ್ಥಿಸಿದರೂ ಅಪಾರ ಏಕಾಗ್ರತೆಯಿಂದ ಪ್ರಾರ್ಥಿಸುತ್ತಾನೆ.’ ಆದ್ದರಿಂದ ಅವನೇ ನನ್ನ ಉತ್ತಮ ಭಕ್ತ.
ಮೇಲಿನ ಕಥೆಯಿಂದ ನಮಗೆ ತಿಳಿಯುವುದೇನೆಂದರೆ ನಾವು ಮಾಡುವ ಕೆಲಸದಲ್ಲಿ ತಲ್ಲೀನರಾಗಿರಬೇಕು ಅಂದಾಗ ಮಾತ್ರ ಅದು ಫಲ ನೀಡುವುದು ಸಾರ್ಥಕವಾಗುವುದು. ಏಕಾಗ್ರತೆ ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ.
ಬೇಡಿಕೆ

ಜೀವನದ ಪ್ರತಿಯೊಂದು ಘಟ್ಟದಲ್ಲೂ ಪ್ರತಿ ಕ್ಷೇತ್ರದಲ್ಲೂ ಏಕಾಗ್ರತೆಯ ಬೇಡಿಕೆ ಇದ್ದೇ ಇದೆ. ಯಾವುದೇ ಕೆಲಸವಿರಲಿ,ಯಾವುದೇ ಆಟವಿರಲಿ, ನಿಗದಿತ ಗುರಿ ತಲುಪುವುದಿರಲಿ, ಹಿಡಿದ ಕೆಲಸ ಸರಿಯಾಗಿ ಮಾಡಿ ಮುಗಿಸಲು ಏಕಾಗ್ರತೆ ಬೇಕೇ ಬೇಕು. ಅದರಲ್ಲೂ ಅಧ್ಯಯನ, ಹೊಸ ಕಲಿಕೆಯಂತಹ ವಿಷಯಗಳಲ್ಲಂತೂ ಏಕಾಗ್ರತೆ ಅತಿ ಮುಖ್ಯವಾಗಿರುತ್ತದೆ. ಏಕಾಗ್ರತೆ ಇಲ್ಲದಿದ್ದರೆ ಕಿರಿಕಿಯಾಗುವುದು. ಸರಳವಾಗಿ ಹೇಳುವುದಾದರೆ ಗಮನವಿಲ್ಲದೇ ಯಾವುದನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ.
ಹೊರಗೆ ಹರಿಯುವುದು
ಗಮನವು ಹೊರಗಿನ ಪ್ರಪಂಚದೆಡೆಗೆ ಹರಿಯುತ್ತದೆ. ಇದು ಅದರ ಮೂಲಸ್ವಭಾವ. ಹಾಗಂತ ಅದನ್ನು ಹಾಗೆ ಬಿಟ್ಟರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅಲೆಯುವ ಚಂಚಲ ಮನಸ್ಸನ್ನು ಒಂದೆಡೆ ಕಟ್ಟಿಹಾಕಬೇಕು. ಕುಳಿತಲ್ಲಿಂದಲೇ ಇಡೀ ಜಗತ್ತನ್ನು ಸುತ್ತಿ ಬರುವ, ಏನೇನೋ ಕಲ್ಪಿಸುವ, ನೂರಾರು ದಿಕ್ಕುಗಳಲ್ಲಿ ಅಲೆದು ಬರುವ ಮನಸ್ಸನ್ನು ಒಂದೆಡೆ ಹಿಡಿದು ನಿಲ್ಲಿಸುವುದು ನಾವಂದುಕೊಂಡಂತೆ ಸುಲಭದ ಕೆಲಸವೇನಲ್ಲ. ಹಾಗಂತ ಆಗದ ಕೆಲಸವವೂ ಅಲ್ಲ. ನಿರ್ಧಿಷ್ಟವಾಗಿ ಹೇಳುವುದಾದರೆ ಕಷ್ಟಸಾಧ್ಯದ ಕೆಲಸ.
ಏಕಾಗ್ರತೆ ಎಂದರೆ?
ಒಂದೇ ವಿಷಯದ ಮೇಲೆ ಇಲ್ಲವೇ ನಿರ್ಧಿಷ್ಟ ಕೆಲಸದ ಮೇಲೆ ಮನಸ್ಸನ್ನು ಮತ್ತು ಗಮನವನ್ನು ಕೇಂದ್ರೀಕರಿಸುವ ಗುಣ. ಇದು ಯಾವುದಾದರೂ ಒಂದು ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿದೆ. ಇನ್ನೂ ವಿವರವಾಗಿ ಹೇಳಬೇಕೆಂದರೆ ಒಂದೇ ಒಂದು ಕೆಲಸಕ್ಕೆ ಅಥವಾ ವಿಷಯಕ್ಕೆ ಮಹತ್ವ ನೀಡಿ ಅದರಲ್ಲೇ ಮಗ್ನರಾಗುವುದು ಒಂದೇ ಚಟುವಟಿಕೆಯನ್ನು ಬೇರೆ ಕಡೆ ತಲೆ ಹಾಕದೇ ಮಾಡುವುದು. ವಿಶೇಷವಾಗಿ ಒಂದೇ ವಿಷಯ, ಕೆಲಸ ಇಲ್ಲವೇ ವಸ್ತುವಿನ ಕಡೆಗೆ ಗಮನವನ್ನು ಕೇಂದ್ರೀಕರಿಸುವುದು. ಇದು ಎಲ್ಲ ಶಕ್ತಿಯ ಮೂಲವೂ ಹೌದು.
ಕಾರಣ
ಏಕಾಗ್ರತೆಯ ಕೊರತೆಯು ವಿವಿಧ ಕಾರಣಗಳಿಂದ ಆಗುತ್ತದೆ. ಅದರಲ್ಲಿ ಬಹು ಮುಖ್ಯವಾದುದೆಂದರೆ ಪೌಷ್ಠಿಕ ಆಹಾರದ ಕೊರತೆ ಅಂದರೆ ಬೇಡದ ಜಂಕ್‌ಫುಡ್‌ಗಳ ಸೇವನೆ ಮತ್ತು ನಿದ್ರಾಹೀನತೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ರಾತ್ರಿ ಹೊತ್ತು ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಇದರ ಕಾರಣದಿಂದಾಗಿ ನಿದ್ದೆ ಸಕಾಲಕ್ಕೆ ಸರಿಯಾಗಿ ಆಗದೇ ಇರುವುದರಿಂದ ಕೆಲಸದ ಕಡೆಗೆ ಗಮನ ಹರಿಸುವುದು ಸಾಧ್ಯವಾಗದೇ ಹೋಗುತ್ತದೆ. ಒತ್ತಡ, ಆತಂಕ ಅದರೊಂದಿಗೆ ದಣಿವು ಸಹ ಏಕಾಗ್ರತೆಗೆ ಭಂಗ ತರುತ್ತದೆ.
ಕೊರತೆ
ಏಕಾಗ್ರತೆಯ ಕೊರತೆಯಿಂದಾಗಿ ಮಾಡುವ ಕೆಲಸಗಳೆಲ್ಲ ಅರ್ಧಂಬರ್ಧ ಆಗಿಬಿಡುತ್ತವೆ. ಯಾವುದೇ ವಯಸ್ಸಿನವರಿರಲಿ ಏಕಾಗ್ರತೆ ಕೊರತೆ ಖಂಡಿತ ಕಂಡು ಬರುತ್ತದೆ. ಅದರಲ್ಲೂ ಪರೀಕ್ಷೆಗಳನ್ನು ಎದುರಿಸುವ ಸ್ಪರ್ಧಾರ್ಥಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಲ್ಲಂತೂ ಏಕಾಗ್ರತೆ ಕೊರತೆ ಎದ್ದು ಕಾಣುತ್ತದೆ. ಅಂದ ಹಾಗೆ ಏಕಾಗ್ರತೆ ಕೊರತೆ ಎನ್ನುವುದು ವೈಯಕ್ತಿಕ ಗುಣದೋಷವೇನಲ್ಲ. ಹಾಗೆಯೇ ವೈಯಕ್ತಿಕ ಗುಣಸ್ವಭಾವವೂ ಅಲ್ಲ. ನಿರಂತರ ಅಭ್ಯಾಸದಿಂದ ಏಕಾಗ್ರತೆಯ ಕೊರತೆಯನ್ನು ನೀಗಿಸಬಹುದು.
ಏಕಾಗ್ರತೆ ಕೊರತೆ ನೀಗಿಸಲು ಇಲ್ಲಿವೆ ಕೆಲ ಸಲಹೆಗಳು
ಅವಲೋಕನ
ಮನಸ್ಸು ಹುಮ್ಮಸ್ಸಿನಿಂದ ಕೂಡಿದ್ದರೆ ಉತ್ಸಾಹದಿಂದ್ದರೆ ಏಕಾಗ್ರತೆಯನ್ನು ಸಾಧಿಸುವುದು ದೊಡ್ಡದನಿಸುವುದಿಲ್ಲ. ಏಕಾಗ್ರತೆಯಿದ್ದರೆ ಮಾತ್ರ ಯಾವುದೇ ವಿಷಯವನ್ನು ಆಳವಾಗಿ ತಿಳಿಯಬೇಕೆಂದರೆ ಸಾವಕಾಶವಾಗಿ ಅವಲೋಕಿಸುವುದು ಅವಶ್ಯಕವಾಗಿರುತ್ತದೆ. ಹೀಗೆ ಮಾಡಿದಾಗ ಮಾತ್ರ ಯಶಸ್ಸು ಕೈಗೆಟುಕುವುದು. ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆಯಬೇಕು, ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕೆನ್ನುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ? ಎಲ್ಲರಿಗೂ ರ‍್ಯಾಂಕ್ ಬೇಕು ಉತ್ತಮ ಉದ್ಯೋಗ ಬೇಕು. ಮನಸ್ಸಿನಲ್ಲಿ ಮಹಾದಾಸೆ ಏನೋ ಇದೆ. ಮನಸ್ಸಿನಲ್ಲಿ ಮಂಡಿಗೆ ತಿಂದರೆ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಅವಲೋಕನವನ್ನು ಬೆಳೆಸಿಕೊಂಡರೆ ಏಕಾಗ್ರತೆ ಸಾಧ್ಯ.
ವಿಚಲಿತ
ಇನ್ನೇನು ಕೆಲಸದಲ್ಲಿ ಮುಳಗಬೇಕೆನ್ನುವಾಗ ಎಲ್ಲೆಲ್ಲೋ ಕರೆದುಕೊಂಡು ಹೋಗುವ ಬೇಡದ ಇಲ್ಲ ಸಲ್ಲದ ಯೋಚನೆಗಳು ಸುತ್ತುವರೆಯುತ್ತವೆ. ನಿರ್ಧಿಷ್ಟ ಕೆಲಸದತ್ತ ಸರಿಯಾಗಿ ಕೇಂದ್ರೀಕರಿಸಲು ಗಮನ ವಿಚಲಿತ ಆಗದಂತೆ ನೋಡಿಕೊಳ್ಳಬೇಕು. ಅವಶ್ಯಕವಿಲ್ಲದ ವಸ್ತುಗಳಿಂದ ದೂರವಿರಬೇಕು. ಅಂದರೆ ಟಿವಿ ಮೊಬೈಲ್ ಫೋನ್‌ಗಳಂಥ ವಿಚಲಿತ ವಸ್ತುಗಳಿಂದ ದೂರವಿರುವುದು. ಆಗ ಮನಸ್ಸು ಶಾಂತರೀತಿಯಲ್ಲಿ ಬೇಕಾದ ವಿಷಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದು
ಕಾರ್ಯಗಳ ಪಟ್ಟಿ
ಈ ದಿನ ಏನೇನು ಮಾಡಬೇಕೆಂಬುದು ಸರಿಯಾಗಿ ಯೋಜನೆ ಮಾಡದೇ ಇದ್ದರೆ ಗಮನ ಒಂದೆಡೆ ಹರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನಾಳೆಯ ದಿನ ಆರಂಭವಾಗುವ ಮೊದಲೇ ಹಿಂದಿನ ದಿನ ರಾತ್ರಿ ಕೆಲಸದ, ಅಭ್ಯಾಸದ ಪಟ್ಟಿಯನ್ನು ಮಾಡಿಟ್ಟುಕೊಂಡರೆ ಗಮನಹರಿಸಬೇಕಾದ ವಿಷಯಗಳಿಗೆ ಪ್ರಾಮುಖ್ಯತೆ ದೊರೆಯುತ್ತದೆ. ಅಷ್ಟೇ ಅಲ್ಲ ಯೋಜನೆಯಿಂದ ಮೆದುಳು ಹೆಚ್ಚು ಕ್ರಿಯಾತ್ಮಕವಾಗುವುದು.
ವೀಕ್ಷಿಸಿ
ಅಭ್ಯಾಸದಿಂದ, ಕೆಲಸದಿಂದ ತಲೆ ಚಿಟ್ಟು ಹಿಡಿದಿದೆ ಎನಿಸುತ್ತಿದೆ ಎಂದು ಕೆಲವರು ಹೇಳುವುದನ್ನು ಕೇಳಿರುತ್ತೇವೆ. ಒಮ್ಮೊಮ್ಮೆ ನಮಗೂ ಅಂಥ ಅನುಭವ ಆಗಿರುತ್ತದೆ. ಆ ಸಂದರ್ಭದಲ್ಲಿ ಮುದ್ದಾದ ನಾಯಿ, ಬೆಕ್ಕು, ಸಾಕುಪ್ರಾಣಿಗಳ ಚಿತ್ರ ವೀಕ್ಷಿಸಬೇಕು. ಮನಸ್ಸಿಗೆ ಮರಳಿ ಕೆಲಸ ಮಾಡಲು ಉತ್ಸಾಹ ಚಿಮ್ಮುತ್ತದೆ. ಇದೇನು ವಿಚಿತ್ರ ಎನಿಸುತ್ತದೆ ಅಲ್ಲವೇ? ಜಪಾನ್‌ನಲ್ಲಿ ನಡೆಸಿದ ಸಂಶೋಧನೆ ಇದನ್ನು ಸಾಬೀತು ಪಡಿಸಿದೆ. ಮುದ್ದಾದ ಪ್ರಾಣಿಗಳನ್ನು ವೀಕ್ಷಿಸಿದವರು ಪ್ರಜ್ಞಾಪೂರ್ವಕವಾಗಿ ಮತ್ತು ಮುತುವರ್ಜಿಯಿಂದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆಂದು ವರದಿ ತಿಳಿಸಿದೆ.
ಯೋಗಾಸನ
ಯೋಗಾಸನದ ನಂತರ ಏಕಾಗ್ರತೆ ಹೆಚ್ಚುತ್ತದೆ ಎಂಬುದು ಬರ್ಲಿನ್ ವಿಶ್ಸವಿದ್ಯಾಲಯವು ಬಹಳಷ್ಟು ಹಿಂದೆಯೇ ಸಾಬೀತು ಪಡಿಸಿದೆ. ಯಾವುದಾದರೂ ವಿಷಯದ ಮೇಲೆ ಗಮನ ಹರಿಸಬೇಕಾದಾಗ ಉಸಿರಾಟವನ್ನು ನಿಧಾನಗೊಳಿಸಬೇಕು. ಇದು ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಸಹಕಾರಿ.
ತರಬೇತಿ
ಮೆದುಳಿಗೆ ತರಬೇತಿ ನೀಡುವುದರ ಮೂಲಕ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು. ಇದೊಂದು ತರಹ ವ್ಯಾಯಾಮದ ವೇಳೆ ಸ್ನಾಯುಗಳಿಗೆ ತರಬೇತಿ ನೀಡಿದಂತೆ. ಪಜಲ್, ಪದಬಂಧ, ಭಾಷಾ ಆಟ, ಗಣಿತದ ಆಟ ಸುಡೋಕುದಂತಹ ಆಟಗಳನ್ನು ಆಡುವ ಮೂಲಕ ಮೆದುಳಿಗೆ ತಾತ್ಕಾಲಿಕವಾಗಿ ತರಬೇತಿ ನೀಡಬಹುದು.
ಕೊನೆ ಹನಿ
ಏಕಾಗ್ರತೆ ಇಲ್ಲದ ಮೇಲೆ ಎಲ್ಲವನ್ನೂ ಕಳೆದುಕೊಳ್ಳುವ ಸನ್ನಿವೇಶ ಬರುತ್ತದೆ. ಏಕಾಗ್ರತೆ ನಿನ್ನದಾದರೆ ಶ್ರೇಷ್ಠತೆಯೂ ನಿನ್ನದೆ. ಆಗ ಕಳೆದುಕೊಳ್ಳುವುದು ಏನೂ ಇಲ್ಲ ಎಲ್ಲ ಪಡೆದುಕೊಳ್ಳುವುದೆ!