ದೇವರಪುರದ ಡಕಾಯಿತಿ ಪ್ರಕರಣ :ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು…

ವಿಜಯ ದರ್ಪಣ ನ್ಯೂಸ್  ,ಕೊಡಗು

ಮಡಿಕೇರಿ ಜಿಲ್ಲೆ ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಿನ್ನದ ವ್ಯಾಪಾರಿಯಿಂದ 993 ಗ್ರಾಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ದೂರುದಾರ ಶಂಷದ್ ಚಿನ್ನವನ್ನು 62 ಲಕ್ಷ ರೂಗೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದಾನೆ . ಆದರೆ ಶಂಷದ್ ಪೊಲೀಸರಿಗೆ ನೀಡಿದ ದೂರಿನಲ್ಲಿ 50 ಲಕ್ಷ ರೂಪಾಯಿಗೆ ಮಾರಾಟ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.ಈ ವ್ಯವಹಾರದ ಹಿಂದೆ ಕಳ್ಳಸಾಗಣೆ ದಂದೆ ಇರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ದೇವರಪುರದ ಬಳಿ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಶಂಷದ್ ಪೊಲೀಸರಿಗೆ ತಪ್ಪು ಮಾಹಿತಿ ನೀಡಿರುವ ವಿಚಾರ ಬೆಳೆಕಿಗೆ ಬಂದಿದೆ. ದೂರುದಾರ ಶಂಜಾದ್ ಚಿನ್ನದ ಆಭರಣಗಳನ್ನು ಮಾರಾಟ ಮಾಡಿ 50ಲಕ್ಷ ರೂ. ಹಣ ಪಡೆದು ತರುತ್ತಿದ್ದಾಗ ದರೋಡೆ ನಡೆದಿದೆಯೆಂದು ದೂರು ದಾಖಲಿಸಿದ್ದರು.

ಚಿನ್ನದ ವ್ಯಾಪಾರ ನಡೆದಿರುವ ಬಗ್ಗೆ ಪರಿಶೀಲಿಸಲು ಮೈಸೂರಿಗೆ ತೆರಳಿದ ಪೊಲೀಸರಿಗೆ 993 ಗ್ರಾo (ಸುಮಾರು 1 ಕೆ.ಜಿ) ಚಿನ್ನ ಮಾರಾಟ ಮಾಡಲಾಗಿರುವುದು ಗೊತ್ತಾಗಿದೆ. ಅಲ್ಲದೇ ಅದನ್ನು 62 ಲಕ್ಷ ರೂ.ಗೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದಾಗಿ ಚಿನ್ನದ ವ್ಯಾಪಾರಿ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಚಿನ್ನ ವಶಕ್ಕೆ ಪಡೆದ ಪೊಲೀಸರು ಅಂದಾಜು 1 ಕೆ.ಜಿ ಚಿನ್ನದ ವ್ಯಾಪಾರ ನಡೆಸಲಾಗಿದೆಯಾದರು ಅದಕ್ಕೆ ಯಾವುದೇ ದಾಖಲೆ ಇಲ್ಲ. ಇದರಿಂದ ತೆರಿಗೆ ವಂಚಿಸುವುದಕ್ಕಾಗಿ ಬಿಲ್ ಇಲ್ಲದೇ ವ್ಯವಹರಿಸಿರುವುದು ಖಚಿತವಾಗಿರುವ ಹಿನ್ನೆಲೆ ಚಿನ್ನವನ್ನು ವಶಕ್ಕೆ ಪಡೆದಿರುವ ಪೊಲೀಸರು, ನ್ಯಾಯಾಲಯದಲ್ಲಿ ವಿವರಣೆ ನೀಡಿ ಚಿನ್ನವನ್ನು ಪಡೆದುಕೊಳ್ಳುವಂತೆ ಚಿನ್ನದ ವ್ಯಾಪಾರಿಗೆ ತಿಳಿಸಿದ್ದಾರೆ.

ಅಲ್ಲದೇ ಈ ವ್ಯವಹಾರದ ಬಗ್ಗೆ ಐ.ಟಿ ಹಾಗು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅಂದಾಜು 1 ಕೆ.ಜಿಯಷ್ಟು ಚಿನ್ನವನ್ನು ಕರಗಿಸಿ ಮಾರಾಟ ಮಾಡಿರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ತೆರಿಗೆ ವಂಚಿಸುವ ಸಲುವಾಗಿ ಗಲ್ಫ್ ರಾಷ್ಟ್ರಗಳಿಂದ ಚಿನ್ನಾಭರಣಗಳನ್ನು ತೊಟ್ಟುಕೊಂಡು ಬರುವ ಮಹಿಳೆಯರು ಅದನ್ನು ಭಾರತದಲ್ಲಿ ಕರಗಿಸಿ ಮಾರಾಟ ಮಾಡುವ ವ್ಯವಸ್ಥಿತ ದಂಧೆ ಕೇರಳದಲ್ಲಿ ಹಾಗೂ ಮಂಗಳೂರಿನಲ್ಲಿ ಸಕ್ರಿಯವಾಗಿದ್ದು ,ಇಂತಹದ್ದೇ ವ್ಯವಹಾರ ಇಲ್ಲಿಯೂ ನಡೆದಿರುವ ಶಂಕೆ ವ್ಯಕ್ತವಾಗಿದೆ.

ತನ್ನದೇ ಒಡವೆಗಳೆಂದು ಹೇಳಿಕೊಳ್ಳುವ ಶಂಜಾದ್ ಅದನ್ನು ಕರಗಿಸಿ ಮಾರಾಟ ಮಾಡಿರುವುದು, ಪೊಲೀಸರಿಗೆ ನೀಡಿದ ದೂರಿನಲ್ಲಿ ತಪ್ಪು ಮಾಹಿತಿ ನೀಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಈ ಆಯಾಮದಲ್ಲಿಯೂ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಸಂಬಂಧ ಪಟ್ಟ ಇಲಾಖೆಗಳಿಗೂ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸರ್ಕಾರದ ತೆರಿಗೆ ವಂಚಿಸಿ ಈ ದಂದೆ ನಿರಂತರವಾಗಿ ನಡೆಯುತ್ತಿದ್ದು, ಕೇರಳದ ಕಣ್ಣೂರು ಸೇರಿದಂತೆ ಕೇರಳದ ವಿವಿಧ ವಿಮಾನ ನಿಲ್ದಾಣದ ಮೂಲಕ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮಹಿಳೆಯರು ಚಿನ್ನಾಭರಣಗಳನ್ನು ಧರಿಸಿ ಇಲ್ಲಿಗೆ ತಂದು ಇದಕ್ಕಾಗಿ ಇರುವ ವ್ಯವಸ್ಥಿತ ಜಾಲ ದೊಂದಿಗೆ ಈ ಅಕ್ರಮ ದಂದೆ ನಡೆಸಲಾಗುತ್ತಿದೆ. ದೇವರಪುರದ ಘಟನೆಯು ಕೂಡ ಇದೇ ರೀತಿಯದಾಗಿರಬಹುದು ಎಂದು ಶಂಕಿಸಲಾಗಿದೆ.ಪೊಲೀಸರ ತನಿಕೆಯಿಂದಷ್ಟೇ ಬಹಿರಂಗಗೊಳ್ಳಬೇಕಾಗಿದೆ.

ಈ ದಂಧೆಯ ಬಗ್ಗೆ ತಿಳಿದಿರುವ ಮತ್ತೊಂದು ತಂಡ ಹಣ ದರೋಡೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಕೊಡಗು ಜಿಲ್ಲಾ ಪೊಲೀಸ್ ತಂಡ ಸದ್ಯದಲ್ಲೇ ಈ ಪ್ರಕರಣವನ್ನು ಭೇದಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತವೆ.

ಕೇರಳದ ಈ ಅಕ್ರಮ ಜಾಲ ಕೇವಲ ಮೈಸೂರಿನಲ್ಲಿ ಮಾತ್ರ ಮಾರಾಟ ಮಾಡದೆ ಕೊಡಗು ಹಾಸನ ಚಿಕ್ಕಮಂಗಳೂರಿನಲ್ಲೂ ಕೂಡ ಸರಕಾರದ ತೆರಿಗೆ ವಂಚಿಸಿ ಚಿನ್ನಾಭರಣವನ್ನು ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಚಿನ್ನಾಭರಣ ಮಾಲೀಕರು ನಗದು ರೂಪದಲ್ಲಿ ಹಣವನ್ನು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.