“ಟಿಕೆಟ್ ಟಿಕೆಟ್ ಬ್ಲಾಕ್ ಟಿಕೆಟ್* ”

ವಿಜಯ ದರ್ಪಣ ನ್ಯೂಸ್…

*“ಟಿಕೆಟ್ ಟಿಕೆಟ್ ಬ್ಲಾಕ್ ಟಿಕೆಟ್* ”

“ಟಿಕೆಟ್… ಟಿಕೆಟ್…ಟಿಕೆಟ್ ಹತ್ತರೂಪಾಯ್ದು ನೂರು, ಇಪ್ಪತ್ ರೂಪಾಯ್ದು ಇನ್ನೂರು- ಪಿಚ್ಚರ್ ಶುರುವಾಗ್ತಾ ಇದೆ, ಬೇಗ ಹೋಗಿ.. ಬೇಗ ಹೋಗಿ….ಯಾರಿಗ್ ಟಿಕೆಟ್, ಯಾರಿಗ್ ಟಿಕೆಟ್” ಇದು ೮೦-೯೦ರ ದಶಕದಲ್ಲಿ ಅಣ್ಣಾವ್ರ ಸಿನಿಮಾಗಳು ರಿಲೀಸ್ ಆದ ಟಾಕೀಸ್‌ಗಳ ಗೇಟ್ ಬಳಿ ಕೇಳಿಸುತ್ತಿದ್ದ, ಕಾಣಿಸುತ್ತಿದ್ದ ದೃಶ್ಯಗಳು. ಎಲ್ಲಿ ಹೋದವು ಆ ದಿನಗಳು. ಈಗ ಅಣ್ಣಾವ್ರೂ ಇಲ್ಲ… ಅಣ್ಣಾವ್ರ ಪಿಕ್ಚರ್ ರಿಲೀಸ್ ಆಗ್ತಿದ್ದ ಟಾಕೀಸ್‌ಗಳೂ ಇಲ್ಲ. ಎಲ್ಲಾ ಮಾಯ. ಅಣ್ಣಾವ್ರ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೇ ಅದು ಹಬ್ಬ. ಬಡವರು, ಶ್ರೀಮಂತರು, ದೊಡ್ಡವರು, ಚಿಕ್ಕವರು, ಆಫೀಶಿಯಲ್ಲೂ, ಆಟೊ ಡ್ರೈವರ್ಸ್ ಎಲ್ಲರೂ ಸಂಭ್ರಮಿಸುತ್ತಿದ್ದರು.

ಇದೇ ಮಲ್ಲೇಶ್ವರ ಸರ್ಕಲ್ ಬಳಿಯಲ್ಲಿದ್ದ ‘ಗೀತಾಂಜಲಿ’ ಟಾಕೀಸ್ ಅಣ್ಣಾವ್ರ ಚಿತ್ರಗಳಿಗೆ ಫಿಕ್ಸ್ ಆಗಿದ್ದ ಟಾಕೀಸ್. ಡಾ.ರಾಜ್ ಮತ್ತು ಭಾರತಿ ನಾಯಕ-ನಾಯಕಿಯಾಗಿ ನಟಿಸಿರುವ “ಹಸಿರು ತೋರಣ” ಚಿತ್ರದಿಂದ ಶುರುವಾದ ಹಬ್ಬ ಅನೇಕ ಅಣ್ಣಾವ್ರ ಚಿತ್ರಗಳ ಪ್ರದರ್ಶನವಾಯಿತು. ಅಣ್ಣಾವ್ರ
“ಹಾವಿನ ಹೆಡೆ” ಚಿತ್ರ ರಿಲೀಸ್ ಆಗಿತ್ತು. ಮೊದಲ ದಿನದ ಮೊದಲ ಶೋ ನೋಡಬೇಕೆಂಬ ಹಂಬಲ ಹುಡುಗರದ್ದು. ಗೇಟ್ ಹೊರಗೆ ಸಾವಿರಾರು ಅಭಿಮಾನಿಗಳು ಡಾ.ರಾಜ್‌ಕುಮಾರ್‌ಗೆ ಜೈ ಎನ್ನುತ್ತಾ ಕಾಯುತ್ತಿದ್ದಾರೆ. ಗೇಟ್ ತೆಗೆದ ತಕ್ಷಣ ರೊಯ್ಯನೆ ಓಡಿ ಟಿಕೆಟ್ ಕೌಂಟರಿನಲ್ಲಿ ಕೈ ತೂರಿಸಿ ಟಿಕೆಟ್ ಪಡೆದವನ ಮುಖದಲ್ಲಿ ಧನ್ಯತಾಭಾವ. ಅಣ್ಣಾವ್ರ “ಹಾವಿನ ಹೆಡೆ” ಪೋಸ್ಟರ್ ನೋಡುತ್ತಾ ನಿಂತವನ ಅಂಡಿಗೆ ಖಾಕಿಯಿಂದ ಲಾಠಿ ಮೋಕ್ಷ. “ಹಾವಿನ ಹೆಡೆ” ಚಿತ್ರದ “ಬಿಸಿ ಬಿಸಿ ಕಜ್ಜಾಯ” ಬಿದ್ದರೂ ಹಸನ್ಮುಖಿ. ಅಣ್ಣಾವ್ರ ಸಿನಿಮಾವನ್ನು ಮೊದಲ ಶೋ ನೋಡುವ ಕಾತುರ. ಆ ಮಹಾನ್ ವ್ಯಕ್ತಿ ಮಲ್ಲೇಶ್ವರ ೮ನೇ ಕ್ರಾಸಿನ ಗಂಗಾಧರ.

ಅಣ್ಣಾವ್ರ ಸಿನಿಮಾ ಟಿಕೆಟ್ ಬ್ಲಾಕ್‌ನಲ್ಲಿ ಮಾರಿದವರು ಬಹಳಷ್ಟು ಜನ. ಅದರಲ್ಲಿ ಚ ಪ್ಪರ್‌ಗಳೂ ಇದ್ದಾರೆ. ರೌಡಿಗಳೂ ಇದ್ದಾರೆ. ಸಿನಿಮಾ ಟಾಕೀಸ್ ನಲ್ಲಿ ಕೆಲಸ ಮಾಡುವವರೂ ಇದ್ದಾರೆ.
ಬ್ಲಾಕ್ ಟಿಕೆಟ್ ಮಾರಿ ಮನೆ ಕಟ್ಟಿದವರೂ ಇದ್ದಾರೆ.ದುಡ್ಡು ಇಂಗೆ ಬರುತ್ತಲೇ ಇರುತ್ತದೆಯೆಂದು ಅಪ್ಪ ಕಟ್ಟಿಸಿದ ಮನೆಯನ್ನು ಮಾರಿಕೊಂಡವರೂ ಇದ್ದಾರೆ. ಹೆಣ್ಣು, ಹೆಂಡ, ಜೂಜಿನ ಹಿಂದೆ ಬೀಳದವರು ಸಂಸಾರ ಸಾಗಿಸಿದವರೂ ಇದ್ದಾರೆ. ಹಿಂದೆ ಬಿದ್ದು ಹಾಳಾದವರೂ ಇದ್ದಾರೆ. ಕೈಕಾಲು ಲ್ಯಾಪ್ಸ್ ಮಾಡಿಕೊಂಡ ರೌಡಿಗಳೂ ಇದ್ದಾರೆ. ಸ್ಕೆಚ್ ಹಾಕಿದ ಡಾನ್‌ಗಳೂ ಇದ್ದಾರೆ. ಒಟ್ಟಿನಲ್ಲಿ ಪಿಕ್ಚರ್ ಗಳ ಬ್ಲಾಕ್ ಟಿಕೆಟ್ ಎಂತೆoತಹವರನ್ನೋ ಹುಟ್ಟುಹಾಕಿದೆ. ಎಂಥವರನ್ನೂ ಮಖಾಡೆ ಮಲಗಿಸಿದೆ.

ಚಿತ್ರಮಂದಿರಗಳಲ್ಲಿ ಟಿಕೆಟ್ ಕೊಡುವ ಬುಕಿಂಗ್ ಕ್ಲರ್ಕ್ ಗಳಂತೂ ಆಗಿನ ಕಾಲದಲ್ಲೇ ಲಕ್ಷಾಂತರ ದುಡ್ಡು ನೋಡಿದ್ದಾರೆ. ಉದ್ಧಾರವಾದವರೂ ಇದ್ದಾರೆ. ಮುಳುಗಿ ತಳ ಸೇರಿದವರೂ ಇದ್ದಾರೆ.

ಗಾಂಧಿನಗರದಲ್ಲಿ ಡಿಸ್ಟ್ರಿಬ್ಯೂಟರ್ ಕಚೇರಿಗಳಲ್ಲಿ, ಪ್ರೊಡಕ್ಷನ್ ಹೌಸ್‌ಗಳಲ್ಲಿ ಹೊಟ್ಟೆಪಾಡಿಗೆ ಕೆಲಸ ಮಾಡುವ ನೌಕರರೂ ಬ್ಲಾಕ್ ಟಿಕೆಟ್ ನಿಂದ ಬದುಕಿದವರೇ ಚಿತ್ರಮಂದಿರದ ಮ್ಯಾನೇಜರ್‌ಗಳು ಗಾಂಧಿ ನಗರದ ಯಾವುದೇ ಆಫೀಸ್‌ನಿಂದ ಪತ್ರ ಬಂದರೂ ಇಲ್ಲವೆನ್ನದೇ ಇಂತಿಷ್ಟು ಟಿಕೆಟ್ ನೀಡುತ್ತಿದ್ದರು. ಆ ಕಚೇರಿಗಳಲ್ಲಿ ಕೆಲಸ ಮಾಡುವ ಆಫೀಸ್ ಬಾಯ್‌ಗಳು ಆ ಟಿಕೆಟ್‌ಗಳನ್ನು ತನ್ನ ಮನೆಯ ಬಳಿಯ ಸ್ನೇಹಿತರಿಗೆ ಕೊಟ್ಟು ಸೊಪ್ಪು, ತರಕಾರಿ, ಎಳನೀರು-ತರಹೇವಾರಿ ಐಟಂಗಳ ಭಕ್ಷೀಸು ಪಡೆಯುತ್ತಿದ್ದರು. ಈ ರೀತಿ ಎಲ್ಲರ ಬದುಕನ್ನು ಹಸನು ಮಾಡುತ್ತಿದ್ದ ಅಣ್ಣಾವ್ರೂ, ಅಣ್ಣಾವ್ರ ಸಿನಿಮಾಗಳು, ಅಣ್ಣಾವ್ರ ಸಿನಿಮಾಗಳ ಟಿಕೆಟುಗಳು, ಅಣ್ಣಾವ್ರ ಸಿನಿಮಾವನ್ನು ಪ್ರದರ್ಶಿಸುತ್ತಿದ್ದ ಟಾಕೀಸ್‌ಗಳು ಈಗಿಲ್ಲ. ಎಲ್ಲಿ ಹೋದವು ಆ ದಿನಗಳು.

ಬಿ ಆರ್ ನರಸಿಂಹ ಮೂರ್ತಿ
9448174932