ವಿಜಯ ದರ್ಪಣ ನ್ಯೂಸ್……
ದುಬಾರಿಯಾದ ರೇಷ್ಮೆ ಚಾಕಿ ಹುಳ, ಕಂಗಾಲಾದ ರೇಷ್ಮೆ ಬೆಳೆಗಾರರು

ವಿಜಯಪುರ (ದೇವನಹಳ್ಳಿ ತಾಲ್ಲೂಕು): ರೇಷ್ಮೆಗೂಡಿಗೆ ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ ರೇಷ್ಮೆ ಹುಳ ಸಾಕಲು ಚಾಕಿ ಹುಳದ ಬೆಲೆ ದುಪ್ಪಟ್ಟು ಏರಿಕೆ ಕಂಡಿರುವುದು ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.
ಈಗ ಬಿತ್ತನೆ ರೇಷ್ಮೆಗೂಡಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ರೇಷ್ಮೆ ಚಾಕಿ ಹುಳದ ಬೆಲೆ ಹಿಂದಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ವಿಧಿಯಿಲ್ಲದೆ ದುಪ್ಪಟ್ಟು ಹಣ ನೀಡಿ ಚಾಕಿ ಹುಳ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿತ್ತನೆಗೆ ಬೇಕಾದ ನಾಟಿ ರೇಷ್ಮೆಗೂಡನ್ನು ಕುಣಿಗಲ್, ಚನ್ನರಾಯಪಟ್ಟಣ ಹಾಸನ, ಸಂತೆಮುತ್ತೂರು, ಮಾಗಡಿ, ಹುಲಿದುರ್ಗ, ಕೆ.ಆರ್ ಪೇಟೆ ಸೇರಿದಂತೆ ಹಲವು ಭಾಗದಲ್ಲಿ ಅತಿ ಹೆಚ್ಚು ಬೆಳೆಯಲಾಗುತ್ತದೆ. ಅದೇ ರೀತಿ ಬಿತ್ತನೆಗೆ ಬೇಕಾದ ಬಿಳಿಗೂಡು (ಬೈವೋಲ್ಟಿನ್) ಹಾಸನ, ಸರ್ಜಾಪುರ ಅತ್ತಿಬೆಲೆ, ತುಮಕೂರು, ಕುಶಾಲ ನಗರ ಸೇರಿದಂತೆ ಹಲವು ಭಾಗದಲ್ಲಿ ಬೆಳೆಯಲಾಗುತ್ತಿದೆ.
ಈಗ ನಾಟಿ ರೇಷ್ಮೆಗೂಡು ಪ್ರತಿ ಕೆ.ಜಿ 7.800 ರೂ.ಗೆ ಮಾರಾಟವಾಗುತ್ತಿದೆ. ಬಿಳಿಗೂಡು ಪ್ರತಿ ಕೆ.ಜಿ 1.800 ರೂ. ಮಾರಾಟ ವಾಗುತ್ತಿದೆ. ಬಿತ್ತನೆಗೂಡಿಗೆ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿರುವುದರಿಂದ ರೇಷ್ಮೆ ಮೊಟ್ಟೆ ಹಾಗೂ ಚಾಕಿ ಹುಳದ ಬೆಲೆಯೂ ಗಗನಕ್ಕೇರಿದೆ.
ಹಿಂದೆಲ್ಲಾ 5 ರಿಂದ 6 ಸಾವಿರ ರೂ. ಗೆ ಸಿಗುತ್ತಿದ್ದ 100 ಮೊಟ್ಟೆ 2 ಜ್ವರದ ರೇಷ್ಮೆ ಚಾಕಿ ಹುಳ ಈಗ 12 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. 9 ಸಾವಿರ ರೂ. ಇದ್ದ 3 ಜ್ವರದ ಹುಳ ಈಗ 16 ರಿಂದ 17 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಚಾಕಿ ಹುಳದ ಬೆಲೆ ಏರಿಕೆ ದುಪ್ಪಟ್ಟು ಕಂಡರೂ ಅಷ್ಟೇ ಬೇಡಿಕೆ ಬೆಳೆಗಾರರಿಂದ ವ್ಯಕ್ತವಾಗಿದೆ. ಹೀಗಾಗಿ ರೇಷ್ಮೆಗೂಡು ಬೆಳೆಯಲು ಬೆಳೆಗಾರರು ಹೆಚ್ಚಿನ ಬಂಡವಾಳ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಳೆಗಾರರ ಬೇಡಿಕೆಗೆ ತಕ್ಕಂತೆ ಚಾಕಿ ಹುಳ ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಕಾರ್ಮಿಕರಿಗೆ ಕೂಲಿ, ವಾಹನದ ಮೂಲಕ ಬೆಳೆಗಾರರ ಮನೆಗೆ ಚಾಕಿಹುಳ ಸರಬರಾಜು, ಹಿಪ್ಪುನೇರಳೆ ಸೊಪ್ಪಿಗೆ ತಗಲುವ ವೆಚ್ಚ, ಚಾಕಿ ಮನೆ ನಿರ್ವಹಣೆ ಹೀಗೆ.. ಹಲವು ವೆಚ್ಚಗಳಿಗೆ ಹಣ ಕೈಯಿಂದಲೇ ಬೀಳುತ್ತಿದೆ. 2 ಜ್ವರದ ರೇಷ್ಮೆ ಚಾಕಿ ಹುಳ 12 ಸಾವಿರ ರೂ.ಗೆ ಮಾರಾಟ ಮಾಡಿದರೂ ನಮಗೆ ಒಂದು ನೂರು ರೂಪಾಯಿಯೂ ಸಿಗುತ್ತಿಲ್ಲ ಎಂದು ವಿಜಯಪುರ ಹೋಬಳಿಯ ದೊಡ್ಡಮುದ್ದೇನಹಳ್ಳಿ ಕಲ್ಯಾಣಿ ಸಿಲ್ಕ್ ಚಾಕಿ ಹುಳ ಸಾಕಣೆದಾರ ಜೆ.ಶ್ರೀನಿವಾಸ್ ಹೇಳುತ್ತಾರೆ.
ರೇಷ್ಮೆ ಬೆಳೆಗಾರರಿಗೆ ಆರ್ಥಿಕ ಹೊರೆ
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಬೆಲೆಯೂ ಏರಿಕೆಯಾಗಿರುವುದರಿಂದ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಕಣೆ ಮಾಡಲು ಮುಂದಾಗಿದ್ದು, ಇದರಿಂದ ದಿನೇದಿನೆ ಚಾಕಿ ಹುಳು ಬೆಲೆ ಏರಿಕೆಯಾಗುತ್ತಲೇ ಇದೆ. ರೇಷ್ಮೆಗೂಡಿಗೆ ಒಳ್ಳೆಯ ಬೆಲೆ ಇದ್ದಾಗಲೇ ಈಗ ಬಿತ್ತನೆ ರೇಷ್ಮೆ ಗೂಡಿನ ಬೆಲೆ ಏರಿಕೆಯಿಂದ ಚಾಕಿ ಹುಳ ದುಪ್ಪಟ್ಟು ಏರಿಕೆ ಕಂಡಿರುವುದರಿಂದ ರೇಷ್ಮೆಬೆಳೆಗಾರರಿಗೆ ಆರ್ಥಿಕ ಹೊರೆಯಾಗಿದೆ.
ರಂಜಾನ್, ಯುಗಾದಿಯ ಎಫೆಕ್ಟ್
ರಂಜಾನ್ ಹಬ್ಬದ ಮುನ್ನ ಹಾಗೂ ಹಬ್ಬದ ಮುಗಿದ ನಂತರ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಏರಿಳಿತ ಆಗುವುದು ಸಹಜ. ಹಾಗೆಯೇ ಯುಗಾದಿ ಹಬ್ಬ ಆಚರಿಸಿಕೊಳ್ಳಲು ಬೆಳೆಗಾರರಿಗೆ ಬಿಡುವು ಪಡೆಯುವುದು ವಾಡಿಕೆ. ಹೀಗಾಗಿ ಈ ಸಮಯವನ್ನು ತಪ್ಪಿಸಿ ರೇಷ್ಮೆ ಬೆಳೆಗಾರರು ರೇಷ್ಮೆ ಹುಳ ಸಾಕಲು ಮುಂದಾಗುತ್ತಾರೆ. ಹೀಗಾಗಿ ರೇಷ್ಮೆ ಚಾಕಿ ಹುಳಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಚಾಕಿ ಸಾಕಾಣಿಕೆ ಕೇಂದ್ರದ ಮಾಲೀಕರು.
ಚಳಿಗಾಲದಲ್ಲಿ ಹಿಪ್ಪುನೇರಳೆ ಸೊಪ್ಪಿನ ಬೆಳೆವಣಿಗೆ ಕುಂಠಿತಗೊಂಡು ಸೊಪ್ಪಿನ ಬೆಲೆ ಏರಿಕೆಯ ಬಿಸಿ ತಟ್ಟಿದ ರೇಷ್ಮೆ ಬೆಳೆಗಾರರಿಗೆ ಈಗ ಬೇಸಿಗೆಯಲ್ಲಿ ರೇಷ್ಮೆ ಹುಳ ಸಾಕಲು ಚಾಕಿ ಹುಳ ದುಬಾರಿ, ಸಮಯಕ್ಕೆ ಸರಿಯಾಗಿ ಹುಳ ಸಿಗದೆ ಸಂಕಷ್ಟ ಎದುರಾಗಿದೆ.
ಭಟ್ರಮಾರೇನಹಳ್ಳಿ ರವಿ, ರೇಷ್ಮೆ ಬೆಳೆಗಾರ






