ಪಂಥಗಳಾಚೆಯ ನೋಟ……. ಎಲ್ಲೋ ಎಡವುತ್ತಿದ್ದೇವೆಯೆ ನಾವು ?
ವಿಜಯ ದರ್ಪಣ ನ್ಯೂಸ್…
ಪಂಥಗಳಾಚೆಯ ನೋಟ…….
ಎಲ್ಲೋ ಎಡವುತ್ತಿದ್ದೇವೆಯೆ ನಾವು ?
ಬಹುಶಃ,
ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ?
ಅಥವಾ,
ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ?
ಅಥವಾ,
ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯೇ ?
ಅಥವಾ,
ಬದುಕಿನ ಅರ್ಥವೇ ಬದಲಾಗುತ್ತಿದೆಯೇ ?
ಅಥವಾ,
ನಾವೇ ಭ್ರಮೆಗೊಳಗಾಗುತ್ತಿದ್ದೇವೆಯೇ ?
ಅಥವಾ,
ಅಭಿವೃದ್ಧಿ ಎಂದರೆ ಏನೆಂದೇ ತಿಳಿಯುತ್ತಿಲ್ಲವೇ ?
ಅಥವಾ,
ಎಲ್ಲೋ ಕಳೆದುಹೋದ ಅನುಭವವಾಗುತ್ತಿದೆಯೇ ?
ಅಥವಾ,
ನಿಜಕ್ಕೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆಯೇ ?
ಅಥವಾ,
ಇದೇ ಬದುಕಿನ ಸಹಜ ಕ್ರಮವೇ ?
ಅಥವಾ,
ಎಲ್ಲಾ ಕಾಲಘಟ್ಟಗಳಲ್ಲೂ ಈ ತಳಮಳ ಇದ್ದದ್ದೆಯೇ ?
ಅಥವಾ,
ಸತ್ಯದ ಹುಡುಕಾಟವೇ ಅಂತಿಮ ಧ್ಯೆಯವೇ ?
ಅಥವಾ,
ಇದೆಲ್ಲವನ್ನು ಮೀರಿದ ಇನ್ನೇನಾದರೂ ಇದೆಯೇ ?
ಕಾಡುತ್ತಲೇ ಇರುವ ಗೊಂದಲದ ಕಾಡಿನಲಿ,
ಅಲೆಯುತ್ತಲೇ ಇರುವ ಮನದ ಸಾಗರದಲಿ,
ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸಿದರೆ,
ಬದುಕು ಒಂದಷ್ಟು ಸಹನೀಯವಾಗಬಹುದು,
ಜೀವನಮಟ್ಟ ಸುಧಾರಿಸಬಹುದು,
ಕ್ರಿಯಾತ್ಮಕ ಸಾಧನೆಗಳು ಸಾಧ್ಯವಾಗಬಹುದು…..
ಹೌದು,
ನಾನು ಬಲಪಂಥೀಯ,
ಈ ದೇಶದ ಸಂಸ್ಕೃತಿ – ಮೌಲ್ಯಗಳನ್ನು, ಇಲ್ಲಿನ ಜನರ ಮುಗ್ಧತೆ – ಮಾನವೀಯ ಗುಣಗಳನ್ನು ಬಹುವಾಗಿ ಇಷ್ಟಪಡುತ್ತೇನೆ. ಈ ನೆಲದ ಮಣ್ಣಿನ ಶ್ರೇಷ್ಠತೆಯನ್ನು, ಪಾರಂಪರಿಕ ಕೌಟುಂಬಿಕ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಅದಕ್ಕಾಗಿ ಹೆಮ್ಮೆ ಇದೆ…..
ಹೌದು,
ನಾನು ಎಡಪಂಥೀಯ,
ಇಲ್ಲಿನ ಅಮಾನವೀಯ ರಾಕ್ಷಸ ಸ್ವರೂಪದ ಶೋಷಣೆಯ ಮೂಲವಾದ ಸಾಮಾಜಿಕ ಅಸಮಾನತೆಯನ್ನು ದ್ವೇಷಿಸುತ್ತೇನೆ. ಕಪಟ ಆಧ್ಯಾತ್ಮ, ಕಠೋರ, ಕರ್ಮಠ ಸಂಪ್ರದಾಯಗಳು, ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿಯಂತ್ರಣವನ್ನು ಖಂಡಿಸುತ್ತೇನೆ. ಅದಕ್ಕೆ ನನಗೆ ಇಲ್ಲಿನ ವ್ಯವಸ್ಥೆಯ ಬಗೆಗೆ ಕೋಪವಿದೆ.
ಹೌದು,
ನಾನು ಮಧ್ಯ ( ನಡು ) ಪಂಥೀಯ,
ಬಲ ಮತ್ತು ಎಡಗಳ ದಾಸನಾಗದೆ ತಮ್ಮದೇ ಶ್ರೇಷ್ಠ ಎಂದು ಮೂಡನಾಗದೆ ಎರಡೂ ಪಂಥಗಳ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಅನುಭವ ಮತ್ತು ಆಧುನಿಕತೆಯ ನೆರಳಲ್ಲಿ ಹೊಸದೊಂದು ಜೀವನ ಶೈಲಿ ರೂಪಿಸಿಕೊಳ್ಳುವ ಪ್ರಯತ್ನದಲ್ಲಿರುವವನು……
ಹೌದು,
ನಾನು ದ್ವಂಧ್ವಗಳ ರಾಜ, ಎಡಬಿಡಂಗಿ,
ಅಲ್ಲೂ ಸಲ್ಲದ ಇಲ್ಲೂ ಸಲ್ಲದ ನೆಮ್ಮದಿಯ ಬದುಕಿಗಾಗಿ ಈ ಪಂಥಗಳ ಆಚೆ ಸತ್ಯ ಮತ್ತು ವಾಸ್ತವದ ಹುಡುಕಾಟದಲ್ಲಿರುವ ಅರೆ ಹುಚ್ಚ.
ಇಲ್ಲ,
ನಾನು ಇದಾವುದೂ ಅಲ್ಲ,
ಸೃಷ್ಟಿಯ ಒಂದು ಸಹಜ ಸ್ವಾಭಾವಿಕ ಸರಳ ಜೀವಿ. ನನ್ನ ಮೆದುಳಿನ ಗ್ರಹಿಕೆಯಿಂದ ಉಂಟಾದ ತರಂಗಗಳು ಮನಸ್ಸಿಗೆ ರವಾನಿಸುವ ಸಂದೇಶಗಳಿಗೆ ಅನುಗುಣವಾಗಿ, ದೇಹದ ಅಂಗಾಗಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಜೀವಕೋಶಗಳ ರಾಶಿ ನಾನು.
ಅದಷ್ಟೇ ಸತ್ಯ. ಉಳಿದದ್ದು ಎಂದಿನಂತೆ ನಿಮ್ಮ ಮೆದುಳು ಗ್ರಹಿಸಿ ಮನಸ್ಸಿಗೆ ಕಳಿಸುವ ತರಂಗಗಳ ಆಧಾರದಲ್ಲಿ ನಿಮ್ಮ ಪ್ರತಿಕ್ರಿಯೆ…..
ಇದುವೇ ಜೀವಿ – ಜೀವನ – ಸಮಾಜ.
ಈ ದೇಶ – ಭಾಷೆ – ಧರ್ಮ – ಜಾತಿ – ಪಂಥ ಎಲ್ಲವೂ ಕೇವಲ ಪರಿಕಲ್ಪನೆ.
ಸಹಜವಾಗಿ ಬದುಕಲು ಪಂಥಗಳ ಅವಶ್ಯಕತೆ ಇದೆಯೇ, ಇದ್ದರು ಎಲ್ಲಾ ಜೀವರಾಶಿಗಳ ಹಿತ ಬಯಸುವ ಮಾನವೀಯ ಪಂಥ ಸಾಕಲ್ಲವೇ, ನಾಗರೀಕ ಸಮಾಜ, ನೆಮ್ಮದಿಯ ಸಮಾಜಕ್ಕೆ ಇಷ್ಟು ಸಾಕಲ್ಲವೇ,
ಯೋಚಿಸಿ ನೋಡಿ……
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..