ಸಮುದಾಯ ಭವನ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ಘರ್ಷಣೆ
ವಿಜಯ ದರ್ಪಣ ನ್ಯೂಸ್….
ಸಮುದಾಯ ಭವನ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ಘರ್ಷಣೆ
ಚನ್ನರಾಯಪಟ್ಟಣ : ತಾಲ್ಲೂಕಿನ ಜೋಗಿಪುರ ಗ್ರಾಮದಲ್ಲಿ ಸೋಮವಾರ ಸಮುದಾಯ ಭವನ ಉದ್ಘಾಟನೆ ಮಾಡಲು ಶಾಸಕರು ಮುಂದಾದಾಗ ಗ್ರಾಮದ ಕಾಂಗ್ರೆಸ್ ಮುಖಂಡರು ಭವನದ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಮಾಡಬೇಡಿ ಎಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಯಿತು.
ನಂತರ ನೂಕಾಟ, ತಳ್ಳಾಟ ನಡೆದು ಕೊನೆಗೆ ಶಾಸಕರು ದೀಪ ಹಚ್ಚುವ ಮೂಲಕ ಉದ್ಘಾಟನೆ ನೆರವೇರಿಸಿ ತೆರಳಿದರು. ಇದಾದ ನಂತರ ಕಾಂಗ್ರೆಸ್ ಕಾರ್ಯಕರ್ತರು ಉದ್ಘಾಟನಾ ಫಲಕವನ್ನು ಹೊಡೆದುಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಶೌಚಾಲಯ ಹಾಗೂ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ನೆರವೇರಿಸಲಾಗುತ್ತದೆ. ಇದು ರಾಜ್ಯಸಭಾ ಸದಸ್ಯರಾದ ದೇವೇಗೌಡರು ಹಾಗೂ ಶಾಸಕರ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದೆ ಎಂದರು.
ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುವ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜೋಗಿಪುರ ಗ್ರಾಮದಲ್ಲಿ ಹಿಂದಿನಿಂದಲೂ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಇದೇ ರೀತಿ ಘರ್ಷಣೆಗಳು ನಡೆಯುತ್ತಾ ಬಂದಿವೆ. ಕಳೆದ ಐದು ವರ್ಷದ ಹಿಂದೆ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಕೂಡ ಘರ್ಷಣೆ ಮಾಡಿಕೊಂಡಿದ್ದು, ಗ್ರಾಮದ ಅಭಿವೃದ್ಧಿಯನ್ನು ಯೋಚಿಸಿದೆ ಕಿತ್ತಾಡಿಕೊಂಡು ಗ್ರಾಮ ಹಿಂದುಳಿಯಲು ಕಾರಣರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂತು.

