ಎನ್‌ಡಿಎ ಅಧಿಕಾರಕ್ಕೆ ತರಲು ಶ್ರಮವಹಿಸಿ ಕಾರ್ಯಕರ್ತರಿಗೆ ಎಚ್.ಡಿ. ಕುಮಾರಸ್ವಾಮಿ ಕರೆ

ವಿಜಯ ದರ್ಪಣ ನ್ಯೂಸ್…..

ಮೈತ್ರಿ ಬಗ್ಗೆ ಯಾರೂ ಮಾತನಾಡಬೇಡಿ

ಎನ್‌ಡಿಎ ಅಧಿಕಾರಕ್ಕೆ ತರಲು ಶ್ರಮವಹಿಸಿ ಕಾರ್ಯಕರ್ತರಿಗೆ ಎಚ್.ಡಿ. ಕುಮಾರಸ್ವಾಮಿ ಕರೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ಎನ್‌ಡಿಎ ಇ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಿ ಯಾರೂ ಮೈತ್ರಿ ಬಗ್ಗೆ ಮಾತನಾಡಬೇಡಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಪಕ್ಷದ ರಾಜ್ಯದ ಕಚೇರಿ ಜೆಪಿ ಭವನದಲ್ಲಿ  ಗ್ರೇಟರ್ ಬೆಂಗಳೂರು ಜೆಡಿಎಸ್ ಸಂಘಟನೆಗೆ ಸಂಬಂಧಿಸಿದಂತೆ ಎಲ್ಲ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖರ ಜತೆ ಮಹತ್ವದ ಸಭೆ ನಡೆಸಿದ ಅವರು, 369 ವಾರ್ಡ್‌ಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ಕೆಲ ನಿರ್ದಿಷ್ಟ ಸೂಚನೆಗಳನ್ನು ಕೊಟ್ಟರು. ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಸೇರಿ ಐದು ವಿಭಾಗಗಳ ನೂತನ ಅಧ್ಯಕ್ಷರು, ವಿಧಾನಸಭೆ ಕ್ಷೇತ್ರಗಳ ನೂತನ ಅಧ್ಯಕ್ಷರ ಜತೆ ಸುದೀರ್ಘ ಮಾತುಕತೆ ನಡೆಸಿದರು.

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಕ್ಷದ ಘಟಕವನ್ನು ಪುನಾರಚನೆ ಮಾಡಲಾಗಿದ್ದು, ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದಾದ ನಂತರ ನಡೆದ ಮೊದಲ ಸಭೆ ಇದಾಗಿದೆ. ವಾರ್ಡ್‌ವಾರು, ಮತಗಟ್ಟೆವಾರು ಸಂಘಟನೆ ಮಾಡುವ ಕೆಲ ಮಹತ್ವದ ಸೂಚನೆ ಕೊಟ್ಟ  ಹೆಚ್ ಡಿ ಕುಮಾರಸ್ವಾಮಿ, ನಗರದ ಎಲ್ಲ ಭಾಗಗಳಲ್ಲಿ ಪಕ್ಷದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಮುಖಂಡರು ಸಕ್ರಿಯವಾಗಿ ಕೆಲಸ ಮಾಡಬೇಕು ಕೇಂದ್ರ ಕಚೇರಿ ನೀಡುವ ಸೂಚನೆಗಳ ಪ್ರಕಾರ ವಿಭಾಗಗಳ ಅಧ್ಯಕ್ಷರು, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರುಗಳು ಕೆಲಸ ಮಾಡಬೇಕು ಎಂದರು.

ರಾಜ್ಯ ಸರ್ಕಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆಯಿಂದ ಬಸವಳಿದಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಜನತೆಯ ಸಹಜ ಆಯ್ಕೆಯಾಗಿದೆ. ಹೀಗಾಗಿ ಎಲ್ಲರೂ ಒಮ್ಮತವಾಗಿ ಪಕ್ಷ ಸಂಘಟಿಸಬೇಕು ಎಂದು ಎಚ್ ಡಿ ಕುಮಾರಸ್ವಾಮಿ  ನಿರ್ದೇಶನ ನೀಡಿದರು. ಇದೇ ವೇಳೆ ನೂತನವಾಗಿ ವಿಭಾಗವಾರು ನೇಮಕ ಗೊಂಡಿರುವ ಅಧಿಕಾರಿಗಳಿಂದ ಪಕ್ಷದ ಸಂಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು . ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸುತ್ತಾರೆ. ನಿಮ್ಮ ದೇನಿದ್ದರೂ ಸಂಘಟನೆ ಕೆಲಸ, ಅಷ್ಟನ್ನು ಮಾಡಿ. ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇರಿಸಿ ಎಂದು ಹೇಳಿದರು.

ಗ್ರೇಟರ್ ಬೆಂಗಳೂರು ಜೆಡಿಎಸ್ ಸಂಘಟನೆ ಸಂಬಂಧ ನಡೆದ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖರ ಸಭೆಯಲ್ಲಿ ಎಚ್‌.ಡಿ ಕುಮಾರಸ್ವಾಮಿ, ಟಿ.ಎ. ಶರವಣ, ಎಚ್.ಎಂ. ರಮೇಶ್ ಗೌಡ ಮತ್ತಿತರರಿದ್ದರು.

ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ, ಜವರಾಯಿ ಗೌಡ, ಮಾಜಿ ಎಂಎಲ್ ಸಿ ಕೆ.ಎ. ತಿಪ್ಪೇಸ್ವಾಮಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಇ. ಕೃಷ್ಣಪ್ಪ, ಪ್ರಕಾಶ್, ಗೊಟ್ಟಿಗೆರೆ ಮಂಜುನಾಥ್, ಕೃಷ್ಣ, ತಿಮ್ಮೇಗೌಡ ಇತರರು ಸಭೆಯಲ್ಲಿದ್ದರು.

ಇದೇ ವೇಳೆ 28 ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರಾಗಿ ನೇಮಕಗೊಂಡ ಮುಖಂಡರಿಗೆ ಕೇಂದ್ರ ಸಚಿವರು ನೇಮಕಾತಿ ಆದೇಶ ಪತ್ರಗಳನ್ನು ನೀಡಿದರು.