ಒಳ್ಳೆಯತನವೇ ದೌರ್ಬಲ್ಯವಾಗಿರುವುದೇ?

ಹದಿ ಹರೆಯದ ವಯಸ್ಸಿನಲ್ಲಿ ನಡೆದಾಡೋ ನೆಲ ಕಾಣೊಲ್ಲ ಅಂತಾರೆ. ಅಂಥ ವಯಸ್ಸಿನಲ್ಲಿ ಹಿರಿಯರ ಮಾತು ಕಿವಿಗೆ ಬೀಳುವುದೂ ಅಷ್ಟಕ್ಕಷ್ಟೆ. ಓದಿನಲ್ಲಿ ಗಮನವಿಲ್ಲದ್ದಕ್ಕೆ ಪಿಯುಸಿ ಅರ್ಧಂಬರ್ಧ. ಗೋತಾ ಹೊಡೆದ ವಿಷಯ ಕಟ್ಟಿ ಪಾಸಾಗೋಕೆ ಮನಸ್ಸಿಲ್ಲ. ಕೆಲಸಕ್ಕೆ ಅಂತ ಅಲ್ಲಿ ಇಲ್ಲಿ ಅಲೆದರೆ ಅನುಭವವೂ ಇಲ್ಲ, ಕೆಲಸಕ್ಕೆ ಅಗತ್ಯವಿರುವ ಶಿಕ್ಷಣವೂ ಇಲ್ಲ ಅಂತ ಯಾರೂ ಕೆಲಸ ಕೊಡುವುದಿಲ್ಲ. ಒಂದು ವೇಳೆ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಅವು ಮನಸ್ಸಿಗೆ ಹಿಡಿಸಲ್ಲ. ಕಲಿತಿದ್ದೇ ಕಡಿಮೆ ಅಂದ ಮೇಲೆ ಒಳ್ಳೆಯ ಸಂಬಳವನ್ನು ನಿರೀಕ್ಷಿಸುವ ಹಾಗಿಲ್ಲ. ಹೋಗಲಿ ಏನಾದರೂ ವ್ಯಾಪಾರ ಮಾಡೋಣ ಅಂದರೆ ಮೂರು ಹೊತ್ತಿನ ಊಟಕ್ಕೆ ಲಾಟರಿ ಹೊಡೆಯುವ ಸ್ಥಿತಿಯಲ್ಲಿ ಅದು ಸಾಧ್ಯವಿರದ ಮಾತು. ಆರಕ್ಕೇರದ ಮೂರಕ್ಕಿಳಿಯದ ಆರ್ಥಿಕ ಸ್ಥಿತಿಯಲ್ಲಿ ಬಂಡವಾಳ ಹೊಂದಿಸುವುದು ಕಷ್ಟ. ಹೀಗೆ ದಿಕ್ಕು ತಪ್ಪಿದ ಮನೋ ಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದೇ ದುಡ್ಡಿನ ಹಿಂದೆ ಅಲೆಯುತ್ತ ಇಸ್ಪಿಟ್ ಕ್ರಿಕೆಟ್ ಬೆಟ್ಟಿಂಗ್‌ನಂಥ ದಂದೆಯಲ್ಲಿ ಸಿಲುಕಿಕೊಂಡು ನರಳುವುದು. ಅಪ್ಪ ಬಡವನಾಗಿದ್ದಕ್ಕೆ ನಮಗಿಂದು ಈ ಸ್ಥಿತಿ ಎಂದು ಕೊರಗುವ ಯುವಕರು ಒಂದೆಡೆ. ಗೆಳೆಯರ ಪಟಾಲಂ ಕಟ್ಟಿಕೊಂಡು ತಿರುಗುವ ಮಕ್ಕಳಿಗೆ ಅದೆಷ್ಟು ಬೈದು ಬುದ್ಧಿ ಹೇಳಿದರೂ ಪ್ರಯೋಜನವಿಲ್ಲ ಎಂದು ಗೊತ್ತಾದ ಪಾಲಕರು’ ಅವರ ಹಣೆ ಬರಹದಲಿದ್ದ್ಲದ್ದು ಆಗುತ್ತೆ.’ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವ ಪೋಷಕರು ಇನ್ನೊಂದೆಡೆ.

ಮೆಚ್ಚುಗೆಗೆ ಮರಳಾಗದಿರಿ
ಸಮಾಜದಲ್ಲಿರುವ ಸ್ವಾರ್ಥಿಗಳ ಕಂಡು ಮನಸ್ಸು ರೋಧಿಸುತ್ತದೆ. ಏನಾದರೂ ಮಾಡಿ ತಾನು ಎಲ್ಲರ ಮುಂದೆ ಎದ್ದು ನಿಲ್ಲಬೇಕು ಗುರುತಿಸಿಕೊಳ್ಳಬೇಕೆಂದು ಮನಸ್ಸು ತಯಾರಾಗುತ್ತದೆ. ಮಾಡುವುದೇನು ಕೈಯಲ್ಲಿ ಕಾಸಿಲ್ಲ. ಕಾಸು ಗಳಿಸೋಕೆ ದುಡಿಮೆ ಇಲ್ಲ. ತಾನು ಕಷ್ಟದ ಮಡುವಿನಲ್ಲಿದ್ದರೂ ಪರರ ದುಃಖ ಕಂಡರೆ ಕರಗಿ ನೆರವಾಗುವ ಮನಸ್ಸು.. ಉಡಾಳ ಪೋಲಿ ಎನಿಸಿಕೊಳ್ಳುವುದಕ್ಕಿಂತ ಕಂಡವರ ಕಷ್ಟಗಳಿಗೆ ಹೆಗಲಾಗುವುದೆಂದರೆ ಅದಕ್ಕಿಂತ ಖುಷಿ ಬೇರೆ ಇಲ್ಲ.ಗುಣವುಳ್ಳವರು ಕಷ್ಟಕ್ಕಾಗಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರೆ ಸಾಕು.ತನ್ನ ಭವಿಷ್ಯ ನಿರ್ಮಾಣದಂಥ ಮುಖ್ಯ ಕಾರ್ಯ ಬಿಟ್ಟು ಸಂಬಂಧಿಸಿಲ್ಲದ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸಿ ಅನೇಕ ಸಂಕಷ್ಟಗಳಿಗೆ ಬಲಿಯಾಗುವುದು. ಅತ್ಯಧಿಕ ಕ್ರಿಯಾ ಶಕ್ತಿ ಹೊಂದಿದ ವಯಸ್ಸಿನಲ್ಲಿ ಪುಡಿ ರಾಜಕಾರಣಿಗಳ ಮುಂದೆ ನಿಂತು ಅವರು ಹೇಳಿದ ಎಲ್ಲವನ್ನೂ ಹಿಂದೆ ಮುಂದೆ ವಿಚಾರಿಸದೇ ಹುಂಬರಂತೆ ಮಾಡುವುದು. ಕೊಟ್ಟ ದುಡ್ಡನ್ನು ಕೆಟ್ಟ ಚಟಗಳಲ್ಲಿ ಮಜಾ ಮಾಡುತ್ತ ಉಡಾಯಿಸುವುದು. ಒಟ್ಟಿನಲ್ಲಿ ಜೀವನವೇ ಬಿಂದಾಸ್ ಆಗಿದೆ ಎಂದುಕೊಳ್ಳುವುದು. ಪ್ರಭಾವಿ ವ್ಯಕ್ತಿಗಳು ಭಾಗವಹಿಸಿದ ಸಭೆಗಳಲ್ಲಿ ಅವರ ಸನ್ಮಾನದಲ್ಲಿ ಭಾಗವಹಿಸಿದ ಫೋಟೊ ಸುದ್ದಿ ಪತ್ರಿಕೆಯಲ್ಲಿ ಬಂದಾಗ ನಾನು ಎತ್ತರಕ್ಕೆ ಬೆಳಿತಿದಿನಿ ಎನ್ನುವ ಭ್ರಮೆಯಲ್ಲಿ ಬೀಗುವುದು. ಒಮ್ಮೊಮ್ಮೆ ಪೋಲಿಸ್ ಬೆತ್ತದ ರುಚಿಯನ್ನು ನೋಡುವ ಪ್ರಸಂಗ ಬಂದಾಗ ತಾನೇ ಹೆಣೆದ ಬಲೆಯಲ್ಲಿ ತಾನು ಸಿಕ್ಕಿ ಹಾಕಿಕೊಂಡಿದ್ದು ಗೊತ್ತಾಗುವುದು. ಇದುವರೆಗೂ ತನ್ನಿಂದ ಲಾಭ ಪಡೆದವರು ತನ್ನ ಕಷ್ಟಗಳಿಗೆ ಸ್ಪಂದಿಸದೆ ಮರೆಯಾಗಿದ್ದನ್ನು ಕಂಡು ಪಶ್ಚಾತ್ತಾಪ ಪಡುವ ಸಮಯ ಬಂದೊದುಗುವುದು.

ಒಳ್ಳೆಯವರೆಂದು ತೋರಿಸಲು ಹೋಗದಿರಿ
ನಾವು ಒಳ್ಳೆಯವರು ಎಂದು ಸಾಕ್ಷೀಕರಿಸಲು ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುವುದು ಎಷ್ಟು ಸರಿ? ಬದುಕು ಮಹತ್ವದ ತಿರುವಿನಲ್ಲಿರುವಾಗ ಬೇರೆಯವರಿಗೆ ಉಪಕಾರ ಮಾಡುವ ನೆಪದಲ್ಲಿ ತನ್ನನ್ನು ತಾನು ಅವನತಿಯತ್ತ ಕೊಂಡೊಯ್ದು ದುಃಖ ಪಟ್ಟರೆ ಹೇಗೆ? ನಮ್ಮ ಗುರಿ ಸ್ಪಷ್ಟವಾಗಿಸಿಕೊಳ್ಳದೇ ಇದ್ದರೆ, ನಮ್ಮನ್ನು ಇತರರು ತಮ್ಮ ಗುರಿ ಸಾಧನೆಗೆ ಸಾಧನವನ್ನಾಗಿ ಬಳಸಿಕೊಳ್ಳುತ್ತಾರೆ ನೆನಪಿರಲಿ. ನನ್ನನ್ನು ಬೆಳೆಸುವರೆಂದು ಇಷ್ಟು ದಿನ ನಂಬಿದವರು ದೂರವಾದಾಗ ನಿಮಗೆ ನಿಮ್ಮ ಮೇಲೆ ಅಸಹ್ಯ ಬೇಸರ ಉಂಟಾಗುತ್ತದೆ. ಇಷ್ಟೆಲ್ಲ ಬೇಡವಾದ ಕೆಲಸಗಳಲ್ಲಿ ತೊಡಗಿಕೊಂಡಾಗ ಗೆಳೆಯರಲ್ಲಿ ಕೆಲವರು, ಪರಿಚಯದವರು ಚೆಂದದ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಿದ್ದನ್ನು ಕಂಡು ಬೆರಗಾಗುವ ಸನ್ನಿವೇಶ. ಛೇ! ನಾನೂ ಅವರಂತೆ ನನ್ನ ಉದ್ದಾರಕ್ಕೆ ಶ್ರಮ ಪಟ್ಟಿದ್ದರೆ ಇಂದು ಈ ಹೀನ ಸ್ಥಿತಿ ಬರುತ್ತಿರಲಿಲ್ಲವೆಂದು ಹಣೆಗೆ ಕೈ ಹಚ್ಚಿ ಕುಳಿತುಕೊಳ್ಳ ಬೇಕಾಗುವುದು. ಇತರರಿಗೆ ಸಹಾಯ ಮಾಡಿದ್ದು ತಪ್ಪೇ? ಬರೀ ನಾನು ನನ್ನದು ಎನ್ನುವುದು ಸ್ವಾರ್ಥವಲ್ಲವೇ? ಎಂಬ ಪ್ರಶ್ನೆಗಳು ಕಾಡುವವು. ನಮ್ಮ ವ್ಯಕ್ತಿತ್ವ ವಿಕಸನದ ಕುರಿತು ವಿಚಾರಿಸಿ ಅದರಲ್ಲಿ ಮಗ್ನರಾಗುವುದು ಖಂಡಿತ ಸ್ವಾರ್ಥವಲ್ಲ. ನಮ್ಮ ಕಾಲ ಮೇಲೆ ನಾವು ನಿಂತ ಮೇಲೆ ಅಸಹಾಯಕರಿಗೆ ದೀನ ದಲಿತರಿಗೆ ಸಹಾಯ ಮಾಡಲು ಸ್ಥಿತಿವಂತರಾಗುತ್ತೇವೆ. ಎಂಬುದು ಸತ್ಯದ ಮಾತು. ನಮ್ಮ ಬಾಳು ನಿರ್ಣಾಯಕ ಹಂತದಲ್ಲಿರುವಾಗ ಪ್ರಭಾವಿ ವ್ಯಕ್ತಿಗಳ ಹಿಂದೆ ಬೆನ್ನು ಹತ್ತಿ ಓಡಾಡಿದರೆ ಸಮಯ ವ್ಯಯಿಸಿದರೆ ಮುಂದೆ ಕಷ್ಟದ ಬುತ್ತಿ ಕಾಯುತ್ತಿರುತ್ತದೆ. ಎನ್ನುವುದು ನೂರಕ್ಕೆ ನೂರರಷ್ಟು ದಿಟ.

ದೌರ್ಬಲ್ಯವನ್ನೇ ಬಲವಾಗಿಸಿ
ನನ್ನವರು ಅಂತ ಯಾರೂ ಇಲ್ಲ ಎಂಬ ಭಾವನೆ ಕಾಡತೊಡಗಿದಾಗ ನನಗೆ ನಾನೇ ಎಲ್ಲ ಎಂಬ ಆತ್ಮ ಸಾಕ್ಷಿ ಪ್ರಬಲವಾಗಬೇಕೇ ಹೊರತು ನನಗಾರೂ ಇಲ್ಲ ಎನ್ನುವ ಚಿಂತೆ ಕಾಡಬಾರದು. ಎಲ್ಲ ಸಮಸ್ಯೆಗಳಿಗೆ ಎರಡು ಔಷಧಿಗಳಿವೆ. ಒಂದು ದುಡಿಮೆ ಮತ್ತೊಂದು ತಾಳ್ಮೆ. ಸಹನೆ ಇಲ್ಲದೇ ಏನೂ ಸಾಧಿಸಲು ಸಾಧ್ಯವಿಲ್ಲ. ಯಾರನ್ನೂ ಮೆಚ್ಚಿಸುವ ಪ್ರಯತ್ನ ಬೇಡ. ಕಠಿಣ ಪರಿಶ್ರಮದ ಪ್ರಯತ್ನಕ್ಕೆ ಗೆಲುವು ತಾನೇ ಬಳಿ ಬರುವುದು. ಭಾವನೆ ಒಳ್ಳೆಯದಾಗಿಸಿಕೊಂಡರೆ ಭಾಗ್ಯವೂ ಬೆನ್ನತ್ತಿ ಬರುವುದು. ನಮ್ಮ ಒಳ್ಳೆಯತನ ದೌರ್ಬಲ್ಯವಾಗದಿರಲಿ. ನಮಗೆ ತಿಳಿಯದೇ ಇರುವ ದೌರ್ಬಲ್ಯವನ್ನು ನಾವೆಂದೂ ತೊಡೆದು ಹಾಕಲಾರೆವು. ದೌರ್ಬಲ್ಯದಾಚೆ ಹೊರ ಬರಲು ಪ್ರಥಮ ಹೆಜ್ಜೆಯೆಂದರೆ ನಮ್ಮ ದೌರ್ಬಲ್ಯಗಳ ಬಗ್ಗೆ ಚೆನ್ನಾಗಿ ತಿಳಿಯುವುದು. ದೌರ್ಬಲ್ಯಗಳನ್ನೇ ನವೋಲ್ಲಾಸ ಮತ್ತು ಚೈತನ್ಯ ತುಂಬುವ ಬಲಗಳಾಗಿ ಪರಿವರ್ತಿಸುತ್ತ ಗಮನ ಹರಿಸುವುದು ಅಗತ್ಯವಾಗಿದೆ.

ಯಂಡಮೂರಿ ವೀರೇಂದ್ರನಾಥವರು ಹೇಳಿದಂತೆ,’ಏಳು ಎದ್ದೇಳು ಹೊರಡು ನಿನ್ನನ್ನು ಅಲುಗಾಡದಂತೆ ಮಾಡಿದ ಆ ಮಾನಸಿಕ ಸಂಕೋಲೆಗಳನ್ನು ಭೇದಿಸು. ಬಿದ್ದ ಜಾಗದಿಂದಲೇ ಓಟ ಶುರು ಮಾಡು.’

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨