ನ್ಯಾಯಕ್ಕಾಗಿ ಮತ್ತೆ ಮತ್ತೆ ಎದ್ದು ಬರುತ್ತಿರುವ ಅನೇಕ ಪ್ರೇತಾತ್ಮಗಳು ಮತ್ತು ನತದೃಷ್ಟ ಹೆಣ್ಣು ಮಗು ಸೌಜನ್ಯ………

ವಿಜಯ ದರ್ಪಣ ನ್ಯೂಸ್ 

ಧರ್ಮಸ್ಥಳ ಫೈಲ್ಸ್………

ನ್ಯಾಯಕ್ಕಾಗಿ ಮತ್ತೆ ಮತ್ತೆ ಎದ್ದು ಬರುತ್ತಿರುವ ಅನೇಕ ಪ್ರೇತಾತ್ಮಗಳು ಮತ್ತು ನತದೃಷ್ಟ ಹೆಣ್ಣು ಮಗು ಸೌಜನ್ಯ………

ಅಲ್ಲಿನ ಸಾವುಗಳು ಸೃಷ್ಟಿಸಿರುವ ನ್ಯಾಯ ಮತ್ತು ಕಾನೂನಿನ ತ್ರಿಶಂಕು ಸ್ಥಿತಿ…….

” ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು ” ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ….

ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ಇತ್ತೀಚಿನ ವರ್ಷಗಳ ಅತ್ಯಂತ ವಿಶೇಷ ಪ್ರಕರಣ. ಬಹುಶಃ ನಿಜವಾದ ಅಪರಾಧಿ ಪತ್ತೆಯಾದರೆ ಅತ್ಯಂತ ಘೋರ ಅಪರಾಧಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆ ಆಗುವಷ್ಟು ತೀವ್ರವಾದ ಹೇಯ ಕೃತ್ಯ. ದುರಾದೃಷ್ಟವಶಾತ್ ಪೋಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯ ಆರೋಪಿ ಸಹ ಹತ್ತು ವರ್ಷಗಳ ದೀರ್ಘ ವಿಚಾರಣೆಯ ನಂತರ ನಿರಪರಾಧಿ ಎಂದು ಬಿಡುಗಡೆ ಗೊಳಿಸಲಾಗಿದೆ.

ಆ ಸಂತೋಷ್ ರಾವ್ ನಿಜವಾದ ಅಪರಾಧಿಯಾಗಿದ್ದು ಸಾಕ್ಷಿ ಆಧಾರಗಳ ಕೊರತೆಯ ಕಾರಣದಿಂದಾಗಿ ಬಿಡುಗಡೆಯಾದನೇ ಅಥವಾ ಇವನಲ್ಲದೆ ಮತ್ತೊಬ್ಬ ಅಥವಾ ಮತ್ತಷ್ಟು ಜನ ಇದ್ದಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಈಗ ಮತ್ತೊಮ್ಮೆ ಅಲ್ಲಿ ಹೆಣ ವಿಲೇವಾರಿ ಮಾಡುವ ವ್ಯಕ್ತಿಯೊಬ್ಬರ ಆತ್ಮನಿವೇದನೆ, ಮತ್ತೊಬ್ಬ ತಾಯಿ ತಮ್ಮ ಹೆಣ್ಣು ಮಗಳ ನಾಪತ್ತೆ ಮುಂತಾದ ಕೆಲವು ಘಟನೆಗಳ ಆಧಾರದ ಮೇಲೆ ವಿಶೇಷ ತನಿಖೆಗೆ ಒತ್ತಾಯಿಸುತ್ತಿರುವ ಪ್ರಮುಖರ ಅನುಮಾನವೇನೆಂದರೆ ಅವರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ದೊರೆತಿರುವ ದಾಖಲೆಗಳ ಪ್ರಕಾರ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಅನೇಕ ಅಪರಿಚಿತ ದೇಹಗಳು ಮತ್ತು ಕಾಣೆಯಾದ ಮಹಿಳೆಯರ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಅದರ ಹಿಂದೆ ಒಂದು ವ್ಯವಸ್ಥಿತ ಜಾಲ ಇರಬಹುದಾ ಎಂದು ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ಸಹಜವಾಗಿಯೇ ಆ ಸಂಪೂರ್ಣ ಪ್ರದೇಶ ಅನಧಿಕೃತವಾಗಿ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಕುಟುಂಬದ ನಿಯಂತ್ರಣದಲ್ಲಿದೆ. ಅಲ್ಲಿನ ಎಲ್ಲಾ ವ್ಯವಹಾರಗಳಲ್ಲಿ ಅವರ ಕೈವಾಡ ಇದ್ದೇ ಇರುತ್ತದೆ. ಅಷ್ಟೇ ಅಲ್ಲ ಅವರು ರಾಜಕೀಯವಾಗಿಯೂ ಸಹ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ
ಪ್ರಭಾವಶಾಲಿಗಳು. ಆದ್ದರಿಂದ ಸೌಜನ್ಯ ಪ್ರಕರಣಗಳಲ್ಲಿ ಮತ್ತು ಇತರ ಅನೇಕ ಅಸಹಜ ಸಾಲುಗಳಲ್ಲಿ ತನಿಖೆಯ ಹಾದಿ ತಪ್ಪಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ರಾಜ್ಯದ ಅತ್ಯಂತ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದ ಎಲ್ಲಾ ವರ್ಗದ ಕೆಲವು ಪರಿಚಿತರು, ಪತ್ರಕರ್ತರು ಮುಂತಾದ ಕೆಲವರನ್ನು ಗೆಳೆತನದ ಸಲುಗೆಯಲ್ಲಿ ಮಾತನಾಡಿಸಿದಾಗ ಧರ್ಮಸ್ಥಳದ ಕಾರ್ಯಚಟುವಟಿಕೆಗಳ ಬಗ್ಗೆ ಉತ್ತಮ ಅಭಿಪ್ರಾಯ ಇದ್ದರೂ
ಅವರ ಕುಟುಂಬದ ನಡವಳಿಕೆಗಳ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿಲ್ಲ. ವಿಧವಿಧವಾಗಿ ಪ್ರಶ್ನಿಸಿದಾಗಲು ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಪ್ರಭಾವಿಗಳು ಇರುವ ‌ಸಾಧ್ಯತೆ ಇದೆ ಎಂದೇ ಹೇಳಿದರು. ಭೂ ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಮೀರಿ ಒಂದಷ್ಟು ದುರ್ನಡತೆಗಳ ಬಗ್ಗೆ ಸಹ ಜನ ಖಾಸಗಿಯಾಗಿ ಮಾತನಾಡಿಕೊಳ್ಳುತ್ತಾರೆ.

ಬಹುಶಃ ಈ
ಸೌಜನ್ಯ ವಿಷಯ 13/14 ವರ್ಷಗಳ ನಂತರವೂ ಇಷ್ಟೊಂದು ಕಾವು ಪಡೆಯಲು ಕಾರಣ ಸೌಜನ್ಯ ಎಂಬ ಹೆಣ್ಣುಮಗಳು ಧರ್ಮಸ್ಥಳದ ಸಮೀಪ ಅತ್ಯಂತ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದು….

ಎರಡನೆಯದಾಗಿ,
ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಅಲ್ಲಿನ ಅವರ ಅನುಯಾಯಿಗಳು ಅಲ್ಲಿಗೆ ಭೇಟಿ ನೀಡುತ್ತಿದ್ದ ಭಕ್ತರ ನಂಬಿಕೆ ಉಳಿಸಿಕೊಳ್ಳದೆ ತಮ್ಮ ವರ್ತನೆಯಲ್ಲಿ ಸಾಕಷ್ಟು ದುರಹಂಕಾರ ಪ್ರದರ್ಶಿಸುತ್ತಿದ್ದುದು, ಅದು ದೇವಸ್ಥಾನದ ಪ್ರವೇಶದಿಂದ ಹಿಡಿದು ಊಟ ಬಡಿಸುವ ಮತ್ತು ವಸತಿ ಸೌಕರ್ಯ ಕೊಡುವ ಸಂದರ್ಭದಲ್ಲಿ ಅಲ್ಲಿನ ಕಾರ್ಯಕರ್ತರ ಪಡೆ ನಡೆದುಕೊಳ್ಳುತ್ತಿದ್ದ ರೀತಿ ಸಾಕಷ್ಟು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಸೌಜನ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದರು ಎಂದು ಬಹುತೇಕ ಜನರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ….

ಮಂಜುನಾಥ ಸ್ವಾಮಿ ಮತ್ತು ಧರ್ಮಸ್ಥಳದ ಮೇಲೆ ತುಂಬಾ ಭಕ್ತಿ ಗೌರವ ಇರುವವರು ಸಹ ಅಲ್ಲಿನ ಧರ್ಮಾಧಿಕಾರಿ ಮತ್ತು ಅವರ ಸಹಚರರ ಬಗ್ಗೆ ಅಸಹನೆ ಹೊಂದಿರುವುದು ಕಂಡುಬರುತ್ತದೆ…..

ಮೂರನೆಯದಾಗಿ,
ಅವರು ನಡೆಸುತ್ತಿರುವ
ಸ್ತ್ರೀ ಶಕ್ತಿಯ ಸ್ವಸಹಾಯ ಹಣಕಾಸು ವ್ಯವಹಾರದಿಂದ ಒಂದಷ್ಟು ನೊಂದಿರುವ ಮತ್ತು ದೌರ್ಜನ್ಯಕ್ಕೆ ಒಳಗಾದ ಸಾಮಾನ್ಯ ಜನ ಅವರ ಬಗ್ಗೆ ಕೋಪಗೊಂಡಿದ್ದಾರೆ. ಅದು ಮತ್ತೊಂದು ಕಾರಣವಾದರೆ ಅಲ್ಲಿನ ಸ್ಥಳೀಯರೇ ಹೆಚ್ಚಾಗಿ ಅವರನ್ನು ಬೆಂಬಲಿಸುತ್ತಿಲ್ಲ. ಏಕೋ ಏನೋ ಅವರು ಸಹ ಅಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ತೀರಾ ಅಸಮಾಧಾನ ಹೊಂದಿದ್ದಾರೆ….

ಹಾಗೆಯೇ ಇಲ್ಲಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ಸೌಜನ್ಯ ಪರವಾಗಿ ಎಲ್ಲರೂ ಧ್ವನಿ ಎತ್ತುತ್ತಿರುವುದು ಮೂಲ ಕಾರಣವಾಗಿ ಎಸ್ಐಟಿ, ಸಿಬಿಐ, ನ್ಯಾಯಾಂಗ ವ್ಯವಸ್ಥೆ ಎಲ್ಲವೂ ಈ ಪ್ರಕರಣವನ್ನು ಇತ್ಯರ್ಥಪಡಿಸಿರುವಾಗಲು ಸಾಮಾನ್ಯ ಜನರಿಗೆ ನಂಬಿಕೆಯೇ ಹುಟ್ಟುತ್ತಿಲ್ಲ….

ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ,
ಕಿವಿ ಮುಚ್ಚಿ ಕುಳಿತ ‌ಕರ್ನಾಟಕ ಸರ್ಕಾರ,
ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ,
ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು………….,

ಹಾಗೆಯೇ,
ಗೊಂದಲದಲ್ಲಿ ಶ್ರೀ ಮಂಜುನಾಥ ಸ್ವಾಮಿ…..

ಒಂದು ಕಡೆ ಸೌಜನ್ಯ ಕುಟುಂಬದವರು ಮುಂಜುನಾಥನಲ್ಲಿ ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ,
ಮತ್ತೊಂದು ಕಡೆ ಸಾರ್ವಜನಿಕರಿಂದ ಅನುಮಾನಕ್ಕೆ ಒಳಗಾಗಿರುವ ಹೆಗ್ಗಡೆಯವರ ಕುಟುಂಬದ ಮೂವರು ಯುವಕರು ತಾವು ನಿರಪರಾಧಿಗಳು ದಯವಿಟ್ಟು ನಮ್ಮನ್ನು ಆರೋಪದಿಂದ ಮುಕ್ತ ಮಾಡು ಎಂದು ಅದೇ ಮಂಜುನಾಥೇಶ್ವರನಲ್ಲಿ ಕೇಳಿಕೊಳ್ಳುತ್ತಿದ್ದಾರೆ,
ಇನ್ನೊಂದು ಕಡೆ ಸ್ವತಃ ಶ್ರೀ ವೀರೇಂದ್ರ ಹೆಗಡೆಯವರೇ ಧರ್ಮಸ್ಥಳ ಕ್ಷೇತ್ರದ ಮೇಲಿನ ಆರೋಪಗಳಿಂದ ವಿಚಲಿತರಾಗಿದ್ದಾರೆ,
ಕೆಲವು ಸಾಮಾಜಿಕ ಹೋರಾಟಗಾರರು ಮಂಜುನಾಥ ಸ್ವಾಮಿ, ಸರ್ಕಾರ ಮತ್ತು ನ್ಯಾಯಾಲಯ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಲು ಆಗ್ರಹಿಸುತ್ತಿದ್ದಾರೆ…..

ಮಂಜುನಾಥ ಸ್ವಾಮಿಗೆ ಒತ್ತಡ ಹೆಚ್ಚಾಗುತ್ತಿದೆ. ಸೌಜನ್ಯ ಎಂಬ ಮುಗ್ದ ಹೆಣ್ಣು ಮಗಳು ಅತ್ಯಂತ ಭೀಕರವಾಗಿ ಅತ್ಯಾಚಾರಕ್ಕೆ ಒಳಗಾಗಿ ಬಲಿಯಾಗಿರುವುದು ಸ್ವತಃ ಮಂಜುನಾಥ ಸ್ವಾಮಿಯ ವ್ಯಾಪ್ತಿಯಲ್ಲಿ ಬರುವ ಸನ್ನಿಧಿಯಲ್ಲಿ. ಬಹುತೇಕ ಎಲ್ಲರೂ ಮಂಜುನಾಥ ಸ್ವಾಮಿ – ಸರ್ಕಾರ ಮತ್ತು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತಿದ್ದರೆ ನಮ್ಮಂತ ಕೆಲವರು ಇದೇ ವ್ಯವಸ್ಥೆಯನ್ನು ಕೇಳುತ್ತಿರುವುದು ನ್ಯಾಯವಲ್ಲ, ಬದಲಾಗಿ ಸೌಜನ್ಯ ಮತ್ತು ಅನೇಕ ಕಾಣೆಯಾದ ಮತ್ತು ಸತ್ತಿರುವ ಶವಗಳಿಗೆ ಅನ್ಯಾಯ ಮಾಡಿದ್ದು ಏಕೆ ಮೊದಲು ಅದಕ್ಕೆ ಉತ್ತರ ಕೊಡಿ ಎಂದು……

ಮುಖ್ಯವಾಗಿ ಇದಕ್ಕೆ ಉತ್ತರಿಸಬೇಕಾಗಿರುವುದು ಮಂಜುನಾಥ ಸ್ವಾಮಿ. ಇಲ್ಲಿ ದಯಾನಂದ ಸರಸ್ವತಿ ಅವರು ಬಾಲ್ಯದಲ್ಲಿ ತನ್ನ ತಂದೆಯನ್ನು ಕೇಳಿದ ಪ್ರಶ್ನೆ ನೆನಪಾಗುತ್ತಿದೆ. ದೇವರ ವಿಗ್ರಹದ ಮೇಲೆ ಇಲಿಗಳು ಓಡಾಡುತ್ತಿರುವುದನ್ನು ಕಂಡು ” ಅಪ್ಪಾ ದೇವರಿಗೆ ತನ್ನ ಮೇಲಿರುವ ಇಲಿಗಳನ್ನೇ ಓಡಿಸಲು ಸಾಧ್ಯವಾಗುತ್ತಿಲ್ಲ. ಇನ್ನು ನಮ್ಮನ್ನೆಲ್ಲಾ ಹೇಗೆ ಕಾಪಾಡಲು ಸಾಧ್ಯ. “….

ಶ್ರೀಕೃಷ್ಣ ದ್ರೌಪದಿಯ ವಸ್ತ್ರಾಪಹರಣವನ್ನು ತಡೆದಂತೆ ಮಂಜುನಾಥ ಸೌಜನ್ಯ ಅತ್ಯಾಚಾರವನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಲಾಗದಷ್ಟು ಮಾನಸಿಕ ಗುಲಾಮಿತನ ಬಹಳಷ್ಟು ಜನರಲ್ಲಿದೆ. ಹಾಗೆಯೇ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗೆ ನಿಜವಾದ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗದಿರುವ ಅಸಹಾಯಕತೆ ಬಂದಿದೆಯೇ ಅಥವಾ ವೀರೇಂದ್ರ ಹೆಗ್ಗಡೆಯವರ ಪ್ರಬಲ ಲಾಭಿಗೆ ಮಣಿದರೇ ಅಥವಾ ನಿಜವಾದ ಅಪರಾಧಿಯನ್ನು ಹಿಡಿದರೂ ಸಾಕ್ಷ್ಯದ ಕೊರತೆ ಅಥವಾ ವಕೀಲರ ಚಾಕಚಕ್ಯತೆ ಅಥವಾ ಕಾನೂನಿನ ಲೋಪದೋಷಗಳು ಅಥವಾ ನ್ಯಾಯಾಲಯದ ಕಾರ್ಯಕಲಾಪಗಳ ನಿರ್ಲಕ್ಷತೆ ಕಾರಣವೇ ಅಥವಾ ತನಿಖಾ ಸಂಸ್ಥೆ ಮತ್ತು ನ್ಯಾಯಾಲಯಗಳನ್ನೇ ನಂಬದೇ ಅನುಮಾನಿಸುವ ಮನೋಭಾವ ಸಾಕಷ್ಟು ಜನರಲ್ಲಿ ಬೆಳೆದಿದೆಯೇ….

ಈ ಘಟನೆಯ ಇತ್ತೀಚಿನ ಬೆಳವಣಿಗೆ ಎಂದರೆ ಹಿಂದಿನ ಮತ್ತಷ್ಟು ಅಪರಾಧ ಪ್ರಕರಣಗಳು ಬಯಲಾಗುತ್ತಿರುವುದು. ಇದನ್ನು ಗಂಭೀರವಾಗಿ ತೆಗೆದುಕೊಂಡು ಜನಾಭಿಪ್ರಾಯ ಮೂಡಿಸಿ ಪ್ರಬಲ ಹೋರಾಟ ಮಾಡುತ್ತಿರುವ ಮಾನವೀಯ ಮನಸ್ಸುಗಳು ಅಭಿನಂದನಾರ್ಹರು. ಜೊತೆಗೆ ಮಂಜುನಾಥ ಸ್ವಾಮಿ, ತನಿಖಾ ಸಂಸ್ಥೆಗಳು, ಸರ್ಕಾರ ಮತ್ತು ನ್ಯಾಯಾಲಯ ಟೀಕೆಗೆ ಅರ್ಹರು…….

ಸದ್ಯಕ್ಕೆ ಮಂಜುನಾಥ ಸ್ವಾಮಿ ಮತ್ತು ಸರ್ಕಾರ ಏನಾದರೂ ಮಾಡುವ ಸಾಧ್ಯತೆ ಕಡಿಮೆ. ಬಹುಶಃ ವೀರೇಂದ್ರ ಹೆಗಡೆಯವರೇ ನ್ಯಾಯಾಲಯಕ್ಕೆ ಒತ್ತಾಯ ಮಾಡಿ ಅಥವಾ ಯಾರಾದರು ವಿಶೇಷ ಪುನರ್ ತನಿಖೆಗೆ ನ್ಯಾಯಾಲಯಕ್ಕೆ ಮನವಿ ಮಾಡುವುದು ಇರುವ ಪರ್ಯಾಯ ಮಾರ್ಗಗಳು. ತೀರಾ ಅನಿರೀಕ್ಷಿತವಾಗಿ ಸರ್ಕಾರವೇ ಮರು ತನಿಖೆಗೆ ಆದೇಶಿಸಬಹುದು ಅಥವಾ ಪ್ರತಿಭಟನೆಗಳು ನಿಧಾನವಾಗಿ ತೀವ್ರತೆ ಕಳೆದುಕೊಳ್ಳಬಹುದು.

ಒಂದು ವೇಳೆ ಯಾವುದೋ ಕಾರಣದಿಂದ ಮರು ತನಿಖೆ ನಡೆದರೆ ನಿಜವಾದ ಅಪರಾಧಿಗಳು ಸಿಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಸಿಕ್ಕರೂ ಅವರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗುವ ಸಾಧ್ಯತೆಯೂ ಕಡಿಮೆ. ಬಂಧನ ಆಗಿ ಸ್ವಲ್ಪ ದಿನ ಜೈಲಿಗೆ ಕಳಿಸಬಹುದಷ್ಟೇ.

ಏಕೆಂದರೆ ಹಿಂದೆಯೇ ತನಿಖೆಯಲ್ಲಿ ಲೋಪದೋಷಗಳು‌ ಆಗಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಷ್ಟು ದೀರ್ಘ ಅವಧಿಯಲ್ಲಿ ಎರಡು ತನಿಖೆ ಆಗಿ ಒಬ್ಬ ಆರೋಪಿಯನ್ನು ಬಂಧಿಸಿ ಆತನೂ ನಿರಪರಾಧಿ ಎಂದು ಬಿಡುಗಡೆಯಾದ ನಂತರವೂ ಮತ್ತೊಬ್ಬರನ್ನು‌ ಆರೋಪಿ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು ತುಂಬಾ ಕಷ್ಟ…..

ಆದರೆ ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಎಷ್ಟೇ ಪ್ರಖ್ಯಾತ ಪ್ರಬಲ ವ್ಯಕ್ತಿಯಾದರು ಅತ್ಯಾಚಾರದಂತ ಪ್ರಕರಣದಲ್ಲಿ ಜನ ಸಾಮಾನ್ಯರು ಸಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶ ನೀಡಿದೆ. ಇದಕ್ಕಾಗಿ ಸೌಜನ್ಯ ಎಂಬ ಮಗು ಅತ್ಯಂತ ಬರ್ಬರವಾಗಿ ಕೊಲೆಯಾಗಿ ಹುತಾತ್ಮಳಾಗಬೇಕಾದ ಪರಿಸ್ಥಿತಿಗೆ ವಿಷಾದವಿದೆ………

ಒಟ್ಟಿನಲ್ಲಿ ದುಷ್ಟ ಮನುಷ್ಯರ ಹೊಡೆತಕ್ಕೆ ‌ದೇವರು, ಸರ್ಕಾರ, ಕಾನೂನು, ನ್ಯಾಯಾಲಯ ಎಲ್ಲರೂ ತಬ್ಬಿಬ್ಬಾಗಿದ್ದಾರೆ. ಈಗಲಾದರು ವಿಶಾಲ ಮನಸ್ಸಿನಿಂದ, ಶುದ್ದ ಹೃದಯದಿಂದ ಯೋಚಿಸುವುದನ್ನು ಪ್ರಾರಂಭಿಸಿ. ಸಂಕುಚಿತ ಮನೋಭಾವದಿಂದ ನಿಮ್ಮ ಬದುಕಿನ ಕ್ವಾಲಿಟಿಯೇ ಕಡಿಮೆಯಾಗುತ್ತದೆ….

ಬದುಕೆಂಬ ಬೃಹನ್ನಾಟಕದ ಬಲಿಪಶುಗಳು ದೇವರೋ, ಆಡಳಿತವೋ, ಮನುಷ್ಯರೋ……..

ಇದೊಂದು ವಿಚಿತ್ರ ಪರಿಸ್ಥಿತಿ. ಇದೀಗ ತಮ್ಮ ರಾಜಕೀಯ ಜೀವನದ ಅಂತಿಮ ಹಂತದಲ್ಲಿರುವ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಈ ವಿಷಯದಲ್ಲಿ ಇನ್ನೊಂದು ತನಿಖೆಗೆ ಅವಕಾಶ ಮಾಡಿಕೊಡಬೇಕಾಗಿದೆ. ಇನ್ನೊಂದೇ ಒಂದು ತನಿಖೆ ಈ ವಿಷಯಕ್ಕೆ ಒಂದು ಮುಕ್ತಾಯ ಮಾಡಬಹುದು….

ಆದರೆ ತನಿಖೆಗೆ ಆಯ್ದುಕೊಳ್ಳುವ ತಂಡ ಮಾತ್ರ ಬಹಳ ದಕ್ಷ, ಅನುಭವ, ಸಾಮರ್ಥ್ಯ ಮತ್ತು ಪ್ರಾಮಾಣಿಕತೆ ಹೊಂದಿರಬೇಕು. ಕರ್ನಾಟಕದ ಯಾರಾದರೂ ಸಿಬಿಐ ನಲ್ಲಿ ಕೆಲಸ ಮಾಡಿರುವ ಅಥವಾ
” ರಾ ” (RAW) ದಲ್ಲಿ ಕೆಲಸ ಮಾಡಿರುವ ಅಥವಾ ಇಲ್ಲಿನ ಸಿಸಿಬಿ/ಸಿಐಡಿ ಯಲ್ಲಿ ಕೆಲಸ ಮಾಡಿರುವ ಅಥವಾ ಮಂಗಳೂರು ವಲಯದಲ್ಲಿ ಕಮಿಷನರ್ ಆಗಿ ದಕ್ಷತೆ ಮೆರೆದಿರುವ ಒಬ್ಬ ಪ್ರಾಮಾಣಿಕ ನಿವೃತ್ತ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿ, ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸಬೇಕು ಮತ್ತು ಯಾವುದೇ ಸಮಯ ನಿಗದಿ ಮಾಡಬಾರದು…..

ಏಕೆಂದರೆ,
ಅಪರಾಧ ಶಾಸ್ತ್ರದಲ್ಲಿ ಪರಿಣಿತರಾದವರು ಸಮಯಕ್ಕೆ ಕಾದು ಅಥವಾ ವೇಷ ಮರೆಸಿಕೊಂಡು ಅಪಾರ ಶ್ರಮದಿಂದ ಸಾಕಷ್ಟು ಸಮಯವನ್ನು ಕಳೆದು, ಹೊಂಚು ಹಾಕಿ ಈ ವಿಷಯವನ್ನು ಪತ್ತೆ ಮಾಡಬೇಕಾಗುತ್ತದೆ. ಈಗಾಗಲೇ ಬಹುತೇಕ ದಾಖಲೆಗಳು ನಾಶವಾಗಿರುವುದು, ಪೋಲಿಸ್ ತನಿಖೆ ಒಂದಷ್ಟು ತಪ್ಪುಗಳನ್ನು ಮಾಡಿರುವುದು ಮತ್ತು ಅಪರಾಧದಲ್ಲಿ ಭಾಗಿಯಾಗಿರುವವರು ಸಾಕಷ್ಟು ಜಾಗೃತಿ ವಹಿಸಿರುವುದರಿಂದ ಬಹುದೊಡ್ಡ ಸವಾಲು ಎದುರಾಗುತ್ತದೆ. ಇದನ್ನೆಲ್ಲ ನಿಭಾಯಿಸಿ ಸತ್ಯ ಹೊರಬರಲು ಸಮಯ ಬೇಕಾಗುತ್ತದೆ…

ಒಂದು ವೇಳೆ ಸತ್ಯ ಯಾರ ಪರವಾಗಿದ್ದರೂ ಕರ್ನಾಟಕದ ಜನ ಅದನ್ನು ಒಪ್ಪಿಕೊಳ್ಳಲೇಬೇಕು. ಒಂದು ವೇಳೆ ನಿಜಕ್ಕೂ ಅಪರಾಧಿಗಳು ಪತ್ತೆಯೇ ಆಗದಿದ್ದರೆ ಅಥವಾ ಈಗ ಎಲ್ಲರೂ ಆರೋಪಿಸುತ್ತಿರುವ ವ್ಯಕ್ತಿಗಳು ಅಪರಾಧಿಗಳು ಆಗದೇ ಇದ್ದರೆ ನಾವು ಅದನ್ನು ಒಪ್ಪಿಕೊಂಡು ಧರ್ಮಸ್ಥಳದ ಧರ್ಮಾಧಿಕಾರಿಗಳ ಬಳಿ ಕ್ಷಮೆ ಕೇಳಬೇಕಾಗುತ್ತದೆ. ಏಕೆಂದರೆ ನಮ್ಮ ಸಂವಿಧಾನದ ಪ್ರಕಾರ ನೂರು ಅಪರಾಧಿಗಳು ತಪ್ಪಿಸಿಕೊಂಡರು ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಈ ವಿಷಯದಲ್ಲಿ ನಮ್ಮೆಲ್ಲ ಭಾವನೆಗಳನ್ನು ನಾವು ನಿಯಂತ್ರಿಸಿಕೊಳ್ಳಬೇಕು…..

ಹಾಗೆಯೇ ಕಳೆದ 25 ವರ್ಷಗಳಲ್ಲಿ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ, ಅತ್ಯಾಚಾರ, ಕಾಣೆಯಾಗುವಿಕೆಯ ಬಗ್ಗೆಯೂ ತನಿಖಾ ತಂಡ ಕಣ್ಣು ಹಾಯಿಸಲಿ. ಆಗ ಒಂದಷ್ಟು ಮಾಹಿತಿ ಹೊರಬರಬಹುದು…

ಏನೇ ಆಗಲಿ ಸತ್ಯ ಆದಷ್ಟು ಬೇಗ ಹೊರಬರಲಿ. ಅದಕ್ಕಾಗಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾನ್ಯ ಮುಖ್ಯಮಂತ್ರಿಗಳು ಕಾನೂನಿನ ಅಧ್ಯಯನ ಮಾಡಿ, ಸಾಧ್ಯತೆಯನ್ನು ಪರಿಶೀಲಿಸಿ, ಒಂದು ತನಿಖಾ ತಂಡ ರಚಿಸಲಿ ಎಂದು ಸಾರ್ವಜನಿಕವಾಗಿ ಒತ್ತಾಯಿಸುವುದೊಂದೇ ಈಗ ಉಳಿದಿರುವ ಮಾರ್ಗ. ಇಲ್ಲದಿದ್ದರೆ ಈ ಗಾಳಿ ಸುದ್ದಿಯ ಆರೋಪ ಪ್ರತ್ಯಾರೋಪಗಳು ಜನರಲ್ಲಿ ನಿರಂತರವಾಗಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಇದರಿಂದ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಯ ಹೆಸರಿಗೂ ಕಳಂಕ ನಿರಂತರವಾಗಿರುತ್ತದೆ….

ಅದರಿಂದ ಮುಕ್ತವಾಗಲು ಅವರಿಗೂ ಒಂದು ಅವಕಾಶ ಸಿಗಲಿ ಅಥವಾ ತಪ್ಪೆಸಗಿದ್ದರೆ ಅವರಿಗೆ ಶಿಕ್ಷೆಯಾಗಲಿ. ಇದನ್ನು ನಿರ್ಧರಿಸಬೇಕಾಗಿದ್ದು ಈ ಕ್ಷಣದಲ್ಲಿ ಗಾಳಿ ಮಾತುಗಳಲ್ಲ. ನಮ್ಮ ವಕೀಲಿಕೆಯೂ ಅಲ್ಲ ಅಥವಾ ಯೂಟ್ಯೂಬ್ ಗಳ ಮಾತಿನ ತರ್ಕಗಳಲ್ಲ…..

ಇದರ ಜೊತೆಗೆ ಸಾಮಾಜಿಕ ಜಾಲತಾಣಗಳು ಈ ಸಮಾಜದ ಮುಖ್ಯವಾಹಿನಿಯ ಮಾಧ್ಯಮಗಳನ್ನು, ಅವರ ಮುಖವಾಡಗಳನ್ನು ಕಳಚಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಮಾಧ್ಯಮಗಳಾಗಿ ಪ್ರಭಾವ ಬೀರುತ್ತಿರುವುದು ಒಂದು ಕ್ರಾಂತಿಕಾರಕ ಬೆಳವಣಿಗೆಯಾಗಿದೆ. ಅದನ್ನು ಈ ಸಮಾಜ ಮತ್ತು ಸರ್ಕಾರಗಳು ಗುರುತಿಸಬೇಕಾಗಿದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9663750451..Watsapp)
9844013068……