ಫೇಸ್‌ಬುಕ್ ಪರಿಚಯದಿಂದ ಹಣದ ಆಸೆಗೆ ದಾರಿ ತಪ್ಪಿದ ಘಟನೆ : ಯುವಕನ ಮೇಲೆ ಮಾರಣಾಂತಿಕ ಹಲ್ಲೆ 

ವಿಜಯ ದರ್ಪಣ ನ್ಯೂಸ್…

ಫೇಸ್‌ಬುಕ್ ಪರಿಚಯದಿಂದ ಹಣದ ಆಸೆಗೆ ದಾರಿ ತಪ್ಪಿದ ಘಟನೆ : ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮಡಿಕೇರಿ, ಡಿ.13: ಫೇಸ್‌ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಹಣದ ಅವಶ್ಯಕತೆ ಹೇಳಿ ಹಣ ಪಡೆದು ನಂತರ ಯುವಕನನ್ನು ಬ್ಲ್ಯಾಕ್‌ಮೇಲ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಗಂಭೀರ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ : ದೂರುದಾರ ಮಹದೇವ ಹೆಚ್.ಪಿ. ಅವರು ನೀಡಿದ ದೂರಿನ ಪ್ರಕಾರ, ರಚನಾ ಎಂಬ ಯುವತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಹಣದ ಅಗತ್ಯವಿದೆ ಎಂದು ಹೇಳಿ ದಿನಾಂಕ 20-11-2025 ರಂದು 5,000 ರೂ. ಹಾಗೂ 28-11-2025 ರಂದು ಮತ್ತೊಮ್ಮೆ 5,000 ರೂ.ಗಳನ್ನು ಫೋನ್‌ಪೇ ಮೂಲಕ ಪಡೆದುಕೊಂಡಿದ್ದಾಳೆ. ಬಳಿಕ ಹಣ ವಾಪಸ್ ಕೇಳಿದಾಗ, “ನಿನಗೆ ಬೇಕಾದ ಸುಖ ಕೊಡುತ್ತೇನೆ, ಮೈಸೂರು ಅಥವಾ ಕುಶಾಲನಗರಕ್ಕೆ ಬಾ” ಎಂದು ಹೇಳಿ ಆಮಿಷ ಒಡ್ಡಿದ್ದಾಳೆ ಎನ್ನಲಾಗಿದೆ.

ದಿನಾಂಕ 12-12-2025 ರಂದು ರಚನಾಳ ಆಹ್ವಾನದಂತೆ ಮಹದೇವ್ ಮಡಿಕೇರಿಗೆ ಬಂದಿದ್ದು, ರಾತ್ರಿ ಸುಮಾರು 10.30ರ ವೇಳೆಗೆ ನಕ್ಷತ್ರ ಸೂಪರ್ ಮಾರ್ಕೆಟ್ ಬಳಿಗೆ ಕರೆಸಿಕೊಂಡು ನಂತರ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ರಾತ್ರಿ 11.45ರ ಸುಮಾರಿಗೆ ರಚನಾಳ ತಾಯಿ ಮಾಲತಿ ಹಾಗೂ ದಿನೇಶ್ ಎಂಬವರು ಆಟೋದಲ್ಲಿ ಮನೆಗೆ ಬಂದು, ದಿನೇಶ್ ಹಣದ ವಿಚಾರದಲ್ಲಿ ಮಾತನಾಡುತ್ತೇನೆ ಎಂದು ಹೇಳಿ ರಚನಾ ಹಾಗೂ ಆಕೆಯ ತಾಯಿಯನ್ನು ಮನೆಯಿಂದ ಹೊರ ಕಳುಹಿಸಿದ್ದಾನೆ.

ನಂತರ ದಿನೇಶ್ ತನ್ನ ಸ್ನೇಹಿತರಾದ ಸುಜೀತ್ ಹಾಗೂ ದರ್ಶನ್ ಅವರನ್ನು ಕರೆಸಿಕೊಂಡು, ಮೂವರು ಸೇರಿಕೊಂಡು ಪಿರ್ಯಾದಿದಾರನ ಮೇಲೆ ಕೈ, ದೊಣ್ಣೆ ಹಾಗೂ ಕತ್ತಿಯ ಹಿಡಿಯಿಂದ ಮುಖ, ಬಾಯಿ, ಎಡ ಎದೆ ಭಾಗ ಮತ್ತು ಎಡ ಕಾಲಿನ ಮಂಡಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಮಹದೇವನ ಬಟ್ಟೆಗಳನ್ನು ಬಲವಂತವಾಗಿ ಬಿಚ್ಚಿಸಿ ಬೆತ್ತಲೆಯನ್ನಾಗಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು, ಏರ್‌ಗನ್ ತಲೆಗೆ ಇಟ್ಟು 50 ಲಕ್ಷ ರೂ. ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ರಾತ್ರಿ ಪೂರ್ತಿ ಮನೆಯಲ್ಲಿ ಬಲವಂತವಾಗಿ ಇರಿಸಿಕೊಂಡು, ರಕ್ತ ಲೇಪಿತ ಬಟ್ಟೆಗಳನ್ನು ಮನೆಯೊಳಗೆ ಸುಟ್ಟು ಹಾಕಿರುವ ಆರೋಪವೂ ಕೇಳಿಬಂದಿದೆ.

ಬೆಳಗಿನ ಜಾವ ಬಾತ್‌ರೂಮಿಗೆ ಹೋಗುವುದಾಗಿ ಹೇಳಿ ಮಹಾದೇವ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಈ ಸಂಬಂಧ ರಚನಾ, ಆಕೆಯ ತಾಯಿ ಮಾಲತಿ, ದಿನೇಶ್, ಸುಜೀತ್ ಹಾಗೂ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.