ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ…..
ವಿಜಯ ದರ್ಪಣ ನ್ಯೂಸ್
ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ…..
ಗೆದ್ದವರಿಗೆ ಅಭಿನಂದಿಸುತ್ತಾ,
ಸೋತವರಿಗೆ ಸಾಂತ್ವನ ಹೇಳುತ್ತಾ,
ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ,
ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ,
ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ……..
ಚುನಾವಣೆಯನ್ನು ಮೌಲ್ಯಗಳ ಮೇಲೆ ಅಳೆಯಬೇಕೆ, ಸಂಖ್ಯೆಗಳ ಮೇಲೆ ಅಳೆಯಬೇಕೆ, ಫಲಿತಾಂಶಗಳ ಮೇಲೆ ಅಳೆಯಬೇಕೆ, ಅಧಿಕಾರ ವಹಿಸಿಕೊಂಡರ ಸಾಮರ್ಥ್ಯದ ಮೇಲೆ ಅಳೆಯಬೇಕೆ ಒಮ್ಮೆ ಮುಕ್ತವಾಗಿ ಆಲೋಚಿಸಿ. ಇದು ವಿದೇಶದ ಶತ್ರುಗಳ ಮೇಲಿನ ವಿಜಯವಲ್ಲ. ನಮ್ಮ ನಡುವಿನ ಒಂದು ಸಣ್ಣ ಸ್ಪರ್ಧೆ ಮಾತ್ರ….
ಇಲ್ಲಿಯವರೆಗೆ ಬಹುತೇಕ ಮಾಧ್ಯಮಗಳು ಮತ್ತು ರಾಜಕೀಯ ಆಸಕ್ತರು ಮತಗಳು ಮತ್ತು ಪಕ್ಷಗಳ ಆಧಾರದ ಮೇಲೆ ಫಲಿತಾಂಶವನ್ನು ವಿಮರ್ಶಿಸಿದ್ದಾರೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಮೀರಿ ಆಲೋಚಿಸಬಹುದಾದ ಸಾಧ್ಯತೆಯ ಹುಡುಕಾಟದಲ್ಲಿ…….
ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆ ಎಂಬ ವಿಧಾನವೇ ಮೂಲಾಧಾರ. ಆದರೆ ಅದೇ ಮಲಿನವಾಗುತ್ತಾ ಭಾರತೀಯ ಸಂಸ್ಕೃತಿ ಮತ್ತು ಸಮಾಜಕ್ಕೆ ಮಾರಕವಾಗುತ್ತಿದೆಯೇ ಎಂಬ ಅನುಮಾನದ ಹುತ್ತದೊಳಗೆ ಕೈ ಹಾಕಿದಾಗ…
ಬಾಕ್ಸಿಂಗ್ ಕಬಡ್ಡಿ ಪುಟ್ ಬಾಲ್ ಸೇರಿ ಯಾವುದೇ ಕ್ರೀಡೆಯಲ್ಲಿ ಗೆದ್ದ ವ್ಯಕ್ತಿ ಮಾಡುವ ಮೊದಲ ಕೆಲಸ ಸೋತವನ ಕೈ ಕುಲುಕುವುದು ಮತ್ತು ಸಾಧ್ಯವಾದರೆ ಅವರನ್ನು ಅಪ್ಪಿಕೊಳ್ಳುವುದು. ಒಂದು ಸ್ಪರ್ಧೆಯ ಮೂಲಭೂತ ಲಕ್ಷಣವೇ ಅದು.
ಆದರೆ ಈ ಚುನಾವಣೆ ಎಂಬ ಪ್ರಕ್ರಿಯೆಯಲ್ಲಿ ಅನೇಕ ವಂಶಗಳಿಗೆ ಹರಡುವಷ್ಟು ದ್ವೇಷ ಅಸೂಯೆ ಸೇಡು ಹಗೆತನ ಮೋಸ ವಂಚನೆ ಕ್ರೌರ್ಯ ಕುತಂತ್ರ ಅಡಗಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಚುನಾವಣೆ ಎಂಬುದು ವ್ಯಕ್ತಿಗತ ಮತ್ತು ಸಾಮಾಜಿಕ ವಿಭಜನೆಗೆ ಕಾರಣವಾಗುವ ಬೀಜಗಳನ್ನು ಉತ್ಪಾದಿಸಿ ಅದು ಮೊಳಕೆ ಒಡೆಯುವಂತೆ ಮಾಡಿ ಮುಂದೆ ಅದು ಹೆಮ್ಮರವಾಗಿ ಬೆಳೆದು ಅದರ ವಿಷ ಫಲವನ್ನು ಮುಂದಿನ ಪೀಳಿಗೆ ಉಣ್ಣುವಂತೆ ಮಾಡುತ್ತಿದೆ.
ಈಗಾಗಲೇ ಭಾರತೀಯ ಸಾಮಾಜಿಕ ರಚನೆಯಲ್ಲಿಯೇ ಅನೇಕ ತಾರತಮ್ಯ ಮತ್ತು ವಿಭಜನಾತ್ಮಕ ಪದರಗಳು ಸಾಕಷ್ಟು ಇವೆ. ಈಗ ಈ ಚುನಾವಣಾ ವ್ಯವಸ್ಥೆ,
ಜಾತಿಯ ಆಧಾರದಲ್ಲಿ,
ಧರ್ಮದ ವಿಚಾರದಲ್ಲಿ,
ಭಾಷೆಯ ವಿಷಯದಲ್ಲಿ,
ಪ್ರದೇಶದ ಮೂಲದಲ್ಲಿ,
ಪಕ್ಷಗಳ ಸಿದ್ಧಾಂತಗಳಲ್ಲಿ,
ಹಣದ ಆಮಿಷದಲ್ಲಿ,
ತೋಳ್ಬಲದ ಪ್ರದರ್ಶನದಲ್ಲಿ,
ಬೆದರಿಕೆಯ ಒತ್ತಡದಲ್ಲಿ,
ತಂತ್ರಜ್ಞಾನದ ಕುತಂತ್ರದಲ್ಲಿ,
ವಂಚನೆಯ ಜಾಲದಲ್ಲಿ,
ಸುಳ್ಳಿನ ಭರವಸೆಯಲ್ಲಿ….
ಹೀಗೆ ನಾನಾ ರೀತಿಯ ವಿಭಜನೆಯಲ್ಲಿ ಬಂಧಿಯಾಗಿರುವಾಗ ಚುನಾವಣಾ ಪ್ರಕ್ರಿಯೆ ಇದಕ್ಕೆ ಮತ್ತಷ್ಟು ತುಪ್ಪ ಸುರಿದು ಬೆಂಕಿ ಹೊತ್ತಿಸುತ್ತಿದೆ.
ಒಂದು ಆಶ್ಚರ್ಯಕರ ವಿಷಯವೆಂದರೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಸ್ಪರ್ಧಿಸುವುದು ನಮ್ಮದೇ ಜನರು. ಹೆಚ್ಚು ಕಡಿಮೆ ಒಂದೇ ಊರಿನ ಒಂದೇ ಜಾತಿಯ ಒಂದೇ ಭಾಷೆಯ ಒಂದೇ ಧರ್ಮದ ಒಂದೇ ರಾಜ್ಯದ ಜನರ ನಡುವೆಯೇ ಸ್ಪರ್ಧೆ ನಡೆದರೂ ಈ ಮಟ್ಟದ ದ್ವೇಷ ಅಸೂಯೆ ಹುಟ್ಟುವುದು ಹೇಗೆ ಸಾಧ್ಯ. ಕೆಲವು ಕಡೆ ಹೊಡೆದಾಟ ಮತ್ತು ಕೊಲೆಗಳು ಸಹ ನಡೆಯುತ್ತವೆ.
ಇದರ ಪರಿಣಾಮ ತುಂಬಾ ಅಪಾಯಕಾರಿ ಅಂಶಗಳು ಕಂಡುಬರುತ್ತಿವೆ. ಅಧಿಕಾರ ವಿಕೇಂದ್ರೀಕರಣ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅತ್ಯುತ್ತಮ ವಿಧಾನವಾದರು ಗ್ರಾಮ ಗ್ರಾಮಗಳಲ್ಲಿ ಚುನಾವಣಾ ಕಾರಣದಿಂದ ಸಾಕಷ್ಟು ವೈಮನಸ್ಯ ಮೂಡುತ್ತಿರುವುದು ಸಹ ಕಳವಳಕಾರಿ. ಇದು ಸಾಮಾಜಿಕ ಸಾಮರಸ್ಯವನ್ನು ಮತ್ತಷ್ಟು ಹದಗೆಡಿಸುತ್ತಿದೆ.
ಜೊತೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುಚೇಷ್ಟೆಯ ಕಾರಣ ಚುನಾವಣೆ ಎಂಬುದು ಒಂದು ಯುದ್ಧದ ರೀತಿ ಬಿಂಬಿತವಾಗಿದೆ ಮತ್ತು ಅನಾವಶ್ಯಕ ಕುತೂಹಲ ಕೆರಳಿಸಿ ದೀರ್ಘಕಾಲ ಎಳೆಯುತ್ತಿದೆ.
ಇದಕ್ಕೆ ಪರಿಹಾರ ಅಥವಾ ಪರ್ಯಾಯ ಏನು ಎಂಬ ಪ್ರಶ್ನೆ ಕಾಡುತ್ತದೆ.
ಪರ್ಯಾಯ ಏನೂ ಇಲ್ಲ. ಚುನಾವಣಾ ಪದ್ದತಿಯೇ ಅತ್ಯುತ್ತಮ. ಆದರೆ ಪರಿಹಾರ ಸಾಧ್ಯವಿದೆ.
ಚುನಾವಣೆಯನ್ನು ಯುದ್ಧದ ರೀತಿ ಬಿಂಬಿಸುವುದೇ ಮೊದಲ ತಪ್ಪು. ಕ್ರೀಡೆ, ಪರೀಕ್ಷೆ, ಉದ್ಯೋಗದ ರೀತಿ ಅದು ನಮ್ಮ ನಡುವಿನ ಸ್ಪರ್ಧೆ ಎಂದು ಭಾವಿಸುವಂತಾಗಬೇಕು.
ಗೆದ್ದವರು ಸೋತವರನ್ನು ತಬ್ಬಿಕೊಂಡು
ಶಾಲು ಹೊದಿಸಬೇಕೆ ಹೊರತು ಅವರ ಮನೆಯ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿ ಅವರನ್ನು ಮತ್ತಷ್ಟು ಮಾನಸಿಕ ಹಿಂಸೆಗೆ ದೂಡಬಾರದು.
ಚುನಾವಣಾ ಆಯೋಗವೇ ಪ್ರಚಾರದ ನೇತೃತ್ವ ವಹಿಸಬೇಕು. ಅಭ್ಯರ್ಥಿಗಳ ವೈಯಕ್ತಿಕ ವಿವರ, ಪಕ್ಷ, ಚಿನ್ಹೆ ಮತ್ತು ಭರವಸೆಗಳನ್ನು ತಾನೇ ಮನೆ ಮನೆಗೆ ತಲುಪಿಸಬೇಕು.
ಅಭ್ಯರ್ಥಿಗಳು ಕೇವಲ ಎಲ್ಲಾ ರೀತಿಯ ಮಾಧ್ಯಮಗಳ ಮೂಲಕ ಮಾತ್ರ ಕೇವಲ 10 ದಿನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಯಾವುದೇ ಬಹಿರಂಗ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದು.
ಅಭ್ಯರ್ಥಿಗಳು ತನ್ನ ಬಗ್ಗೆ ಮಾತ್ರ ಮಾತನಾಡಬೇಕು. ವಿರೋಧಿಗಳನ್ನು ಟೀಕಿಸಬಾರದು. ಒಂದು ವೇಳೆ ಅದನ್ನು ಮೀರಿದರೆ ಚುನಾವಣಾ ಆಯೋಗ ಕ್ರೀಡಾ ಅಂಪೈರುಗಳ ರೀತಿ ತಕ್ಷಣವೇ ಡಿಬಾರ್ ಮಾಡುವಂತಿರಬೇಕು.
ಚುನಾವಣೆಯಲ್ಲಿ ಆಯ್ಕೆಯಾದ ಜನ ಪ್ರತಿನಿಧಿ ಆ ತಕ್ಷಣದಿಂದಲೇ ತನ್ನ ಮಾತೃ ಪಕ್ಷದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾನೆ. ಈಗ ಆತನಿಗೆ ಯಾವುದೇ ಪಕ್ಷ ಇರುವುದಿಲ್ಲ. ಆತ ಎಲ್ಲಾ ಜನರ ಪ್ರತಿನಿಧಿ ಮಾತ್ರ. ಮತ್ತೆ ಚುನಾವಣೆ ಘೋಷಣೆಯಾದ ಮೇಲೆ ಒಂದು ಪಕ್ಷ ಸೇರಬಹುದು.
ಮಾಧ್ಯಮಗಳು ಅಥವಾ ಬೇರೆ ಯಾರೂ ಚುನಾವಣಾ ಸಮೀಕ್ಷೆ ಮಾಡದಂತೆ ನಿಷೇಧ ಹೇರಬೇಕು. ಅದಕ್ಕಾಗಿ ಸಾಕಷ್ಟು ಶ್ರಮ ಮತ್ತು ಹಣ ವ್ಯರ್ಥವಾಗುವುದನ್ನು ತಡೆಯಬೇಕು. ಹದಿನೈದು ದಿನದಲ್ಲಿ ಬರುವ ಫಲಿತಾಂಶಕ್ಕೆ ಅಷ್ಟು ಶ್ರಮ ಏಕೆ. ಸ್ವಲ್ಪ ತಾಳ್ಮೆ ಇದ್ದರೆ ಸಾಕು.
ಸ್ಪರ್ಧೆ ಒಂದು ಪ್ರಯತ್ನ ಮತ್ತು ಅನುಭವ. ಅದರಲ್ಲಿ ಸೋಲು ಗೆಲುವು ಅಷ್ಟು ಮುಖ್ಯವಲ್ಲ. ಗೆದ್ದ ತಕ್ಷಣ ಆತ ದೊಡ್ಡ ಸಾಧಕನಲ್ಲ. ಸೋತ ತಕ್ಷಣ ಆತ ನಿರುಪಯುಕ್ತನಲ್ಲ. ಇಬ್ಬರೂ ನಮ್ಮವರೇ. ಅವರ ಬಗ್ಗೆ ಸಹಾನುಭೂತಿ ಇರಲಿ.
ಅಧಿಕಾರ ಯಾರಿಗೂ ಶಾಶ್ವತವಲ್ಲ. ಸೇವೆ ಮಾತ್ರ ಶಾಶ್ವತ. ಗೆದ್ದ ತಕ್ಷಣ ನೀವು ನಿಮಗೆ ಇಷ್ಟ ಬಂದಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಸಂವಿಧಾನದ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು ಯಾರೇ ಆದರೂ…..
ದುರಾದೃಷ್ಟವಶಾತ್ ಮಾಧ್ಯಮಗಳು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವ ಬದಲು ಚುನಾವಣಾ ವಿಮರ್ಶೆಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಮಾಡಿ ಫಲಿತಾಂಶಗಳ ಆಧಾರದ ಮೇಲೆ ಗೆದ್ದವರನ್ನು ಇಂದ್ರ ಚಂದ್ರ ಚಾಣಕ್ಯ ಎಂದು ಹೊಗಳಿ ಸೋತವರನ್ನು ಅತ್ಯಂತ ದಡ್ಡ ಎಂದು ನಿಂದಿಸಿ ಗೆಲುವೇ ಚುನಾವಣೆಯ ಮಾನದಂಡ. ಏನೇ ಮಾಡಿ ಗೆಲುವಷ್ಟೇ ಮುಖ್ಯ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಗೆಲ್ಲುವ ಮಾರ್ಗ ಒಳ್ಳೆಯದಿರಬೇಕು ಎಂಬುದನ್ನು ಹೇಳುವುದೇ ಇಲ್ಲ. ಕೆಟ್ಟ ಮಾರ್ಗದ ಗೆಲುವು ದೇಶ ದ್ರೋಹ ಧರ್ಮ ದ್ರೋಹ ಸಂವಿಧಾನದ ದ್ರೋಹ ಎಂದು ಮಾಧ್ಯಮಗಳು ಹೇಳದೆ ಅವು ಮಾನವೀಯತೆಗೆ ದ್ರೋಹ ಮಾಡುತ್ತಿವೆ.
ಬಿಜಿಪಿ ಕಾಂಗ್ರೆಸ್ ಜೆಡಿಎಸ್ ಕಮ್ಯುನಿಸ್ಟ್ ಆಮ್ ಆದ್ಮಿ ಮುಂತಾದ ಎಲ್ಲಾ ಪಕ್ಷದವರು ಭಾರತೀಯರೇ ಮತ್ತು ನಮ್ಮವರೇ. ಗೆದ್ದವರು ನಮ್ಮವರೇ ಸೋತವರು ನಮ್ಮವರೇ.
ಸ್ಪರ್ಧೆಗಳು ನಮ್ಮ ನಡುವೆಯೇ, ಸೋಲು ಗೆಲುವು ನಮ್ಮ ನಡುವೆಯೇ,
ಪರಿಣಾಮ ಮತ್ತು ಫಲಿತಾಂಶ ನಮ್ಮ ನಡುವೆಯೇ. ಅದಕ್ಕಾಗಿ ಏಕಿಷ್ಟು ಕಿಚ್ಚು…….
ಒಳ್ಳೆಯತನ ತಿಳಿವಳಿಕೆಯಲ್ಲ ನಡವಳಿಕೆ.
ಹಾಳಾಗಿರುವುದು ಸಾಕು ನೆಮ್ಮದಿಯ ಸೌಹಾರ್ದ ಬದುಕಿನತ್ತ ಸಾಗೋಣ. ನಿಮ್ಮ ಬುದ್ದಿವಂತಿಕೆ ಶ್ರಮ ಸಮಾಜದ ಒಳಿತಿಗಾಗಿ ಮಾತ್ರ ಇರಲಿ. ವಿಭಜನೆಗಾಗಿ, ನಿಮ್ಮ ಸ್ವಾರ್ಥಕ್ಕಾಗಿ ಅಲ್ಲ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…….