ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಜಾಹೀರಾತು ಮುಂದುವರಿಕೆ: ಸಿ ಎಂ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್,                          ಬೆಂಗಳೂರು:

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಜೆಟ್ ನಲ್ಲಿ ಸೇರಿಸಲಾಗಿದ್ದ ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ವಿಶೇಷ ಜಾಹೀರಾತು ಸೌಲಭ್ಯವನ್ನು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರೆಸಲು ಹಿಂದುಳಿದ ವರ್ಗಗಳ ಮಾಲೀಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರ ಹಿಂದಿನ ವರ್ಷದಂತೆ ಈ ವರ್ಷವೂ ಹಿಂದುಳಿದ ವರ್ಗಗಳ ಪತ್ರಿಕೆಗೆ ಪ್ರೋತ್ಸಾಹದಾಯಕ ಜಾಹೀರಾತು ನೀಡಲಿದೆ. ಸರ್ಕಾರದ ಆದೇಶವನ್ನು ಜಾಹೀರಾತು ನೀತಿಯಲ್ಲಿ ಸೇರಿಸಲಾಗುವುದು. ಬಡ ವರ್ಗ ಹಾಗೂ ಗ್ರಾಮೀಣ ಭಾಗದ ಸುದ್ದಿಗಳನ್ನು ಪ್ರಕಟಿಸುವ ಪತ್ರಿಕೆಗಳ ಜತೆ ಸರ್ಕಾರ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಹಿಂದುಳಿದ ವರ್ಗಗಳ ಮಾಲೀಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ್ ಕಬ್ಬೂರು ಮನವಿ ನೀಡಿ ಮಾತನಾಡಿ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಕಚ್ಚಾ ಸಾಮಗ್ರಿಯ ಬೆಲೆ ಹೆಚ್ಚಳದಿಂದ ಮುನ್ನಡೆಸುವುದು ದುಸ್ತರವಾಗಿದೆ. ಗ್ರಾಮೀಣ ಭಾಗದ ಸುದ್ದಿ ಜತೆ ಸರ್ಕಾರಗಳ ವಿವಿಧ ಜನಪರ ಕಾರ್ಯಕ್ರಮ ಯೋಜನೆಗಳ ಸುದ್ದಿಗಳನ್ನು ಸಹ ಸಣ್ಣ ಪತ್ರಿಕೆಗಳೇ ಹೆಚ್ಚಾಗಿ ಪ್ರಕಟಿಸಿ ಪ್ರಚಾರ ಮಾಡುತ್ತಿವೆ, ಇಂತಹ ಪತ್ರಿಕೆಗಳಿಗೆ ಹೆಚ್ಚಿನ ಸೌಲಭ್ಯವನ್ನು ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಪತ್ರಿಕೆಗಳಿಗೆ ಉತ್ತೇಜಿತ ಜಾಹೀರಾತು ಯೋಜನೆ ಜತೆಯಲ್ಲಿ ಬಹುವರ್ಣದ ಮುದ್ರಣ ಯಂತ್ರಗಳನ್ನು ಹಿಂದುಳಿದ ವರ್ಗಗಳ ಮಾಲೀಕರಿಗೆ ನೀಡಿ ಕೈ ಹಿಡಿಯುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮುದ್ರಣ ಯಂತ್ರ ನೀಡುವ ಕುರಿತು ಇಲಾಖೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಒಬಿಸಿ ಪತ್ರಿಕೆ ಸಂಪಾದಕರ ಸಂಘ ಗೌರವಾಧ್ಯಕ್ಷ ಬೆಳಗಾವಿಯ ರಾಜು ನದಾಫ್, ದಾವಣಗೆರೆಯ ಎ. ಫಕೃದ್ದೀನ್, ರಾಮನಗರದ ಡಿ.ಎಂ. ಮಂಜುನಾಥ್, ಬೀದರ್‌ನ ಶಶಿ ಪಾಟೀಲ್, ರಾಯಚೂರಿನ ವೀರಾ ರೆಡ್ಡಿ, ರಾಯಚೂರಿನ ಈರಪ್ಪ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಿಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಮತ್ತಿತರರು ನಿಯೋಗದಲ್ಲಿ ಇದ್ದರು.