ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಶಕ್ತಿ ಯೋಜನೆ ಸಹಕಾರಿ: ಕೆ.ಹೆಚ್.ಮುನಿಯಪ್ಪ .

ವಿಜಯ ದರ್ಪಣ ನ್ಯೂಸ್.                            ದೇವನಹಳ್ಳಿ  ಜೂನ್ 11                            ಬೆಂಗಳೂರು ಗ್ರಾಮಾಂತರ ಜಿಲ್ಲೆ .

ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ *ಉಚಿತ ಪ್ರಯಾಣ ನಮ್ಮ ಪ್ರಮಾಣ* ಎಂಬ ಘೋಷ ವಾಕ್ಯದೊಂದಿಗೆ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹೇಳಿದರು.

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಬಳ್ಳಾಪುರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯಾದ್ಯಂತ ನಗರ ಸಾರಿಗೆ ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ *ಶಕ್ತಿ ಯೋಜನೆ* ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಸಮಾಜದಲ್ಲಿ ಸ್ವಾವಲಂಬಿ ಬದುಕು ಕಲ್ಪಿಸಲು ವಿದ್ಯಾಭ್ಯಾಸ, ವಿವಿಧ ಸೌಲಭ್ಯಗಳನ್ನು ಒದಗಿಸಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಬದ್ಧವಾಗಿರುತ್ತದೆ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿಕೊಡಲು  *ಶಕ್ತಿ ಯೋಜನೆ* ಯನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಯಾವುದೇ ರೀತಿಯ ತಾರತಮ್ಯ ಇಲ್ಲದೆ ಈ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದೇವೆ ಇದರಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಮಹಿಳೆಯರು ಸರ್ಕಾರದಿಂದ ನೀಡಿರುವ ಆಧಾರ್ ಕಾರ್ಡ್, ವೋಟರ್ ಐಡಿ ಮುಂತಾದ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಬಹುದು. ಮೂರು ತಿಂಗಳ ಒಳಗಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲಾಗುವುದು ನಂತರ ಕರ್ನಾಟಕ ವ್ಯಾಪ್ತಿಯಲ್ಲಿ ಉಚಿತವಾಗಿ ಎಲ್ಲಿಗೆ ಬೇಕಾದರೂ ಸಂಚರಿಸಬಹುದು. ಈ ಶಕ್ತಿ ಯೋಜನೆಯು ರಾಜ್ಯದ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದರು.
ನಂತರ  ಸಚಿವರೇ ಮಹಿಳೆಯರಿಗೆ ಉಚಿತ ಬಸ್ ಟಿಕೆಟ್‌ ಅನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ಹಿರೇಮಠ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶಕ್ತಿ ಯೋಜನೆಯ ಪ್ರಮುಖ ಅಂಶಗಳನ್ನು ವಿವರಿಸುತ್ತಾ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು.
ಎಲ್ಲಾ ಮಹಿಳೆಯರಿಗೆ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ. ಅಂತರ್ ರಾಜ್ಯ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ರಾಜ್ಯದ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಐಶಾರಾಮಿ ಸಾರಿಗೆಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಇ.ಟಿ.ಎಂ ತಂತ್ರಾಂಶದ ಮೂಲಕ ಉಚಿತ ಟಿಕೆಟ್ ವಿತರಣೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿದ್ದು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಗುರುತಿನ ಚೀಟಿ ಪರಿಶೀಲನೆ ನಡೆಸಿ ಶೂನ್ಯ ಟಿಕೆಟ್ ವಿತರಿಸಲಾಗುವುದು. ಅನಿವಾರ್ಯ ಸಂದರ್ಭದಲ್ಲಿ ಇಟಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಲ್ಲಿ ಮ್ಯಾನುಯಲ್ ರೀತಿಯ ಟಿಕೆಟ್ ವಿತರಿಸಲು ಕ್ರಮ ವಹಿಸಲಾಗುವುದು. ಮುಂಗಡ ಬುಕಿಂಗ್ ಸೌಲಭ್ಯ ಇರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಿ ಕ್ರಮ ಕೈಗೊಳ್ಳಲಾಗಿದೆ.
ಸೇವಾ ಸಿಂಧು ತಂತ್ರಾಂಶದ ಮೂಲಕ *2023 ರ ಜೂನ್ 15ನೇ ತಾರೀಖಿನಿಂದ ಅರ್ಜಿಗಳನ್ನು ಸಲ್ಲಿಸಬಹುದು*. ಮುಂದಿನ ಮೂರು ತಿಂಗಳೊಳಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗುವುದು. ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಭಾರತ ಸರ್ಕಾರ, ಕರ್ನಾಟಕ ಸರ್ಕಾರದಿಂದ ವಿತರಿಸಿದ ಭಾವಚಿತ್ರ ಹಾಗೂ ವಾಸಸ್ಥಳ ಇರುವ ಗುರುತಿನ ಚೀಟಿಯನ್ನು ಶೂನ್ಯ ಟಿಕೆಟ್ ವಿತರಣೆ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ಮಾಹಿತಿ ನೀಡಿದರು.
  ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ  ಆರ್.ಲತಾ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ತೇಜಸ್ ಕುಮಾರ್, ತಹಸೀಲ್ದಾರ್ ಶಿವರಾಜ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್,  ಸಹಾಯಕ ಪೊಲೀಸ್ ಆಯುಕ್ತ ಸಿ.ಬಾಲಕೃಷ್ಣ , ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು  ಭಾಗವಹಿಸಿದ್ದರು.