ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣ ಭಕ್ತಿಯೇ – ಮತಿ ಭ್ರಮಣೆಯೇ – ಅಜ್ಞಾನವೇ – ದುರಾಸೆಯೇ……
ವಿಜಯ ದರ್ಪಣ ನ್ಯೂಸ್…
ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣ ಭಕ್ತಿಯೇ – ಮತಿ ಭ್ರಮಣೆಯೇ – ಅಜ್ಞಾನವೇ – ದುರಾಸೆಯೇ……
ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಹುದೊಡ್ಡ ಜನಜಂಗುಳಿ ಸೇರುತ್ತಿದೆ. ಇಡೀ ಹಾಸನ ನಗರದಲ್ಲಿ ಟ್ರಾಫಿಕ್ ಜಾಮ್ ಮತ್ತು ದೇವಾಲಯದ ಸುತ್ತಮುತ್ತ ಸ್ವಲ್ಪ ನೂಕುನುಗ್ಗಲು, ದೊಡ್ಡ ಸರತಿಯ ಸಾಲುಗಳು ಕಂಡುಬರುತ್ತಿದೆ. ಎಂದೂ ಇಲ್ಲದಷ್ಟು ಭಕ್ತಿಯ ರಸ ಜನರಲ್ಲಿ ಉಕ್ಕಿ ಹರಿಯುತ್ತಿದೆ. ಈ ವಾರ ಅದು ತಿರುಪತಿಯ ಭಕ್ತರ ಸಂಖ್ಯೆಯನ್ನು ಮೀರಿದೆ ಎನ್ನುವ ಸುದ್ದಿಯು ಸಹ ಕೇಳಿ ಬರುತ್ತಿದೆ……
ಭಾರತೀಯರ ಮೋಕ್ಷದ ಹಾದಿಯ ನಂಬಿಕೆಗಳಲ್ಲಿ ಜ್ಞಾನ, ಭಕ್ತಿ, ಕರ್ಮ, ಯೋಗ ( ರಾಜ ) ಮಾರ್ಗಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಜನರನ್ನು ಆಕರ್ಷಿಸಿರುವುದು ಭಕ್ತಿ ಮಾರ್ಗ ಮತ್ತು ಅತ್ಯಂತ ಭಾವನಾತ್ಮಕ ಸೆಳೆತವನ್ನು ಹೊಂದಿರುವುದು ಸಹ ಭಕ್ತಿ ಮಾರ್ಗವೇ. ಅದಕ್ಕೆ ಮೂಲ ಕಾರಣ ಅತ್ಯಂತ ಭಕ್ತಿ ಎಂಬ ಭಾವ ಅತ್ಯಂತ ಆಂತರಿಕವಾದದ್ದು, ಸುಲಭವಾದದ್ದು, ಸರಳವಾದದ್ದು, ಶ್ರಮವಿಲ್ಲದ್ದು, ಚಿಂತನೆಯ ಅಗತ್ಯವಿಲ್ಲದ್ದು, ಓದು ಅಧ್ಯಯನಗಳ ಅವಶ್ಯಕತೆ ಇಲ್ಲದ್ದು, ಹೆಚ್ಚು ಪ್ರದರ್ಶನ ಕಾಣುವಂತದ್ದು ಮತ್ತು ದೈವಿಕ ಶಕ್ತಿಯ ಮೇಲಿನ ನಂಬಿಕೆ ಹೆಚ್ಚು ಆಕರ್ಷಕವಾದದ್ದು ಎಂದು ಸಾಮಾನ್ಯ ಜನರು ಭಾವಿಸಿರುವುದು. ಆ ಕಾರಣದಿಂದಲೇ ಭಕ್ತಿ ಮಾರ್ಗ ದೇಶದಲ್ಲಿ ವ್ಯಾಪಕವಾಗಿ ಹರಡಿದೆ.
ಜ್ಞಾನ ಮಾರ್ಗವನ್ನು ಅನುಸರಿಸಲು ಸಾಕಷ್ಟು ಅಧ್ಯಯನ, ಚಿಂತನೆ, ವಿಶಾಲ ಮನೋಭಾವ, ಪ್ರಬುದ್ಧತೆ, ದೂರದೃಷ್ಟಿ, ಏಕಾಗ್ರತೆ, ಸಮಗ್ರತೆ ಬೇಕಾಗುತ್ತದೆ. ಕರ್ಮ ಮಾರ್ಗ ಅನುಸರಿಸಲು ಶ್ರಮ ಸಂಸ್ಕೃತಿಯ ಎಲ್ಲಾ ಲಕ್ಷಣಗಳನ್ನು ಅನುಸರಿಸಬೇಕು. ಕಾಯಕ ನಿಷ್ಠೆ ಪ್ರದರ್ಶಿಸಬೇಕು, ಬೆವರು ಹರಿಸಬೇಕು. ದೈಹಿಕ ಶ್ರಮ ಅತ್ಯಗತ್ಯ. ಹಾಗೆಯೇ ಯೋಗ ಮಾರ್ಗ ಅಥವಾ ರಾಜಮಾರ್ಗದಲ್ಲಿ ದೀರ್ಘಕಾಲ ಏಕಾಗ್ರತೆಯಿಂದ ಸಾಕಷ್ಟು ಸಾಧನೆ ಮಾಡಬೇಕು. ಅದೂ ಸಹ ಹೆಚ್ಚು ಶ್ರಮದಾಯಕ. ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ಆದರೆ ಭಕ್ತಿ ಮಾರ್ಗದಲ್ಲಿ ನಂಬಿಕೆಯೊಂದೇ ಸಾಕು.
ಆದರೆ ವಾಸ್ತವದಲ್ಲಿ ಭಕ್ತಿ ಮಾರ್ಗವೇ ಅತ್ಯಂತ ಕಠಿಣ. ಭಕ್ತಿ ಎಂಬುದು ಒಂದು ಮಾನಸಿಕ ಶ್ರದ್ಧೆ. ಆಂತರಿಕ ಶುದ್ಧತೆ, ಆತ್ಮಸಾಕ್ಷಿಯ ನಡವಳಿಕೆ, ದೈವಿಕ ಪ್ರಜ್ಞೆಯ ಮೇಲಿನ ಅಪಾರ ನಂಬಿಕೆ, ಒಳ್ಳೆಯತನದ ವರ್ತನೆ, ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಯ ಅನುಸರಣೆ. ಎಲ್ಲಕ್ಕಿಂತ ಹೆಚ್ಚಾಗಿ ಸಮರ್ಪಣಾ ಭಾವ ಅತ್ಯಂತ ಮುಖ್ಯವಾದದ್ದು. ಇದನ್ನೂ ಮೀರಿ ವರ್ಣನೆಗೂ ನಿಲುಕದ ಕೆಲವು ಭಾವಗಳನ್ನು ಭಕ್ತಿ ಒಳಗೊಂಡಿದೆ. ಅದರೊಳಗಡೆ ಜ್ಞಾನವೂ, ಕರ್ಮವೂ, ಯೋಗವು ಮಿಳಿತಗೊಂಡಾಗ ಅದರ ಶಕ್ತಿ ದುಪ್ಪಟ್ಟಾಗುತ್ತದೆ. ಅದನ್ನು ಜನರು ಹೆಚ್ಚಾಗಿ ಗ್ರಹಿಸದೆ ಕೇವಲ ಮೇಲ್ನೋಟದ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ.
ಈಗ ಅದೇ ಭಕ್ತಿ ಅಜ್ಞಾನವಾಗಿ, ಮೌಢ್ಯವಾಗಿ, ಸಂಪ್ರದಾಯವಾಗಿ, ಮೂಡನಂಬಿಕೆಯಾಗಿ, ಒಣ ಆಚರಣೆಯಾಗಿ, ಪ್ರದರ್ಶನದ ಗೊಂಬೆಯಾಗಿ, ಸ್ವಾರ್ಥ, ದುರಾಸೆಯ ಮಾರ್ಗವಾಗಿ ಬದಲಾಗಿ ಅದೊಂದು ಮೇಲ್ನೋಟದ ತೋರಿಕೆಯ ಭಾವವಾಗಿದೆ. ಬಹುಶಃ ಹಾಸನಾಂಬೆಯ ಈ ನೂಕು ನುಗ್ಗಲಿನ ದರ್ಶನದ ಹಿಂದೆ ಇರುವ ಕಾರಣ ಬಹುತೇಕ ಇದೇ ಇರಬೇಕು.
ಹಾಸನ ಜಿಲ್ಲೆಯ ಕಾಡಾನೆ ತುಳಿತದ ಸಾವುಗಳಾಗಲಿ, ಇತ್ತೀಚೆಗೆ ನಡೆದ ಗಣೇಶ ಮೆರವಣಿಗೆಯ ಮೇಲಿನ ಟ್ರಕ್ ಹರಿದ ಸಾವುಗಳಾಗಲಿ, ಹೃದಯಘಾತದಿಂದ ಒಂದಷ್ಟು ದಿನ ಸೃಷ್ಟಿಸಿದ ಅಲ್ಲೋಲಕಲ್ಲೋಲ ಸಾವುಗಳಾಗಲಿ, ಕೆಲವು ಹಳ್ಳಿಗಳ ಅಸ್ಪೃಶ್ಯತೆಯ ಆಚರಣೆಗಳಾಗಲಿ, ಸರ್ಕಾರಿ ಕಚೇರಿಗಳ ಭ್ರಷ್ಟಾಚಾರವಾಗಲಿ, ಕಾಡಿನ ನಾಶದ ಘೋರ ದುರಂತಗಳಾಗಲಿ ಅದಕ್ಕೆಲ್ಲ ಜನರು ಹೊಣೆ ಮಾಡುವುದು, ಟೀಕೆ ಮಾಡುವುದು ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯನ್ನೇ ಹೊರತು ಹಾಸನಾಂಬೆಯನ್ನಲ್ಲ. ಆದರೆ ಪೂಜಿಸುವುದು, ಭಕ್ತಿಯ ಸಮರ್ಪಣೆ ಮಾಡುವುದು ಸರ್ವಶಕ್ತಿ, ಸರ್ವವ್ಯಾಪಿ ಎಂದು ನಂಬಿರುವ ಹಾಸನಾಂಬೆಗೆ. ಈ ಮಾನಸಿಕ ತಾರತಮ್ಯವನ್ನು ಪ್ರಶ್ನಿಸುವುದು ತಪ್ಪಾಗುತ್ತದೆಯೇ.
ಭಕ್ತಿ ಎಂಬುದು ಒಂದು ಶಕ್ತಿ ಎಂದಾದರೆ, ಮೋಕ್ಷದ ಮಾರ್ಗ ಆಗುವುದಾದರೆ ಆ ಶಕ್ತಿಯಿಂದ ಒಳ್ಳೆಯದನ್ನು ನಿರೀಕ್ಷಿಸುವವರಿಗೆ ಭಕ್ತಿ ಪ್ರತಿಫಲ ನೀಡಬೇಕಲ್ಲವೇ. ಪ್ರತಿಫಲ ನಿರೀಕ್ಷಿಸುವುದು ಸರ್ಕಾರದಿಂದ, ಭಕ್ತಿ ಅರ್ಪಿಸುವುದು ದೇವರಿಗೆ ಎಂದಾದರೆ ಅದು ಆತ್ಮವಂಚನೆಯಲ್ಲವೇ.
ಹೌದು ನಿಜ, ಹಾಸನಂಬೆ ದರ್ಶನ ಪಡೆದರೆ ಅದರಿಂದ ಯಾರಿಗೂ ತೊಂದರೆ ಇಲ್ಲ, ಯಾರಿಗೂ ನಷ್ಟವೂ ಇಲ್ಲ, ಜೊತೆಗೆ ದೈವಿಕ ನಂಬಿಕೆಯವರಿಗೆ ಒಂದಷ್ಟು ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ ದೊರೆಯುತ್ತದೆ. ಅದರಲ್ಲಿ ಅನುಮಾನವಿಲ್ಲ. ಸ್ಥಳೀಯರಿಗೆ ವ್ಯಾಪಾರ ವ್ಯವಹಾರಗಳು ವೃದ್ಧಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತದೆ. ಅಷ್ಟರಮಟ್ಟಿಗೆ ಭಕ್ತಿಯನ್ನು ಒಪ್ಪಬಹುದು. ಅದರಾಚೆ ಯೋಚಿಸಿದಾಗ ಭಕ್ತಿಯ ಸಾಮರ್ಥ್ಯದ ಬಗ್ಗೆ ಅನುಮಾನಗಳು ಸೃಷ್ಟಿಯಾಗುವುದಿಲ್ಲವೇ. ಯೋಚಿಸುವ ಮೆದುಳು ಈ ವಾಸ್ತವವನ್ನು ಗ್ರಹಿಸಿ ಉತ್ತರ ಹುಡುಕುವ ಮನಸ್ಸು ಸದಾ ಕಾಡುತ್ತಲೇ ಇರುವಾಗ ಅದನ್ನು ವ್ಯಕ್ತಪಡಿಸುವ ಬಗೆ ಹೇಗೆ.
ಕೆಲವು ಮೂಲಭೂತವಾದಿ ಸನಾತನ ಧರ್ಮದ ಅನುಯಾಯಿಗಳು ಮತ್ತೊಂದು ಪ್ರಶ್ನೆ ಕೇಳಬಹುದು. ನೀವು ಇದನ್ನು ಕೇವಲ ಹಿಂದೂ ಧರ್ಮದ ಹಾಸನಾಂಬೆಗೆ ಮಾತ್ರ ಪ್ರಶ್ನಿಸುವುದು ಏಕೆ ? ಭಾರತದಲ್ಲಿಯೇ ಇರುವ ಎಷ್ಟೋ ಮಸೀದಿಗಳು, ಚರ್ಚುಗಳು, ಜೈನಬಸದಿಗಳು, ಬೌದ್ಧ ಸ್ತೂಪಗಳು, ಸಿಖ್ ಗುರುದ್ವಾರಗಳು, ಲಿಂಗಾಯತ ಮಠಗಳು ಮುಂತಾದ ದೈವ ಕೇಂದ್ರಿತ ಸ್ಥಳಗಳ ಬಗ್ಗೆ ಇದೇ ಪ್ರಶ್ನೆ ಕೇಳಬಹುದಲ್ಲವೇ ?
ಖಂಡಿತ ಹೌದು, ಅತಿಮಾನುಷ ದೈವಶಕ್ತಿ ಎಂದು ನಂಬಿ ಅದರ ದರ್ಶನಕ್ಕೆ, ಅದರ ಪ್ರಭಾವಕ್ಕೆ, ಅದರ ವಿಶಿಷ್ಟ ಶಕ್ತಿಗೆ, ಅದು ನೀಡುವ ಪ್ರತಿಫಲದ ಅಪೇಕ್ಷೆಗೆ ಭಕ್ತಿಯಿಂದ ನಮಿಸುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಇಸ್ರೇಲ್ ನವರು ಗಾಜಾಪಟ್ಟಿಗೆ ನುಗ್ಗಿ ಸುಮಾರು 70 ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಕೊಲ್ಲುತ್ತಿರುವಾಗ ಪಕ್ಕದಲ್ಲಿ ಇರುವ ಮೆಕ್ಕಾ ಮದೀನಾದ ನಿಮ್ಮ ದೇವರು ಅವರನ್ನು ಕಾಪಾಡಬಹುದಿತ್ತಲ್ಲವೇ, ಸಿರಿಯಾ, ಲೆಬನಾನ್, ಇರಾನ್, ಇರಾಕ್, ಆಫ್ಘಾನಿಸ್ತಾನ್, ಪಾಕಿಸ್ತಾನಗಳಲ್ಲಿ ನಡೆಯುವ ಘರ್ಷಣೆಗಳಲ್ಲಿ ಅಪಾರ ಜನ ಸಾಯುವುದನ್ನು ನಿಮ್ಮ ದೇವರು ತಡೆಯಬಹುದಿತ್ತಲ್ಲವೇ, ಹಾಗೆಯೇ ಇಸ್ರೇಲ್ ನಲ್ಲಿ, ಉಕ್ರೇನ್ ನಲ್ಲಿ ರಷ್ಯಾದಲ್ಲಿ, ಫ್ರಾನ್ಸ್ ನಲ್ಲಿ ಅನೇಕ ಘರ್ಷಣೆಗಳು ನಡೆದು ಅಮಾಯಕರು, ದೈವಭಕ್ತರು ಸಾಯುತ್ತಿರುವುದನ್ನು ಜೀಸಸ್ ತಡೆಯಬಹುದಿತ್ತಲ್ಲವೇ,
ಇಲ್ಲಿಯೇ ಧರ್ಮಸ್ಥಳದಲ್ಲಿ ಆ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರದ ಸಾವನ್ನು ಧರ್ಮಸ್ಥಳದ ಮಂಜುನಾಥರೋ, ಜೈನ ಧಾರ್ಮಿಕ ಶಕ್ತಿಯೋ ತಡೆಯಬಹುದಿತ್ತಲ್ಲವೇ, ಅನೇಕ ಸಿಖ್ಖರ ಸಾವಿರಾರು ಮಾರಣಹೋಮವನ್ನು ಆ ಧರ್ಮದ ಗುರುಗಳು ಅಥವಾ ದೇವರು ನಿಲ್ಲಿಸಬಹುದಿತ್ತಲ್ಲವೇ, ಬೌದ್ಧರ ಮೇಲಿನ ಅನೇಕ ಸಾಮೂಹಿಕ ಹತ್ಯೆಯನ್ನು ಬೌದ್ಧ ದೇವರು ಅಥವಾ ನಂಬಿಕೆಯ ಶಕ್ತಿ ತಡೆಯಬಹುದಿತ್ತಲ್ಲವೇ, ಲಿಂಗಾಯಿತ ಮಠಗಳು ಬಸವಣ್ಣನನ್ನೇ ದೇವರೆಂದು ಭಕ್ತಿಯಿಂದ ಪೂಜಿಸುವ ನಂಬಿಕೆಯವರಿಗೆ ಉತ್ತರ ಕರ್ನಾಟಕದ ಅನೇಕ ನೆರಹಾವಳಿಯನ್ನು, ಅಮಾಯಕ ಹತ್ಯೆಗಳನ್ನು ಬಸವಣ್ಣನವರು ನಿಲ್ಲಿಸಬಹುದಿತ್ತಲ್ಲವೇ.
ಇಲ್ಲಿ ಕೆಲವು ಧಾರ್ಮಿಕ ಪಂಥಗಳು ದೇವರನ್ನು ನಂಬುವುದಿಲ್ಲ. ಅತಿ ಮಾನುಷ ಶಕ್ತಿಯಲ್ಲಿ ನಂಬಿಕೆ ಇಲ್ಲ. ಆದ್ದರಿಂದ ಬೌದ್ಧ, ಜೈನ, ಸಿಖ್, ಲಿಂಗಾಯತ ಧರ್ಮಗಳಲ್ಲಿ ಮನುಷ್ಯನ ಪ್ರಯತ್ನವೇ ಮುಖ್ಯ ಎಂದು ಭಾವಿಸುವವರಿಗೆ ಇದು ಅನ್ವಯಿಸುವುದಿಲ್ಲ. ಕೇವಲ ಆ ಧರ್ಮಗಳ ದೇವರು ಎಂದು ಅತಿಮಾನುಷ ಶಕ್ತಿಯ ಬಗ್ಗೆ ನಂಬಿಕೆ ಇರುವವರಿಗೆ ಮಾತ್ರ ಇದು ಅನ್ವಯಿಸುತ್ತದೆ.
ಈ ದೈವಿಕ ಭಕ್ತಿ ಹೆಚ್ಚಾಗಿ ಇರುವುದು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲಿ. ಈ ಎಲ್ಲವೂ ಆ ದೇವರುಗಳಿಗೆ ಹೆಚ್ಚು ಅನ್ವಯಿಸುತ್ತದೆ. ಏಕೆಂದರೆ ಈ ಸಮುದಾಯದ ಬಹುತೇಕ ಜನ ದೇವರನ್ನು ನಂಬಿದ್ದಾರೆ ಮತ್ತು ಎಲ್ಲಾ ಆಗುಹೋಗುಗಳಿಗೆ ದೇವರೇ ಕಾರಣ ಎಂದು ಪ್ರತಿನಿತ್ಯ ದೇವರನ್ನು ಸ್ಮರಿಸುತ್ತಾರೆ. ದೇವರಿಗಾಗಿ ಅನೇಕ ಪೂಜೆ ಪುನಸ್ಕಾರ, ಹೋಮ ಹವನ, ಪ್ರಾರ್ಥನೆ, ಉತ್ಸವ, ಉಪವಾಸ, ಯಾತ್ರೆ, ಪ್ರವಾಸ ಎಲ್ಲವನ್ನೂ ಮಾಡುತ್ತಾರೆ. ಆದ್ದರಿಂದ ದೇವರು ಸಹ ಇವರಿಗಾಗಿ ಏನನ್ನಾದರೂ ಮಾಡಬಾರದೆ, ಮುಖ್ಯವಾಗಿ ನೋವು ಸಂಕಷ್ಟಗಳನ್ನು ಪರಿಹರಿಸಿ ನ್ಯಾಯವನ್ನು, ನೀತಿಯನ್ನು, ಸಮಾನತೆಯನ್ನು ಎತ್ತಿ ಹಿಡಿಯಬಾರದೆ ಎಂಬುದಷ್ಟೇ ನಮ್ಮ ಪ್ರಶ್ನೆ.
ಹಾಸನಾಂಬೆಯ ದರ್ಶನ ಈ ವಿಚಾರ ಕ್ರಾಂತಿಗೆ ಒಂದು ನೆಪವಷ್ಟೇ. ನಾವು, ನಮ್ಮ ಚಟುವಟಿಕೆಗಳು ವಾಸ್ತವವಾಗಿ ಜ್ಞಾನದ ಅಂಚಿನಲ್ಲಿಯೇ, ಅರಿವಿನಲ್ಲಿಯೇ ಸಾಗಿದಾಗ ಬದುಕಿನ ಗುಣಮಟ್ಟ ಹೆಚ್ಚಾಗುತ್ತದೆ. ಭ್ರಮೆಗೆ ಒಳಗಾಗಿ, ದುರಾಸೆಗೆ ಒಳಗಾಗಿ ಇಲ್ಲದ ಶಕ್ತಿಯನ್ನು ಅವಲಂಬಿಸಿದರೆ ಜೀವನದ ಗುಣಮಟ್ಟ ಕಡಿಮೆಯಾಗಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……