ಹಳ್ಳಿಗಳಲ್ಲಿ ಕೃಷಿಕರಿಂದ ಅತ್ತೆ ಮಳೆ ಹೊಂಗಲು ಆಚರಣೆ
ವಿಜಯ ದರ್ಪಣ ನ್ಯೂಸ್…..
ಹಳ್ಳಿಗಳಲ್ಲಿ ಕೃಷಿಕರಿಂದ ಅತ್ತೆ ಮಳೆ ಹೊಂಗಲು ಆಚರಣೆ

ಶಿಡ್ಲಘಟ್ಟ ಗ್ರಾಮಾಂತರ: ಮಳೆಗಾಲದಲ್ಲಿ, ಭರಣಿ ಮಳೆಯಾದರೆ, ಧರಣಿ ಉತ್ತಮವಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಜನತೆಯಲ್ಲಿದೆ. ಅದೇ ರೀತಿ, ರೈತರು, ಹೊಲಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳ ಮೇಲಿನ ಕೀಡು ಹೋಗಲಾಡಿಸಬೇಕು,ಎನ್ನುವ ಕಾರಣಕ್ಕೆ ಅತ್ತೆಮಳೆ ಹೊಂಗಲು ಎಂಬ ಕೃಷಿಗೆ ಸಂಬಂಧಿಸಿದ ಆಚರಣೆ ಮಾಡಲಾಗುತ್ತಿದೆ.
ಯಾವುದೇ ನದಿ ನಾಲೆಗಳಿಲ್ಲದೆ, ಅಂತರ್ಜಲವನ್ನೆ ನಂಬಿಕೊಂಡು ಬದುಕುತ್ತಿರುವ ಬಯಲು ಸೀಮೆಯಲ್ಲಿ ಈಗ ಅತ್ತಮಳೆಯ ಹೊಂಗಲು ಸಂಭ್ರಮ ಮನೆ ಮಾಡಿದೆ. ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ, ಅತ್ತಮಳೆ ಹೊಂಗಲು ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ವಿಶೇಷವಾಗಿ ಆಚರಿಸಿದರು.
ಮಳೆ, ಬೆಳೆ ಚೆನ್ನಾಗಿ ಆಗಿ ಜನ ಜಾನುವಾರುಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಾರದಿರಲೆಂದು ಹಲವಾರು ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ಹಿರಿಯರು, ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಲವು ಸಂಪ್ರದಾಯಗಳಲ್ಲಿ ಅತ್ತೆಮಳೆ ಹೊಂಗಲು ಪೂಜೆಯೂ ಒಂದಾಗಿದೆ. ಹದಿನೈದು ದಿನಕ್ಕೊಮ್ಮೆ ಮಳೆಯ ಹೆಸರು ಬದಲಾಗುತ್ತದೆ.
ರೇವತಿಯಿಂದ ಆರಂಭವಾಗಿ ಜೇಷ್ಟ ಮಳೆಗೆ ಕೊನೆಯಾಗುತ್ತವೆ. ಆದರೆ, ಅತ್ತಮಳೆಯು ಕೃಷಿ ಸಂಬಂಧಿತ ಮಳೆಯಾಗಿದ್ದು, ರೈತರಲ್ಲಿ ಉತ್ಸಾಹ ಮೂಡಿಸುವಂತಹ ಮಳೆಯೂ ಹೌದು. ಅತ್ತಮಳೆ ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಮಂಗಳವಾರ ಇಲ್ಲವೇ ಶುಕ್ರವಾರಗಳಂದು ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ಇಲ್ಲಿನ ವಾಡಿಕೆಯಾಗಿದೆ.
ಅತ್ತೆಮಳೆ ಹೊಂಗಲು ಹಿನ್ನೆಲೆ
ಕರೇಬಂಟನ ಕಥೆ ಇದಕ್ಕೆ ಮೂಲ. ಕರೇ ಬಂಟನ ಹೆಂಡತಿ ಒಬ್ಬ ರಾಕ್ಷಸಿ ಎಂಬುದು ಆತನಿಗೆ ತಡವಾಗಿ ತಿಳಿಯುತ್ತದೆ.ಅವಳಿಂದ ತಪ್ಪಿಸಿಕೊಂಡು ಅವನು ಊರೂರು ಅಲೆದರೂ ಬಿಡದೆ ಹಿಂದೆ ಬೀಳುತ್ತಾಳೆ. ಇವರ ವಿಷಯ ತಿಳಿಯದ ಪಂಚಾಯತಿದಾರರು, ಗಂಡಹೆಂಡತಿ ಅಂದ ಮೇಲೆ ಜಗಳ ಸಾಮಾನ್ಯ. ಈ ದಿನ ರಾತ್ರಿ ಚಾವಡಿಯಲ್ಲಿರಿ, ಬೆಳಿಗ್ಗೆ ತೀರ್ಮಾಣ ಹೇಳೋಣವೆಂದು ಹೇಳುತ್ತಾರೆ. ರಾತ್ರಿ ಅವಳು ಕರೇಬಂಟವನ್ನು ತಿಂದುಹಾಕಿ ಗವಾಕ್ಷಿ ಮೂಲಕ ಬೆಂಕಿಕೊಳ್ಳಿಯ ರೂಪದಲ್ಲಿ ಆಕಾಶಕ್ಕೆ ಹೋಗಿಬಿಡುತ್ತಾಳೆ. ಬೆಳಿಗ್ಗೆ ಊರಿನ ಹಿರಿಯರಿಗೆ ನಡೆದ ಕಥೆ ಅರ್ಥವಾಗುತ್ತದೆ. ಕರೇಬಂಟನ ಮಾತು ಕೇಳದೆ ಅವನ ಸಾವಿಗೆ ಕಾರಣರಾಗಿದ್ದಕ್ಕೆ ಅವರೆಲ್ಲಾ ಪಶ್ವತ್ತಾಪ ಪಡುತ್ತಾರೆ.
ಅಂದಿನಿಂದ ಅವನ ನೆನಪಲ್ಲಿ ಅತ್ತಮಳೆಯ ಒಂದು ಮಂಗಳವಾರ ಅಥವಾ ಶುಕ್ರವಾರ ಹೊಂಗಲು ಆಚರಣೆ ಮಾಡಿಕೊಂಡು ಬಂದಿದ್ದಾರೆ ಎಂದು ಹಿರಿಯರು ಹೇಳುತ್ತಾರೆ.
ಕುಂಬಾರರ ಆವೆಯಿಂದ ಬೂದಿ ತಂದು ಅದಕ್ಕೆ ಮರಿಹೊಡೆದು(ಕುರಿ) ರಕ್ತ ಬೆರೆಸಿ ಸರಹದ್ದಿನವರೆಗೂ ಜಮೀನಿನ ಎಲ್ಲಾ ಬೆಳೆಗಳ ಮೇಲೂ ಚರಹ ಚೆಲ್ಲಿಕೊಂಡು ಬರುತ್ತಾರೆ. ಲಕ್ಕಿರಿ ಕಡ್ಡಿ, ಬೂದಿ ತಗೆದುಕೊಂಡು ಹೋಗಿ, ತಮ್ಮ ತಮ್ಮ ಜಮೀನುಗಳ ಹತ್ತಿರ ಕರೇಬಂಟ, ಅವನ ಹೆಂಡತಿ ಮತ್ತು ಅವನ ಮಗುವಿನ ಚಿತ್ರವನ್ನು ಬರೆದು ಬರುತ್ತಾರೆ. ಈ ಬೂದಿ ಲಕ್ಕಿರಿಕಡ್ಡಿ ತರುವ ಹಂಚುವ ಕೆಲಸ ಚರಗ ಚೆಲ್ಲುವ ಕೆಲಸ ಊರ ತಳವಾರನ ಜವಾಬ್ದಾರಿಯಾಗಿರುತ್ತದೆ. ಆತನಿಗೆ ತಲಾ ಇಂತಿಷ್ಟು ಓಲಿ (ಕಾಣಿಕೆ) ಕೊಡಬೇಕು. ಮತ್ತು ಬೆಳೆ ಆದಾಗ ಮ್ಯಾರೆ (ಧಾನ್ಯ) ಕೊಡಬೇಕು. ಗ್ರಾಮದಲ್ಲಿನ ಎಲ್ಲಾ ಮನೆಗಳಿಂದ ಓಲಿ ವಸೂಲಿ ಮಾಡಲಾಗುತ್ತದೆ. ಈ ಹಣದಲ್ಲೆ ಬಲಿಗಾಗಿ ಕುರಿಯನ್ನು ತರಬೇಕು.
ಊರ ಬಾಗಿಲಿನ ಮುಂದೆ, ಬೂದಿಯಲ್ಲಿ ಅತ್ತೆಮ್ಮನ ಚಿತ್ರ ಬಿಡಿಸಿ, ಪೂಜೆ ಮಾಡಿ, ಕುರಿ ಬಲಿ ನೀಡಿದ ನಂತರ ಕತ್ತರಿಸಿದ ಹಸಿರುರಾಗಿ ಗರಿಗಳು, ಅವರೆಸೊಪ್ಪು, ಜೋಳದ ರೆಕ್ಕೆಗಳನ್ನು ಕುರಿಯ ರಕ್ತದಲ್ಲಿ ಬೆರೆಸಿ ಆ ಹಲ್ಲುನ್ನು ಊರಿನ ಸುತ್ತಲೂ ಗಸ್ತು ಹಾಕಲಾಗುತ್ತದೆ ಎಂದು ಹಿರಿಯರು ಹೇಳಿದರು.
ಪೂಜೆಯ ನಂತರ, ಬೂದಿಯನ್ನು ಗ್ರಾಮದ ಪ್ರತಿಯೊಬ್ಬರು ತೆಗೆದುಕೊಂಡು ಹೋಗಿ ತಮ್ಮ ತಮ್ಮ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬಂದರು.
ಗ್ರಾಮದ ಮುಖಂಡರಾದ ಬಿ.ಸಿ.ವೆಂಕಟೇಶಪ್ಪ, ಕರಗಪ್ಪ, ನಾಗಪ್ಪ, ವೆಂಕಟರಾಯಪ್ಪ, ವೆಂಕಟಪತಿ, ಯುವ ಮುಖಂಡರಾದ ಜಿ.ಎಂ.ಶಿವಾನಂದ, ಸುರೇಶ್, ರಾಜೇಶ್, ವೆಂಕಟೇಶ್, ಜಿ.ಎಂ.ಮುನಿರಾಜು, ಶಿವಾನಂದ, ಸುಧಾಕರ್, ಸುಭ್ರಮಣಿ, ಮುಂತಾದವರು ಹಾಜರಿದ್ದರು.
