ದಕ್ಷಿಣ ಭಾರತದ ಗಾನ ಕೋಗಿಲೆಗೆ ಅರವತ್ತರ ಜನ್ಮದಿನದ ಸಂಭ್ರಮ.

ವಿಜಯ ದರ್ಪಣ ನ್ಯೂಸ್ 

ದಕ್ಷಿಣ ಭಾರತದ ನೈಟಿಂಗೇಲ್ ಗೆ ಅರವತ್ತರ ಜನ್ಮದಿನದ ಸಂಭ್ರಮ.

***************************************
ಕೆಲವು ವ್ಯಕ್ತಿಗಳು ಮತ್ತವರ ವ್ಯಕ್ತಿತ್ವವೆಂಬುದು ದೇಶ ಭಾಷೆ, ಜಾತಿ, ಧರ್ಮ …ಎಲ್ಲವನ್ನೂ‌ ಮೀರಿ ನಮ್ಮ ಮನದೊಳಗೆ ಒಂದು ಅಳಿಸಲಾಗದ ಅಭಿಮಾನದ ಹಾಗೂ ಮೆಚ್ಚುಗೆಯ ಮುದ್ರೆಯನ್ನೊತ್ತಿ ಬಿಡುತ್ತದೆ. ಅವರ ಮೇಲಿನ ಅಂತಹಾ ಅಗಾಧವಾದ ಪ್ರೀತಿಗೆ ಕಾರಣವೇ ಬೇಕಿಲ್ಲ. ಅವರನ್ನು ಎಷ್ಟು ಹಚ್ಚಿಕೊಂಡು‌ ಆರಾಧಿಸುತ್ತವೆಂದರೆ ಅವರೂ ಸಹ ನಮ್ಮ‌ ಬದುಕಿನ‌ ಭಾಗವೆಂಬಂತೆ, ಕುಟುಂಬದ ಸದಸ್ಯರೆಂಬಂತಹ ಸಾಮೀಪ್ಯದ ಕಕ್ಕುಲತಿ ಹೃದಯದಲ್ಲಿ ಸರಾಗವಾಗಿ ಸ್ಥಾನ‌ಪಡೆದಿರುತ್ತದೆ. ಅಂತಹ ಅಭಿಮಾನವೆಂಬುದು ಅವರ ಪ್ರತಿಭೆಗೆ ಕೊಡುವ ಗೌರವವಾಗಿರಬಹುದು ಅಥವಾ ಅವರ ವ್ಯಕ್ತಿತ್ವಕ್ಕೆ ನೀಡುವ ಮನ್ನಣೆಯೂ ಆಗಿದ್ದಿರಬಹುದು.

ಅಂಥವರಲ್ಲಿ ಒಬ್ಬರು… ಮೈತುಂಬಾ ಸೀರೆ, ಹಣೆತುಂಬಾ ಕುಂಕುಮ, ಮುಡಿತುಂಬಾ ಚೆಲುವು, ಹಾಗೂ ಮುಖದಲ್ಲಿ‌ ಸದಾ ನಗುವಿನ ಆಭರಣ ಧರಿಸಿ ಮೈಕ್‌ ಮುಂದೆ‌ ಬಂದು‌ ನಿಂತು ಹಾಡಲು ಶುರುಮಾಡಿದರೆ ಸಾಕ್ಷಾತ್ ಶಾರದೆಯೇ ಅವರಲ್ಲಿ ಆವಾಹನೆಯಾದಂತೆ ತೋರುತ್ತಾರೆ.ಅವರೇ ಕನ್ನಡದ ಹೊರತಾಗಿಯೂ ನಾನು‌ ಮನಸಾರೆ ಅಭಿಮಾನಿಸಿ ಆರಾಧಿಸುವ ಕೆಲ ಸೆಲೆಬ್ರೆಟಿಗಳಲ್ಲಿ ಒಬ್ಬರಾದ ದಕ್ಷಿಣ ಭಾರತದ ನೈಟಿಂಗೇಲ್ ಎಂದೇ ಖ್ಯಾತರಾಗಿರುವ ಡಾ. ಕೆ‌.ಎಸ್.ಚಿತ್ರ ರವರು. ಇಂದು ತಮ್ಮ ಅರವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಚಿತ್ರರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಡಾ. ಎಸ್. ಜಾನಕಿಯೆಂಬ ಗಾನ ಸರಸ್ವತಿ ತಮ್ಮ ಸಾಧನೆಯ ಉತ್ತುಂಗದಲ್ಲಿರುವಾಗಲೇ ಗಾಯನ ಕ್ಷೇತ್ರಕ್ಕೆ ಎಂಟ್ರೀ ಕೊಟ್ಟ ಚಿತ್ರರವರು ದೈವದತ್ತವಾದ ತಮ್ಮ ಕೋಗಿಲೆ ಕಂಠದ ಮೂಲಕ ಬಹುಬೇಗನೇ ಪ್ರಖ್ಯಾತರಾದರು. ಹೆಚ್ಚುಕಡಿಮೆ ಜಾನಕಮ್ಮನವರ ಸಾಲಿನಲ್ಲೇ ನೋಡಬಹುದಾದ, ಕಿಂಚಿತ್ತೂ ನ್ಯೂನತೆಯಿಲ್ಲದ ಅಪರೂಪದ ಪರಿಪಕ್ವ ಕಂಠಸಿರಿ ಚಿತ್ರರವರದ್ದು.

ತೊಂಭತ್ತರ ದಶಕದಲ್ಲಿ‌ ಬಿಡುಗಡೆಯಾಗಿದ್ದ ಡಾ.‌ವಿಷ್ಣುವರ್ಧನ್ ಸುಹಾಸಿನಿ ಅಭಿನಯದ ಮುತ್ತಿನಹಾರ ಚಿತ್ರದ “ಮಡಿಕೇರಿ ಸಿಪಾಯಿ” ಹಾಡನ್ನು ಮರೆಯಲು ಸಾಧ್ಯವೇ ? ಆ ಹಾಡಿಗೆ ಡಾ. ಎಸ್.ಪಿ.ಬಿ ಜೊತೆಗೆ ಸಮಾನ ಸ್ಪರ್ಧೆಗೆ ಬಿದ್ದವರಂತೆ ಹಾಡಿದ್ದ ಕೆ.ಎಸ್. ಚಿತ್ರರವರು ಕನ್ನಡಜನರ ಮನ ಗೆದ್ದಿದ್ದರು.

ನನ್ನ ನೆಚ್ಚಿನ ತಾರೆ ಸುಹಾಸಿನಿಯೆಂಬ ನಗುವಿನ ಖನಿ ನಟಿಸಿ 1997 ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಅಮೃತವರ್ಷಿಣಿ ಎಂಬ‌ ಸುಂದರ ಚಿತ್ರವನ್ನು ಆಗ ಸಾಕಷ್ಟು ಬಾರಿ ನೋಡಿದ್ದೆ. ಅದಕ್ಕೆ ಸುಹಾಸಿನಿ ಇದ್ದದ್ದು ಮುಖ್ಯ ಕಾರಣವಾದರೆ ಪ್ರತಿಭಾವಂತ‌ ನಟ ರಮೇಶ್ ಅರವಿಂದ್ ರ ಭಿನ್ನ ಪಾತ್ರ ಹಾಗೂ ‌ದಿನೇಶ್‌ಬಾಬು ರವರ ಸೊಗಸಾದ ನಿರ್ದೇಶನದ ಸೆಳೆತವೂ ಅಲ್ಲಿತ್ತು. ಆದರೆ ಒಮ್ಮೆ‌ ಚಿತ್ರ‌ ಬಿಡುಗಡೆಯಾದ ನಂತರ ಈ ಎಲ್ಲದಕ್ಕಿಂತ ಹೆಚ್ಚು ಸ್ಕೋರ್ ಮಾಡಿದ್ದು ಕೆ.ಕಲ್ಯಾಣ್ ರವರ ಅದ್ಭುತ ಸಾಹಿತ್ಯ, ದೇವಾ ರವರ ಸಂಗೀತ ಹಾಗೂ ಡಾ. ಎಸ್.ಪಿ.ಬಿ.ಯವರ ಸಿರಿಕಂಠದಿಂದ ಹೊಮ್ಮಿದ‌ ಸುಮಧುರ ಹಾಡುಗಳು. ಆದರೆ ಎಸ್.ಪಿ.ಬಿ ಯವರಷ್ಟೇ ಸೊಗಸಾಗಿ ತಮ್ಮ ಗಾಯನದ ಮೂಲಕ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದವರು. ಡಾ. ಕೆ.ಎಸ್. ಚಿತ್ರ ಎಂಬ‌‌ ಮಲೆಯಾಳಂ‌ ಮೂಲದ ಕೋಗಿಲೆ ಕಂಠದ ಗಾಯಕಿ. ಆ ಕ್ಷಣದಿಂದಲೇ ನಾನವರ ಅಭಿಮಾನಿಯಾಗಿ ಬಿಟ್ಟಿದ್ದೆ. ಡಾ.‌ಕೆ.ಎಸ್.ಚಿತ್ರರವರ ಕೋಗಿಲೆ ಕಂಠದಲ್ಲಿ ಕನ್ನಡದಲ್ಲಿ ಮೂಡಿಬಂದ ಅನೇಕ ಹಾಡುಗಳಲ್ಲಿ ಈಗಲೂ ಎಲ್ಲೆಲ್ಲೂ ಅನುರಣಿಸುವುದು…

ತುಂತುರು ಅಲ್ಲಿ‌ನೀರ ಹಾಡು…
ಈ‌ ಸುಂದರ ಬೆಳದಿಂಗಳ…
ಮಡಿಕೇರಿ ಸಿಪಾಯಿ….
ಮನಸೆ‌ ಓ ಮನಸೇ….
ಓ ಮೇಘವೇ ಓಡಿ ಬಾ…
ಮುದ್ದಿನ ಹುಡುಗಿ ಚಂದ….
ಕೇಳಿಸದೆ ಕಲ್ಲು ಕಲ್ಲಿನಲಿ…..
ಏಳು ಶಿವ ಏಳು ಶಿವ….
ತುಸು ಮೆಲ್ಲ‌ಬೀಸು ಗಾಳಿಯೇ..
ಆಹಾ ಎಂಥಾ ಆ ಕ್ಷಣ…..
ಎಲೆ ಹೊಂಬಿಸಿಲೇ…
ಇಂದು ಬಾನಿಗೆಲ್ಲ ಹಬ್ಬ…
ಹೇಳೆ ಕೋಗಿಲೆ ಇಂಪಾಗಲಾ..
ಸೇವಂತಿಯೇ…ಸೇವಂತಿಯೇ..
ನನ್ನವಳು ನನ್ನವಳು…..ಇನ್ನೂ ಹಲವು.

ಇವೆಲ್ಲದರೊಂದಿಗೆ ಶಬ್ಧವೇಧಿ ಚಿತ್ರದಲ್ಲಿ ಅಣ್ಣಾವ್ರ ಜೊತೆಗೆ ಹಾಡಿರುವ ” ಓಹೋ ಓಹೋ ಪ್ರೇಮ ಕಾಶ್ಮೀರ” ಕೂಡಾ ಒಂದು ಸುಂದರ ಗೀತೆ.

ಕನ್ನಡದಲ್ಲಿ ಡಾ.ಚಿತ್ರರವರು ಎಷ್ಟು ಒಳ್ಳೆಯ ಹಾಡುಗಳನ್ನು ಹಾಡಿದ್ದಾರೋ ತೆಲುಗಿನಲ್ಲಿ ಇನ್ನೂ ಹೆಚ್ಚು ಮೆಲೋಡಿ ಗೀತೆಗಳು ಇವರಿಂದ ಮೂಡಿ‌ ಬಂದು ತೆಲುಗು ಭಾಷೆಗಿರುವ ಸವಿಜೇನಿನ ಬಿರುದನ್ನು ನಿಜ ಮಾಡಿದ್ದಾರೆ. ಅವರು ತೆಲುಗಿನಲ್ಲಿ ಹಾಡಿರುವ ಅಸಂಖ್ಯಾತ ಹಾಡುಗಳಲ್ಲಿ‌ ಇವುಗಳನ್ನು ಮರೆಯಲಾದೀತೇ…

ತೆಲುಸಾ ಮನಸಾ…
ಪ್ರಿಯಾಪ್ರಿಯತಮಾ‌ ರಾಗಾಲು…
ಚಿಲುಕಾ ಕ್ಷೇಮಮಾ…
ಏದೋ ಒಕ ರಾಗಂ…
ಓ ಪ್ರಿಯಾ ಪ್ರಿಯಾ..
ನವ್ವವೇ ನವ ಮಲ್ಲಿಕಾ…..
ವೇಣುವೈ ವಚ್ಚಾಡು….
ಬಲಪಂಪಟ್ಟಿ ಭಾಮಪಳ್ಳು….

ಅವರ ದನಿಯಲ್ಲಿ ಇಂಪು, ತಂಪು, ಕಂಪು, ಪೆಂಪು, ಸೊಂಪು….ಎಲ್ಲವೂ ಇದೆ. ಇದರೊಂದಿಗೆ ಸಹಜವಾದ ಮಾಧುರ್ಯವಿದೆ. ಎಸ್.ಜಾನಕಮ್ಮ ನವರ ಕಂಠದಂತೆಯೇ ಇವರ ಗಾಯನದಲ್ಲಿ ಯಃಕಿಂಚಿತ್ತೂ ಲೋಪ ಕಂಡುಬಾರದು. ಎಲ್ಲಕ್ಕಿಂತ ಮಿಗಿಲಾಗಿ ಕೆ.ಎಸ್. ಚಿತ್ರಾರವರದ್ದು ಸದಾ ನಗುವಿನ ಮೊಗ. ಇವರು ಹಾಡುವಾಗ ಅತ್ಯಂತ ತನ್ಮಯರಾಗಿ ಹಾಡುವುದನ್ನು ನೋಡುವುದೇ ಕಣ್ಣಿಗೆ ಚಂದ.

27.07.1963 ರಲ್ಲಿ‌ ಕೇರಳದ ತಿರುವನಂತಪುರಂ ನಲ್ಲಿ‌ ಜನಿಸಿದ ಕೃಷ್ಣನ್ ನಾಯರ್ ಶಾಂತಕುಮಾರಿ‌ ಚಿತ್ರ ರವರು ಬಾಲ್ಯದಿಂದಲೇ ಸಂಗೀತ ಆಸಕ್ತಿಯನ್ನು ಬೆಳೆಸಿಕೊಂಡು ಕರ್ಣಾಟಕ ಸಂಗೀತವನ್ನು ಅಭ್ಯಾಸ ಮಾಡಿದರು. 1979 ರಲ್ಲಿ ಮಲೆಯಾಳಂ ಚಿತ್ರವೊಂದರ ಮೂಲಕ ಗಾಯನಲೋಕಕ್ಕೆ ಕಾಲಿಟ್ಟ ಚಿತ್ರರವರು 1986ರಲ್ಲಿ ಕನ್ನಡಕ್ಕೂ ಎಂಟ್ರಿ ಕೊಟ್ಟರು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಲ್ಯಾಟಿನ್, ಮಲಯಾ, ಅರೇಬಿಕ್, ಸಿಂಹಳಿ, ಫ಼್ರೆಂಚ್…ಇತ್ಯಾದಿ‌ ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಇದುವರೆಗೂ ಸುಮಾರು ಮುವ್ವತ್ತು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಎ. ಆರ್ .ರೆಹಮಾನ್, ಹಂಸಲೇಖ , ಕೀರವಾಣಿ , ಇಳಯರಾಜಾ ಮುಂತಾದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ. ಕೆ.ಜೆ.ಏಸುದಾಸ್ ಮುಂತಾದ ದಿಗ್ಗಜರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಚಿತ್ರಮ್ಮನವರದ್ದು.

6 ರಾಷ್ಟ್ರೀಯ ಪ್ರಶಸ್ತಿ, 8 ಫ಼ಿಲ್ಮ್ ಫ಼ೇರ್ ಅವಾರ್ಡ್, 36 ರಾಜ್ಯ ಪ್ರಶಸ್ತಿ ( ಕೇರಳ 16, ಆಂಧ್ರ 11, ತಮಿಳು 4, ಕನ್ಮಡ 3) ಗಳನ್ನು ಮುಡಿಗೇರಿಸಿಕೊಂಡಿದ್ದಲ್ಲದೇ ಬ್ರಿಟಿಷ್ ಪಾರ್ಲಿಮೆಂಟಿನ‌ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಮಹಿಳೆ ಎಂಬ‌ ಅಭಿದಾನಕ್ಕೂ‌ ಪಾತ್ರರಾಗಿದ್ದರು.ಚಿತ್ರರವರ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಫ಼ಿಲ್ಮ್‌ಫ಼ೇರ್ ಮುಂತಾದ ಉನ್ನತ ಪ್ರಶಸ್ತಿಗಳು ಅರಸಿ ಬಂದಿವೆ.

ಇಂದು ತಮ್ಮ ಅರವತ್ತನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕೆ.ಎಸ್.ಚಿತ್ರರವರಿಗೆ ಸಂಗೀತ ಕ್ಷೇತ್ರದಲ್ಲಿ ಇನ್ನೂ ಎತ್ತರದ ಸಾಧನೆಮಾಡಲು ಭಗವಂತ ಹೆಚ್ಚಿನ ಆರೋಗ್ಯ ಹಾಗೂ ಚೈತನ್ಯ ನೀಡಲಿ.

** ಮರೆಯುವ ಮುನ್ನ **

ಎಂತಹಾ ಸೆಲೆಬ್ರಿಟಿಯಾದರೂ ಅವರಲ್ಲಿ ಏನೋ ಒಂದು ಕೊರತೆಯನ್ನು ತುಂಬಿ ಆಟವಾಡಿಸುವುದೇ ವಿಧಿಯಾಟ. 2011 ರಲ್ಲಿ ಸಂಗೀತ ಕಾರ್ಯಕ್ರಮ ನೀಡಲು ದುಬೈಗೆ ಹೋಗಿದ್ದಾಗ ತನ್ನ ಏಕೈಕ ಪುತ್ರಿ ನಂದಿನಿ ಈಜುಕೊಳದಲ್ಲಿ‌ಮುಳುಗಿ ಸಾವನ್ನಪ್ಪಿದ್ದು ಚಿತ್ರ ರವರ ಜೀವನದ ಘನಘೋರ ದುರಂತ. ಆದರೆ ಆ ಷಾಕ್‌ನಿಂದ ಹೊರಬಂದು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡುತ್ತಲೇ ಇರುವ ಚಿತ್ರರವರು ನಿಜಾರ್ಥದಲ್ಲಿ ಪ್ರೇರಕಿ ಹಾಗೂ ಸಾಧಕಿ.

ನಿವೃತ್ತ ಸಂಗೀತಗಾರರು ಹಾಗೂ ಹಿನ್ನೆಲೆಗಾಯಕರ ಸಂಕಷ್ಟಗಳಿಗೆ ಸ್ಪಂದಿಸಲು ಸ್ನೇಹನಂದನ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಕೇವಲ ಗಾಯನ ಮಾತ್ರವಲ್ಲದೇ ಸಾಮಾಜಿಕ ಸೇವೆಗಳಲ್ಲೂ ತೊಡಗಿರುವುದು ಚಿತ್ರಮ್ಮನವರ ಸಮಾಜಮುಖಿ ಕಳಕಳಿಗೆ ಸಾಕ್ಷಿ.

ಕೋಗಿಲೆ ಕಂಠದ ,ಬಂಗಾರದ ನಗುವಿನ , ಮಗುವಿನ ಮನಸಿನ ಡಾ. ಕೆ.ಎಸ್.ಚಿತ್ರರವರ ವ್ಯಕ್ತಿತವೇ ಸಂಗೀತ ಕ್ಷೇತ್ರದ ಎಲ್ಲರಿಗೂ ಅನುಕರಣೀಯ.

ಹುಟ್ಟುಹಬ್ಬದ ಶುಭಾಶಯಗಳು ಚಿತ್ರಮ್ಮ…….

ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.