ಸಾರ್ಥಕ ಸಂಭ್ರಮ.

ವಿಜಯ ದರ್ಪಣ ನ್ಯೂಸ್…

ಸಾರ್ಥಕ ಸಂಭ್ರಮ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯಲ್ಲಿ ಇತ್ತೀಚೆಗೆ ಮೂರು ದಿನ ಸಿದ್ಧಾರೂಢ ಮಿಷನ್ ನ 25 ರ ಸಂಭ್ರಮ ಅದ್ದೂರಿಯಾಗಿ ನಡೆಯಿತು.

ಸಿದ್ಧಾರೂಢ ಮಿಷನ್ ನ ಅಧ್ಯಕ್ಷ ಡಾ. ಆರೂಢಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಸಿಂಧಗಿಯ ಶಾಂತಗಂಗಾಧರ ಶ್ರೀಗಳು ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ ಮಾಡಿದರು.

ಜಪಯಜ್ಞ ಗೀತೆ ವಚನ ಸಿದ್ಧಾರೂಢ ಚರಿತ್ರೆ ಪಾರಾಯಣದ ಬಳಿಕ ರಾಮಚಂದ್ರಾಪುರ ಮಠದ ಜಗದ್ಗುರು ರಾಘವೇಶ್ವರ ಭಾರತೀ ಶ್ರೀಗಳು ಅದ್ವೈತ ಕುರಿತು ಉಪನ್ಯಾಸ ನೀಡಿದರು. “ವ್ಯವಹಾರದಲ್ಲಿ ಏನೆಲ್ಲ ಭೇದ ತೋರುವುದೋ ಅದೆಲ್ಲ ಪರಮಾರ್ಥದಲ್ಲಿ ಒಂದೇ ತತ್ತ್ವದ ವಿಕಾಸ. ಸಿದ್ಧಾರೂಢರು ಸಿದ್ಧಿಯ ಶಿಖರವೇರಿದ ಆರೂಢರು. ಶಂಕರರ ನಿಜಗುಣ ಶಿವಯೋಗಿಗಳ ಅದ್ವೈತವನ್ನು ಪ್ರತಿಪಾದಿಸಿ ಪ್ರಸಾರಿಸಿದವರು.

ಪ್ರಸಿದ್ಧಿ ಅವರ ಬೆನ್ನ ಹತ್ತಿತೇ ಹೊರತು ಅವರೆಂದಿಗೂ ಪ್ರಸಿದ್ಧಿಯ ಬೆನ್ನ ಬೀಳಲಿಲ್ಲ. ಸಿದ್ಧಾರೂಢ ಮಿಷನ್ ನ ಆರೂಢಭಾರತೀಯವರಿಗೂ ತಮಗೂ ಶಂಕರರ ಕಡೆಯಿಂದಲೂ ಅಯೋಧ್ಯೆಯ ರಾಮನಕಡೆಯಿಂದಲೂ ಬಿಡಿಸಲಾಗದ ನಂಟು. ತಮ್ಮೀರ್ವರಿಗೂ ಅದ್ವೈತವಿದೆ. ಆರೂಢಭಾರತೀಯವರ ಸರಳತೆ ಮೆಚ್ಚುವಂಥದ್ದು”ಎಂದರು.

ಸಂಜೆಯ ಕಾರ್ಯಕ್ರಮದಲ್ಲಿ ಓಂಕಾರಾಶ್ರಮದ ಡಾ. ಮಧುಸೂದನಾನಂದಪುರಿ ಸ್ವಾಮೀಜಿ, ಮಹಾರಾಷ್ಟ್ರದ ಡಾ. ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ ಧರ್ಮ ಅಧ್ಯಾತ್ಮ ನೆಲೆಯ ಮಾನವೀಯ ಮೌಲ್ಯಗಳು ವಿಷಯದ ಮೇಲೆ ಉಪನ್ಯಾಸ ನೀಡಿದರು.

ಸಮಾಜದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಒಲವು ಶ್ರದ್ಧೆ ಪ್ರವೃತ್ತಿ ಮತ್ತು ಆಚರಣೆಗಳು ಕ್ಷೀಣಗೊಂಡರೆ ಹೊರ ಸುಖವೇ ಮುಖ್ಯವೆನಿಸಿ ಮಾನವೀಯ ಮೌಲ್ಯಗಳು ಕುಸಿಯುವವು. ಇದರ ದುಷ್ಪರಿಣಾಮವನ್ನು ನಾವಿಂದು ಕಾಣುತ್ತಿದ್ದೇವೆ ಎಂದು ಕಳವಳಪಟ್ಟರು.

ಶನಿವಾರ ಬೆಳಿಗ್ಗೆ ಸುತ್ತೂರಿನ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಶ್ರೀಗಳಿಂದ ಸಾಂಸ್ಕೃತಿಕ ಭವನ ಉದ್ಘಾಟನೆಗೊಂಡಿತು. ಸಿದ್ಧಗಂಗಾ ಮಠದ ಸಿದ್ದಲಿಂಗಶ್ರೀ, ಕೈಲಾಸಾಶ್ರಮದ ಜಗದ್ಗುರು ಜಯೇಂದ್ರಪುರಿಶ್ರೀ, ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದಶ್ರೀ, ಆದಿಚುಂಚನಗಿರಿಯ ಸೌಮ್ಯನಾಥಶ್ರೀ ಮುಂತಾದವರು ಸಾನ್ನಿಧ್ಯ ವಹಿಸಿದ್ದರು.

ಶಿವರಾತ್ರಿದೇಶಿಕೇಂದ್ರಶ್ರೀ ಮಾತನಾಡಿ “ಸಿದ್ಧಾರೂಢರು ಶ್ರೇಷ್ಠ ದಾರ್ಶನಿಕರು. ಮೈಸೂರು ಭಾಗದ ನಿಜಗುಣ ಶಿವಯೋಗಿಗಳ ಕನ್ನಡದ ವೇದಾಂತವನ್ನು ಉತ್ತರ ಕರ್ನಾಟಕದ ಮನೆ ಮನಗಳಿಗೆ ಪರಿಚಯಿಸಿದವರು. ಭಕ್ತರು ಬಂಗಾರದ ಕಿರೀಟವಿಟ್ಟು ಪೂಜಿಸಿದರೆ, ತಾವು ಕೌದೀಪೂಜೆ ಮಾಡಿಸಿಕೊಂಡವರು. ಜೀವನದ ನಶ್ವರತೆ, ಸಿಹಿ ಕಹಿಗಳ ಅನಿವಾರ್ಯತೆಯನ್ನು ನಡೆದು ತೋರಿದವರು. ತಮ್ಮ ಮಠ ಜಾತ್ಯತೀತ ಸಾರ್ವಜನಿಕವಾಗಿರಬೇಕೆಂದ ದಿವಟೆ ಭೀಮಪ್ಪನಿಗೆ ಅವರು ಆಶೀರ್ವದಿಸಿ ಕೊಟ್ಟ ನಾಣ್ಯ ಇಂದಿಗೂ ಆ ಮನೆಯಲ್ಲಿ ಪೂಜೆಗೊಳ್ಳುತ್ತಿದೆ” ಎಂದರು.

ಆರೂಢಭಾರತೀ ಶ್ರೀ ಸಂಸ್ಕೃತ ಹಾಗೂ ಕನ್ನಡದಲ್ಲಿ ಉತ್ತಮ ವಿದ್ವಾಂಸರಾಗಿದ್ದು ಶ್ರೀ ಸಿದ್ಧೇಶ್ವರ ಸ್ವಾಮಿಗಳಿಂದ ಪರಿಚಯಿಸಲ್ಪಟ್ಟು ವೀರಶೈವ ಪಾರಿಭಾಷಿಕ ಪದಕೋಶ (ಸಂಸ್ಕೃತ)ವನ್ನು ಸಂಪಾದಿಸಿದ್ದು ಜೆಎಸ್ಎಸ್ ಅದನ್ನು ಪ್ರಕಟಿಸಿದೆ ಎಂದು ಸ್ಮರಿಸಿದರು. ಕೈಲಾಸಾಶ್ರಮದ ಜಯೇಂದ್ರಪುರಿಶ್ರೀ ಮಾತನಾಡಿ ತಮ್ಮ ಪ್ರತಿ ಆಶ್ರಮದ ಪ್ರಾಂಗಣವೊಂದಕ್ಕೆ ಸಿದ್ಧಾರೂಢರ ಹೆಸರಿಟ್ಟಿರುವುದಾಗಿ ತಿಳಿಸಿದರು.

ವಚನಾನಂದಶ್ರೀ ಮಾತನಾಡಿ ” ನೂರಾರು ಸಾಧು ಸಂತ ಮಠಾಧೀಶರು ಜಾತಿ ಮತ ಧರ್ಮ ಭೇದ ಮರೆತು ಇಲ್ಲಿ ಒಂದಾಗಿ ಬೆರೆತಿರುವುದೇ ಹೆಗ್ಗಳಿಕೆ” ಎಂದರು.

ಮಧ್ಯಾಹ್ನ ನೂರೆಂಟು ಮಠಾಧೀಶರ ಗೋಷ್ಠಿ ನಡೆದು ಹಿಂದುಧರ್ಮದ ಒಗ್ಗಟ್ಟು, ಸಾಧು ಸಂತ ಮಠಾಧೀಶರ ಏಕತೆ ಸರಳತೆ ಸಂರಕ್ಷಣೆಯ ಕುರಿತು ಚಿಂತನೆ ನಡೆಯಿತು.

ಭಾನುವಾರ ಬೆಳಗಿನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಕಣೇರಿಯ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರಶ್ರೀ ಭಾಗವಹಿಸಿ ” ಸಾವಯವ ಕೃಷಿಯ ಮೂಲಕ ವಿಷಮುಕ್ತ ಆಹಾರ ಬೆಳೆದುಂಡು ದೀರ್ಘ ಕಾಲ ಆರೋಗ್ಯದಿಂದ ಬಾಳಿರೆಂದು ಸಂದೇಶವಿತ್ತರು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ” ಮಾನವನ ಇಂದಿನ ಸಂದಿಗ್ಧ ಪರಿಸ್ಥಿತಿಗೆ ಆತನ ಮನಸ್ಸ್ಥಿತಿಯೇ ಕಾರಣ. ಮನಸ್ಸ್ಥಿತಿ ಬದಲಾದಲ್ಲಿ ಮಾತ್ರ ಪರಿಸ್ಥಿತಿ ಬದಲಾಗಲು ಸಾಧ್ಯ “ಎಂದರು.

ಅಲಗೂರಿನ ಪಂಚಮಸಾಲಿ ಪೀಠದ ಜಗದ್ಗುರು ಮಹದೇವ ಶಿವಾಚಾರ್ಯ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಭವನಕ್ಕೆ ಅನುದಾನ ನೀಡಿದ ಮಾಜಿ ಸಚಿವ ರಾಮಚಂದ್ರ ಗೌಡ ಹಾಗೂ ಶ್ರೀಮತಿ ಸಿದ್ಧಮ್ಮ ಇಂಡಿಯವರನ್ನು ಸತ್ಕರಿಸಲಾಯಿತು.

ಶಿವರಾಮಚಂದ್ರಗಿರಿ ಬರೆದ ಸಿದ್ಧಾರೂಢ ಕಥಾಮೃತ, ಡಾ. ಆರೂಢಭಾರತೀಶ್ರೀ ಬರೆದ ಸಿದ್ಧಸೂಕ್ತಿ :1, 2, 3 ಹಾಗೂ ಸಮಾಜ ಕಲ್ಯಾಣಕ್ಕೆ ಸಿದ್ಧಾರೂಢರ ಕೊಡುಗೆ ಮತ್ತು ಹುಳಿಮಾವು ಜಯರಾಂ ಬರೆದ ಪುರುಷ ಸೂಕ್ತ ಮುಂತಾದ ಹನ್ನೊಂದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಹಿರಿಯ ವಿದ್ವಾಂಸ ಡಾ. ಬಸವರಾಜ ಸಿದ್ಧಾಶ್ರಮ, ಡಾ. ಚಿಕ್ಕಹೆಜ್ಜಾಜಿ ಮಹದೇವ, ರಿಯಾಜ್ ಅಹ್ಮದ್, ಎಂ. ಬಾಲಚಂದ್ರ, ಡಾ. ನಾಗಲಿಂಗ. ಎಂ. ಡಾ. ವೈನವಿ. ಬಿ. ಸಿ, ಡಾ. ವೈಧೃತಿ ಕೋರಿಶೆಟ್ಟರ್, ಡಾ. ಸಿದ್ಧಾರ್ಥ ಪಾಟೀಲ, ದಿಗಂತ ವೈನತೇಯ, ರಾಜಾ ರವಿಶಂಕರ, ಶ್ರೀಮತಿ ಗೀತಾ ಶಂಕರ್, ವಿದುಷಿ ಅಶ್ವಿನಿ. ಜೆ ಮುಂತಾದ ಎಪ್ಪತ್ತೈದು ಸಾಧಕರಿಗೆ ಆರೂಢಶ್ರೀ ಪುರಸ್ಕಾರ ನೀಡಲಾಯಿತು.

ಮೂರು ದಿನ ನಿರಂತರ ಭಜನ ಸಮ್ಮೇಳನ ನಡೆಯಿತು. ಆರು ನೂರು ಭಜನ ಕಲಾವಿದರು ಪಾಲ್ಗೊಂಡಿದ್ದರು. ಶಶಿಧರ್ ಕೋಟೆ ಸಂಗೀತ ಕಾರ್ಯಕ್ರಮ ನೀಡಿದರು.

ಅಶ್ವಿನಿ ಜೆ ಹಾಗೂ ರಮ್ಯಾ ಚೆಲುವಮೂರ್ತಿಯವರ ಶಿಷ್ಯವೃಂದ ಭರತನಾಟ್ಯ ಪ್ರದರ್ಶಿಸಿತು. ಕಲ್ಪತರು ಕಲಾ ಟ್ರಸ್ಟ್ ನಾಟಕ ಪ್ರದರ್ಶಿಸಿತು.

ಶುಚಿ ರುಚಿ ಆಹಾರ ವೈವಿಧ್ಯ, ನೀರಿನ ವ್ಯವಸ್ಥೆ ವಿಶೇಷವಾಗಿತ್ತು. ಸ್ವಾಮೀಜಿಗಳಿಗೆ ಹಾಗೂ ಭಕ್ತಾದಿಗಳಿಗೆ ಉಳಿದುಕೊಳ್ಳಲು ಸಾಲಿಗ್ರಾಮ ಶ್ರೀನಿವಾಸ ದೇವಸ್ಥಾನದಲ್ಲಿಯೂ, ಕೇತೋಹಳ್ಳಿಯ ಜೆಎಸ್ಎಸ್ ಮಠದಲ್ಲಿಯೂ ವ್ಯವಸ್ಥೆ ಮಾಡಲಾಗಿತ್ತು.

ಇಷ್ಟೆಲ್ಲ ಸುವ್ಯವಸ್ಥೆಯ ನಡುವೆಯೂ ಸ್ವಾಮೀಜಿಗಳಿಗೆ ಹಾಗೂ ಕಲಾವಿದರಿಗೆ ಕೊಡಲು ಇಟ್ಟ ಹಣದ ಕೈಚೀಲವನ್ನೇ ಎಗರಿಸಿದ್ದು ನಿರಾಶೆಯನ್ನುಂಟುಮಾಡಿತ್ತು. ಕಾರ್ಯದರ್ಶಿ ಜಿ. ಎಲ್. ಸಂತೋಷ್, ಧರ್ಮದರ್ಶಿ ಜಿ. ಕೃಷ್ಣಪ್ಪ, ಬಿ. ಮೋಹನ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.