ಬಸ್ಸಿನಲ್ಲಿ ಯಮ ಈಕೆಯ ಬಳಿ ಒಂದು ಕ್ಷಣ ಬಂದು ಹೋದ, ಆದರೆ….
ವಿಜಯ ದರ್ಪಣ ನ್ಯೂಸ್
ಬಸ್ಸಿನಲ್ಲಿ ಯಮ ಈಕೆಯ ಬಳಿ ಒಂದು ಕ್ಷಣ ಬಂದು ಹೋದ, ಆದರೆ….
ಕೇರಳದಲ್ಲಿ ಮಾನವೀಯತೆ ಮೆರೆದು ಜೀವ ಉಳಿಸಿದರು ಕೊಡಗಿನ ಮಹಿಳೆಯರಿಬ್ಬರು
ಮಡಿಕೇರಿ:ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ಒಂದು ಕ್ಷಣ ನಮ್ಮ ಹೃದಯ ಬಡಿತವನ್ನು ಹೆಚ್ಚಿಸಿದರೂ, ಮರು ಕ್ಷಣವೇ ಮಾನವೀಯ ಮೌಲ್ಯದ ದೃಶ್ಯ ನಮ್ಮ ಹೃದಯವನ್ನು ಗೆದ್ದುಬಿಡುತ್ತವೆ. ಅಂತಹುದೇ ದೃಶ್ಯ ಕಣ್ಣ ಮುಂದೆ ನಡೆದರೆ ಹೇಗಿರುತ್ತೆ? ಇದಕ್ಕೊಂದು ನಿದರ್ಶನ ಇಲ್ಲಿದೆ….
ಇನ್ನೇನು ಬಸ್ಸಿನಲ್ಲಿಯೇ ಈಕೆಯ ಜೀವ ಹೋಯಿತು ಎನ್ನುವಷ್ಟರಲ್ಲಿ ಕೊಡಗು ಜಿಲ್ಲೆ ಕುಶಾಲನಗರದ ಮಹಿಳೆಯರಿಬ್ಬರು ಆಪತ್ ಬಾಂಧವರಾಗಿ ನೆರವಿಗೆ ಧಾವಿಸಿ, ಚಿಕಿತ್ಸೆ ಕೊಡಿಸುವ ಮೂಲಕ ಯಮನನ್ನು ಹಿಮ್ಮೆಟ್ಟಿಸಿದ್ದಾರೆ!
ನಡೆದಿದ್ದೇನು?
ಮೈಸೂರು ಜಿಲ್ಲೆ ನವಿಲೂರಿನ ಈ ಮಹಿಳೆ KSRTC ಬಸ್ ನಲ್ಲಿ ಕೇರಳದ ತಲಚೇರಿಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯದ ಪೆರುಂಬಾಡಿಯಲ್ಲಿ ಇದ್ದಕ್ಕಿದ್ದಂತೆ ವಾಂತಿ ಮಾಡಿದ ಒಂಟಿ ಮಹಿಳೆ ಬಸ್ಸಿನ ಒಳಗೆ ಕುಸಿದುಬಿದ್ದಿದ್ದಾರೆ. ಆಕೆ ಮದ್ಯ ಸೇವಿಸಿರಬಹುದೆಂದು ಭಾವಿಸಿದ ಸಹ ಪ್ರಯಾಣಿಕರು ಮಹಿಳೆಯನ್ನು ಎಬ್ಬಿಸಿ ಕೂರಿಸುವ ಉಸಾಬಾರಿಗೆ ಹೋಗಿರಲಿಲ್ಲ. ಕೆಲವರು ಅಂಗಾತ ಬಿದ್ದಿದ್ದ ಆಕೆಯನ್ನು ದಾಟಿಕೊಂಡು ಬಸ್ ಇಳಿದು ಹೋಗಿದ್ದಾರೆ. ಪೆರುಂಬಾಡಿಯಿಂದ ತಲಚೇರಿ ಬಸ್ ನಿಲ್ದಾಣದವರೆಗೆ ಅಂದಾಜು 50 ಕಿ. ಮೀ. ದೂರ ಇದೇ ಹೀನಾಯ ಸ್ಥಿತಿಯಲ್ಲಿ ಮಹಿಳೆ ಸಾಗಿದ್ದಾಳೆ. ಬಸ್ ನಿಲ್ದಾಣ ತಲುಪಿದರೂ ಇನ್ನೂ ಎಚ್ಚರಗೊಳ್ಳದಿರುವುದನ್ನು ಗಮನಿಸಿದ ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕುಶಾಲನಗರ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳಾದ ಶ್ವೇತ ವಿನೋದ್ ಮತ್ತು ಅವರೊಂದಿಗಿದ್ದ ಮೊಲ್ಲಿ ಮಧುರವರು ಸಂಶಯಗೊಂಡು ಮಹಿಳೆಯ ಉಸಿರಾಟವನ್ನು ಗಮನಿಸಿದಾಗ ಆಕೆ ಮದ್ಯಪಾನ ಮಾಡದಿರುವುದು ಮತ್ತು ಅಸೌಖ್ಯಕ್ಕೆ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಆಕೆಯ ನೆರವಿಗೆ ಧಾವಿಸಿದ ಶ್ವೇತ ವಿನೋದ್ ಮತ್ತು ಮೊಲ್ಲಿ ಮಧುರವರು ಬಸ್ ನಿಲ್ದಾಣದಲ್ಲಿದ್ದವರ ನೆರವು ಪಡೆದು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರಲ್ಲದೆ ಘಟನೆಯ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಮಹಿಳೆಗೆ ಆಗಿದ್ದೇನು
ತಲಚೇರಿಯಲ್ಲಿ ಮನೆಕೆಲಸಕ್ಕೆಂದು ತೆರಳುತ್ತಿದ್ದ ಆಕೆ ಕುಡಿದೇ ಬಿದ್ದಿರುವುದು ಎಂದು ಬಸ್ ನಲ್ಲಿದ್ದವರು ಭಾವಿಸಿದ್ದರು. ಆದರೆ ವಾಸ್ತವವಾಗಿ ಕುಡಿಯುವ ಅಭ್ಯಾಸ ಇಲ್ಲದಿರುವ ಆಕೆಗೆ ಬಸ್ ಪೆರುಂಬಾಡಿ ತಲುಪುತ್ತಿದ್ದಂತೆ ಶುಗರ್ ಲೋ ಆಗಿದೆ. ಇದರಿಂದ ಪರಿಸ್ಥಿತಿ ವಿಪರೀತಕ್ಕೆ ತಿರುಗಿ ಬಸ್ ನೊಳಗೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾಳೆ. ಅದೃಷ್ಟವಶಾತ್ ಅದೇ ಬಸ್ ನಲ್ಲಿದ್ದ ಕುಶಾಲನಗರದ ಶ್ವೇತ ವಿನೋದ್ ಮತ್ತು ಮೊಲ್ಲಿ ಮಧುರವರು ಸಾಕಾಲಿಕವಾಗಿ ಸ್ಪಂದಿಸಿ ಸಮಯಪ್ರಜ್ಞೆಯೊಂದಿಗೆ ಮಾನವೀಯತೆ ಮೆರೆದು ಜೀವ ಉಳಿಸಿದ್ದಾರೆ. ಇವರಿಬ್ಬರ ಪ್ರಯತ್ನದ ಫಲವಾಗಿ ಮಹಿಳೆ ಚೇತರಿಸಿಕೊಂಡಿದ್ದಾರೆ.
ಕೊನೆ ಮಾತು
ಕುಸಿದು ಬೀಳುವವರೆಲ್ಲರೂ ಕುಡುಕರಾಗಿರುವುದಿಲ್ಲ. ಕೆಲವೊಮ್ಮೆ ಇಂತಹ ಅನಿರೀಕ್ಷಿತ ಸನ್ನಿವೇಶ ಎದುರಾಗಬಹುದಾದ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಮಾನವೀಯ ಮೌಲ್ಯ ಅಗತ್ಯವಾಗುತ್ತದೆ ಎಂದು ಶ್ವೇತ ವಿನೋದ್ ಮತ್ತು ಮೊಲ್ಲಿ ಮಧು ಅವರು ತಿಳಿಸಿದ್ದಾರೆ.
…ಶ್ರೀಧರ್ ನೆಲ್ಲಿತಾಯ