ಪವನ್ ಜೋಷಿ ಅವರ ಸಾವಿಗೆ ಪುರಸಭಾ ಸದಸ್ಯ ಎ ಆರ್ ಹನೀಪುಲ್ಲಾ ಕಾರಣ : ಮೃತನ ಪತ್ನಿ ಅನನ್ಯ ಆರೋಪ
ವಿಜಯ ದರ್ಪಣ ನ್ಯೂಸ್……
ಪವನ್ ಜೋಷಿ ಅವರ ಸಾವಿಗೆ ಪುರಸಭಾ ಸದಸ್ಯ ಎ ಆರ್ ಹನೀಪುಲ್ಲಾ ಕಾರಣ : ಮೃತನ ಪತ್ನಿ ಅನನ್ಯ ಆರೋಪ
ವಿಜಯಪುರ: ಪುರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಪವನ್ ಜೋಷಿ (34) ಅವರದ್ದು ಸಹಜ ಸಾವಲ್ಲ. ಪುರಸಭೆಯಲ್ಲಿ ನಕಲಿ ಖಾತೆಗಳು ಮಾಡಿಸುವುದಕ್ಕಾಗಿ, ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ, ಎಂಬುವವರು ಒತ್ತಡ ಹೇರಿರುವುದರಿಂದ ಅವರ ಸಾವಾಗಿದೆ. ನಮಗೆ ನ್ಯಾಯ ಬೇಕು ಎಂದು ಮೃತನ ಪತ್ನಿ ಅನನ್ಯ ಅವರು, ಪುರಸಭೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ಭಾನುವಾರ ತೀವ್ರ ರಕ್ತದೊತ್ತಡದಿಂದ ಅಸ್ವಸ್ಥರಾಗಿದ್ದ ಪವನ್ ಜ್ಯೋಷಿ ಅವರನ್ನು ಸುವೀಕ್ಷಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಕುಟುಂಬಸ್ಥರು, ಪವನ್ ಜ್ಯೋಷಿ ಅವರ ಅಂಗಾಂಗಗಳನ್ನು ದಾನ ಮಾಡಿದ್ದು, ಬುಧವಾರ ಪುರಸಭೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ, ಮೃತ ಪವನ್ ಜ್ಯೋಷಿ ಅವರ ಪತ್ನಿ ಅನನ್ಯ ಅವರು, ಮಾತನಾಡಿ, ನನ್ನ ಗಂಡನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಅಕ್ರಮವಾಗಿ ಖಾತೆಗಳು ಮಾಡದಿದ್ದರೆ, ನಿನ್ನ ಪತ್ನಿ, ಮಗುವಿಗೂ ಗಂಡಾಂತರವಿದೆ. ನಿನಗೂ ಗಂಡಾಂತರವಿದೆ ಎಂದು ಬೆದರಿಕೆ ಹಾಕಿದ್ದರಿಂದ ನನ್ನನ್ನು, ನನ್ನ ಮಗನನ್ನು ಪ್ರತ್ಯೇಕವಾಗಿಟ್ಟು, ಪೋಷಣೆ ಮಾಡುತ್ತಿದ್ದರು.
ಇತ್ತಿಚೆಗೆ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ನಕಲು ಮಾಡಿ, ಖಾತೆ ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದಾರೆ.ಈ ಅಪರಾಧವನ್ನು ನನಗೆ ಸುತ್ತುತ್ತಿದ್ದಾರೆ. ನನಗೆ ತಡೆಯಲು ಸಾಧ್ಯವಾಗುತ್ತಿಲ್ಲ. ಯಾವ ಸಮಯದಲ್ಲಿ ನಾನು ಏನಾಗುತ್ತೇನೋ ಎಂದು ನನ್ನ ಬಳಿ ಹೇಳಿದ್ದರು. ಈಗ ಇದೇ ನಿಜವಾಗಿದೆ.
ಪುರಸಭೆ ಸದಸ್ಯ ಹನೀಪುಲ್ಲಾ ಅವರೊಂದಿಗೆ ಜೆ.ಎನ್.ಶ್ರೀನಿವಾಸ್ ಹಾಗೂ ಮುನಿರಾಜು ಎಂಬುವವರು ತುಂಬಾ ಕಿರುಕುಳ ಕೊಟ್ಟಿದ್ದಾರೆ. ನನ್ನ ಗಂಡನ ಮೊಬೈಲ್ ನಲ್ಲಿ ಎಲ್ಲಾ ರೆಕಾರ್ಡಿಂಗ್ ಇದೆ. ಅವರ ಮೊಬೈಲ್ ತನಿಖೆಗೆ ಒಳಪಡಿಸಿದರೆ ಎಲ್ಲಾ ಸತ್ಯ ಹೊರಬರುತ್ತದೆ. ಈ ಮೂವರ ಮೇಲೆ ಎಫ್.ಐ.ಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪಟ್ಟಣದ ನಾಗರಿಕರು, ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್, ಸೇರಿದಂತೆ ಕೆಲ ಸಂಘಟನೆಗಳ ಮುಖಂಡರೂ ಸಹಾ ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಇದೇ ಮೊದಲಲ್ಲ. ಕಿರುಕುಳದಿಂದ ಸಾಯುತ್ತಿರುವುದು ಇವರು ಮೂರನೇಯವರು, ಈ ಹಿಂದೆ ಇಬ್ಬರು ಸತ್ತಿದ್ದಾರೆ. ಇತ್ತಿಚೆಗೆ ಪುರಸಭೆಯಲ್ಲಿ ಮಾಡಿಸಿರುವ ಖಾತೆಗಳಲ್ಲಿ ತುಂಬಾ ನಕಲಿ ಖಾತೆಗಳಿವೆ. ಅವುಗಳ ಬಗ್ಗೆ ತನಿಖೆಯಾಗಲಿ. ಕರಾರು ಪತ್ರಗಳನ್ನು ಕ್ರಯ ಪತ್ರವೆಂದು ತಿದ್ದುಪಡಿ ಮಾಡಿ, ನಕಲಿ ಖಾತೆಗಳು ಮಾಡಿಸಿ, ಲಕ್ಷಾಂತರ ರೂಪಾಯಿಗಳು ಹಣ ಲೂಟಿ ಮಾಡಿದ್ದಾರೆ. ಕೂಡಲೇ ಅವರ ಸದಸ್ಯತ್ವ ರದ್ದುಗೊಳಿಸಬೇಕು. ಅವರನ್ನು ಗಡಿಪಾರು ಮಾಡಬೇಕು ಎಂದು ಆರೋಪ ಮಾಡಿದರು.
ಚಪ್ಪಲಿಯಲ್ಲಿ ಹೊಡೆದರು
ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಅವರ ಭಾವಚಿತ್ರವನ್ನು ಮಾಡಿಸಿಕೊಂಡು ಬಂದು, ಸಾರ್ವಜನಿಕವಾಗಿ ಚಪ್ಪಲಿಗಳಲ್ಲಿ ಹೊಡೆದು, ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಉಪಾಧ್ಯಕ್ಷೆ ತಾಜುನ್ನಿಸಾಮಹಬೂಬ್ ಪಾಷ, ಮುಖ್ಯಾಧಿಕಾರಿ ಸತ್ಯನಾರಾಯಣ, ಸದಸ್ಯರಾದ ಬೈರೇಗೌಡ, ಸಿ.ನಾರಾಯಣಸ್ವಾಮಿ,ರವಿ,ಶಿಲ್ಪಾಅಜಿತ್, ಕವಿತಾಮುನಿಆಂಜಿನಪ್ಪ, ವಿ.ನಂದಕುಮಾರ್, ಸೈಯದ್ ಎಕ್ಭಾಲ್, ಎಂ.ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಅಂತಿಮ ಗೌರವ ಸಲ್ಲಿಸಿದರು.
ಪವನ್ ಜ್ಯೋಷಿ ಅವರ, ಸಾವಿಗೆ ಕಾರಣರಾಗಿರುವ ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ, ಪುರಸಭೆಯ ಮುಂದೆ ಶವವಿಟ್ಟು ಪ್ರತಿಭಟಿಸುತ್ತಿದ್ದವರನ್ನು ಚದುರಿಸಿದ ಪೊಲೀಸ್ ಇನ್ ಸ್ಪೆಕ್ಟರ್ ಪ್ರಶಾಂತ್ ನಾಯಕ್ ಅವರು, ಶವವನ್ನು ತೆರವುಗೊಳಿಸಿದರು.