ಗೌಡನ ಕೆರೆ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ
ವಿಜಯ ದರ್ಪಣ ನ್ಯೂಸ್…
ಗೌಡನ ಕೆರೆ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ
ಶಿಡ್ಲಘಟ್ಟ : ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ, ಇದಕ್ಕೆ ಗೌಡನ ಕೆರೆ ಎಂಬ ಹೆಸರು ಬಂತೆಂದು ಪ್ರತೀತಿಯಿದೆ.
ಶಿವನೇಗೌಡರ ಹೆಸರಿರುವ ಶಾಸನ ತಾಲ್ಲೂಕಿನ ಸೊಣ್ಣೇನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ತೆಯಾಗಿದೆ.
ನಗರದ ಆಗ್ನೆಯ ದಿಕ್ಕಿನಲ್ಲಿರುವ ಗೌಡನ ಕೆರೆಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ.
ಶಿವನೇಗೌಡರು 47 ವರ್ಷಗಳು ಈ ಊರನ್ನು ಆಳಿರುವುದಾಗಿ ಇತಿಹಾಸದಲ್ಲಿ ದಾಖಲಾಗಿದೆ ಪುರಾತತ್ವ ಇಲಾಖೆಯಿಂದ ತಾಲ್ಲೂಕಿನ ಗ್ರಾಮವಾರು ಸರ್ವೇಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಇದುವರೆಗೂ ಪ್ರಕಟವಾಗದಿರುವ ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಕನ್ನಡ ಲಿಪಿ, ತೆಲುಗು ಭಾಷೆಯಲ್ಲಿರುವ ಈ ಶಾಸನವನ್ನು ಕ್ರಿ.ಶ. 1590ರಲ್ಲಿ ಬರೆಯಲಾಗಿದೆಬಆಗ ವಿಜಯನಗರ ಸಾಮ್ರಾಜ್ಯವನ್ನು ವೆಂಕಟಪತಿರಾಯರು ಆಳುತ್ತಿದ್ದರು ,ಅವರ ಸಾಮಂತರಾಗಿ ಸುಗಟೂರು ಪ್ರಾಂತ್ಯವನ್ನು ಇಮ್ಮಡಿ ತಮ್ಮಪ್ಪಗೌಡರು ಆಳ್ವಿಕೆ ನಡೆಸುವಾಗ, ಶಿಡ್ಲಘಟ್ಟ ಪ್ರಾಂತ್ಯವನ್ನು ಆಳಿ, ಅಪಾರ ಜನಸೇವೆ ಮಾಡಿ, ಉತ್ತಮ ಆಡಳಿತ ನಡೆಸಿ ದೈವಸನ್ನಿಧಿಗೆ ಸೇರಿರುವ ಶಿವನೇಗೌಡರ ನೆನಪಿನಲ್ಲಿ ಅವರ ಅನುಯಾಯಿಗಳಾದ ನಾಣಪ್ಪಗೌಡರ ಮಗ ಶಿಲೇಗೌಡರು, ಶಿವಸಮುದ್ರ ಎಂಬ ಕೆರೆಯನ್ನು ಜನೋಪಕಾರಕ್ಕಾಗಿ ಕಟ್ಟಿಸಿ ದಾನ ಮಾಡಿರುವುದಾಗಿ ಇದರಲ್ಲಿ ಉಲ್ಲೇಖವಾಗಿದೆ.
ಶಿಡ್ಲಘಟ್ಟದ ಸ್ಥಳ ಐತಿಹ್ಯದ ಪ್ರಕಾರ ಕ್ರಿ.ಶ.1514ರಲ್ಲಿ ಉಜ್ಜನಿ ಮೂಲದ ಕೆಂಪೇಗೌಡ ವೆಲ್ಲೂರಿನ ಕದನದಲ್ಲಿ ನಿಧನನಾದ ಮೇಲೆ, ಗರ್ಭಿಣಿಯಾಗಿದ್ದ ಆತನ ಮಡದಿ ಹಲಸೂರಮ್ಮ ಅಬ್ಲೂಡಿನಲ್ಲಿ ಕೋಟೆ ಕಟ್ಟಿ ಕ್ರಿ.ಶ.1526ರಲ್ಲಿ ವ್ಯವಸ್ಥಿತವಾಗಿ ಊರನ್ನು ಕಟ್ಟಿಸಿ, ಮಾವನಾದ ಸಿಡ್ಲಗೌಡನ ಹೆಸರಿನಿಂದ ಸಿಡ್ಲಘಟ್ಟ ಎಂದು ಕರೆದಳು.
ಮಗ ಶಿವನೇಗೌಡನಿಗೆ 1529ರಲ್ಲಿ ಪಟ್ಟ ಕಟ್ಟಿದಳು ಶಿಡ್ಲಘಟ್ಟದ ನೈರುತ್ಯಕ್ಕಿರುವ ಅಮ್ಮನಕೆರೆಯನ್ನು ಹಲಸೂರಮ್ಮ, ಆಗ್ನೇಯ ದಿಕ್ಕಿನಲ್ಲಿರುವ ಗೌಡನಕೆರೆಯನ್ನು ಶಿವನೇಗೌಡರು ಕಟ್ಟಿಸಿದರು. ಅಮ್ಮನಕೆರೆಯ ಅಚ್ಚುಕಟ್ಟಿನಲ್ಲಿ ರಸ್ತೆಯ ಪಕ್ಕ ಜಮೀನಿನಲ್ಲಿ ಈಗಲೂ ಶಿವನೇಗೌಡರ ಸಮಾಧಿ ಕಾಣಬಹುದು.
” ಈ ಶಾಸನವನ್ನು ಕ್ರಿ.ಶ. 1590ರ ಜುಲೈ ತಿಂಗಳ 21ನೇ ತಾರೀಖಿನ ಮಂಗಳವಾರ ಸೂರ್ಯಗ್ರಹಣದ ದಿನದಂದೇ ಬರೆಯಲಾಗಿದೆ ಗ್ರಹಣದ ದಿನ ದಾನ ಕೊಟ್ಟರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂಬ ನಂಬಿಕೆ ಹಿರಿಯರದ್ದು ಹಾಗಾಗಿ ಜನಾನುರಾಗಿ ಆಡಳಿತಗಾರ ಶಿವನೇಗೌಡರ ನೆನಪಿನಲ್ಲಿ ಒಂದು ಕೆರೆಯನ್ನು ಕಟ್ಟಿಸಿ ದಾನ ಮಾಡಲಾಗಿದೆ ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು ” .
ಈ ಸಂದರ್ಭದಲ್ಲಿ ಗ್ರಾಮಸ್ಥ ಪಿಳ್ಳಮುನಿಯಪ್ಪ, ದೇವಪ್ಪ, ಲೋಕೇಶ್,ಅಂಬರೀಶ್, ಮುನಿಕೃಷ್ಣಪ್ಪ,ದೇವರಾಜು, ಗಿರೀಶ, ಅರ್ಚಕ ಜಗನ್ನಾಥ್ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.