ಶ್ರೀ ಘಾಟಿ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 66 ನವ ಜೋಡಿಗಳು
ವಿಜಯ ದರ್ಪಣ ನ್ಯೂಸ್
ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 66 ನವ ಜೋಡಿಗಳು
ದುಂದುವೆಚ್ಚ ವಿವಾಹ ಬದಲಾಗಿ ಸರಳ ವಿವಾಹ ಆಗುವುದು ಉತ್ತಮ: ಸಚಿವ ಕೆ.ಹೆಚ್. ಮುನಿಯಪ್ಪ ಅಭಿಮತ
ಶ್ರೀ ಘಾಟಿ ಸುಬ್ರಹ್ಮಣ್ಯ :ಬೆಂ.ಗ್ರಾ.ಜಿಲ್ಲೆ, ಮೇ 07:-ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು 66 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಘಾಟಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 66 ನೂತನ ಜೋಡಿಗಳು ಸತಿ-ಪತಿಗಳಾದರು.
ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್ ಮುನಿಯಪ್ಪ ಅವರ ಸಮ್ಮುಖದಲ್ಲಿ ನೂತನ ವಧು-ವರರಿಗೆ ಆಶಿರ್ವದಿಸಿ ಶುಭ ಹಾರೈಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಾದ ಮಾಡಲು ಬಂದಿರುವ ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ ಶುಭ ಲಗ್ನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿರುವುದು ವಿಶೇಷವಾಗಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ಬಂದಿರುವುದು ನನಗೂ ಹೆಮ್ಮೆ ಇದೆ. ಬಡವರಿಗೆ, ಹಿಂದುಳಿದವರಿಗೆ, ಸರಳ ವಿವಾಹ ಬಯಸುವವರಿಗೆ ಈ ಸಾಮೂಹಿಕ ವಿವಾಹ ಬಹಳ ಸಹಕಾರಿಯಾಗಿದೆ.
ಸಾಲ ಮಾಡಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಆಗುವ ಮದುವೆಗಳಿಂದ, ಮುಂದೆ ಸಾಲ ತೀರಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಬಹುದು. ಸರಳ ವಿವಾಹ ಆಗುವುದರಿಂದ ನೆಮ್ಮದಿಯ ಜೀವನ ನಡೆಸಬಹುದು. ದೇವರ ಸನ್ನಿದಾನದಲ್ಲಿ ನೆರವೇರಿರುವ ಈ ಸಾಮೂಹಿಕ ವಿವಾಹ ಶ್ರೇಷ್ಠವಾಗಿದೆ. ತಮಗೆ ಉತ್ತಮ ಜೀವನ, ಆರೋಗ್ಯ ಭಾಗ್ಯ, ಆಯಸ್ಸು ಕೊಟ್ಟು ದೇವರು ಕಾಪಾಡಲಿ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು.
ನವ ದಂಪತಿಗಳಾದ ತಾವು ಪ್ರೀತಿ ವಾತ್ಸಲ್ಯದಿಂದ ಜೀವನ ಮಾಡಬೇಕು ಮತ್ತು ತಮ್ಮ ತಂದೆ-ತಾಯಿ, ಕುಟುಂಬವನ್ನು ಚೆನ್ನಾಗಿ ಪೋಷಿಸಿ ಉತ್ತಮ ಜೀವನ ಸಾಗಿಸಲು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಪ್ರಾಧಿಕಾರ ಹಾಗೂ ಅಧಿಕಾರಿಗಳಿಗೆ ಸಚಿವರು ಧನ್ಯವಾದ ತಿಳಿಸಿದರು.
ಮಾಂಗಲ್ಯ ಭಾಗ್ಯ ಯೋಜನೆಯಡಿ ಪ್ರಾಧಿಕಾರದ ವತಿಯಿಂದ ನವ ಜೋಡಿಗೆ ತಾಳಿ, ಎರಡು ಚಿನ್ನದ ಗುಂಡು, ಪಂಚೆ-ಶಲ್ಯ, ಬೆಳ್ಳಿ ಕಾಲುಂಗುರವನ್ನು ಉಚಿತವಾಗಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶಿಲ್ದಾರ್ ವಿಭಾ ರಥೊಡ್, ಇಒ ಮುನಿರಾಜು, ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.