ಭಾರತ ಸಾಗುತ್ತಿರುವ ದಿಕ್ಕು ಸರಿ ಇದೆಯೇ………

ವಿಜಯ ದರ್ಪಣ ನ್ಯೂಸ್ 

ಭಾರತ ಸಾಗುತ್ತಿರುವ ದಿಕ್ಕು ಸರಿ ಇದೆಯೇ………

ದೇಶದ ಒಟ್ಟು ವ್ಯವಸ್ಥೆ ಸಾಗುತ್ತಿರುವ ದಿಕ್ಕು ಅಷ್ಟೇನೂ ಒಳ್ಳೆಯ ಮುನ್ಸೂಚನೆ ನೀಡುತ್ತಿಲ್ಲ. ನೀರ ಮೇಲಿನ ಗುಳ್ಳೆಯಂತೆ ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎನ್ನುವ ಆತಂಕಕಾರಿ ಪರಿಸ್ಥಿತಿ ಕಂಡುಬರುತ್ತಿದೆ.

ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ ಉಗಮ, ಬೆಳವಣಿಗೆ, ಘರ್ಷಣೆ, ವಿನಾಶ ಹೀಗೆ ನಡೆದುಕೊಂಡೇ ಬಂದಿದೆ. ಮಾನವ ಇತಿಹಾಸ ನಿಂತ ನೀರಲ್ಲ. ಆದರೆ ನಾವಿರುವ ಸಮಕಾಲೀನ ಸಮಾಜ ಒಂದಷ್ಟು ಸಹನೀಯವಾಗಿ ಇರುವಂತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಇತ್ತೀಚಿನ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯ ದಿಕ್ಕು ಸಹಜವಾದ ಆಡು ಭಾಷೆಯಲ್ಲಿ ಹೇಳಬೇಕೆಂದರೆ ಶೋಕಿವಾಲಗಳ
ಪಾಲಾಗುತ್ತಿದೆ. ಅಂದರೆ ನೈಜ ಮತ್ತು ವಾಸ್ತವದ ಶ್ರಮ ಸಂಸ್ಕೃತಿ, ಮೌಲ್ಯ ಸಂಸ್ಕೃತಿ, ನಿಯತ್ತಿನ ಸಂಸ್ಕೃತಿ ಮಾಯವಾಗಿ ಉಡಾಫೆ ಮತ್ತು ಕೇವಲ ಮೇಲ್ಮಟ್ಟದ ಯಶಸ್ಸನ್ನೇ ಗುರಿಯಾಗಿಸುವ ಗ್ರಾಹಕ ಸಂಸ್ಕೃತಿ ಎಲ್ಲ ಕಡೆ, ಎಲ್ಲ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದೆ.

ಉತ್ಪಾದನಾ ವಲಯ ಕಡಿಮೆಯಾಗಿ ಸೇವಾ ವಲಯವೆಂಬ ಕೆಲವೊಂದು ಸೋಮಾರಿ ಅಥವಾ ಕ್ರಿಯಾತ್ಮಕವಲ್ಲದ ವಲಯ ಮುನ್ನಡೆ ಸಾಧಿಸುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಸೇವಾ ವಲಯ ಅತ್ಯಂತ ಪ್ರಮುಖವಾದದ್ದು ನಿಜ, ಆದರೆ ಅದರ ವಿಸ್ತರಣಾ ರೂಪ ಭಾರತಕ್ಕಂತು ಸೋಮಾರಿ ಸಂಸ್ಕೃತಿಯನ್ನೇ ಸೃಷ್ಟಿ ಮಾಡುತ್ತಿದೆ. ಇದು ಬಹುತೇಕ ಮಧ್ಯವರ್ತಿ ಎಂಬ ಬ್ರೋಕರ್ ಸಂಸ್ಕೃತಿಯ ಮುಂದುವರಿದ ಭಾಗದಂತಿದೆ.

ನಿಜವಾಗಲೂ ರಾಷ್ಟ್ರದ ಪ್ರಗತಿ ಉತ್ಪಾದಕ ಕ್ಷೇತ್ರದ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಅವಲಂಬಿಸಿರಬೇಕು. ಅದು ಶಾಶ್ವತ ಮತ್ತು ದೃಢವಾದದ್ದು. ಈ ಸೇವಾ ವಲಯ ತಾತ್ಕಾಲಿಕ ಮತ್ತು ಅಸ್ಥಿರ. ಯಾರೋ ದುಡಿಯುವುದು, ಇನ್ಯಾರೋ ಮಜಾ ಉಡಾಯಿಸುವುದು ಬಹಳ ದಿನ ನಡೆಯುವುದಿಲ್ಲ. ಇದನ್ನು ಆಳುವ ನಾಯಕರು ಗಮನದಲ್ಲಿಟ್ಟುಕೊಳ್ಳಬೇಕು.

ಅದರ ನಂತರ ಇಲ್ಲಿನ ಸಾಮಾಜಿಕ ವ್ಯವಸ್ಥೆ ಸಹ ಮಧ್ಯಪ್ರಾಚ್ಯದ ದೇಶಗಳಂತೆ ಹಿಂಸಾತ್ಮಕ ಮತ್ತು ಸಂಘರ್ಷಮಯ ರೂಪ ಪಡೆಯುತ್ತಿರುವುದು ಭಾರತದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಅದರಲ್ಲೂ ಹಿಂದೂ ಮುಸ್ಲಿಂ ಕೋಮುವಾದ ಭಾರತಕ್ಕೆ ಅಪಾಯಕಾರಿ ಆಗಬಲ್ಲದು.

ಭಾರತದೊಳಗೆ ಅಡಗಿಕೊಂಡಿರುವ ಜ್ವಾಲಾಮುಖಿ ಎಂಬ ಕೋಮು ಅಗ್ನಿಪರ್ವತ ಯಾವ ಕ್ಷಣದಲ್ಲಿ ಬೇಕಾದರೂ ಸ್ಪೋಟಗೊಳ್ಳಬಹುದು. ಅದನ್ನು ವಿನಾಶದ ಅಂತಿಮ ಹಂತ ಎಂದು ಕರೆಯಬಹುದು. ಅದನ್ನು ಎಷ್ಟು ಸಾಧ್ಯವೋ ಅಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದ್ದು ಎಲ್ಲ ಭಾರತೀಯರ ಕರ್ತವ್ಯ ಮತ್ತು ಜವಾಬ್ದಾರಿ.

ಪೆಹಲ್ಗಾಮ್ ಆಕ್ರಮಣ ಯುದ್ಧದ ಕಾರ್ಮೋಡವನ್ನು ಸೃಷ್ಟಿಸಿದ್ದರೆ, ಮಂಗಳೂರಿನ ಸುಹಾಸ್ ಶೆಟ್ಟಿ ಎಂಬ ಯುವಕನ ಕೊಲೆ ತುಂಬಾ ತುಂಬಾ ಕ್ಷೋಬೆ ಉಂಟು ಮಾಡುತ್ತಿದೆ. ಸರಣಿ ಕೊಲೆಗಳು ಕಣ್ಣ ಮುಂದೆ ಅದರಲ್ಲೂ ಎರಡು ಕೋಮುಗಳ ನಡುವಿನ ಸಂಘರ್ಷದಿಂದ ನಡೆಯುವುದು ಅಪಾಯಕಾರಿ ಮುನ್ಸೂಚನೆ.

ಧರ್ಮದ ಅಮಲು ನಿಧಾನವಾಗಿ ಸಾಮಾನ್ಯ ಜನರ ನೆತ್ತಿಗೇರುತ್ತಿದೆ. ಅದಕ್ಕೆ ಅವರು ಕಾರಣ ಎಂದು ಇವರು, ಇವರು ಕಾರಣ ಎಂದು ಅವರು, ಕ್ರಿಯೆ ಪ್ರತಿಕ್ರಿಯೆಗಳನ್ನು ನೀಡುತ್ತಾ, ವಿವೇಚನೆ ಇಲ್ಲದೆ ವರ್ತಿಸುತ್ತಾ, ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತಕ್ಕೆ ಶರಣಾಗುತ್ತಿರುವುದು ಈ ದೇಶ ತಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮದು ಸುಸಂಸ್ಕೃತ ದೇಶ ಕೊಲೆ ರಕ್ತಪಾತಗಳನ್ನು ಸಹಿಸಿಕೊಳ್ಳುವುದು ಕಷ್ಟ.

ಕಹಿ ಸತ್ಯ – ಎಚ್ಚರಿಕೆ – ನಮ್ಮ ಜವಾಬ್ದಾರಿ.

ದಯವಿಟ್ಟು ಮುಕ್ತ ಮನಸ್ಸಿನಿಂದ ಗಮನಿಸಿ,

ನಿರೀಕ್ಷೆಯಂತೆ ಘಟನೆಗಳು ನಡೆಯುತ್ತಿವೆ. ಭಾರತೀಯ ಮನಸ್ಸುಗಳು ಸ್ಪಷ್ಟವಾಗಿ ಬೇರೆ ಬೇರೆ ಗುಂಪುಗಳಾಗಿ ಒಡೆಯುತ್ತಿವೆ. ಮೊದಲು ಕೇವಲ ಅಂತರಂಗದಲ್ಲಿ ಹುದುಗಿದ್ದ ದ್ವೇಷ ಅಸೂಯೆಗಳು ಈಗ ಬಹಿರಂಗವಾಗಿ ಹೊರ ಬರುತ್ತಿದೆ.
” ಭಿನ್ನತೆಯಲ್ಲೂ ಐಕ್ಯತೆ ”
ಇದರಲ್ಲಿ ಐಕ್ಯತೆ ಮಾಯವಾಗಿ ಭಿನ್ನತೆಯೇ ಸರ್ವವ್ಯಾಪಿಯಾಗಿದೆ.
ಇದರಲ್ಲಿ ಯಾವ ಒಗಟೂ ಇಲ್ಲ. ಎಲ್ಲಾ ನೇರ ನೇರ,

ಈ ಕ್ಷಣದಲ್ಲಿ ಐದು ಮುಖ್ಯ ಪಂಥಗಳು ಈ ದೇಶದಲ್ಲಿ ಬಹಳ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ.
ಒಂದು,
ಆರ್ ಎಸ್ ಎಸ್ ಪ್ರೇರಿತ
ಬಲಪಂಥೀಯ ಸಂಘ ಪರಿವಾರ
ಎರಡು,
ಅಂಬೇಡ್ಕರ್ ಪ್ರೇರಿತ ದಲಿತ ಚಳವಳಿ.
ಮೂರು,
ಕಮ್ಯುನಿಸ್ಟ್ ವಿಚಾರಗಳ ಪ್ರೇರಿತ ಎಡಪಂಥೀಯ ಸಂಘಟನೆಗಳು,
ನಾಲ್ಕು,
ಇಸ್ಲಾಂ ಪ್ರೇರಿತ ಮುಸ್ಲಿಂ ಧಾರ್ಮಿಕ ಚಟುವಟಿಕೆಗಳು,
ಐದು,
ವೈಜ್ಞಾನಿಕ ಮನೋಭಾವದ ಪ್ರಗತಿಪರ ಚಟುವಟಿಕೆಗಳು.

ಈ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇದು ಹೀಗೆ ಮುಂದುವರಿದರೆ ಭಾರತ ಮತ್ತೊಂದು ವಿಭಜನೆಯತ್ತ ಸಾಗುವುದು ನಿಶ್ಚಿತ.

ಇತಿಹಾಸದ ಅನುಭವದಿಂದ ಹೇಳುವುದಾದರೆ ಯಾವುದೇ ದೊಡ್ಡ ಘಟನೆಗಳು – ಕ್ರಾಂತಿಗಳು ತಕ್ಷಣದ ಪ್ರೇರಣೆಯಿಂದ ಆಗುವುದಿಲ್ಲ. ಅತೃಪ್ತಿ, ಅಸಹನೆಗಳು ಪರೋಕ್ಷವಾಗಿ ಜನ ಮಾನಸದಲ್ಲಿ ನಿಧಾನವಾಗಿ ಬೇರೂರಿ ಆಳಕ್ಕೆ ಇಳಿಯುತ್ತಿರುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ತತ್‌ಕ್ಷಣದ ಒಂದು ಕಾರಣದಿಂದಾಗಿ ಅದು ಸ್ಪೋಟಗೊಳ್ಳುತ್ತದೆ. ಆ ಲಕ್ಷಣಗಳು ಈಗ ಗೋಚರಿಸುತ್ತಿದೆ….

ಸ್ವಾತಂತ್ರ್ಯ ನಂತರ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧ ಸಾರಿದಾಗ ಭಾರತೀಯ ಹಿಂದುಗಳಿಗೆ ಪಾಕಿಸ್ತಾನದ ವಿರುದ್ಧ ಮತ್ತು ಪರೋಕ್ಷವಾಗಿ ಇಲ್ಲಿನ ಮುಸ್ಲಿಮರ ವಿರುದ್ಧ ಅಸಹನೆ ಪ್ರಾರಂಭವಾಯಿತು.

ಬಾಬರಿ ಮಸೀದಿ ಧ್ವಂಸವಾದಾಗ ಇಲ್ಲಿನ ಮುಸ್ಲಿಮರಿಗೆ ಅಭದ್ರತೆ ಕಾಡಿತು ಮತ್ತು ಹಿಂದುಗಳ ಬಗ್ಗೆ ದ್ವೇಷ ಮೊಳಕೆಯೊಡೆಯಿತು.

ಕಂಬಾಲಪಲ್ಲಿ – ಕರಮಚೇಡು – ಬದನವಾಳು – ಮತ್ತು ಊನಾ ಘಟನೆಗಳು ದಲಿತರಲ್ಲಿ ಆಕ್ರೋಶ ಉಂಟಾಗಿ ಹಿಂದೂ ಧರ್ಮದ ಮೇಲ್ವರ್ಗದವರ ಮೇಲೆ ದ್ವೇಷ ಶುರುವಾಗಿದೆ.

ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಮರಿಗೆ ಆಡಳಿತ ಪಕ್ಷಗಳು ಓಟಿಗಾಗಿ ಅನವಶ್ಯಕ ಪ್ರಾಮುಖ್ಯತೆ ನೀಡಿ ಅವರಿಗೆ ಮೇಲ್ನೋಟದ ಅನೇಕ ಧಾರ್ಮಿಕ ಸ್ವಾತಂತ್ರ್ಯ ನೀಡಿರುವುದು ಹಿಂದುಗಳಲ್ಲಿ ಅವರ ಬಗ್ಗೆ ಆಕ್ರೋಶ ಭುಗಿಲೇಳುತ್ತಿದೆ.

ದೇಶದಲ್ಲಿ ಹೆಚ್ಚುತ್ತಿರುವ ಮಾಢ್ಯ, ಅಜ್ಞಾನ ಪ್ರಗತಿಪರರಲ್ಲಿ ಅಸಮಾಧಾನ ಮೂಡಿಸುತ್ತಿದೆ.

ಇದರಲ್ಲಿ ಯಾರದು ಸರಿ, ಯಾರದು ತಪ್ಪು ಎಂದು ವಿಮರ್ಶಿಸುವುದಕ್ಕಿಂತ ಮುಖ್ಯವಾಗಿ ಭಾರತದ ರಕ್ಷಣೆ – ಐಕ್ಯತೆ – ಜನರ ಜೀವನಮಟ್ಟ ಸುಧಾರಣೆ – ಕಾನೂನು ಸುವ್ಯವಸ್ಥೆ ಮತ್ತು ಜನರಲ್ಲಿ ಶಾಂತಿ ಸಮಾನತೆ ತರುವ ನಿಟ್ಟಿನಲ್ಲಿ ನಾವೆಲ್ಲ ಶೀಘ್ರ ಕಾರ್ಯೋನ್ಮಖರಾಗಬೇಕಿದೆ.

ನೀವು ರೈತರೋ, ಕಾರ್ಮಿಕರೋ, ಗೃಹಿಣಿಯೋ, ಕಲಾವಿದರೋ, ವೃತ್ತಿಪರರೋ, ಯಾರೇ ಆಗಿರಿ ಈ ಕ್ಷಣದಿಂದ ಈ ದೇಶದ ಆಗುಹೋಗುಗಳ ಮೇಲೆ ಗಮನವಿಟ್ಟಿರಿ. ಈ ಕೆಟ್ಟ ರಾಜಕಾರಣಿಗಳು, ನಕಲಿ ಹೋರಾಟಗಾರರು – ನಕಲಿ ಧರ್ಮ ರಕ್ಷಕರು – ನಕಲಿ ಬುದ್ದಿ ಜೀವಿಗಳು – ಧರ್ಮಾಂಧರು – ಮತಿಹೀನ ಮಾಧ್ಯಮದವರು – ತಲೆ ಕೆಟ್ಟ Social media ಪುಂಡರು ಇವರುಗಳು ಬಗ್ಗೆ ಈಗಿನಿಂದಲೇ ಎಚ್ಚರಿಕೆ ವಹಿಸುವ ಮುಖಾಂತರ ದೇಶಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸೋಣ.

ಮಧ್ಯಪ್ರಾಚ್ಯ ದೇಶಗಳ ರಕ್ತಪಾತ ನಮಗೆ ಎಚ್ಚೆತ್ತುಕೊಳ್ಳಲು ಬಹುದೊಡ್ಡ ಪಾಠ. ಈಗಾಗಲೇ ಕರ್ನಾಟಕದ ಮಂಗಳೂರು, ಕೇರಳದ ಕಣ್ಣೂರು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಕೆಲ ಭಾಗಗಳು ನಮ್ಮ ಕೈ ಮೀರುತ್ತಿವೆ.

ಭಾರತ ಮಾತೆಗೆ ಬೀಳುತ್ತಿರು ಕೆಟ್ಟ ಕನಸು ಕನಸಾಗೇ ಇರಲಿ.
ಅದು ನಿಜವಾಗದಿರಲಿ ಎಂದು ಆಶಿಸುತ್ತಾ, ಎಲ್ಲಾ ರೀತಿಯ ದುಷ್ಟ ಶಕ್ತಿಗಳ ಧಮನಕ್ಕೆ ಸಾಮಾನ್ಯರಾದ ನಾವು ಶೀಘ್ರದಲ್ಲೇ ಕೈ ಮತ್ತು ಮನಸ್ಸು ಜೋಡಿಸೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068……..