ಟಿವಿ ಕ್ಯಾಮರಾಮೆನ್ ಆಗಿದ್ದ ಹಣಮಂತ ಇದ್ದದ್ದು ಗಲ್ಲಿಯೊಂದರ ತಗಡಿನ‌ ಮನೆಯಲ್ಲಿ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ವಿಜಯ ದರ್ಪಣ ನ್ಯೂಸ್

ಬೆಂಗಳೂರು

ಟಿವಿ ಕ್ಯಾಮರಾಮೆನ್ ಆಗಿದ್ದ ಹಣಮಂತ
ಇದ್ದದ್ದು ಗಲ್ಲಿಯೊಂದರ ತಗಡಿನ‌ ಮನೆಯಲ್ಲಿ…

ಯಾರ ಬದುಕು ಯಾವಾಗ ಬೀದಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ… 

ಒಂದು ದಶಕಕ್ಕೂ ಹೆಚ್ಚು ಕಾಲ ಟಿವಿ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದ್ದ ಹಣಮಂತ ಬಬಲಾದಿ (ಸುವರ್ಣ ಟಿವಿ, ಕಸ್ತೂರಿ ಟಿವಿ)ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಬದುಕುಳಿದು ಬರಲಿ ಎಂದೇ ಸುದ್ದಿಮನೆಯ ಗೆಳೆಯರು ಪ್ರಾರ್ಥಿಸಿದ್ದರು. ವಿಧಿಯಾಟ ಆತ ಬದುಕಲಿಲ್ಲ.

ಆಸ್ಪತ್ರೆಗಾಗಿ ಕೂಡಿಟ್ಟ ಹಣವನ್ನು ಆ ಕುಟುಂಬ ಖರ್ಚು ಮಾಡಿಕೊಂಡಿತು. ಮನೆಯಲ್ಲಿ ಇವ ಬಿಟ್ಟರೆ ದುಡಿಯುವವರು ಯಾರಿಲ್ಲ. ನಿಜಕ್ಕೂ ಕಷ್ಟದಲ್ಲಿ ಕಣ್ಣೀರಾಯಿತು ಕುಟುಂಬ.

ತಿಂಗಳ ಹಿಂದೆ ಕಲಬುರ್ಗಿಗೆ ಹೋಗಿದ್ದಾಗ ಅಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ (ಕಕಾನಿಪ) ನೇತೃತ್ವದಲ್ಲಿ ಪತ್ರಕರ್ತರ ಗೆಳೆಯರೆಲ್ಲ ಸೇರಿ 49000/ ಹಣವನ್ನು ಸಂಗ್ರಹಿಸಿದ್ದರು. ಅದನ್ನು ಅವರ ಮನೆಗೆ ಕೊಟ್ಟು ಬರಲು ನನ್ನ ಕರೆದುಕೊಂಡು ಹೋದಾಗ ಆ ಮನೆ ಸ್ಥಿತಿ ನೋಡಿ ಮನಕಲಕಿತು.

ಗಲ್ಲಿಯೊಂದರಲ್ಲಿ ಮನೆ.ಆಚೆ ಈಚೆ ಮತ್ತು ಮೇಲೆ ತಗಡು ಹೊದ್ದಿಸಿದ ಮನೆ. ಕಿತ್ತು ತಿನ್ನುವ ಬಡತನ. ಹಣಮಂತನಿಗೆ ನಾಲ್ವರು ಹೆಣ್ಣು ಮಕ್ಕಳು. ಎಲ್ಲರೂ ಓದುತ್ತಿದ್ದಾರೆ

ತನ್ನ ನಾಲ್ಕು ಮಕ್ಕಳ ಜೊತೆಗೆ ಕಷ್ಟದ ಸಂದರ್ಭ ನೆನೆದು, ಹಣಮಂತ ಬದುಕಿದ್ದರೆ ಸಾಕಿತ್ತು ಹೇಗೋ ಬದುಕು ಸಾಗಿಸುತ್ತಿದ್ದೆವು. ದೇವರು ಅನ್ಯಾಯ ಮಾಡಿದ ಎಂದು ಇಡೀ ಕುಟುಂಬ ಕಣ್ಣೀರಾಗಿ ಅಲ್ಲಿದ್ದವರಿಗೂ ದುಃಖ ತಡೆಯಲಾಗಲಿಲ್ಲ.

49 ಸಾವಿರ ರೂ ಅವರ ಕೈಗೆ ಕೊಟ್ಟು, ಇನ್ನಷ್ಟು ಸಹಾಯ ಮಾಡುವುದಾಗಿ ಹೇಳಿ ಬಂದಿದ್ದೆವು. ಕೆಯುಡಬ್ಲ್ಯೂಜೆ (ಕರ್ನಾಟಕ ಕಾರ್ನಿಯನಿರತ ಪತ್ರಕರ್ತರ ಸಂಘ) ಆಪತ್ಬಾಂಧವ ನಿಧಿಯಲ್ಲಿ ಸಂಗ್ರಹವಾದ 21 ಸಾವಿರ ರೂಗಳನ್ನು ಅವರ ಅಕೌಂಟ್ ಗೆ ಜಮೆ ಮಾಡಲಾಯಿತು.

ಬೀದರ್ ನಲ್ಲಿ ಆತ ಸುವರ್ಣ ಟಿವಿ ಕ್ಯಾಮರಾಮೆನ್‌ ಆಗಿದ್ದರಿಂದ ಅಲ್ಲಿ ಕೆಯುಡಬ್ಲ್ಯೂಜೆ (ಕಕಾನಿಪ)ಯ ಅಪ್ಪೂರಾವ್‌ಸೌದಿ, ಗಣಪತಿ, ಶಿವಕುಮಾರ್ ಮತ್ತು ಸ್ನೇಹಿತರು ಸೇರಿ ಸ್ವಲ್ಪ ಸಹಾಯ ಮಾಡಿಸಿದ್ದರು. ಅಷ್ಟು ಬಿಟ್ಟರೆ ಬೇರೇನಿಲ್ಲ.

ಶಾಸಕರು, ಸಚಿವರಿಂದ‌ ಹಿಡಿದು ಎಲ್ಲರಿಗೂ ಟಿವಿ ಲೋಗೋ ಹಿಡಿದು ಮಾತನಾಡಿಸುವ ಕ್ಯಾಮರಾಮೆನ್‌ ಗಳಲ್ಲಿ ಎಷ್ಟೋ ಜನರ ಪರಿಸ್ಥಿತಿ ಈಗಲೂ ಸಂಕಷ್ಟದಲ್ಲಿಯೇ ಇದೆ.

ಪ್ರೆಸ್ ಮೀಟ್ ಗಳಲ್ಲಿ ಆ ಟಿವಿ ಬಂದಿಲ್ಲ, ಈ ಟಿವಿ ಲೋಗೊ ಇಲ್ಲ ಎಂದು ಗಮನಿಸುವ ಜನಪ್ರತಿನಿಧಿಗಳಿಗೆ ಬಡ ಹಣಮಂತನಂತ ಕ್ಯಾಮರಾಮೆನ್ ಕುಟುಂಬಕ್ಕೆ ನೆರವಾಗಬೇಕೆಂದು ಯಾಕೆ ಅನ್ನಿಸುವುದಿಲ್ಲ?

ಕಲಬುರಗಿಯಲ್ಲಿ ಈಗಲೂ ಅದೇ ತಗಡಿನ ಮನೆಯಲ್ಲಿ ಹಣಮಂತನ ಕುಟುಂಬವಿದೆ. ಬಾಬುರಾವ ಯಡ್ರಾಮಿ, ಭವಾನಿಸಿಂಗ್ ಠಾಕೂರ್, ಸತ್ಯಂಪೇಟೆ, ದೇವೇಂದ್ರಪ್ಪ ಕಪನೂರ್, ಶರಣಯ್ಯ, ಆವಂಟಿ, ಸಂಗಮನಾಥ್ ಜೊತೆಗೆ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಒಂದು ಮನೆ ಮಂಜೂರು ಮಾಡಿಸಿ ಕೊಡುವ ಭರವಸೆ ನೀಡಲಾಯಿತು. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅಲ್ಲಿನ ಪತ್ರಕರ್ತರು ಪ್ರಯತ್ನದಲ್ಲಿದ್ದಾರೆ.

ಸಚಿವ ಪ್ರಿಯಾಂಕಾ ಖರ್ಗೆ ಸೇರಿದಂತೆ
ಘಟಾನುಘಟಿ ರಾಜಕಾರಣಿಗಳು ಇರುವ ಕಲಬುರಗಿಯಲ್ಲಿ ಬಡ ಹಣಮಂತ ಕುಟುಂಬಕ್ಕೆ ಏನಾದರೊಂದು ನೆಲೆ ಕಲ್ಪಿಸಲಿ ಎನ್ನುವುದು ನಮ್ಮೆಲ್ಲರ ನಿರೀಕ್ಷೆ.

ನಾಲ್ಕು ಹೆಣ್ಣು ಮಕ್ಕಳನ್ನು ಮುಂದೆ ಸಾಕಿ ಸಲುವಬೇಕಾದ ಆ ತಾಯಿ ಸಂಕಷ್ಟ ಎಷ್ಟಿರಬಹುದು? ಇಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು ಖಂಡಿತವಾಗಿ ಸಹಾಯ ಮಾಡುವ ಮನಸ್ಸು ಬರಲಿದೆ.

ಹಣಮಂತ ಬಬಲಾದಿ ಕುಟುಂಬಕ್ಕೆ ಸಹಾಯ ಮಾಡಲು ಇಚ್ಚಿಸುವವರಿಗೆ

ಸುನಿತ w/o ಹಣಮಂತ

A/c number:
42205816843

IFSC:
SBIN0001972