ಶಾಲೆಗಳಲ್ಲಿ ಏನನ್ನು ಬೋಧಿಸಬೇಕು………

ವಿಜಯ ದರ್ಪಣ ನ್ಯೂಸ್…

ಶಾಲೆಗಳಲ್ಲಿ ಏನನ್ನು ಬೋಧಿಸಬೇಕು………

ಭಗವದ್ಗೀತೆ – ಸನಾತನ ಹಿಂದೂಗಳ ಧರ್ಮ ಗ್ರಂಥ,
ಕುರಾನ್ – ಇಸ್ಲಾಮಿಯರ ಧರ್ಮ ಗ್ರಂಥ,
ಬೈಬಲ್ – ಕ್ರಿಶ್ಚಿಯನ್ನರ ಧರ್ಮ ಗ್ರಂಥ,
ಗ್ರಂಥಾ ಸಾಹಿಬ್ – ಸಿಖ್ಖರ ಧರ್ಮ ಗ್ರಂಥ,
ಬುದ್ಧ ತತ್ವಗಳು – ಬೌದ್ಧರ ಧರ್ಮ ಗ್ರಂಥ,
24 ತೀರ್ಥಂಕರರ ಸಂದೇಶಗಳು – ಜೈನರ ಧರ್ಮ ಗ್ರಂಥ,
ವಚನಗಳು – ಲಿಂಗಾಯಿತರ ಧರ್ಮ ಗ್ರಂಥ ,
ಮಾರ್ಕ್ಸ್ ವಾದ – ಕಮ್ಯುನಿಷ್ಟರ ಧರ್ಮ ಗ್ರಂಥ,
ದ್ವೈತ – ಅದ್ವೈತ – ವಿಶಿಷ್ಟಾದ್ವೈತ ಚಿಂತನೆಗಳು – ವೇದ ಉಪನಿಷತ್ – ಮನಸ್ಮೃತಿಗಳು – ಬ್ರಾಹ್ಮಣರ ಧರ್ಮ ಗ್ರಂಥಗಳು.
ಸಂವಿಧಾನ – ಭಾರತೀಯ ನಾಗರೀಕರ ಸ್ವಾತಂತ್ರ್ಯ, ಸಮಾನತೆ, ಹಕ್ಕು ಮತ್ತು ಕರ್ತವ್ಯಗಳ ನೀತಿ ನಿಯಮಗಳ ಗ್ರಂಥ….

ಈಗ ಹೇಳಿ ಮಕ್ಕಳಿಗೆ ಶಾಲೆಗಳಲ್ಲಿ ಯಾವುದನ್ನು ಬೋಧಿಸಬೇಕು, ದೇವಸ್ಥಾನಗಳಲ್ಲಿ ಯಾವುದನ್ನು ಹೇಳಿಕೊಡಬೇಕು, ಮಠಮಾನ್ಯಗಳಲ್ಲಿ ಯಾವುದರ ತಿಳಿವಳಿಕೆ ಮೂಡಿಸಬೇಕು, ಮಸೀದಿಗಳಲ್ಲಿ ಯಾವುದರ ಅರಿವು ಉಂಟು ಮಾಡಿಸಬೇಕು, ಮದರಸಾಗಳಲ್ಲಿ ಯಾವುದರ ಬಗ್ಗೆ ಜಾಗೃತಿ ಕೊಡಬೇಕು,

ಚರ್ಚ್ ಗಳಲ್ಲಿ ಯಾವುದು ಹೇಳಿಕೊಡಬೇಕು, ಮಿಷನರಿಗಳಲ್ಲಿ ಯಾವುದು ಕಲಿಸಬೇಕು, ಗುರುದ್ವಾರಗಳಲ್ಲಿ, ಬೌದ್ಧ, ಜೈನಮಂದಿರಗಳಲ್ಲಿ, ಯಾವುದನ್ನು ಹೇಳಿಕೊಡಬೇಕು…..

ನಾವು ಯಾರಿಗೂ ಮೋಸ ಮಾಡಬಾರದು. ನಾವು ಯಾರ ಮೇಲೆಯೂ ದೌರ್ಜನ್ಯ ಅಥವಾ ಶೋಷಣೆ ಮಾಡಬಾರದು, ನಮ್ಮದಲ್ಲದ ವಸ್ತು, ಆಸ್ತಿ, ಹಣ, ಆಭರಣಗಳಿಗೆ ದುರಾಸೆ ಪಡಬಾರದು. ನಾವು ಯಾವ ಕಾರಣಕ್ಕೂ ಭ್ರಷ್ಟಾಚಾರ ಮಾಡಬಾರದು, ಲಂಚದ ಹಣಕ್ಕೆ ಕೈ ಚಾಚಬಾರದು. ನಾವು ಯಾವುದೇ ವ್ಯಕ್ತಿಯನ್ನು ಆತನ ಹುಟ್ಟಿನ ಕಾರಣಕ್ಕಾಗಿ, ಆತನ ದೈಹಿಕ ರಚನೆಯ ಕಾರಣಕ್ಕಾಗಿ ಕೀಳಾಗಿ ಕಾಣಬಾರದು. ಎಲ್ಲರೂ ನಮ್ಮವರೇ.
ಪರಸ್ತ್ರೀ ಅಥವಾ ಪರಪುರುಷನನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಮೋಹಿಸಬಾರದು, ಕಾಮಿಸಬಾರದು.

ನಮ್ಮ ಸೃಷ್ಟಿಯಲ್ಲಿ ಯಾವ ರೀತಿಯಲ್ಲೂ ಪರಿಸರವನ್ನು ನಾಶ ಮಾಡಬಾರದು. ಅದನ್ನು ಗೌರವಿಸಿ ಉಳಿಸಬೇಕು. ಮಾನವೀಯ ಮೌಲ್ಯಗಳು ಮತ್ತು ನಾಗರಿಕ ಪ್ರಜ್ಞೆಯನ್ನು ಸದಾ ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ, ಪ್ರದೇಶಗಳ ಆಧಾರದ ಮೇಲೆ ಯಾವುದೇ ರೀತಿಯ ಹಿಂಸೆ ಮಾಡಬಾರದು. ಕೊಲೆ, ಅತ್ಯಾಚಾರ, ಹಿಂಸೆ ಮುಂತಾದವನ್ನು ಯಾವ ಕಾರಣಕ್ಕೂ ಮಾಡಬಾರದು. ಶಾಲಾ ಕಾಲೇಜುಗಳಲ್ಲಿ ಕಾಪಿ ಮಾಡಬಾರದು.

ಸಮಾಜದಲ್ಲಿ ರೂಪಿತವಾಗಿರುವ ಎಲ್ಲಾ ನೀತಿ ನಿಯಮಗಳನ್ನು ಅನುಸರಿಸಬೇಕು. ನಿಯಮ ಉಲ್ಲಂಘನೆ ಮಾಡಬಾರದು. ನಾವೂ ಬದುಕಬೇಕು ಇತರರನ್ನೂ ಬದುಕಲು ಬಿಡಬೇಕು. ಚುನಾವಣೆಗಳಲ್ಲಿ ಅಕ್ರಮವಾಗಿ ಹಣ, ಹೆಂಡ, ಸೀರೆ, ಪಂಚೆ ಹಂಚಬಾರದು. ಜನರ ಮಧ್ಯೆ ದ್ವೇಷ ಬಿತ್ತಬಾರದು. ಚುನಾವಣೆಯಲ್ಲಿ ಗೆದ್ದ ಮೇಲೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡಬೇಕು. ಧಾರ್ಮಿಕ ಕೆಲಸ ಮಾಡುವಾಗ ಎಲ್ಲಾ ರೀತಿಯ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸರ್ವಸಂಗ ಪರಿತ್ಯಾಗಿಗಳಾಗಿ ಸೇವೆ ಮಾಡಬೇಕು.

ಯಾವುದೇ ವೃತ್ತಿಯಲ್ಲಿದ್ದರೂ ಆ ವೃತ್ತಿಗೆ ಅಪಚಾರವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಬದುಕೊಂದು ತಾತ್ಕಾಲಿಕ ನಿಲ್ದಾಣ. ಮನುಷ್ಯನ ಸರಾಸರಿ ಆಯಸ್ಸು ಸುಮಾರು 60 ರಿಂದ 80. ಯಾರೂ ಇಲ್ಲಿ ಶಾಶ್ವತವಲ್ಲ. ಇಂತಹ ಜೀವನದ ಅವಧಿಯಲ್ಲಿ ನಾವು ಯಾವುದೇ ಕಷ್ಟ ನಷ್ಟಗಳು ಬಂದರೂ ಸಾಧ್ಯವಾದಷ್ಟು ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಳ್ಳಬೇಕು…. ಹೀಗೆ ಅನೇಕ ಅಂಶಗಳನ್ನು ಹೇಳಿಕೊಡುವುದಕ್ಕೆ ಯಾವ ಧರ್ಮ ಗ್ರಂಥ ಒಳ್ಳೆಯದು ದಯವಿಟ್ಟು ತಿಳಿಸಿ.

ಈ ಜಗತ್ತನ್ನು ಸೃಷ್ಟಿಸಿದ್ದು ನಮ್ಮದೇ ದೇವರು. ಆ ದೇವರು ಬೋಧಿಸಿರುವ ಧರ್ಮ ಮಾರ್ಗಗಳು ಸರಿಸುಮಾರು ಕೆಳಗಿನ ಇದೇ ರೀತಿ ಇವೆ. ನಮ್ಮ ಧರ್ಮವೇ ಶ್ರೇಷ್ಠ. ಇಡೀ ಜಗತ್ತಿನಲ್ಲಿ ನಮ್ಮ ಧರ್ಮದ ಅನುಯಾಯಿಗಳು ಮಾತ್ರವೇ ಇರಬೇಕು ಎಂಬ ಸಂದೇಶ ರವಾನಿಸಿ. ನಿಮ್ಮನ್ನು ಸೃಷ್ಟಿಸಿರುವುದು ಆ ದೇವರು. ನಿಮ್ಮ ಬದುಕಿನ ಸಾರ್ಥಕತೆ, ಮೋಕ್ಷ ಅಡಗಿರುವುದೇ ಆ ದೇವರ ಸೇವೆಯಲ್ಲಿ. ಆ ದೇವರು ಈ ಜನ್ಮ, ಹಿಂದಿನ ಜನ್ಮ, ಮುಂದಿನ ಜನ್ಮ ಸೇರಿ ಎಲ್ಲಾ ಜನ್ಮಗಳಲ್ಲೂ ನಿಮ್ಮನ್ನು ಕಾಪಾಡುತ್ತಾನೆ. ನೀವು ದೇವರನ್ನು ಎಷ್ಟು ಪೂಜಿಸುತ್ತಿರೋ ಅಷ್ಟರಮಟ್ಟಿಗೆ ದೇವರು ತೃಪ್ತಿ ಹೊಂದಿ ನಿಮ್ಮನ್ನು ಕಾಪಾಡುತ್ತಾನೆ. ನಿಮ್ಮೆಲ್ಲಾ ಕಷ್ಟಗಳಿಂದ ರಕ್ಷಿಸುತ್ತಾನೆ.

ನಿಮ್ಮ ಕೆಲಸ ನೀವು ಮಾಡಿ ಪ್ರತಿಫಲವನ್ನು ಆ ದೇವರಿಗೆ ಬಿಡಿ. ದೇವರಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ನಿಮ್ಮೆಲ್ಲಾ ನೋವು ನಲಿವುಗಳಿಗೆ ಆ ದೇವರೇ ಕಾರಣ. ಉಳಿದದ್ದು ನಿಮ್ಮ ಕರ್ಮಫಲ. ಎಲ್ಲವನ್ನೂ ದೇವರಿಗೆ ಅರ್ಪಿಸಿ. ಅವನು ಸರ್ವಾಂತರ್ಯಾಮಿ ಸರ್ವವ್ಯಾಪಿ, ಸರ್ವಶಕ್ತ. ಇಲ್ಲಿ ನಿಮ್ಮದೇನು ಇಲ್ಲ. ದೇವರ ಮೇಲೆ ನಂಬಿಕೆ ಇಟ್ಟು ಪ್ರತಿದಿನ ದೇವರ ಸ್ಮರಣೆಯಲ್ಲಿ ಇದ್ದರೆ ನಿಮ್ಮ ಜೀವನ ಪವಿತ್ರವಾಗುವುದು. ದೇವರ ಭಜನೆಯಿಂದ ನಿಮ್ಮ ಜೀವನ ಪಾವನವಾಗುವುದು.

ಪ್ರತಿ ವರ್ಷ ದೇವರ ಪವಿತ್ರ ಕ್ಷೇತ್ರಗಳ ತೀರ್ಥಯಾತ್ರೆಯನ್ನು ಮಾಡಿ. ಪ್ರತಿ ವರ್ಷ ಪವಿತ್ರ ನದಿಯಲ್ಲಿ ಮುಳುಗೇಳಿ. ಪ್ರತಿ ವರ್ಷ ಉಪವಾಸ ಮಾಡಿ. ಪ್ರತಿ ದಿನ ಪ್ರಾರ್ಥನೆ. ಮಾಡಿ. ನಿಮ್ಮೆಲ್ಲ ಹಿತಚಿಂತಕ ಆ ದೇವರು. ಅದೂ ನಮ್ಮ ದೇವರು ಮಾತ್ರ. ಆ ದೇವರು ಸೃಷ್ಟಿಸಿರುವುದೇ ಈ ನಮ್ಮ ಧರ್ಮ. ಆದ್ದರಿಂದ ನಮ್ಮ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠವಾದದ್ದು, ವಿಶಾಲವಾದದ್ದು, ಅರ್ಥಪೂರ್ಣವಾದದ್ದು. ಆದ್ದರಿಂದ ಇದೆಲ್ಲವನ್ನು ನಮ್ಮ ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನೇ ಎಲ್ಲರೂ ಅರ್ಥ ಮಾಡಿಕೊಂಡು ಬದುಕಿ.
ಧರ್ಮೋ ರಕ್ಷತಿ ರಕ್ಷಿತ:
ಧರ್ಮ ರಕ್ಷಣೆಗಾಗಿ ಅಧರ್ಮಿಗಳನ್ನು ಕೊಲ್ಲಲು ಹಿಂಜರಿಯಬೇಡಿ. ಧರ್ಮ ರಕ್ಷಣೆಗಾಗಿ ಹಿಂಸೆ ಅನಿವಾರ್ಯ. ಇದು ಬಹುತೇಕ ಧರ್ಮಗಳ ಉವಾಚ.

ಈಗ ಹೇಳಿ ಯಾವುದನ್ನು ಹೇಳಿಕೊಡಬೇಕು, ಯಾವುದರಿಂದ ಕಲಿಯಬೇಕು…..

ನಮ್ಮ ಬೆನ್ನ ಹಿಂದೆ ಅಂದರೆ ಇತಿಹಾಸದಲ್ಲಿ ಕನಿಷ್ಠವೆಂದರೂ ಆಧುನಿಕ ನಾಗರೀಕ ಸಮಾಜದ ಸುಮಾರು ಮೂರು ಸಾವಿರ ವರ್ಷಗಳ ಅನುಭವ ಇದೆ. ಜೊತೆಗೆ ತುಂಬಾ ಸ್ಪಷ್ಟವಾಗಿ ಸುಮಾರು 100/200 ವರ್ಷಗಳ ಇತಿಹಾಸ ದಾಖಲೆಗಳ ಸಮೇತ ಬರೆಯಲ್ಪಟ್ಟಿದೆ. ಈಗಿನ ವರ್ತಮಾನದ ಘಟನೆಗಳಿಗೂ ನಾವು ಸಾಕ್ಷಿಯಾಗಿದ್ದೇವೆ. ಇಷ್ಟೆಲ್ಲಾ ಆದ ನಂತರವೂ ಶತಮಾನಗಳ ಹಿಂದೆ ರಚಿತವಾದ ಧರ್ಮ ಗ್ರಂಥಗಳು ಮುಖ್ಯವಾಗಬೇಕೇ ಅಥವಾ ಈ ಎಲ್ಲದರ ಸಾರವಾದ ಮಾನವ ಸಮಾನತೆ, ಸ್ವಾತಂತ್ರ್ಯ, ಕಲ್ಯಾಣಕ್ಕಾಗಿ ನಾವೇ ರಚಿಸಿಕೊಂಡ ನೀತಿ ನಿಯಮಗಳ ಸಂವಿಧಾನ ಮುಖ್ಯವಾಗಬೇಕೇ‌, ಆಯ್ಕೆ ನಮ್ಮ ಮುಂದಿದೆ.

ಕೇವಲ ಭಾರತದ ಆಂತರಿಕ ವಿಷಯವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಸಾವಿರದ ಒಂಬೈನೂರ ಐವತ್ತಕ್ಕಿಂತ ಮೊದಲು ಇಡೀ ದೇಶದಲ್ಲಿ ರಾಜಪ್ರಭುತ್ವ, ಮೊಘಲರ ಆಡಳಿತ, ಬ್ರಿಟಿಷರ ಆಡಳಿತ ವ್ಯವಸ್ಥೆ ಇದ್ದಿತು. ಇಲ್ಲಿ ಬಹುತೇಕ ಸಾಮಾನ್ಯ ಜನ ಗುಲಾಮರು, ಶೋಷಿತರು, ನ್ಯಾಯ ವಂಚಿತರು ಆಗಿದ್ದರು. 1950ರ ನಂತರವೇ ಒಂದಷ್ಟು ಸ್ವಾತಂತ್ರ್ಯ, ಒಂದಷ್ಟು ಸಮಾನತೆ, ಒಂದಷ್ಟು ರಕ್ಷಣೆ ನಮಗೆ ದೊರೆತಿದೆ‌. ಈಗಲೂ ಶೋಷಣೆ, ದೌರ್ಜನ್ಯ ಇದ್ದರೂ ಸಹ ಕನಿಷ್ಠ ಅದರ ವಿರುದ್ಧ ಪ್ರತಿಭಟಿಸಲು ಅವಕಾಶಗಳಿವೆ.

ಮತ್ತೆ ಯೋಚಿಸಿ ನೋಡಿ ಧರ್ಮ, ಧರ್ಮ ಗ್ರಂಥ, ದೇವರುಗಳ ಆಳ್ವಿಕೆ ಕಾಲವು ಉತ್ತಮವೋ ಅಥವಾ ಈ ಪ್ರಜಾಪ್ರಭುತ್ವ ಕಾಲ ಉತ್ತಮವೋ…..

ಒಳ್ಳೆಯದನ್ನೇ ಹೇಳಿ ಕೊಡೋಣ. ಆದರೆ ಹೇಗೆ ? ಭಗವದ್ಗೀತೆ, ಕುರಾನ್, ಬೈಬಲ್ ಅಥವಾ ಇತರ ಧರ್ಮ ಗ್ರಂಥಗಳು ಹೇಳಿರುವುದು ಒಳ್ಳೆಯದೇನೋ ನಿಜ, ಆದರೆ ಇಂದು ಮನಸ್ಸುಗಳು ಸಂಪೂರ್ಣ ಒಡೆದು ಹೋಗಿವೆ. ಜನರು ಯಾವುದೋ ಒಂದು ಧಾರ್ಮಿಕ ಗ್ರಂಥಕ್ಕೆ ಅಡಿಯಾಳುಗಳಾಗಿದ್ದಾರೆ. ಈಗ ಅದನ್ನು ಮತ್ತೆ ಪ್ರಸ್ತಾಪಿಸಿದರೆ ದ್ವೇಷಗಳು ಹೆಚ್ಚಾಗಬಹುದು.

ಹಿಂದೆ ಎಲ್ಲರಿಗೂ ಭಗವದ್ಗೀತೆ, ಕುರಾನ್, ಬೈಬಲ್ ಹೇಳಿಕೊಡಲಾಗುತ್ತಿತ್ತು. ಆದರೆ ಆ ಎಲ್ಲವನ್ನು ಒಟ್ಟು ಮಾಡಿ ಅದರ ಆಧಾರದ ಮೇಲೆ ಸಂವಿಧಾನ ರಚಿಸಲಾಗಿದೆ. ಜೊತೆಗೆ ಆಂತರಿಕ ಶುದ್ಧತೆಗೆ ಅಥವಾ ಆಂತರಿಕ ಸಮಸ್ಯೆಗೆ ಸಮಾಜ, ವೈದ್ಯಕೀಯ ಲೋಕ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕಷ್ಟ ನಷ್ಟಗಳಿಗೆ ಸ್ನೇಹಿತರು ಬಂಧು ಬಳಗ ಎಲ್ಲರೂ ಇದ್ದಾರೆ. ಆದ್ದರಿಂದ ಧರ್ಮ ಗ್ರಂಥಗಳಿಗಿಂತ ಸಾಮಾನ್ಯ ಜ್ಞಾನದ ಸಾಮಾನ್ಯ ಅರಿವೇ ಸಾಕಾಗುತ್ತದೆ.

ಅದು ವಚನಗಳೇ ಇರಲಿ, ಬುದ್ಧ ಸಂದೇಶಗಳೇ ಇರಲಿ, ತೀರ್ಥಂಕರರ ತತ್ವಗಳೇ ಇರಲಿ ಯಾವುದು ಅತಿಯಾಗದೆ, ಮೂಲಭೂತವಾಗದೆ, ಮಾನವನ ನಾಗರೀಕ ಪ್ರಜ್ಞೆ ಮೇಲುಗೈ ಪಡೆದರೆ ಮಾತ್ರ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಆಗುವುದಿಲ್ಲ. ಇಲ್ಲದಿದ್ದರೆ ಯಾವುದೋ ಒಂದಕ್ಕೆ ಕಟ್ಟು ಬಿದ್ದರೆ ಸಮಾಜದ ಅಸ್ವಸ್ಥತೆ ಉಂಟಾಗುತ್ತದೆ. ರಕ್ತಪಾತಗಳಾಗುತ್ತದೆ. ಆಯ್ಕೆ ನಮ್ಮ ಮುಂದಿದೆ.

ಬದಲಾವಣೆ ಜಗದ ನಿಯಮ. ಕೆಲವು ಧರ್ಮಗಳು ಬದಲಾವಣೆ ಒಪ್ಪುವುದಿಲ್ಲ. ಆದರೆ ಸಂವಿಧಾನದಲ್ಲಿ ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಅವಕಾಶವಿದೆ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……